ಅತಿ ಚಿಕ್ಕ ವಯಸ್ಸಿಗೆ ಕಣ್ಣಿಗೆ ಕನ್ನಡಕಗಳು ಬರುತ್ತಿವೆ. ದೃಷ್ಟಿ ದೋಷದ ಸಮಸ್ಯೆಗಳು ಸಹಜ ಎನ್ನುವಂತಾಗಿದೆ. ಒಣ ಕಣ್ಣು ಸಮಸ್ಯೆ (Problem) , ಕಣ್ಣಿನ ದೌರ್ಬಲ್ಯ, ಕಣ್ಣಿನಲ್ಲಿ ನೀರು ಸೋರುವುದು, ಆಗಾಗ ಕೆಂಪಾಗುವುದು ಇದೆಲ್ಲವೂ ಕೂಡ ಸರ್ವೇ ಸಾಮಾನ್ಯವಾಗಿದೆ. ಕಣ್ಣಿಗೆ ಅವಶ್ಯಕವಾದ ವಿರಾಮ ದೊರಕುತ್ತಲೇ ಇಲ್ಲ. ಸದಾ ಕಂಪ್ಯೂಟರ್ , ಮೊಬೈಲ್ (Mobile) , ಟಿವಿ ನೋಡುವ ಕಾರಣ ಕಣ್ಣಿನ ಮೇಲೆ ಒತ್ತಡ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಕಣ್ಣಿನ ಆರೋಗ್ಯದ (Health) ಬಗ್ಗೆ ಕಾಳಜಿ ವಹಿಸದಿದ್ದರೇ ಮುಂದಿನ ದಿನಗಳಲ್ಲಿ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ.
ಆದ್ದರಿಂದ ನಿಮ್ಮ ಜೀವನ ಶೈಲಿಯ ಜೊತೆಗೆ ಸರಿಯಾದ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ 5 ಆಹಾರಗಳನ್ನು ಸೇವಿಸಿದ್ರೆ ನಿಮ್ಮ ಕಣ್ಣಿನ ಆರೋಗ್ಯ ಸದಾ ಚೆನ್ನಾಗಿರುತ್ತದೆ.
1. ಮೀನು
ಮೀನಿನಂತಹ ಕಣ್ಣು ಎನ್ನುವ ಹೋಲಿಕೆ ಇದೆ. ಅದರ ಜೊತೆಗೆ ಮೀನು ಕಣ್ಣಿನ ಆರೋಗ್ಯಕ್ಕೆ ಸಹಕಾರಿ ಎನ್ನುವ ಮಾತು ಕೂಡ ಇದೆ. ಮೀನಿನಲ್ಲೇ ಹೆಚ್ಚು ಪೋಷಕಾಂಶವುಳ್ಳ ಸಾಲ್ಮನ್ ಫಿಶ್ ಹೆಚ್ಚು ಪ್ರಯೋಜನಕಾರಿಯಾಗಿದೆ.
ಮೀನಿನಲ್ಲಿರುವ ಒಮೆಗಾ-3 ಫ್ಯಾಟಿ ಆಸಿಡ್ ಕಣ್ಣಿಗೆ ರಕ್ಷಾ ಕವಚವಾಗಿದೆ. ಒಣ ಕಣ್ಣಿನ ಸಮಸ್ಯೆ ನಿವಾರಣೆ, ರೆಟಿನಾ ಆರೋಗ್ಯಕ್ಕೆ ಮೀನನ್ನು ನಿಮ್ಮ ಆಹಾರದಲ್ಲಿ ಅಳವಡಿಸಿಕೊಳ್ಳುವುದು ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: Skin Care: ತ್ವಚೆ ಮೃದುವಾಗಿರಬೇಕಂದ್ರೆ ಬಾಡಿ ಲೋಷನ್ ಯಾವಾಗ ಹಚ್ಚಿಕೊಳ್ಳಬೇಕು?
2. ಮೊಟ್ಟೆ
ಪ್ರೊಟೀನ್ಪೂರ್ಣ ಮೊಟ್ಟೆ ಕಣ್ಣಿನ ಆರೋಗ್ಯ ನಿರ್ವಹಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದರಲ್ಲಿರುವ ವಿಟಮಿನ್ ಎ, ಸತು ಕಣ್ಣಿನ ಶಕ್ತಿಯನ್ನು ವೃದ್ಧಿಸುತ್ತದೆ.
ಕಾರ್ನಿಯವನ್ನು ರಕ್ಷಿಸಲು ವಿಟಮಿನ್ ಎ ಅಂಶ ಪ್ರಯೋಜನಕಾರಿಯಾಗಿದೆ. ಲುಟೇನ್ ಮತ್ತು ಝಿಯಾಕ್ಸಾಥಿನ್ ವಯಸ್ಸಾದಂತೆ ಕಾಡುವ ಕಣ್ಣಿನ ಪೊರೆ ಸಮಸ್ಯೆಯನ್ನು ನಿವಾರಿಸುತ್ತದೆ. ಜೊತೆಗೆ ಇರುಳುಗುರುಡು ಸಮಸ್ಯೆ ನಿವಾರಿಸುತ್ತದೆ.
3. ಬಾದಾಮಿ
ಬಾದಾಮಿಯೂ ಸೂಪರ್ಫುಡ್ಗಳಲ್ಲಿ ಒಂದಾಗಿದೆ. ಮಿದುಳಿನ ಆರೋಗ್ಯಕ್ಕಷ್ಟೇ ಅಲ್ಲದೇ ಕಣ್ಣಿನ ಆರೋಗ್ಯಕ್ಕೂ ಬಾದಾಮಿ ನೆರವಾಗುತ್ತದೆ. ಇದರಲ್ಲಿರುವ ವಿಟಮಿನ್ ಎ ಅಂಶವು ಆರೋಗ್ಯಕರ ಟಿಶ್ಯೂಗಳ ನಿರ್ವಹಣೆಗೆ ಪ್ರಯೋಜನಕಾರಿಯಾಗಿದೆ. ಪ್ರತಿನಿತ್ಯ ನಿಯಮಿತ ಪ್ರಮಾಣದಲ್ಲಿ ಬಾದಾಮಿ ಸೇವನೆಯೂ ಕ್ಯಾಟರಾಕ್ಟ್ನಂತಹ ವಯೋ ಸಂಬಂಧಿತ ಕಾಯಿಲೆಗಳಿಂದ ದೂರವಿಡುತ್ತದೆ.
4. ಕ್ಯಾರೆಟ್
ಬೀಟಾ ಕ್ಯಾರೋಟಿನ್, ವಿಟಮಿನ್ ಎ ನಿಂದ ಸಮೃದ್ಧವಾಗಿರುವ ಕ್ಯಾರೆಟ್ ಸೇವನೆಯೂ ಕಣ್ಣಿನ ಆರೋಗ್ಯ ರಕ್ಷಣೆಯಲ್ಲಿ ಅಗ್ರ ಸ್ಥಾನದಲ್ಲಿದೆ. ಇದರಲ್ಲಿರುವ ರೊಡಾಪ್ಸಿನ್ ಎನ್ನುವ ಪ್ರೊಟೀನ್ ರೆಟಿನಾ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ಕಣ್ಣಿಗೆ ಸಂಬಂಧಿತ ಸೋಂಕು ಮತ್ತು ಅಲರ್ಜಿಯಿಂದ ಕಣ್ಣನ್ನು ರಕ್ಷಿಸುತ್ತದೆ.
5. ಕೇಲ್
ತೀರಾ ಇತ್ತೀಚೆಗೆ ನಮ್ಮ ಆಹಾರ ಪದ್ಧತಿಯೊಳಗೆ ಪರಿಚಯವಾಗುತ್ತಿರುವ ಕೇಲ್ ಅತಿ ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಬೀಟಾ -ಕ್ಯಾರೋಟಿನ್, ಖನಿಜ, ವಿಟಮಿನ್ಗಳ ಆಗರವಾಗಿರುವ ಕೇಲ್ ಸೇವನೆಯೂ ಕಣ್ಣಿಗೆ ಔಷಧಿಯಾಗಿ ಕೆಲಸ ನಿರ್ವಹಿಸುತ್ತದೆ.
ಲುಟೇನ್ ಮತ್ತು ಝಿಯಾಕ್ಸಾಥಿನ್ಗಳನ್ನು ದೇಹವು ಉತ್ಪಾದಿಸದ ಕಾರಣ ನಾವು ಆಹಾರದ ಮೂಲಕ ಅದನ್ನು ಸರಿದೂಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೇಲ್ ಪ್ರಯೋಜನಕಾರಿ. ನಿಯಮಿತವಾಗಿ ಕೇಲ್ ಸೇವನೆ ಮಾಡುವುದರಿಂದ ವಯಸ್ಸಾದಂತೆ ಕಾಡುವ ಕಣ್ಣಿನ ಪೊರೆಯ ರೋಗ ಹತ್ತಿರ ಸುಳಿಯುವುದಿಲ್ಲ.
ಇದಿಷ್ಟೇ ಅಲ್ಲದೇ ನುಗ್ಗೆಸೊಪ್ಪು, ಬೀಟ್ರೂಟ್ಗಳು, ಕಿತ್ತಳೆ ಹಣ್ಣನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಈ ಎಲ್ಲವೂ ಕಣ್ಣಿನ ಆರೋಗ್ಯ ಸುಧಾರಿಸುತ್ತವೆ. ಅಷ್ಟೇ ಅಲ್ಲದೇ ದೀರ್ಘಕಾಲದವರೆಗೆ ಕಣ್ಣಿನ ಆರೋಗ್ಯಕ್ಕೆ ಧಕ್ಕೆಯಾಗದಂತೆ ಕಾಪಾಡುತ್ತವೆ.
ಒಂದು ವೇಳೆ ನಿಮಗೆ ಮೊದಲಿನಿಂದಲೂ ಕಣ್ಣಿನ ಸಮಸ್ಯೆ ಇದ್ದರೆ, ಶುಗರ್ನಿಂದ ಕಣ್ಣಿನ ಸಮಸ್ಯೆಯಾಗಿದ್ದರೆ ನೀವು ಈ ಆಹಾರಗಳನ್ನು ಸೇವಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯಿರಿ ಆ ಮೂಲಕ ಆಹಾರ ಮತ್ತು ಆರೋಗ್ಯದಲ್ಲಿ ಸಮತೋಲಮ ಸಾಧಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ