ನಮ್ಮ ದೇಹದ ಪ್ರತೀ ಅಂಗಗಳು ಮುನ್ಸೂಚನೆ ನೀಡುತ್ತವೆ. ಅದು ಹೇಗೆ ಅಂತೀರಾ? ದೇಹದಲ್ಲಿ ಯಾವುದೇ ಒಂದು ಬದಲಾವಣೆ ಕಂಡು ಬಂದರೂ ನಮ್ಮ ಮನಸ್ಸಿಗೆ ಏನೋ ಸಮಸ್ಯೆ ಆಗಿದೆ ಅಂತ ಗೊತ್ತಾಗುತ್ತೆ. ಅದು ನಿಮ್ಮ ದೇಹದಲ್ಲಾಗುವ ಬದಲಾವಣೆ ಇರಬಹುದು. ಕೊಲೆಸ್ಟ್ರಾಲ್ ಏರಿಕೆಯಿಂದ ಗ್ಯಾಸ್ಟ್ರಿಕ್, ಬಿಪಿ, ಮಧುಮೇಹ, ದೇಹದ (Body) ತೂಕದಲ್ಲಿ ಏರಿಕೆಯಂತ ಸಮಸ್ಯೆಗಳು (Problems) ಕಾಡುತ್ತವೆ ಎಂಬುದು ತಿಳಿದಿದೆ. ಕೊಲೆಸ್ಟ್ರಾಲ್ ಸಾಮಾನ್ಯವಾಗಿ ನಿಮ್ಮ ದೇಹಕ್ಕೆ ಸದ್ದಿಲ್ಲದೇ ಹಾನಿ ಮಾಡುತ್ತದೆ. ಹಾಗಾದರೆ ಕೊಲೆಸ್ಟ್ರಾಲ್ ದೇಹದಲ್ಲಿ ಏರಿಕೆ ಆಗಿರೋದನ್ನ ಹೇಗೆ ಕಂಡುಹಿಡಿಬೇಕು ಅನ್ನೋದು ನಿಮ್ಮ ಪ್ರಶ್ನೆ ಆಗಿದ್ರೆ ಅದಕ್ಕೆ ಉತ್ತರ ಇಲ್ಲಿದೆ. ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಏರಿಕೆ ಆಗಿದೆ ಅಂದ ತಕ್ಷಣ - ಕಣ್ಣು, ಕಾಲು ಮತ್ತು ನಾಲಿಗೆಯಲ್ಲಿ ಕಂಡುಬರುವ ಎಚ್ಚರಿಕೆಯ ಚಿಹ್ನೆಗಳ (Sign) ಕಡೆಗೆ ಗಮನ ಹರಿಸಬೇಕು ಅಷ್ಟೇ! ಆರಂಭದಲ್ಲಿ ಯಾವುದೇ ಸಮಸ್ಯೆ ಕಾಣದೇ ಇರಬಹುದು. ದಿನಕಳೆದಂತೆ ದೇಹದ ಕೆಲವು ಅಂಗಗಳಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿರುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ರಕ್ತ ನಾಳಗಳಲ್ಲಿ ಜಮೆಗೊಳ್ಳುವ ಮೇಣದ ವಸ್ತುಗಳು ಹೃದಯದ ಭಾಗಗಳಿಗೆ ರಕ್ತ ಪೂರೈಕೆಯನ್ನು ತಡೆಹಿಡಿಯುತ್ತದೆ. ಇದು ಮುಂದೆ ಹಾರ್ಟ್ ಅಟ್ಯಾಕ್ ಸಮಸ್ಯೆ ಅಥವಾ ಸ್ಟ್ರೋಕ್ ಸಮಸ್ಯೆ ಕಾಡುವಂತೆ ಮಾಡುತ್ತದೆ.
ಕೊಲೆಸ್ಟ್ರಾಲ್ ಅಂದರೆ ಏನು ?
ಡಾ. ಸ್ಮೃತಿ ಹಿಂಡಾರಿಯಾ ಅವರ ಪ್ರಕಾರ, “ಕೊಲೆಸ್ಟ್ರಾಲ್ ಅಂದರೆ ಗಾಬರಿಯಾಗಬೇಕಿಲ್ಲ. ನಿಮ್ಮ ದೇಹದ ಕೆಲವು ಅಂಗಗಳಿಗೆ ಕೊಲೆಸ್ಟ್ರಾಲ್ ಬೇಕಾಗುತ್ತದೆ. ಹಾಗಾಗಿಯೇ ಅಂಗಗಳಿಗೆ ರಕ್ತದ ಮೂಲಕ ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಸರಬರಾಜು ಆಗುತ್ತೆ. ಸಾಮಾನ್ಯವಾಗಿ, ನಿಮ್ಮ ಹೃದಯದಿಂದ ರಕ್ತವನ್ನು ಸಾಗಿಸುವ ರಕ್ತನಾಳಗಳು, ನಿಮ್ಮ ದೇಹದ ಅಂಗಾಂಶಗಳನ್ನು ಪೋಷಿಸುತ್ತವೆ.
ಆರೋಗ್ಯವಂತ ಆರ್ಟರಿ ಎಂದರೆ ಹೃದಯದಿಂದ ರಕ್ತವನ್ನು ಕೊಂಡೊಯ್ಯುವ ರಕ್ತನಾಳಗಳು. ಇದರ ಮೂಲಕ ರಕ್ತಪರಿಚಲನೆ ನಡೆಯುತ್ತದೆ. ರಕ್ತ ಪರಿಚಲನೆಯ ಜೊತೆಗೆ ಕೊಲೆಸ್ಟ್ರಾಲ್ ಮತ್ತು ಇತರ ವಸ್ತುಗಳು ರಕ್ತ ನಾಳಗಳ ಗೋಡೆಯಲ್ಲಿ ಮೇಣದ ರಚನೆಯನ್ನು ಮಾಡುತ್ತವೆ. ಈ ಪ್ರಕ್ರಿಯೆಯನ್ನು ಅಥೆರೋಸ್ಕ್ಲೆರೋಸಿಸ್ ಎಂದು ಕರೆಯುತ್ತಾರೆ.
ಗರಿಷ್ಠ ಮಟ್ಟದ ಕೊಲೆಸ್ಟ್ರಾಲ್ ಸಮಸ್ಯೆ ಹೊಂದಿರುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಇದು ಅಪಧಮನಿಯನ್ನು ಕಿರಿದಾಗಿಸುತ್ತದೆ ಮತ್ತು ಅಂಗಾಂಶಗಳಿಗೆ ರಕ್ತದ ಪರಿಚಲನೆಯನ್ನು ಕಡಿಮೆ ಮಾಡುತ್ತದೆ" ಎಂದು ಹೇಳುತ್ತಾರೆ.
ಯಾವಾಗ ಕೊಲೆಸ್ಟ್ರಾಲ್ ಮಟ್ಟ ಅಪಾಯಕ್ಕೆ ತಲುಪುತ್ತದೆ ?
ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವು ಅಪಾಯಕಾರಿ ಮಟ್ಟವನ್ನು ತಲುಪಿದೆಯೇ ಎಂದು ನಾವು ಮೊದಲು ಹೇಗೆ ತಿಳಿಯಬಹುದು?
ಇದನ್ನು ಅರ್ಥಮಾಡಿಕೊಳ್ಳಲು, ನಾವು ಮುಖ್ಯವಾಗಿ ಕೊಲೆಸ್ಟ್ರಾಲ್ ಬಗ್ಗೆ ತಿಳಿಯುವುದು ಉತ್ತಮ. ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧಗಳಿವೆ- HDL (ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್) ಮತ್ತು LDL (ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್) .
ಅವುಗಳನ್ನು ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಂದೂ ಕರೆಯುತ್ತಾರೆ. ಒಳ್ಳೆಯ ಕೊಲೆಸ್ಟ್ರಾಲ್ HDL ಎಂದು ಗುರುತಿಸುತ್ತಾರೆ. ಹಾರ್ಮೋನ್ ಮತ್ತು ವಿಟಮಿನ್ ಡಿ ಉತ್ಪಾದನೆ HDL ನ ಪ್ರಮುಖ ಕಾರ್ಯ.
ಕೆಟ್ಟ ಕೊಲೆಸ್ಟ್ರಾಲ್- ಇದು ಎಲ್ಡಿಎಲ್ (LDL). ರಕ್ತ ನಾಳಗಳಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ನಿಧಾನವಾಗಿ ದುಷ್ಪರಿಣಾಮ ಉಂಟುಮಾಡುತ್ತದೆ ಎಂದು ಗಾಜಿಯಾಬಾದ್‌ನ ಮಣಿಪಾಲ್ ಹಾಸ್ಪಿಟಲ್ಸ್‌ನ ಕನ್ಸಲ್ಟೆಂಟ್ ಇಂಟರ್ನಲ್ ಮೆಡಿಸಿನ್ ಡಾ ಮಯಾಂಕ್ ಅರೋರಾ ಹೇಳುತ್ತಾರೆ.
ಅಧಿಕ ಕೊಲೆಸ್ಟ್ರಾಲ್ ವಿವಿಧ ರೋಗಲಕ್ಷಣಗಳನ್ನು ಹೊಂದಿರಬಹುದು. ನಿಮ್ಮ ಕೊಲೆಸ್ಟ್ರಾಲ್ ಮಟ್ಟವು ತುಂಬಾ ಹೆಚ್ಚಿದ್ದರೆ ಅದು ನಿಮ್ಮ ಕಣ್ಣುಗಳಲ್ಲಿ, ಚರ್ಮದಲ್ಲಿ ಮತ್ತು ಕೆಲವೊಮ್ಮೆ ನಾಲಿಗೆಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.
ಕೊಲೆಸ್ಟ್ರಾಲ್ ಹೆಚ್ಚಾದಾಗ ಕಾಲುಗಳಲ್ಲಿ ಮುನ್ಸೂಚನೆ!
"ಕಾಲುಗಳಲ್ಲಿ ಅಧಿಕ ಕೊಲೆಸ್ಟ್ರಾಲ್‌ನ ಸಾಮಾನ್ಯ ಲಕ್ಷಣವೆಂದರೆ ಕ್ಲಾಡಿಕೇಶನ್ ಎಂಬ ಸ್ಥಿತಿ. ಕೊಲೆಸ್ಟ್ರಾಲ್ ಮತ್ತು ಇತರ ಪದಾರ್ಥಗಳ ಸಂಗ್ರಹದಿಂದಾಗಿ ಕಾಲುಗಳಲ್ಲಿನ ರಕ್ತನಾಳಗಳು ಕಿರಿದಾದ ಅಥವಾ ಬ್ಲಾಕ್ ಸಂಭವಿಸುತ್ತದೆ.
ಪರಿಣಾಮವಾಗಿ, ದೈಹಿಕ ಚಟುವಟಿಕೆಯ ಸಮಯದಲ್ಲಿ ಕಾಲು ನೋವು ಅಥವಾ ನಡೆದಾಗ ಸೆಳೆತ ಉಂಟಾಗಬಹುದು. ಈ ನೋವು ವಿಶ್ರಾಂತಿಯೊಂದಿಗೆ ಸುಧಾರಿಸುತ್ತದೆ.
ಆದರೆ ಚಟುವಟಿಕೆಯಲ್ಲಿ ಇರುವ ವ್ಯಕ್ತಿಯ ಸಾಮರ್ಥ್ಯವನ್ನು ಮಿತಿಗೊಳಿಸುವಷ್ಟು ತೀವ್ರವಾಗಿರುತ್ತದೆ" ಎಂದು ಫೋರ್ಟಿಸ್‌ನ ಆಂತರಿಕ ಔಷಧದ ಹಿರಿಯ ಸಲಹೆಗಾರ ಡಾ ಆದಿತ್ಯ ಎಸ್ ಚೌಟಿ ಹೇಳುತ್ತಾರೆ.
ಕಾಲುಗಳು ಮತ್ತು ಪಾದಗಳ ಕೊಲೆಸ್ಟ್ರಾಲ್ ಸಂಗ್ರಹವು ಪೆರಿಫೆರಲ್ ಆರ್ಟರಿ ಡಿಸೀಸ್ (PAD) ಎಂಬ ಸ್ಥಿತಿಯನ್ನು ಉಂಟುಮಾಡುತ್ತದೆ. ದೈಹಿಕ ವ್ಯಾಯಾಮದ ಸಮಯದಲ್ಲಿ ಕಾಲು ನೋವು PAD ನ ಸಾಮಾನ್ಯ ಲಕ್ಷಣ.
ಇತರ ರೋಗಲಕ್ಷಣಗಳು ನಿಮ್ಮ ಕಾಲುಗಳು ಮತ್ತು ಪಾದಗಳ ದೈಹಿಕ ಬದಲಾವಣೆಗಳನ್ನು ಒಳಗೊಂಡಿರುತ್ತದೆ. ಇದು ಹೆಚ್ಚಾಗಿ ಉಗುರುಗಳು ಮತ್ತು ಚರ್ಮದಲ್ಲಿ ಸಂಭವಿಸುತ್ತದೆ.
PAD ನ ಸಾಮಾನ್ಯ ಲಕ್ಷಣವೆಂದರೆ ಕ್ಲಾಡಿಕೇಶನ್ ಎಂದು ಕರೆಯಲ್ಪಡುವ ಸ್ನಾಯು ನೋವು, ಸೆಳೆತ, ಮರಗಟ್ಟುವಿಕೆ ಮತ್ತು ಆಯಾಸವನ್ನು ಒಳಗೊಂಡಿರುತ್ತದೆ.
ಈ ನೋವು ವಾಕಿಂಗ್ ಅಥವಾ ಇತರ ದೈಹಿಕ ಚಟುವಟಿಕೆಯಿಂದ ಉಂಟಾಗುತ್ತದೆ. ಕಾಲುಗಳು, ಸೊಂಟ, ತೊಡೆ, ಪಾದದಲ್ಲಿ ಸಹ ಸಂಭವಿಸಬಹುದು. ನೋವು ಸಾಮಾನ್ಯವಾಗಿ ಸ್ನಾಯುಗಳಲ್ಲಿ ಸಂಭವಿಸುತ್ತದೆ ಎಂದು ಡಾ ಹಿಂಡಾರಿಯಾ ಹೇಳುತ್ತಾರೆ.
ಕಣ್ಣುಗಳಲ್ಲಿ ಕಂಡುಬರುವ ಕೊಲೆಸ್ಟ್ರಾಲ್ ನ ಮುನ್ಸೂಚನೆ
ಅಧಿಕ ಕೊಲೆಸ್ಟ್ರಾಲಿನ ಮುನ್ಸೂಚನೆ ಕೊಡುವ ದೇಹದ ಮತ್ತೊಂದು ಭಾಗ ಕಣ್ಣುಗಳು. ಅಧಿಕ ಕೊಲೆಸ್ಟ್ರಾಲ್ ಕ್ಸಾಂಥೆಲಾಸ್ಮಾಗಳ ಬೆಳವಣಿಗೆಗೆ ಕಾರಣವಾಗಬಹುದು. ಇದು ಕಣ್ಣಿನ ರೆಪ್ಪೆಗಳ ಮೇಲೆ ಕಾಣಿಸಿಕೊಳ್ಳುವ ಕೊಬ್ಬಿನ ಹಳದಿ ಬಣ್ಣದ ಜಮೆಯಾಗುತ್ತದೆ. ಕಣ್ಣುಗಳ ಕೆಳಗಿರುವ ಚರ್ಮವು ಕಿತ್ತಳೆ ಅಥವಾ ಹಳದಿ ಬಣ್ಣದ ಚುಕ್ಕೆಗಳನ್ನು ತೋರಿಸಲು ಪ್ರಾರಂಭಿಸುತ್ತದೆ. ಇದು ದೇಹದಲ್ಲಿ ಹೆಚ್ಚಿದ ಕೊಲೆಸ್ಟ್ರಾಲಿನ ಚಿಹ್ನೆಗಳು.
ಈ ಚಿಹ್ನೆ ಕಂಡು ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಕೊಲೆಸ್ಟ್ರಾಲ್ ಕಲೆಗಳು ಇದ್ದಕ್ಕಿದ್ದಂತೆ ತೋರುವುದಿಲ್ಲ. ಇದು ನಿಧಾನ ಪ್ರಕ್ರಿಯೆ. ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾದಾಗ ಅದು ದೇಹದ ಹೊರ ಭಾಗಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ .
ಕಣ್ಣುಗಳ ಮೇಲೆ ಮತ್ತು ಕಣ್ಣುಗಳ ಕೆಳಗೆ ಹಳದಿ-ಬಿಳಿ ಚುಕ್ಕೆಗಳ ರಚನೆ, ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಆರ್ಕಸ್ ಸೆನಿಲಿಸ್ ಎಂದು ಕರೆಯಲಾಗುತ್ತದೆ. ಇದು ಹೆಚ್ಚಾಗಿ 35 ವರ್ಷ ವಯಸ್ಸಿನ ನಂತರ ಪರಿಣಾಮ ಬೀರುತ್ತದೆ ಎಂದು ಡಾ ಅರೋರಾ ಹೇಳುತ್ತಾರೆ.
ಇದನ್ನೂ ಓದಿ: 19ನೇ ವಯಸ್ಸಿಗೆ ಲಕ್ಷಾಧಿಪತಿಯಾದ! ಇದು ಕೆಎಫ್‌ಸಿ ಹುಡುಗನ ಸಾಧನೆಯ ಕಥೆ
ಅಧಿಕ ಕೊಲೆಸ್ಟ್ರಾಲ್ ಮಟ್ಟವು ಕಣ್ಣಿನ ರೆಟಿನಾದ ನಾಳಗಳ ಮೇಲೆ ಪರಿಣಾಮವನ್ನು ಬೀರುತ್ತವೆ. . ರೆಟಿನಾದ ರಕ್ತನಾಳಗಳ ಮೂಲಕ ರಕ್ತ ಪರಿಚಲನೆ ನಡೆಯುವುದರಿಂದ ಕೊಲೆಸ್ಟ್ರಾಲ್ ಕಣ್ಣಿಗೆ ಮಾರಕವಾಗಿದೆ. ಕಣ್ಣಿನ ಮಂದ ದೃಷ್ಟಿ, ಒಂದು ಕಣ್ಣಿನಲ್ಲಿ ದೃಷ್ಟಿ ಹೀನತೆ, ಕಪ್ಪು ಗೆರೆ ಅಥವಾ ಕಪ್ಪು ಚುಕ್ಕೆ , ಬಾಧಿತ ಕಣ್ಣಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಅಧಿಕ ಕೊಲೆಸ್ಟ್ರಾಲ್ ಆರ್ಕಸ್ ಸೆನಿಲಿಸ್ ರೂಪದಲ್ಲಿ ಕಣ್ಣಿನಲ್ಲಿ ಕಾಣಿಸಿಕೊಳ್ಳಬಹುದು. ಈ ಸ್ಥಿತಿಯಲ್ಲಿ, ಕಾರ್ನಿಯಾದಲ್ಲಿ ಹೆಚ್ಚು ಕೊಲೆಸ್ಟ್ರಾಲ್ ಠೇವಣಿಯಾಗಿ ಕಾರ್ನಿಯಾದ ಪರದೆಯ ಸುತ್ತಲೂ ಬಿಳಿ, ನೀಲಿ ಅಥವಾ ಬೂದು ಬಣ್ಣದ ಉಂಗುರವು ರೂಪುಗೊಳ್ಳುತ್ತದೆ. ಇದನ್ನು ನೋಡಿ ಐರಿಸ್ ಎರಡು ಬಣ್ಣಗಳನ್ನು ಹೊಂದಿದೆ ಎಂದು ನೀವು ಭಾವಿಸಬಹುದು. ಆದರೆ ಉಂಗುರವು ನಿಮ್ಮ ದೃಷ್ಟಿಯ ಮೇಲೆ ತೀವ್ರ ಪರಿಣಾಮ ಬೀರುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ.
ನಾಲಗೆಯಲ್ಲಿ ಅಧಿಕ ಕೊಲೆಸ್ಟ್ರಾಲ್ ನ ಮುನ್ಸೂಚನೆ
ಅಧಿಕ ಕೊಲೆಸ್ಟ್ರಾಲ್‌ನಿಂದ ನಾಲಿಗೆಯೂ ಸಹ ಪರಿಣಾಮ ಬೀರಬಹುದು. ನಾಲಿಗೆಯ ಮೇಲ್ಮೈಯಲ್ಲಿ ಸಣ್ಣ ಉಬ್ಬುಗಳು (ಪ್ಯಾಪಿಲ್ಲೆ) ವಿಸ್ತರಿಸಿದಾಗ ಮತ್ತು ಬಣ್ಣಕ್ಕೆ ತಿರುಗಿದಾಗ, ನಾಲಿಗೆ ಗಟ್ಟಿಯಾಗಿ ತರಿತರಿಯ ಸ್ಥಿತಿಯು ಸಂಭವಿಸಬಹುದು.
"ಕೆಲವು ಲಕ್ಷಣಗಳು ನಾಲಿಗೆಯ ತುದಿಯು ನೇರಳೆ ನೀಲಿ ಬಣ್ಣವನ್ನು ಹೊಂದಿರುತ್ತದೆ ಅಥವಾ ತುದಿಯಲ್ಲಿ ರಕ್ತದ ನಿಶ್ಚಲತೆಯ ಚುಕ್ಕೆಗಳಾಗಿರಬಹುದು. ಸಬ್ಲಿಂಗುವಲ್ ಸಿರೆಗಳು ಗಾಢವಾಗಿರುತ್ತವೆ ಅಥವಾ ವಕ್ರವಾಗಿರುತ್ತವೆ ಮತ್ತು ದಪ್ಪವಾಗಿರುತ್ತದೆ" ಎಂದು ಡಾ ಹಿಂಡಾರಿಯಾ ಹೇಳುತ್ತಾರೆ.
"ದೇಹದಲ್ಲಿನ ಅಪಧಮನಿಗಳು ದೇಹದ ವಿವಿಧ ಭಾಗಗಳಿಗೆ ಪೋಷಣೆ ಮತ್ತು ಆಮ್ಲಜನಕವನ್ನು ಸಾಗಿಸುವ ಕಾರ್ಯ ಮಾಡುತ್ತವೆ. ಆದರೆ ಕೊಲೆಸ್ಟ್ರಾಲ್ ಶೇಖರಣೆಯು ಈ ಅಪಧಮನಿಗಳಲ್ಲಿ ತೊಡಕ್ಕನ್ನು ಉಂಟುಮಾಡಬಹುದು.
ಇದು ದೇಹಕ್ಕೆ ಆಮ್ಲಜನಕ ಮತ್ತು ಪೌಷ್ಟಿಕಾಂಶದ ಪೂರೈಕೆಯ ಅನಾನುಕೂಲತೆಯನ್ನು ಸೃಷ್ಟಿಸುತ್ತದೆ. ಇದರ ಪರಿಣಾಮವಾಗಿ ಕಾಲು, ಉಗುರುಗಳು ಮತ್ತು ಚರ್ಮವು ಬಣ್ಣವನ್ನು ಬದಲಾಯಿಸಲು ಪ್ರಾರಂಭಿಸುತ್ತದೆ.
ಈ ರೋಗಲಕ್ಷಣಗಳನ್ನು ಕೆಲವೊಮ್ಮೆ ನಾಲಿಗೆಯ ಮೇಲೆಯೂ ಗಮನಿಸಬಹುದು. ನಾಲಿಗೆ ಹಳದಿ ಬಣ್ಣಕ್ಕೆ ತಿರುಗಬಹುದು ಅಥವಾ ನಾಲಿಗೆಯ ನರಗಳು ನೀಲಿ ಬಣ್ಣಕ್ಕೆ ತಿರುಗಬಹುದು ಎಂದು ಡಾ ಅರೋರಾ ಹೇಳುತ್ತಾರೆ.
ಆರಂಭದಲ್ಲಿ ಯಾವುದೇ ರೋಗ ಲಕ್ಷಣಗಳು ಕಾಣಿಸದೇ ಇರಬಹುದು. ಆದರೆ ಸದ್ದಿಲ್ಲದೇ ಇಡೀ ದೇಹವನ್ನು ಕೊಲೆಸ್ಟ್ರಾಲ್ ಆಕ್ರಮಿಸಿಕೊಂಡ ನಂತರ ಒಂದೊಂದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ನಿಯಮಿತ ತಪಾಸಣೆ ನೀವು ಮಾಡುತ್ತಿರಬೇಕು. ಆರೋಗ್ಯಕರ ಜೀವನ ಶೈಲಿ, ಹೆಲ್ದಿ ಡಯೆಟ್ ರೂಢಿಸಿಕೊಂಡರೆ ಈ ಎಲ್ಲ ಸಮಸ್ಯೆಗಳಿಂದ ವಿಮುಕ್ತಿ ಹೊಂದಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ