20- 30 ವರ್ಷಗಳ ಹಿಂದೆ ಟಿ.ವಿ ಅಥವಾ ಮ್ಯಾಗಜಿನ್ ಏನೇ ನೋಡಿದರೂ ಹಾಲಿನ ಕುರಿತ ಪ್ರಚಾರಗಳು ಹೆಚ್ಚೆಚ್ಚು ಕಾಣುತ್ತಿದ್ದೆವು. ಹಾಲು ಪ್ರತಿಯೊಬ್ಬರ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೂ ಇದನ್ನು ನಿತ್ಯವೂ ಕುಡಿದರೆ, ಅದರಿಂದ ನಾನಾ ರೀತಿಯ ಲಾಭಗಳು ದೇಹಕ್ಕೆ ಲಭ್ಯವಾಗುವುದು ಎಂದು ಹಿಂದಿನಿಂದಲೂ ಹೇಳಿಕೊಂಡು ಬರುತ್ತಿರುವುದನ್ನು ನಾವು ನೋಡಿದ್ದೇವೆ.
ಒಂದು ಲೋಟ ಹಾಲಿನಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಇದ್ದು, ಇದು ಮೂಳೆಗಳನ್ನು ಬಲಪಡಿಸುವುದು ಮತ್ತು ಸ್ನಾಯುಗಳ ಬೆಳವಣಿಗೆಗೆ ಕೂಡ ಸಹಕಾರಿ. ಹೀಗಾಗಿ, ಪ್ರತಿಯೊಂದು ಮನೆಯಲ್ಲೂ ಹಾಲು ಹಾಗೂ ಅದರ ಉತ್ಪನ್ನಗಳನ್ನು ಬಳಕೆ ಮಾಡುವುದನ್ನು ನಾವು ನೋಡುತ್ತೇವೆ. ಆದರೆ, ಕಾಲಕಳೆದಂತೆ ಹಾಲಿನ ಕುರಿತು ಜನರ ಅಭಿಪ್ರಾಯ ಬದಲಾಗತೊಡಗಿತು. ಹಸುವಿನ ಹಾಲು ಸೇವಿಸಬಾರದು, ಅದು ದೇಹಕ್ಕೆ ಒಳ್ಳೆಯದಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಇವೆಲ್ಲವೂ ನಿಜವೇ? ಉತ್ತರವು ಈ ಎರಡು ಅಭಿಪ್ರಾಯಗಳ ಮಧ್ಯದಲ್ಲಿ ಎಲ್ಲೋ ಇದ್ದರೂ, ಹಾಲು ಬಹುಶಃ ಮನುಷ್ಯನ ಆರೋಗ್ಯಕ್ಕೆ ಸೂಪರ್‌ಫುಡ್ ಅಂತೂ ಅಲ್ಲ.
"ಡೈರಿ ಪದಾರ್ಥಗಳಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವಂತಹ ಯಾವುದೇ ಅನನ್ಯ ಪೋಷಕಾಂಶಗಳು ಇಲ್ಲ' ಎಂದು ಸ್ಟ್ಯಾನ್‌ಫೋರ್ಡ್ ಪ್ರಿವೆನ್ಷನ್ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಮತ್ತು ಪೌಷ್ಠಿಕಾಂಶ ಸಂಶೋಧಕ ಕ್ರಿಸ್ಟೋಫರ್ ಗಾರ್ಡ್ನರ್ ಹೇಳುತ್ತಾರೆ. ಹಾಲಿನಿಂದ ನಮ್ಮ ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ಬಹಳ ಸುಲಭವಾಗಿ ಸಿಗುತ್ತದೆ ಎನ್ನುವುದನ್ನು ನಾವು ಒಪ್ಪುತ್ತೇನೆ. ಆದರೆ, ಕ್ಯಾಲ್ಸಿಯಂ ಕೇವಲ ಹಾಲಿನಿಂದ ಅಷ್ಟೇ ಅಲ್ಲದೆ ಬೇರೆ ಬೇರೆ ಪದಾರ್ಥಗಳಿಂದಲೂ ನಾವು ಪಡೆಯಬಹುದು. ಹಾಗಂತ ಎಲ್ಲರೂ ಒಮ್ಮೆಗೆ ಹಾಲು ಕುಡಿಯುವುದನ್ನು ಬಿಟ್ಟುಬಿಡಬೇಡಿ. ಆದರೆ, ಅತಿಯಾಗಿ ಹಾಲು ಕುಡಿಯುವುದರಿಂದ ಸಾಕಷ್ಟು ಅಪಾಯಗಳಾಗುತ್ತದೆ' ಎಂದು ಕ್ರಿಸ್ಟೋಫರ್ ಹೇಳುತ್ತಾರೆ
ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವ ಗಾದೆಯ ರೀತಿ ಅತಿಯಾಗಿ ಹಾಲು ಸೇವನೆಯೂ ನಿಮ್ಮ ದೇಹಕ್ಕೆ ತೊಂದರೆಯನ್ನು ತರಲಿದೆ ಎನ್ನುವುದು ಸಂಶೋಧಕರ ಮಾತು. ಹಾಗಾದರೆ ಹಾಲಿನಿಂದ ಏನೆಲ್ಲ ಅಪಾಯವಾಗುತ್ತದೆ?
ಹಾಲು ಮಾತ್ರವಲ್ಲದೆ, ಬೇರೆ ಯಾವುದೇ ಆಹಾರವು ಅತಿಯಾಗಿ ಸೇವನೆ ಮಾಡಿದರೆ ಒಳ್ಳೆಯದಲ್ಲ. ಒಂದು ದಿನದಲ್ಲಿ ಅತಿಯಾಗಿ ಹಾಲು ಕುಡಿದರೆ ಅದು ಸಾವಿಗೂ ಕಾರಣವಾಗುವುದು ಮತ್ತು ಮೂಳೆಗಳು ದುರ್ಬಲವಾಗುವುದು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ದಿನದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಹಾಲು ಕುಡಿಯುವುದು ಅಧ್ಯಯನಗಳ ಪ್ರಕಾರ ಅತಿಯಾದ ಸೇವನೆ ಎಂದು ಪರಿಗಣಿಸಲಾಗಿದೆ.
ಅತಿಯಾಗಿ ಹಾಲು ಕುಡಿದರೆ ಅದರಿಂದ ಹೊಟ್ಟೆಯಲ್ಲಿ ಅಜೀರ್ಣ ಉಂಟಾಗಬಹುದು ಮತ್ತು ಇದರಿಂದ ಬಳಲಿಕೆ ಉಂಟಾಗುವುದು. ಇದು ಕರುಳಿನ ಪದರಗಳ ಮೇಲೆ ಉರಿಯೂತದ ಪರಿಣಾಮ ಉಂಟು ಮಾಡುವುದು. ಅತಿಯಾಗಿ ಹಾಲು ಕುಡಿದರೆ ಅದರಿಂದ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುವುದು. ಹಾಲು ಅಜೀರ್ಣ ಉಂಟು ಮಾಡುವುದು ಹಾಗೂ ಹೊಟ್ಟೆ ಉಬ್ಬರಕ್ಕೆ ಕಾರಣವಾಗುವುದು. ಲ್ಯಾಕ್ಟೋಸ್ ಅಸಹಿಷ್ಣುತೆ ಇದ್ದರೆ ಆಗ ಹಾಲಿನಿಂದಾಗಿ ಹೊಟ್ಟೆ ಉಬ್ಬರ, ಸೆಳೆತ ಮತ್ತು ಅತಿಸಾರ ಉಂಟಾಗಬಹುದು.
ಮಹಿಳೆಯರಿಗೆ ಅತಿ ಹಾಲು ಸೇವನೆ ಇನ್ನಷ್ಟು ಹಾನಿ ಆಗಿರುವುದು ಪತ್ತೆಯಾಗಿದೆ. ಮಹಿಳೆಯರು ದಿನಕ್ಕೆ ಮೂರು ಅಥವಾ ಅದಕ್ಕಿಂತ ಹೆಚ್ಚು ಹಾಲು ಕುಡಿದರೆ, ಆಗ ಅವರ ಸಾವಿನ ಅಪಾಯವು ಒಂದು ಲೋಟ ಹಾಲು ಕುಡಿಯುವವರಿಗಿಂತ ಎರಡು ಪಟ್ಟು ಹೆಚ್ಚಾಗಿರುವುದು. ಪುರುಷರಿಗೆ ಇದೇ ರೀತಿಯ ಪ್ರಭಾವ ಉಂಟಾಗುವುದಿಲ್ಲ. ಆದರೆ ಇದು ಸಾವಿನ ಪ್ರಮಾಣವನ್ನು ಮಾತ್ರ ಹೆಚ್ಚಿಸುವುದು.
ಅಧ್ಯಯನದಿಂದ ತಿಳಿದುಬಂದಿರುವಂತಹ ವಿಚಾರಗಳು ತುಂಬಾ ಗಂಭೀರವಾಗಿದ್ದು, ಆದರೆ ಹಾಲನ್ನು ಸಂಪೂರ್ಣವಾಗಿ ಕಡೆಗಣಿಸಬಾರದು ಎಂದೂ ಸಂಶೋಧಕರು ಒತ್ತಿ ಹೇಳಿದ್ದಾರೆ. ಹಾಲಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಕ್ಯಾಲ್ಸಿಯಂ ಹೊರತಾಗಿ ಇದರಲ್ಲಿ ಪ್ರಮುಖ ಪೋಷಕಾಂಶಗಳಾಗಿರುವ ವಿಟಮಿನ್ ಡಿ, ವಿಟಮಿನ್ ಬಿ12 ಮತ್ತು ಪ್ರೋಟೀನ್ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ