ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ, ಆದರೆ ಅದು ಅತ್ಯಂತ ಮಹತ್ವಪೂರ್ಣವಾದದ್ದು ಕೂಡ. ಮೂಳೆಗಳು ನಮ್ಮ ದೇಹಕ್ಕೆ ಆಕಾರ, ರಚನೆ ಮತ್ತು ಆಧಾರ ನೀಡುತ್ತವೆ. ಆದ್ದರಿಂದ ಅವುಗಳ ಆರೋಗ್ಯವನ್ನು ಜೋಪಾನ ಮಾಡುವುದು ಹಾಗೂ ಸಾಮರ್ಥ್ಯ ಹೆಚ್ಚಿಸುವುದು ಬಹಳ ಮುಖ್ಯವಾಗುತ್ತದೆ. ಅನಾರೋಗ್ಯಕರ ಮೂಳೆಗಳು , ಆಸ್ಟಿಯೋಪೊರೋಸಿಸ್, ರಿಕೆಟ್ಸ್, ಮೂಳೆ ಕ್ಯಾನ್ಸರ್, ಮೂಳೆ ಸೋಂಕು ಮತ್ತು ಮೂಳೆಗಳ ಪಗೆಟ್ಸ್ ಕಾಯಿಲೆಗೆ ಕಾರಣವಾಗುತ್ತವೆ. ನಮ್ಮ ಆಹಾರ ಕ್ರಮ, ಜೀವನ ಶೈಲಿಯಲ್ಲಿ ಆರೋಗ್ಯಕರ ಬದಲಾವಣೆ, ದೈಹಿಕ ಚಟುವಟಿಕೆ ಮತ್ತು ಸಪ್ಲಿಮೆಂಟ್ಗಳನ್ನು ತೆಗೆದುಕೊಳ್ಳುವ ಮೂಲಕ ನಮ್ಮ ದೇಹದ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆಹಾರ ಕ್ರಮದ ಮೂಲಕ, ನೈಸರ್ಗಿಕವಾಗಿ ನಿಮ್ಮ ಮೂಳೆಗಳ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ಇನ್ನೂ ಉತ್ತಮ. ಆಹಾರಕ್ರಮದ ಮೂಲಕ ನಿಮ್ಮ ದೇಹದ ಮೂಳೆಗಳ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕು ಎಂದು ನಿಮಗೆ ಅನಿಸುತ್ತಿದ್ದರೆ, ಈ ಕೆಳಗಿನ ಸಲಹೆಗಳನ್ನು ತಪ್ಪದೇ ಅನುಸರಿಸಿ.
1. ಒಣ ಬೀಜಗಳು:ಮುಷ್ಟಿ ತುಂಬ ಒಣ ಬೀಜ/ನಟ್ಸ್ಗಳನ್ನು ತಿನ್ನುವ ಸಮಯವಿದು. ವಾಲ್ನಟ್, ಬ್ರೆಜಿಲ್ ನಟ್ ಮತ್ತು ಬಾದಾಮಿ ಬೀಜಗಳನ್ನು ಖಂಡಿತಾ ತಿನ್ನಿ. ಅವುಗಳಲ್ಲಿ ಕ್ಯಾಲ್ಸಿಯಂ, ಆ್ಯಂಟಿಆಕ್ಸಿಡೆಂಟ್ಸ್, ಒಮೆಗಾ -3 ಫ್ಯಾಟಿ ಆಮ್ಲಗಳು, ಫಾಸ್ಫರಸ್ ಮುಂತಾದ ದೇಹದಲ್ಲಿನ ಮೂಳೆಗಳ ಆರೋಗ್ಯವನ್ನು ಕಾಪಾಡಲು ಅಗತ್ಯವಾದ ಪೋಷಕಾಂಶಗಳಿವೆ. ಇವು ನಿಮ್ಮ ಆಹಾರ ಕ್ರಮದ ಮುಖ್ಯ ಭಾಗವಾಗಲಿ.
2. ಸಾಲ್ಮನ್:ಕೊಬ್ಬಿನ ಮೀನುಗಳು , ಆರೋಗ್ಯಕರ ಕೊಬ್ಬು ಮತ್ತು ಒಮೆಗಾ 3 ಆಮ್ಲಗಳ ಆಗರವಾಗಿರುತ್ತವೆ. ಅವು ನಮ್ಮ ದೇಹಕ್ಕೆ ವಿಟಮಿನ್ ಡಿ ಅಗತ್ಯಗಳನ್ನು ಪೂರೈಸುವಲ್ಲಿ ಸಹಕಾರಿ. ವಿಟಮಿನ್ ಡಿ ಮತ್ತು ಒಮೆಗಾ 3 ಫ್ಯಾಟಿ ಆ್ಯಸಿಡ್ ಎರಡೂ ನಮ್ಮ ದೇಹದ ಮೂಳೆಗಳ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
3. ಹಾಲು:ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಅತ್ಯಂತ ಅಗತ್ಯ ಎಂಬುವುದು ಬಹಳ ಹಿಂದಿನಿಂದಲೂ ಗೊತ್ತಿರುವ ಸಂಗತಿ. ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಅಗತ್ಯ ಪೂರೈಸಲು ಹಾಲಿಗಿಂತ ಉತ್ತಮ ಆಹಾರ ಯಾವುದು ಅಲ್ಲವೇ? ಬೆಳಗಿನ ಉಪಹಾರ ಜೊತೆ ಹಾಲು ಸೇವಿಸಿ, ಇಲ್ಲವೇ ಹಾಲಿನಿಂದ ಸ್ಮೂದಿಗಳನ್ನು ಮಾಡಿ ಸೇವಿಸಿ ಅಥವಾ ಓಟ್ಸ್ನೊಂದಿಗೆ ಸೇವಿಸಿ.
4. ಮೊಟ್ಟೆಗಳು:ಕಡಿಮೆ ಪ್ರೋಟೀನ್ ಪ್ರಮಾಣವು ಮೂಳೆಗಳ ಬೆಳವಣಿಗೆಗೆ ಅಡ್ಡಿಯಾಗಬಹುದು, ಹಾಗಾಗಿ ಅಗತ್ಯವಿರುವಷ್ಟು ಪ್ರೋಟೀನ್ ಸೇವಿಸಲೇಬೇಕು. ಮೊಟ್ಟೆಗಳು ಪ್ರೋಟೀನ್ನ ಖಜಾನೆಗಳಿದ್ದಂತೆ. ಆದ್ದರಿಂದ ನಿಮ್ಮ ಆಹಾರಕ್ರಮದಲ್ಲಿ ಮೊಟ್ಟೆಗಳನ್ನು ಸೇರಿಸಿಕೊಳ್ಳಿ.
5. ಪಾಲಕ್ :ನಿತ್ಯವೂ ವಿಟಮಿನ್ ಕೆ ಸೇವನೆ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯ. ಪಾಲಕ್ನಂತಹ ಹಸಿರು ಸೊಪ್ಪು ತರಕಾರಿಗಳು ನಿಮ್ಮ ಮೂಳೆಗಳಿಗೆ ಶಕ್ತಿ ನೀಡುತ್ತವೆ. ಅದರಲ್ಲಿ ವಿಟಮಿನ್ ಕೆ ಯಥೇಚ್ಛವಾಗಿರುತ್ತದೆ. ನೀವು ಕಾಲೆ, ಟರ್ನಿಪ್ ಗ್ರೀನ್ಸ್ ಮತ್ತು ಬೊಕ್ ಚೋಯ್ನಂತಹ ತರಕಾರಿಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ