ಮದುವೆ (wedding) ಅಥವಾ ಇತರೇ ಸಮಾರಂಭ ಎಂದರೆ ಬಗೆಬಗೆಯ ಹಾಗೂ ರುಚಿಕರ ಭಕ್ಷ್ಯಗಳು ಇರುವುದು ಸಾಮಾನ್ಯ. ಯಾರು ಎಷ್ಟೇ ಡಯೆಟ್‌ನಲ್ಲಿ (diet) ಇದ್ದರೂ ಈ ಭಕ್ಷ್ಯಗಳನ್ನು ನೋಡಿ ತಿನ್ನದೇ ಇರಲಾರರು. ಜೊತೆಗೆ ಕುಟುಂಬಸ್ಥರು ಹಾಗೂ ಸ್ನೇಹಿತರ ಒತ್ತಾಯದ ಮೇರೆಗೆ ಇನ್ನಷ್ಟು ಆಹಾರವನ್ನು ಹೊಟ್ಟೆಗಿಳಿಸಿಕೊಳ್ಳುವುದು ಪಕ್ಕಾ! ಇದರಿಂದ ನಂತರದಲ್ಲಿ ಆರೋಗ್ಯದ (Health) ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಮದುವೆ ಹಾಗೂ ಬೃಹತ್ ಸಮಾರಂಭದಲ್ಲಿ ಆಹಾರವನ್ನು ಹೇಗೆ ಮಿತವಾಗಿ ಸೇವಿಸಬೇಕು, ಯಾವ ರೀತಿಯ ಆಹಾರವನ್ನಷ್ಟೇ ತೆಗೆದುಕೊಳ್ಳಬೇಕು ಎಂಬುದಕ್ಕೆ ಕೆಲವು ಟಿಪ್ಸ್ಗಳನ್ನು ಫೊರ್ಟಿಸ್ ಆಸ್ಪತ್ರೆಯ (Fortis Hospital) ಪೌಷ್ಟಿಕತಜ್ಞೆ ಡಾ. ಶಾಲಿನಿ ಅರವಿಂದ್ ನೀಡಿದ್ದಾರೆ.
ಮೊದಲು ಏನನ್ನಾದರೂ ತಿನ್ನಿರಿ:
ಸಮಾರಂಭಕ್ಕೆ ತೆರಳಿದ ಕೂಡಲೇ ಊಟಕ್ಕೆ ಕುಳಿತುಕೊಳ್ಳುವುದಿಲ್ಲ. ಸ್ನೇಹಿತರು, ಸಂಬಂಧಿಕರನ್ನು ಮಾತನಾಡಿಸುತ್ತಲೇ ಕೆಲವು ಸಮಯ ಕಳೆದು ಹೋಗುತ್ತದೆ. ನಂತರ ಊಟಕ್ಕೆ ಕುಳಿತಾಗ ಸಾಕಷ್ಟು ಹೊಟ್ಟೆ ಹಸಿವಿನಿಂದ ಹೆಚ್ಚು ಆಹಾರ ಸೇವಿಸುವ ಸಾಧ್ಯತೆ ಹೆಚ್ಚು. ಹೀಗಾಗಿ, ಮೊದಲು, ವೆಲ್‌ಕಂ ಡ್ರಿಂಕ್ ಅಥವಾ ಸ್ನಾಕ್ಸ್ ರೀತಿಯ ಯಾವುದಾದರೊಂದು ಆಹಾರವನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿ. ಇದು ನಿಮ್ಮ ಆಗಿನ ಹಸಿವನ್ನು ನಿವಾರಿಸುತ್ತದೆ. ಜೊತೆಗೆ, ನೀವು ತಡವಾಗಿ ಊಟಕ್ಕೆ ಹೋದರೂ ಹಸಿವಿನ ಪ್ರಮಾಣ ಕಡಿಮೆ ಇರುತ್ತದೆ.
ಒಂದೇ ಆಹಾರಕ್ಕೆ ಸೀಮಿತವಾಗಬೇಡಿ:
ಸಾಕಷ್ಟು ಜನರು ಮಾಡುವ ತಪ್ಪೇನೇಂದರೆ, ಯಾವುದಾದರೊಂದು ಆಹಾರ ತುಂಬಾ ರುಚಿಕರವಾಗಿದ್ದರೆ ಅದನ್ನು ಹಲವು ಬಾರಿ ಹಾಕಿಸಿಕೊಂಡು ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಇದರಿಂದ ಒಂದೇ ಆಹಾರ ಹೊಟ್ಟೆಯನ್ನು ಪೂರ್ತಿ ಮಾಡುತ್ತದೆ. ಹೀಗೆ ಮಾಡದಿರಿ. ಸಮಾರಂಭದಲ್ಲಿ ಹಲವು ಬಗೆಯ ಆಹಾರವಿದ್ದಾಗ ಎಲ್ಲಾ ಬಗೆಯ ಆಹಾರವನ್ನು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಹಾಕಿಸಿಕೊಳ್ಳಿ. ಇದರಿಂದ ಎಲ್ಲಾ ಆಹಾರದ ರುಚಿ ನೋಡಿದಂತಾಗುವ ಜೊತೆಗೆ, ಹೊಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಆಹಾರ ಸೇರಲಿದೆ.
ಇದನ್ನೂ ಓದಿ: Papaya Water: ದಿನವೂ ಪಪ್ಪಾಯಿ ನೀರನ್ನು ಕುಡಿಯಿರಿ, ಈ ಆರೋಗ್ಯ ಪ್ರಯೋಜನ ಪಡೆಯಿರಿ
ಸಾಕಷ್ಟು ನೀರು ಕುಡಿಯಿರಿ:
ಇದು ಅತ್ಯಂತ ಪ್ರಯೋಜನ ಕಾರಿ. ಪಾರ್ಟಿಯಲ್ಲಿ ಸ್ನೇಹಿತರು, ಸಂಬಂಧಿಕರೊಂದಿಗೆ ಮಾತನಾಡುತ್ತಾ ನೀರು ಕುಡಿಯುವುದನ್ನೇ ಮರೆತಿರುತ್ತೇವೆ. ಸಮಾರಂಭದಲ್ಲಿ ಹೆಚ್ಚು ಓಡಾಟ ಮಾಡುವುದರಿಂದ ನಿಮಗೆ ಹೆಚ್ಚು ಆಯಾಸವಾಗಿ, ಹೊಟ್ಟೆ ಹಸಿವು ಅತಿಯಾಗಿ ಆಗಬಹುದು. ನಿಮ್ಮ ಹಸಿವನ್ನು ನಿಯಂತ್ರಣದಲ್ಲಿ ಇಡಬೇಕೆಂದರೆ ಆಗಾಗ್ಗೇ ನೀರು ಕುಡಿಯುತ್ತಿರಿ. ಊಟಕ್ಕೆ ತೆರಳುವ ಮುನ್ನ ಒಂದು ಗ್ಲಾಸ್ ನೀರು ಕುಡಿದು 15-20 ನಿಮಿಷಗಳ ನಂತರ ಊಟ ಮಾಡುವುದರಿಂದ ಹೊಟ್ಟೆ ಹೆಚ್ಚಿನ ಆಹಾರವನ್ನು ಬಯಸುವುದಿಲ್ಲ. ನಿಮ್ಮ ದೇಹಕ್ಕೆ ಬೇಕಾದಷ್ಟು ಆಹಾರವನ್ನಷೇ ನೀವು ಸೇವಿಸಬಹುದು. ಇದು ಸ್ವಲ್ಪ ಕಷ್ಟಕರ ಎನಿಸಿದರು, ಆರೋಗ್ಯದ ದೃಷ್ಟಿಯಿಂದ ಈ ಕೆಲಸ ಮಾಡುವುದು ಅತ್ಯಂತ ಉಪಯುಕ್ತ. ಹೆಚ್ಚು ಆಹಾರ ಸೇವಿಸಿ, ಕೊರಗುವ ಬದಲು ಈ ಟ್ರಿಕ್ಸ್ ಬಳಸಿ, ಆರೋಗ್ಯ ಕಾಪಾಡಿಕೊಳ್ಳುವುದು ಒಳ್ಳೆಯದಲ್ಲವೇ?
ಸಿಹಿ ಪದಾರ್ಥಕ್ಕೆ ಇರಲಿ ಕಡಿವಾಣ:
ಇನ್ನು, ಸಮಾರಂಭವೆಂದರೆ ಸಿಹಿ ತಿನಿಸುಗಳ ಹಬ್ಬವೇ ಸರಿ. ಸಾಕಷ್ಟು ಬಗೆಯ ಸಿಹಿ ತಿನಿಸುಗಳು ನಿಮ್ಮನ್ನು ಆಕರ್ಷಿಸದೇ ಬಿಡುವುದಿಲ್ಲ. ಆದರೆ, ಈ ಆಕರ್ಷಣೆಗೆ ಮರುಗಿದರೆ ನಿಮ್ಮ ಆರೋಗ್ಯ ಕೈ ಕೊಡಬಹುದು ಎಚ್ಚರ. ಸಿಹಿ ತಿಂಡಿ ನಾಲಿಗೆಗೆ ರುಚಿ ನೀಡಿದಷ್ಟು, ದೇಹಕ್ಕೆ ಸಮಸ್ಯೆ ತಂದೊಡ್ಡುತ್ತದೆ. ಹೀಗಾಗಿ ಸಾಧ್ಯವಾದಷ್ಟು ಸಿಹಿ ತಿನಿಸುಗಳ ಮೇಲೆ ಹಿಡಿತವಿರಲಿ. ಕೆಲವು ನಿಮ್ಮ ಫೇವರೆಟ್ ಸಿಹಿ ತಿನಿಸು ಇದ್ದರೂ ಅದನ್ನು ಒಮ್ಮೆ ಮಾತ್ರ ಸೇವಿಸಿ, ಇಷ್ಟವೆಂದು ಹಲವು ಬಾರಿ ತಿನ್ನಲು ಪ್ರೇರೇಪಿಸಿಕೊಳ್ಳಬೇಡಿ.
ಚಿಕ್ಕ ಪ್ಲೇಟ್ ಬಳಸಿ:
ಬಫೆ ಸಿಸ್ಟಮ್ ಇರುವ ಸಮಾರಂಭದಲ್ಲಿ ನೇರವಾಗಿ ಹೋಗಿ ದೊಡ್ಡ ತಟ್ಟೆ ತೆಗೆದುಕೊಳ್ಳಬೇಡಿ. ಆದಷ್ಟು ಚಿಕ್ಕ ಪ್ಲೇಟ್ ತೆಗೆದುಕೊಳ್ಳಿ. ಇದು ನಿಮ್ಮ ತಟ್ಟೆಗೆ ಕಡಿಮೆ ಆಹಾರವನ್ನು ಮಾತ್ರ ತುಂಬಿಸಲು ಸಹಕಾರಿಯಾಗಲಿದೆ. ಒಮ್ಮೆ ನಿಮ್ಮ ಪ್ಲೇಟ್ ತುಂಬಿದ ಬಳಿಕ ಅದನ್ನು ನಿಧಾನವಾಗಿ ಖಾಲಿ ಮಾಡಿ, ಹೀಗೆ ನಿಧಾನವಾಗಿ ಆಹಾರ ಸೇವಿಸುವುದರಿಂದ ಹಸಿವು ನೀಗಲಿದೆ. ಹೊಟ್ಟೆಯೂ ತುಂಬಲಿದೆ. ನಿಧಾನವಾಗಿ ಖಾಲಿ ಮಾಡಿದ ನಂತರವೂ ಹಸಿವು ಇದ್ದರೆ, ಇನ್ನೊಮ್ಮೆ ಹಾಕಿಕೊಳ್ಳಬಹುದು.
ಹೆಚ್ಚು ಪ್ರೊಟೀನ್ ಮತ್ತು ಫೈಬರ್ ಸೇವಿಸಿ:
ಈಗಂತೂ ಪ್ರತಿಯೊಬ್ಬರೂ ಪ್ರತಿಯೊಂದು ಊಟ ಪೌಷ್ಟಿಕಾಂಶದ ಬಗ್ಗೆ ತಿಳಿದಿರುತ್ತೇವೆ. ಯಾವ ಆಹಾರ ನಮ್ಮ ದೇಹಕ್ಕೆ ಒಳ್ಳೆಯದು ಎಂಬುದೂ ತಿಳಿದಿದೆ. ಹೀಗಾಗಿ ಸಾಧ್ಯವಾದಷ್ಟು ಹೆಚ್ಚು ಪ್ರೋಟಿನ್ ಹಾಗೂ ಫೈಬರ್‌ಯುಕ್ತ ಆಹಾರವನ್ನು ಸೇವಿಸಿ, ಈ ಆಹಾರ ನಿಮಗೆ ಯಾವುದೇ ಬೊಜ್ಜು ಉಂಟು ಮಾಡುವುದಿಲ್ಲ. ಪ್ರೋಟಿನ್ ಆಹಾರದಲ್ಲಿ ಪ್ರಮುಖವಾಗಿ ಚಿಕನ್ ಟಿಕ್ಕಾ, ದಾಲ್ ತಡ್ಕಾ ಅಥವಾ ಮದುವೆಗಳಲ್ಲಿ ಪನೀರ್ ಆಧಾರಿತ ಆಹಾರಕ್ಕೆ ಆದ್ಯತೆ ನೀಡಿ. ಇನ್ನು, ಫೈಬರ್ ಆಹಾರಕ್ಕಾಗಿ ಹಣ್ಣುಗಳ ಕೌಂಟರ್‌ಗೆ ಹೋಗಿ ಅಥವಾ ಸಾಕಷ್ಟು ಸಲಾಡ್‌ಗಳನ್ನು ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ