ಮನುಷ್ಯನು (Person) ಬಾಲ್ಯ, ಯೌವ್ವನ ಹಾಗೂ ವೃದ್ಧಾಪ್ಯದ ಹಂತಗಳನ್ನು ದಾಟುವುದು ಪ್ರಕೃತಿ (Nature) ಸಹಜ ನಿಯಮ. ಅದೇ ರೀತಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ಉತ್ತಮ ಆರೋಗ್ಯ (Good Health) ಹೊಂದುವುದು ತುಂಬಾ ಮುಖ್ಯ. ಜೀವನಕ್ಕೆ ಬೇಕಾದ ಎಲ್ಲಾ ರೀತಿಯ ಚೈತನ್ಯ ಸಿಗುವುದೇ ಆರೋಗ್ಯದಿಂದ. ಹಾಗಾಗಿಯೇ ಆರೋಗ್ಯವೇ ಭಾಗ್ಯ ಎಂದು ಹೇಳುತ್ತಾರೆ. ಪುರುಷರಿಗಿಂತ ಮಹಿಳೆಯರು (Women) ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಕೌಟುಂಬಿಕ ಜವಾಬ್ದಾರಿಗಳ (Family Responsibility) ಮಧ್ಯೆ ಕಳೆದು ಹೋಗುವ ಮಹಿಳೆ, ಮದುವೆ ಮತ್ತು ಮಕ್ಕಳಾದ ನಂತರ ತನ್ನ ಆರೋಗ್ಯಕ್ಕೆ ಹಾಗೂ ತನಗಾಗಿ ಸಮಯ ಮೀಸಲಿಡಲು ಸಾಧ್ಯವಾಗಲ್ಲ.
30ರ ಹರೆಯದ ನಂತರ ಪ್ರತೀ ಮಹಿಳೆ ಈ ಐದು ಪರೀಕ್ಷೆಗಳನ್ನು ಮಾಡಿಸಬೇಕು!
ಯೌವ್ವನ ಎಂಬುದು ಪ್ರಕೃತಿಯ ಕೊಡುಗೆ. ಇದು ಮಹಿಳೆಯರಿಗೆ ಅಂದ, ಚೆಂದ, ಅಲಂಕಾರ, ಆರೋಗ್ಯದಿಂದ ಇರುವ ಸಮಯ. ಈ ಯೌವ್ವನದ ಹಂತ ಮುಗಿಯುತ್ತಿದ್ದಂತೆ ಮಹಿಳೆ ತನ್ನದೇ ಜವಾಬ್ದಾರಿಗಳ ಮಧ್ಯೆ ಕಳೆದು ಹೋಗುತ್ತಾಳೆ. ವಯಸ್ಸಾದಂತೆ ಅದರಲ್ಲೂ ಮೂವತ್ತರ ಹರೆಯದ ನಂತರ ಮಹಿಳೆಯರು ಹಲವು ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಬಿಪಿ, ಶುಗರ್, ಮುಖದಲ್ಲಿ ಸುಕ್ಕುಗಳು, ನೆರಿಗೆ, ಕಲೆ ಹೀಗೆ ಹಲವು ಆರೋಗ್ಯ ತೊಂದರೆಗಳು ಕಾಡುತ್ತವೆ.
ಇದರಿಂದ ಹೊರ ಬಂದು ಮಹಿಳೆ ತನಗಾಗಿ ಸಮಯ ಮೀಸಲಿಡಬೇಕು. ತನ್ನ ಆರೋಗ್ಯದ ಬಗ್ಗೆ ಮೂವತ್ತರ ಹರೆಯದ ನಂತರ ಸೂಕ್ತ ಕಾಳಜಿ ವಹಿಸಬೇಕು. ಇದು ಆಕೆಯನ್ನು ಆರೋಗ್ಯದಿಂದಿಡಲು ಸಹಾಯ ಮಾಡುತ್ತದೆ. ಮೂವತ್ತು ವರ್ಷದ ವಯಸ್ಸಿನ ನಂತರ ಮಹಿಳೆಯರ ಆರೋಗ್ಯದಲ್ಲಿ ಸಾಕಷ್ಟು ಏರುಪೇರು, ಬದಲಾವಣೆಗಳು ಆಗುತ್ತವೆ.
ಇದನ್ನು ಸಮರ್ಪಕವಾಗಿ ನಿಭಾಯಿಸಿ, ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬ ಮಹಿಳೆಯು ಮೂವತ್ತರ ಹರೆಯದ ನಂತರ ಕೆಲವು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಅವುಗಳ ಬಗ್ಗೆ ಬೆಂಗಳೂರು ಪೋರ್ಟಿಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಗೀತಾ ಮೊನಪ್ಪ ಹೇಳಿದ್ದಾರೆ. ಇಲ್ಲಿ ತಿಳಿಯೋಣ.
ಪಿಎಪಿ ಸ್ಮೀಯರ್ (PAP SMEAR)
21 ವರ್ಷ ವಯಸ್ಸಿನ ನಂತರ ಹಾಗೂ 65 ವರ್ಷ ವಯಸ್ಸಿನೊಳಗೆ ಪಿಎಪಿ ಸ್ಮೀಯರ್ ಪರೀಕ್ಷೆಯನ್ನು ಮಾಡಿಸಿಕೊಳ್ಳುವಂತೆ ವೈದ್ಯೆ ಗೀತಾ ಮೋನಪ್ಪ ಶಿಫಾರಸು ಮಾಡ್ತಾರೆ. ಪಿಎಪಿ ಸ್ಮೀಯರ್ ಪರೀಕ್ಷೆಯು ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಕಾಯಿಲೆ ಪತ್ತೆ ಹಚ್ಚಲು ಮತ್ತು ಪರೀಕ್ಷಿಸಲು ಬಳಸುವ ವಿಧಾನವಾಗಿದೆ. ಪಿಎಪಿ ಪರೀಕ್ಷೆಯನ್ನು ಪ್ರತಿ 5 ವರ್ಷಗಳಿಗೊಮ್ಮೆ ಮಾಡಿಸಿಕೊಳ್ಳಬೇಕು.
ಎಚ್ಪಿವಿ ಪರೀಕ್ಷೆ (HPV Test)
ಮೂವತ್ತು ವರ್ಷ ವಯಸ್ಸಿನ ನಂತರ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಕಾಯಿಲೆಯನ್ನು ಸರಿಯಾಗಿ ಪತ್ತೆ ಹಚ್ಚಲು ಪಿಎಪಿ ಸ್ಮೀಯರ್ ಪರೀಕ್ಷೆ ಜೊತೆಗೆ ಎಚ್ಪಿವಿ ಪರೀಕ್ಷೆ ಸಹ ಮಾಡಿಸಲು ಸಲಹೆ ನೀಡಲಾಗುತ್ತದೆ. ಈ ಎಚ್ ಪಿವಿ ಪರೀಕ್ಷೆಯನ್ನು ಪ್ರತಿ 5 ವರ್ಷಗಳಿಗೊಮ್ಮೆ ಮಾಡಿಸಿಕೊಳ್ಳಬೇಕು.
ಮ್ಯಾಮೊಗ್ರಾಮ್ (MAMMOGRAM)
ಮೂವತ್ತು ವರ್ಷ ಮೇಲ್ಪಟ್ಟ ಮಹಿಳೆಯರು, ಬಿಆರ್ಸಿಎ 1 ಮತ್ತು 2 ರೂಪಾಂತರಗಳು ಅಥವಾ ಮೊದಲ ಹಂತದ ಸ್ತನ ಕ್ಯಾನ್ಸರ್ ಅಪಾಯ ಪತ್ತೆ ಹಚ್ಚಲು ಈ ಮ್ಯಾಮೊಗ್ರಾಮ್ ಪರೀಕ್ಷೆ ಮಾಡಿಸಬೇಕು. ಪ್ರತೀ ವರ್ಷಕ್ಕೊಮ್ಮೆ ವೈದ್ಯರಲ್ಲಿ ಭೇಟಿ ನೀಡಿ, ಸ್ತನಗಳ ಮ್ಯಾಮೊಗ್ರಾಮ್ ಮತ್ತು ಎಂಆರ್ಐ ಮಾಡಿಸಬೇಕು ಅಂತಾ ಅಮೇರಿಕನ್ ಕ್ಯಾನ್ಸರ್ ಸೊಸೈಟಿ ಶಿಫಾರಸು ಮಾಡುತ್ತದೆ.
ಸ್ತನ ಕ್ಯಾನ್ಸರ್ ಅಪಾಯ ಹೊಂದಿರುವ ಮಹಿಳೆಯರು ನಲವತ್ತು ವರ್ಷದ ಬಳಿಕ ಮ್ಯಾಮೊಗ್ರಾಮ್ ಪರೀಕ್ಷೆಗೆ ಒಳಪಡಬೇಕಾಗುತ್ತದೆ. 45 ವರ್ಷದ ನಂತರ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚು. ಹಾಗಾಗಿ ವರ್ಷಕ್ಕೊಮ್ಮೆ ಮ್ಯಾಮೊಗ್ರಾಮ್ ಪರೀಕ್ಷೆಗೆ ಒಳಪಡುವುದು ಉತ್ತಮ ಅಂತಾರೆ ವೈದ್ಯರು.
ಫಲವತ್ತತೆ (ಫರ್ಟಿಲಿಟಿ) ಮತ್ತು ಗರ್ಭಧಾರಣೆ ಮೌಲ್ಯಮಾಪನ
ಸ್ತ್ರೀ ರೋಗ ತಜ್ಞರ ಜೊತೆ ಮೂವತ್ತರ ಹರೆಯದ ನಂತರ ಮಹಿಳೆಯರು ಮುಕ್ತವಾಗಿ ಸಮಾಲೋಚನೆ ನಡೆಸಿ, ಆರೋಗ್ಯ ಸಲಹೆ ಪಡೆಯಬೇಕು. ಅಂಡಾಶಯದಲ್ಲಿ ಮೊಟ್ಟೆಗಳ ಸಂಖ್ಯೆ 20 ರಿಂದ 30 ರ ಹರೆಯದ ಅಂತ್ಯಕ್ಕೆ ತೀವ್ರವಾಗಿ ಕಡಿಮೆಯಾಗುತ್ತದೆ.
ಹಾಗಾಗಿ ನೀವು ತಡವಾಗಿ ಗರ್ಭಧಾರಣೆಗೆ ಯೋಜನೆ ರೂಪಿಸಿದ್ದರೆ ಅಂಡಾಶಯದಲ್ಲಿನ ಮೊಟ್ಟೆಗಳ ಉತ್ಪತ್ತಿ ಹೇಗಿದೆ ಎಂಬುದನ್ನು ಮೊದಲು ಪರೀಕ್ಷಿಸಿ. ಒಂದು ವೇಳೆ ಅಂಡಾಶಯದಲ್ಲಿನ ಮೊಟ್ಟೆಗಳ ಉತ್ಪತ್ತಿ ದುರ್ಬಲವಾಗಿದ್ದರೆ ಪರ್ಯಾಯ ಮಾರ್ಗಗಳ ಬಗ್ಗೆ ತಿಳಿದುಕೊಳ್ಳಲು ಅಂಡಾಶಯದ ನಿಕ್ಷೇಪಗಳ ಪರೀಕ್ಷೆಗೆ ಒಳಪಡುವಂತೆ ಸಲಹೆ ನೀಡಲಾಗುತ್ತದೆ.
ವಯಸ್ಸನ್ನು ಲೆಕ್ಕಿಸದೆ ಗರ್ಭಧಾರಣೆಗೆ ಯೋಜನೆ ಮಾಡುವ ಎಲ್ಲಾ ಮಹಿಳೆಯರಿಗೆ ಗರ್ಭಧಾರಣೆಯ ಪೂರ್ವ ತಪಾಸಣೆಗೆ ಒಳಪಡುವಂತೆ ಶಿಫಾರಸು ಮಾಡಲಾಗುತ್ತದೆ. ಗರ್ಭಿಣಿಯಾಗಲು ನಿಮ್ಮ ದೇಹ ಆರೋಗ್ಯಕರವಾಗಿದೆಯೇ ಅಥವಾ ಮಧುಮೇಹ ಅಥವಾ
ಥೈರಾಯ್ಡ್ ಮಟ್ಟ ಹೇಗಿದೆ ಎಂದು ತಿಳಿಯಲು ಇರುವ ಕೆಲವು ಪರೀಕ್ಷೆಗಳನ್ನು ಇದು ಒಳಗೊಂಡಿದೆ. ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವ ಮಹಿಳೆಯರಿಗೆ ಗರ್ಭಧಾರಣೆಗೂ ಮೊದಲು ರುಬೆಲ್ಲಾ ಲಸಿಕೆ ನೀಡಲು ಶಿಫಾರಸು ಮಾಡಲಾಗುತ್ತದೆ.
ಲಿಪಿಡ್ ಮಟ್ಟ (LIPID PROFILE)
ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, ಆರೋಗ್ಯಕರ ಆಹಾರ ಮತ್ತು ದೈಹಿಕ ಚಟುವಟಿಕೆ ಹೊಂದಿರುವ 20 ವರ್ಷ ವಯಸ್ಸಿನ ನಂತರದ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು 4 ರಿಂದ 6 ವರ್ಷಕ್ಕೊಮ್ಮೆ ಲಿಪಿಡ್ ಪ್ರೊಫೈಲ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಶಿಫಾರಸು ಮಾಡುತ್ತದೆ.
ಇದನ್ನೂ ಓದಿ: ಈ 5 ಲಕ್ಷಣ ಕಾಣಿಸಿಕೊಂಡ್ರೆ ತಪ್ಪದೇ ಕಣ್ಣಿನ ಪರೀಕ್ಷೆ ಮಾಡಿಸಿ, ವೈದ್ಯರೇ ಕೊಟ್ಟ ಸಲಹೆ ಇದು
ಥೈರಾಯ್ಡ್ ಫಂಕ್ಷನ್ ಟೆಸ್ಟ್ ಮತ್ತು ಸಂಪೂರ್ಣ ಹೆಮೊಗ್ರಾಮ್
ಥೈರಾಯ್ಡ್ ಫಂಕ್ಷನ್ ಟೆಸ್ಟ್ ಮತ್ತು ಸಂಪೂರ್ಣ ಹೆಮೊಗ್ರಾಮ್ ಪರೀಕ್ಷೆಯು ಹಿಮೋಗ್ಲೋಬಿನ್ ಮತ್ತು ಥೈರಾಯ್ಡ್ ಪ್ರೊಫೈಲ್ ಅನ್ನು ತಿಳಿಯಲು ಹಾಗೂ ಸಮಸ್ಯೆಯನ್ನು ಆರಂಭದಲ್ಲಿ ಪತ್ತೆ ಮಾಡಲು ಮತ್ತು ಚಿಕಿತ್ಸೆ ಪಡೆಯಲು ಸಹಕಾರಿ.
ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ. ರಕ್ತಹೀನತೆ ಮತ್ತು ಹೈಪೋಥೈರಾಯ್ಡ್ ಸಮಸ್ಯೆ ಪತ್ತೆ ಹಚ್ಚುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ