Happy Teachers Day 2019: ಸುಸಂಸ್ಕೃತ ಸಮಾಜ ನಿರ್ಮಿಸುವಲ್ಲಿ ಶಿಕ್ಷಕನ ಪಾತ್ರವೇನು..?

Birth Anniversary Of Dr Sarvepalli Radhakrishnan: ಒರ್ವ ಶಿಕ್ಷಕ ಹೇಗೆ ಅತ್ಯುತ್ತಮ ಸ್ಥಾನಕ್ಕೇರಿ ಮಾದರಿ ಆಗಬಹುದೆಂಬುದಕ್ಕೆ ಸರ್ವಪಲ್ಲಿ ರಾಧಾಕೃಷ್ಣನ್ ಅವರೇ ಸಾಕ್ಷಿ. ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಭಾರತ ರತ್ನ ಗೌರವಕ್ಕೂ ಪಾತ್ರರಾಗಿದ್ದಾರೆ.

Vinay Bhat | news18-kannada
Updated:September 5, 2019, 11:10 AM IST
Happy Teachers Day 2019: ಸುಸಂಸ್ಕೃತ ಸಮಾಜ ನಿರ್ಮಿಸುವಲ್ಲಿ ಶಿಕ್ಷಕನ ಪಾತ್ರವೇನು..?
ಸಾಂದರ್ಭಿಕ ಚಿತ್ರ
  • Share this:
ವಿದ್ಯಾರ್ಥಿಗಳನ್ನು ಉತ್ತಮ ನಾಗರೀಕರನ್ನಾಗಿ ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವದ್ದು. ಜಗತ್ತಿನಾದ್ಯಂತ ಹಲವು ದಿನಾಂಕಗಳಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅಮೆರಿಕದಲ್ಲಿ ಮೇ ತಿಂಗಳ ಮೊದಲ ಮಂಗಳವಾರದಿಂದ ಒಂದು ವಾರವನ್ನು ಗುರುವಿಗೆ ಅರ್ಪಿಸಲಾಗುತ್ತದೆ. ಇಂಡೋನೇಷ್ಯಾದಲ್ಲಿ ನವೆಂಬರ್ 25, ಚೀನಾ ಸೆಪ್ಟಂಬರ್-28, ವಿಯೆಟ್ನಾಂ ನವೆಂಬರ್-20, ಮಲೇಷ್ಯಾ ಮೇ-16..ಹೀಗೆ ಹಲವು ದೇಶಗಳಲ್ಲಿ ಬೇರೆ ಬೇರೆ ದಿನಗಳನ್ನು ಗುರುವಿಗಾಗಿ ಮೀಸಲಿಡಲಾಗಿದೆ.

ಹಾಗೆಯೇ ಅಕ್ಟೋಬರ್ 5 ಅನ್ನು ವಿಶ್ವ ಶಿಕ್ಷಕರ ದಿನಾಚರಣೆ ಎಂದು ಪರಿಗಣಿಸಲಾಗಿದೆ. ಇವೆಲ್ಲದರ ನಡುವೆ ಭಾರತೀಯ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಕರ ದಿನಾಚರಣೆ ಎಂದರೆ ಸೆಪ್ಟಂಬರ್ 5. ಭಾರತದ ಮೊದಲ ಉಪ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಗೌರವಾರ್ಥವಾಗಿ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ.

ಒಂದು ದೇಶವು ಅಭಿವೃದ್ಧಿಯತ್ತ ಸಾಗಬೇಕಿದ್ದರೆ ಆ ದೇಶದಲ್ಲಿ ಅಕ್ಷರಸ್ಥರು ರೂಪುಗೊಳ್ಳಬೇಕಾಗಿರುತ್ತದೆ. ಹೀಗೆ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ಕಲಿಸುವ ಮೂಲಕ ತಮ್ಮ ವೃತ್ತಿಯಿಂದಲೇ ದೇಶ ಕಟ್ಟುವ ಕೆಲಸದಲ್ಲಿ ಶಿಕ್ಷಕರು ತೊಡಗಿಸಿಕೊಂಡಿರುತ್ತಾರೆ. 'ಗುರುಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ' ಎಂದು ಗೌರವಿಸುವ ಸಮಾಜದಲ್ಲಿರುವ ನಾವು ಶಿಕ್ಷಕರ ದಿನಾಚರಣೆ ದಿನ ತಮ್ಮ ಗುರುಗಳನ್ನು ಭೇಟಿಯಾಗಿ ಗೌರವ ಸಲ್ಲಿಸುವುದೇ ನಿಜವಾದ ಗುರು ಕಾಣಿಕೆ.

Happy Teachers Day 2019: ಇಂದು ದೇಶಾದ್ಯಂತ ಶಿಕ್ಷಕರ ದಿನಾಚರಣೆ; ಶುಭಕೋರಿದ ಯಡಿಯೂರಪ್ಪ

ಬಾಲ್ಯದಲ್ಲಿ ಕನಸುಗಳನ್ನು ತುಂಬಿಕೊಂಡಿರುವ ಪುಟ್ಟ ಕಣ್ಣುಗಳಿಗೆ ಶಿಕ್ಷಕರೇ ರೋಲ್ ಮಾಡೆಲ್ ಆಗಿರುತ್ತಾರೆ. ತಮ್ಮ ಕನಸುಗಳನ್ನು ಬೆಳೆಸುವಲ್ಲಿ ಶಿಕ್ಷಕರು ವಹಿಸುವ ಕಾಳಜಿಯೇ ಮುಂದೆ ಅದು ಸಾಧನೆಯಾಗಿ ಶಿಖರವನ್ನೇರುತ್ತದೆ. ಒರ್ವ ಶಿಕ್ಷಕ ಹೇಗೆ ಅತ್ಯುತ್ತಮ ಸ್ಥಾನಕ್ಕೇರಿ ಮಾದರಿ ಆಗಬಹುದೆಂಬುದಕ್ಕೆ ಸರ್ವಪಲ್ಲಿ ರಾಧಾಕೃಷ್ಣನ್ ಅವರೇ ಸಾಕ್ಷಿ. ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಭಾರತ ರತ್ನ ಗೌರವಕ್ಕೂ ಪಾತ್ರರಾಗಿದ್ದಾರೆ.

ಪ್ರಸ್ತುತ ಭಾರತದ ಶಿಕ್ಷಣ ಕ್ಷೇತ್ರವು ವ್ಯಾಪಾರೀಕರಣಕ್ಕೆ ಒಗ್ಗಿಕೊಂಡಿದ್ದು, ಇದರಿಂದ ಮೌಲ್ಯಾಧಾರಿತ ಶಿಕ್ಷಣ ಮಟ್ಟವು ಕಳೆಗುಂದುತ್ತಿದೆ ಎಂದರೆ ತಪ್ಪಾಗಲಾರದು. ಅದೇ ರೀತಿ ತಮ್ಮ ವೃತ್ತಿಯ ಮಹತ್ವವನ್ನು ತಿಳಿಯದ ಗುರುಗಳಿಂದ ಅತ್ಯುತ್ತಮ ನಾಗರೀಕ ಸಮಾಜದ ನಿರ್ಮಾಣ ಎಂಬುದು ಮರೀಚಿಕೆಯಾಗಿ ಉಳಿದಿದೆ.

ದಾರಿ ತಪ್ಪಿರುವ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ತಾವು ಮುಂದೆ ಶಿಕ್ಷಕರಾಗಬೇಕೆಂಬ ಕನಸುಗಳಿರುವುದು ಬಲು ಅಪರೂಪ ಎನ್ನುವಂತಾಗಿದೆ. ಇದಕ್ಕೆ ಸಾಮಾನ್ಯ ಶಿಕ್ಷಕರೊಬ್ಬರಿಗೆ ನಮ್ಮ ಸಮಾಜ ನೀಡುವ ಗೌರವ ಮತ್ತು ಸಂಬಳ ಕೂಡ ಕಾರಣ ಎನ್ನಲಾಗುತ್ತದೆ. ಡಾಕ್ಟರ್, ಇಂಜಿನಿಯರ್ ವೃತ್ತಿಯಲ್ಲಿ ಸಿಗುವ ಸಂಬಳಗಳು ಶಿಕ್ಷಣ ಕ್ಷೇತ್ರದಲ್ಲಿ ಸಿಗುವುದಿಲ್ಲ ಎಂಬುದು ನಮ್ಮ ಸಮಾಜ ಶಿಕ್ಷಕರಿಗೆ ನೀಡುತ್ತಿರುವ ಗೌರವವನ್ನು ಸೂಚಿಸುತ್ತದೆ. ಏಕೆಂದರೆ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧಕರಿಗೆ ಮೊದಲ ಮೆಟ್ಟಿಲು ಎಂಬುದು ಗುರು ಹೇಳಿ ಕೊಟ್ಟಂತಹ ಪಾಠವಾಗಿರುತ್ತದೆ.ಇನ್ಮುಂದೆ ಮನೆ ಬಾಗಿಲಿಗೆ ಮದ್ಯ?; ಅಬಕಾರಿ ಸಚಿವರಿಂದ ಹೊಸ ಚಿಂತನೆ; ಸಿಎಂ ಬಿಸ್​ವೈ ಗರಂ

ಹಾಗೆಯೇ ಜ್ಞಾನವಿಲ್ಲದ ಶಿಕ್ಷಕರ ಸಮಾಜವೊಂದು ರೂಪುಗೊಳ್ಳುತ್ತಿದ್ದು, ಇದರಿಂದ ಶಿಕ್ಷಣದ ಗುಣಮಟ್ಟ ಮತ್ತು ಮೌಲ್ಯಗಳು ಕಡಿಮೆಯಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಎಂತಹ ಪ್ರಜೆಗಳು ಸೃಷ್ಟಿಯಾಗಲಿದೆ ಎಂಬುದು ಚಿಂತೆಯ ವಿಷಯವಾಗಿದೆ. ಒಂದು ಉತ್ತಮ ಸಮಾಜ ನಿರ್ಮಿಸುವಲ್ಲಿ ಶಿಕ್ಷಕ ಹೇಗೆ ವೈಫಲ್ಯರಾಗುತ್ತಾರೋ ಅದೇ ರೀತಿ ವಿದ್ಯಾರ್ಥಿಗಳು ಕೂಡ ನೇರ ಹೊಣೆಗಾರರಾಗುತ್ತಾರೆ.

ಶಾಲಾ ಕೇಂದ್ರಗಳಲ್ಲಿ ಕೋಮು ಭಾವನೆ, ಜಾತಿಯ ವಿಷ ಬೀಜ ಬಿತ್ತುವ ಶಿಕ್ಷಕರಿಂದ ನಮ್ಮ ದೇಶ ಹೇಗೆ ಉದ್ದಾರವಾದೀತು ಎಂಬ ಪ್ರಶ್ನೆಗಳನ್ನು ತಮ್ಮನ್ನು ತಾವು ಕೇಳಿಕೊಳ್ಳಬೇಕಿದೆ. ತಮ್ಮ ವೃತ್ತಿಯ ಮಹತ್ವ ಅರಿಯದ ಇಂತಹ ಕೆಲ ಶಿಕ್ಷಕರಿಂದ ಇಂದು ಇಡೀ ಶಿಕ್ಷಕ ವರ್ಗಕ್ಕೆ ಕಳಂಕ ಅಂಟಿಕೊಳ್ಳುತ್ತಿದೆ. ಶಿಕ್ಷಕರ ವರ್ತನೆ ಮತ್ತು ಜ್ಞಾನದಿಂದ ಗುರುಗಳನ್ನೇ ಕೀಳರಿಮೆಯಿಂದ ನೋಡುವ ಸ್ಥಿತಿಗೆ ನಮ್ಮ ಸಮಾಜ ತಲುಪಿದ್ದೇವೆ ಎಂದರೆ ತಪ್ಪಾಗಲಾರದು.

ಇದರೊಂದಿಗೆ ಉತ್ತಮ ಸಮಾಜಕ್ಕೆ ಅಡಿಪಾಯ ಇಡಬೇಕಿರುವ ಸರ್ಕಾರ ಕೂಡ ಅತ್ಯುತ್ತಮ ಶಿಕ್ಷಣ ನೀಡುವುದರಲ್ಲಿ ಎಡವುತ್ತಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ತಲುಪಿರುವುದು ಇದಕ್ಕೆ ಉತ್ತಮ ಉದಾಹರಣೆ. ಶಿಕ್ಷಣ ಎಂಬುದು ವ್ಯಾಪಾರೀಕರಣಗೊಂಡಿದ್ದರೂ ಸರ್ಕಾರಿ ಶಾಲಾ ಶಿಕ್ಷಕರು ಖಾಸಗೀ ಶಾಲೆಗಳೊಂದಿಗೆ ಸ್ಪರ್ಧಿಸಲು ಮನಸ್ಸು ಮಾಡದೇ ಇರುವುದು ಕೂಡ ಇದಕ್ಕೆ ಮುಖ್ಯ ಕಾರಣ ಎನ್ನಬಹುದು. ಸರ್ಕಾರಿ ಶಾಲೆಗಳಲ್ಲಿ ಬಡ ಕುಟುಂಬಗಳ ವಿದ್ಯಾರ್ಥಿಗಳೇ ಹೆಚ್ಚಾಗಿದ್ದು ಅವರಿಗೆ ಉತ್ತಮ ಶಿಕ್ಷಣ ಮತ್ತು ಅವರ ಪ್ರತಿಭೆಗಳನ್ನು ಗುರುತಿಸಿ ಬೆಳೆಸಬೇಕಾದ ಕೆಲಸಗಳು ಶಿಕ್ಷಕರಿಂದ ಆಗಬೇಕಿದೆ.

ಶಿಕ್ಷಕರ ಪ್ರೋತ್ಸಾಹ ಇಲ್ಲದಿದ್ದರೆ ಇಂದಿನ ಸಮಾಜದಲ್ಲಿ ಗ್ರಾಮೀಣ ಪ್ರತಿಭೆಗಳು ನಗರ ಪ್ರದೇಶಗಳ ವಿದ್ಯಾರ್ಥಿಗಳಿಗಿಂತ ಹಿಂದೆ ಉಳಿಯುವುದರಲ್ಲಿ ಸಂಶಯವೇ ಇಲ್ಲ. ಕನಸಾಗಿಯೇ ಉಳಿದಿರುವ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಕನಸಿನ ಶಿಕ್ಷಣ ಒದಗಿಸುವ ಜವಾಬ್ದಾರಿ ಇಂದು ಶಿಕ್ಷಕರ ಮೇಲಿದೆ. ಜಾಗತೀಕರಣಗೊಂಡಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಸಮಾಜ ನಿರ್ಮಿಸುವ ಮತ್ತಷ್ಟು ಶಿಕ್ಷಕರು ರೂಪುಗೊಳ್ಳಲಿ ಎಂದು ಆಶಿಸೋಣ. ಹ್ಯಾಪಿ ಟೀಚರ್ಸ್​ ಡೇ!
First published:September 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ