ನೀವು ಪಾರ್ಕಿನ್ಸನ್ ಎಂಬ ಕಾಯಿಲೆ (Parkinson's disease) ಬಗ್ಗೆ ಕೇಳಿರುತ್ತೀರಿ. ಆದರೆ ಹೆಚ್ಚಾಗಿ ಅದರ ಬಗ್ಗೆ ತಿಳಿದಿರಲಿಕ್ಕಿಲ್ಲ. ಇದು ಮೆದುಳಿನ ನರಮಂಡಲಕ್ಕೆ (nervous system of the brain) ಸಂಬಂಧಿಸಿದ ಸಂಕೀರ್ಣ ಕಾಯಿಲೆಯಾಗಿದ್ದು, ವಯಸ್ಸಾದಂತೆ ಮೆದುಳಿನ ನರಮಂಡಲ ದುರ್ಬಲಗೊಳಿಸುತ್ತದೆ. ಇದರಿಂದ ಕೈ, ಕಾಲು ಹಾಗೂ ಇತರೆ ಅಂಗಾಗಂಗಳು ನರದೌರ್ಭಲ್ಯಕ್ಕೆ ಒಳಗಾಗಿ ನಡುಗಲು ಶುರುವಾಗುತ್ತದೆ. ಒಮ್ಮೆ ಈ ಕಾಯಿಲೆಗೆ ತುತ್ತಾದ ಮೇಲೆ ಆ ಭಾಗದ ಮೇಲೆ ನಿಯಂತ್ರಣವಿರುವುದಿಲ್ಲ. ಆದರೆ, ಇತ್ತೀಚಿನ ಅಧ್ಯಯನದ ಪ್ರಕಾರ ಯುವಕರಲ್ಲಿಯೂ ಈ ಕಾಯಿಲೆ ಕಾಣಿಸಿಕೊಳ್ಳುತ್ತಾ ಇರುವುದು ಆತಂಕ ಮೂಡಿಸಿದೆ. ಯುವಕರಲ್ಲಿ ಈ ಕಾಯಿಲೆ ಬರಲು ಕಾರಣ ಹಾಗೂ ಇದಕ್ಕೆ ಸೂಕ್ತ ಪರಿಹಾರದ ಬಗ್ಗೆ ಫೊರ್ಟಿಸ್ ಆಸ್ಪತ್ರೆಯ ನರವಿಜ್ಞಾನದ ಹಿರಿಯ ಸಲಹೆಗಾರರಾದ ಡಾ. ಪಿ.ಆರ್. ಕೃಷ್ಣನ್ (Fortis Hospital's senior neurology consultant Dr. P.R. Krishnan) ತಿಳಿಸಿದ್ದಾರೆ.
ಪಾರ್ಕಿನ್ಸನ್ ಕಾಯಿಲೆಗೆ ಕಾರಣವೇನು?
ಸಾಮಾನ್ಯವಾಗಿ ವಯಸ್ಸಾದಂತೆ ಕೆಲವರಿಗೆ ಮೆದುಳಿನ ನರಮಂಡಲದಲ್ಲಾಗುವ ಬದಲಾವಣೆಯಿಂದಾಗಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. 70 ವರ್ಷ ಮೇಲ್ಪಟ್ಟ ಹಿರಿಯರಲ್ಲಿ, ಅದರಲ್ಲೂ ಪುರುಷರಲ್ಲಿ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಪಾರ್ಕಿನ್ಸನ್ ಹೇಗೆ ಬರುತ್ತದೆ?
ಒಮ್ಮೆ ಈ ಕಾಯಿಲೆ ಕಾಣಿಸಿಕೊಂಡ ಬಳಿಕ ಕೈ ಹಾಗೂ ಕಾಲುಗಳು ನಡುಗುತ್ತಲೇ ಇರುತ್ತದೆ. ಕೈಯಲ್ಲಿ ಯಾವ ವಸ್ತುವನ್ನು ಗಟ್ಟಿಯಾಗಿ ಹಿಡಿಯಲು ಸಾಧ್ಯವಾಗುವುದಿಲ್ಲ. ಇನ್ನೂ ಕೆಲವು ಪ್ರಕರಣದಲ್ಲಿ ಅನುವಂಶಿಕವಾಗಿ ಈ ಕಾಯಿಲೆ ಬರಲಿದೆ. ನಿದ್ರಾಹೀನತೆ, ಕಳಪೆ ಮಟ್ಟದ ಜೀವನಶೈಲಿ, ಒತ್ತಡ ಈ ಕಾಯಿಲೆ ಬರಲು ಪ್ರಮುಖ ಕಾರಣಗಳಲ್ಲಿ ಒಂದು. ಇನ್ನು, ಕೆಲವರು ಸಾಮಾನ್ಯರಿಗಿಂತ ಹೆಚ್ಚು ವೇಗವಾಗಿ ಕಣ್ಣಿನ ಗುಡ್ಡೆ ಅಲುಗಾಡಿಸುವ ಗುಣ (Rapid eye movement) ಹೊಂದಿರುತ್ತಾರೆ. ಇವರಲ್ಲಿಯೂ ಈ ಕಾಯಿಲೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: Dry Skin: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು, ನಿಮ್ಮದು ಒಣ ತ್ವಚೆಯಲ್ಲ ಹೊಳೆಯುವ ತ್ವಚೆಯಾಗುತ್ತೆ!
ಪಾರ್ಕಿನ್ಸನ್ ಲಕ್ಷಣಗಳು
ಪಾರ್ಕಿನ್ಸೋನಿಸಂನ ಪ್ರಮುಖ ಲಕ್ಷಣವೆಂದರೆ, ನಡುಕ, ಅಂಗಗಳ ಬಿಗಿತ, ಬ್ರಾಡಿಕಿನೇಶಿಯಾ ಅಂದರೆ ಕೂರುವ ಹಾಗೂ ನಿಲ್ಲುವ ಭಂಗಿಗಳಲ್ಲಿ ವ್ಯತ್ಯಾಸ ಆಗುವುದು, ಕಾಲಾನಂತರದಲ್ಲಿ, ಈ ಕಾಯಿಲೆಯಿಂದ ಸಂಪೂರ್ಣ ಮುಖಭಾವವೇ ಬದಲಾಗಲಿದೆ. ನುಂಗುವುದು, ನಗುವುದು ಹಾಗೂ ಮಾತನಾಡಲು ಸಹ ಕಷ್ಟವಾಗಲಿದೆ.
ಯುವಕರಲ್ಲೂ ಬರಬಹುದು ಜಾಗೃತಿ!
ಇತ್ತೀಚಿನ ಅಧ್ಯಯನಗಳಲ್ಲಿ 40 ವರ್ಷದವರಲ್ಲೂ ಪಾರ್ಕಿನ್ಸನ್ ಬರಬಹುದು ಎನ್ನಲಾಗಿದೆ. ಇದಕ್ಕೆ ಕಾರಣ, ಅನುವಂಶಿಕತೆ. ಕುಟುಂಬದಲ್ಲಿ ಈ ಕಾಯಿಲೆಯ ಇತಿಹಾಸ ಹೊಂದಿರುವ ಯುವಕರು ಈ ಕಾಯಿಲೆಗೆ ಒಳಗಾಗುವ ಸಾಧ್ಯತೆ ಇದೆ. ಇನ್ನು, ಸೆಲೆಬ್ರಲ್ ಪಲ್ಸಿ ಸಮಸ್ಯೆಯಿಂದ ಹುಟ್ಟಿದ ಮಕ್ಕಳು ಸಹ ಯುವ ವಯಸ್ಸಿನಲ್ಲಿ ಈ ಕಾಯಿಲೆಗೆ ಒಳಗಾಗಬಹುದು ಎನ್ನಲಾಗಿದೆ. ಹೀಗಾಗಿ ಪಾರ್ಕಿನ್ಸೋನಿಸಂ ಕಾಯಿಲೆಯ ಇತಿಹಾಸ ಇದ್ದರೆ, ಅಥವಾ ಮಕ್ಕಳಲ್ಲಿ ಸಿಂಡ್ರೋಮ್ ಅಥವಾ ಆಡಿಸಂ ಸಮಸ್ಯೆ ಇದ್ದರೆ, ವೈದ್ಯರನ್ನು ಸಂಪರ್ಕಿಇ ಪಾರ್ಕಿನ್ಸೋನಿಸಂ ಕಾಯಿಲೆ ಬಗ್ಗೆಯೂ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು.
ಇದಕ್ಕೆ ಚಿಕಿತ್ಸೆ ಏನು?
ಪಾರ್ಕಿನ್ಸನ್ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ, ಕೆಲವು ಔಷಧಿ ಹಾಗೂ ಚಿಕಿತ್ಸೆಯಿಂದ ಈ ರೋಗ ಲಕ್ಷಣವನ್ನು ಕಡಿಮೆ ಮಾಡಬಹುದು. ಅದರಲ್ಲೂ ಯುವಕರಲ್ಲಿ ಈ ಕಾಯಿಲೆ ಬಂದರೆ ಕೆಲವು ಚಿಕಿತ್ಸೆಯಿಂದ ಗುಣಪಡಿಸಬಹುದಾಗಿದೆ. ಈ ಕಾಯಿಲೆಯು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಕೆಲವೊಮ್ಮೆ ಆ ವ್ಯಕ್ತಿಯ ಆರೋಗ್ಯದ ಸ್ಥಿತಿ ನೋಡಿಕೊಂಡು ಔಷಧ ನೀಡಬಹುದು.
ಕಾಯಿಲೆ ಬಂದ ಬಳಿಕ ಹುಷಾರಾಗಿರಿ
ಈ ಕಾಯಿಲೆ ಬಂದ ಬಳಿಕ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳುವುದು ಅನಿವಾರ್ಯ. ಮಾನಸಿಕ ಹಾಗೂ ದೈಹಿಕ ಸಮಲೋತನ ಕಾಪಾಡಿಕೊಳ್ಳಿ. ಲಘು ವ್ಯಾಯಾಮ, ಯೋಗ ಅಥವಾ ಧ್ಯಾನ ಮಾಡುವುದು ಒಳಿತು. ಜೊತೆಗೆ ಹೆಚ್ಚು ವಿಶ್ರಾಂತಿ ಪಡೆಯಬೇಕು. ಪೋಷಕಾಂಶಗಳು, ಪ್ರೊಟೀನ್‌ಗಳಿರುವ ಆಹಾರವನ್ನು ಹೆಚ್ಚು ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ