ಅಪ್ಪ ನೀನೆಷ್ಟು ಒಳ್ಳೆಯವನು!

ಮಗು ಹುಟ್ಟುವ ಮೊದಲೇ ಏನೇನು ಬೇಕಾಗಬಹುದೆಂದು ಯೋಚಿಸಿ ತಂದಿಡುವ ಅಪ್ಪ, ಮಕ್ಕಳು ಕೇಳುವ ಮೊದಲೇ ಬೇಕಾದ್ದನ್ನು ಕೊಡಿಸುವ ಅಪ್ಪ ತನಗೇನು ಬೇಕೆಂದು ಎಂದೂ ಮಕ್ಕಳ ಬಳಿ ಕೇಳುವುದೇ ಇಲ್ಲ. ತಾನು ಹಾಕಲಾಗದ ಸೂಟ್​, ತನಗೆ ಸಿಕ್ಕದ ಕಾಲೇಜು ಸೀಟ್​, ಅವರಿಷ್ಟದ ಪ್ರತಿಯೊಂದನ್ನೂ ಮಕ್ಕಳಿಗೆ ಕೊಡಿಸಿ ಸಂಭ್ರಮಿಸುವ ಅಪ್ಪ ಮಕ್ಕಳಲ್ಲೇ ತನ್ನ ಸಂತೋಷವನ್ನು ಕಾಣುತ್ತಾನೆ. ಪ್ರತಿಯೊಬ್ಬರ ಮನೆಯಲ್ಲೂ ಇರುವ ಆ ಹೀರೋಗೆ ಹ್ಯಾಪಿ ಫಾದರ್ಸ್​ ಡೇ!

news18
Updated:June 17, 2018, 12:30 PM IST
ಅಪ್ಪ ನೀನೆಷ್ಟು ಒಳ್ಳೆಯವನು!
ಮಗು ಹುಟ್ಟುವ ಮೊದಲೇ ಏನೇನು ಬೇಕಾಗಬಹುದೆಂದು ಯೋಚಿಸಿ ತಂದಿಡುವ ಅಪ್ಪ, ಮಕ್ಕಳು ಕೇಳುವ ಮೊದಲೇ ಬೇಕಾದ್ದನ್ನು ಕೊಡಿಸುವ ಅಪ್ಪ ತನಗೇನು ಬೇಕೆಂದು ಎಂದೂ ಮಕ್ಕಳ ಬಳಿ ಕೇಳುವುದೇ ಇಲ್ಲ. ತಾನು ಹಾಕಲಾಗದ ಸೂಟ್​, ತನಗೆ ಸಿಕ್ಕದ ಕಾಲೇಜು ಸೀಟ್​, ಅವರಿಷ್ಟದ ಪ್ರತಿಯೊಂದನ್ನೂ ಮಕ್ಕಳಿಗೆ ಕೊಡಿಸಿ ಸಂಭ್ರಮಿಸುವ ಅಪ್ಪ ಮಕ್ಕಳಲ್ಲೇ ತನ್ನ ಸಂತೋಷವನ್ನು ಕಾಣುತ್ತಾನೆ. ಪ್ರತಿಯೊಬ್ಬರ ಮನೆಯಲ್ಲೂ ಇರುವ ಆ ಹೀರೋಗೆ ಹ್ಯಾಪಿ ಫಾದರ್ಸ್​ ಡೇ!
news18
Updated: June 17, 2018, 12:30 PM IST
ಸುಷ್ಮಾ ಚಕ್ರೆ, ನ್ಯೂಸ್​18 ಕನ್ನಡ
ಬೆಂಗಳೂರು (ಜೂನ್​ 17): ತೊಟ್ಟಿಲಲ್ಲಿ ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದ ಕಂದ ತನ್ನ ಕೈಬೆರಳು ಹಿಡಿದು ನಡೆದದ್ದಷ್ಟೇ ನೆನಪು. ಆಮೇಲೆ ಮಕ್ಕಳು ಬೆಳೆಯತೊಡಗಿದ ಪರಿ ನೋಡಿ ಅಪ್ಪನೂ ಬೆರಗಾಗುತ್ತಾನೆ. ಓದು ಮುಗಿಸಿ ಮನೆಯಿಂದ ಹೊರಬೀಳುವ ಮಕ್ಕಳು ಮತ್ತೆ ಅಪ್ಪನ ಕೈಗೆ ಸಿಗುವುದೇ ಇಲ್ಲ. ತನ್ನ ಮಕ್ಕಳು ತನಗಿಂತ ಒಳ್ಳೆಯ ಹೆಸರು ಸಂಪಾದಿಸಬೇಕು ಎಂಬುದು ಪ್ರತಿಯೊಬ್ಬ ತಂದೆಯ ಕನಸು. ಆ ಕನಸಿಗೆ ಮಕ್ಕಳು ಸ್ವಲ್ಪ ರೆಕ್ಕೆಪುಕ್ಕ ತುಂಬಿದರೂ ಆ ಜೀವ ಕುಣಿದುಬಿಡುತ್ತದೆ. ಜೀವನದಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸುವ ಗಂಡಿನ ಮೋಸ್ಟ್​ ಫೇವರಿಟ್​ ಪಾತ್ರ ಯಾವುದೆಂದು ಯಾರಾದರೂ ಕೇಳಿದರೆ ಪ್ರತಿಯೊಬ್ಬರೂ ಹೇಳುವ ಉತ್ತರ ಅಪ್ಪ!

ಬೆಳಗ್ಗೆಯಿಂದ ಒಂದೇ ಸಮನೆ ಆತಂಕ.. ಏನಾಗುವುದೋ, ಹೇಗಾಗುವುದೋ, ಯಾವುದಾದರೂ ಆಗಲಿ ಎಲ್ಲ ಸುಸೂತ್ರವಾಗಲಿ ಎಂದು ಅದೆಷ್ಟು ಬಾರಿ ಮನಸಲ್ಲೇ ಬೇಡಿಕೊಂಡಿದ್ದನೋ ಅವನಿಗೇ ಗೊತ್ತಿಲ್ಲ. ಆಸ್ಪತ್ರೆಯ ವಾರ್ಡ್​ನೊಳಗೆ ಆಕೆ ನರಳುತ್ತಾ ಮಲಗಿದ್ದರೆ ಇವನೊಳಗಿನ ಜೀವವೂ ಮುಲುಗುತ್ತಿತ್ತು. ಮನೆಯವರು ಕಂಗಾಲಾದಾರೆಂದು ಹುಸಿನಗುವನ್ನು ತುಟಿಯಂಚಿನಲ್ಲಿ ತುಂಬಿಕೊಂಡು ಒಳಗೊಳಗೆ ಚಡಪಡಿಸುತ್ತಿದ್ದ ಆ ಗಂಡು ಜೀವಕ್ಕೆ ಅಂತೂ ಇಂತೂ ವಾರ್ಡ್​ನೊಳಗಿಂದ ಆ ಅಳು ಕೇಳಿಸುತ್ತದೆ. ಅಷ್ಟು ಹೊತ್ತು ಗಂಟಿಕ್ಕಿದ್ದ ಮುಖಗಳೆಲ್ಲ ಆ ಅಳುವಿನ ಶಬ್ದದೊಂದಿಗೆ ಅರಳುತ್ತವೆ. ಮಗು ಹುಟ್ಟಿದ ಆ ಕ್ಷಣವೇ ತಂದೆಯೂ ಹುಟ್ಟುತ್ತಾನೆ. ತನಗೆ ಸಿಕ್ಕ ಹೊಸ ಪದವಿಯನ್ನು ಜೀವನಪರ್ಯಂತ ಜತನವಾಗಿ ಕಾಪಾಡಿಕೊಳ್ಳುವ ಅಪ್ಪ ಅಂದ್ರೆ ನಿಜಕ್ಕೂ ಆಕಾಶವೇ!

ತಾಯಿ ಗರ್ಭದೊಳಗೆ ಮಗುವನ್ನು ಹೊತ್ತರೆ ತಂದೆ ಮನಸಲ್ಲೇ ಮಗುವಿನ ಕಲ್ಪನೆಯನ್ನು ಹೊತ್ತುಕೊಂಡು ಒಂಭತ್ತು ತಿಂಗಳು ಕಳೆಯುತ್ತಾನೆ. ಪ್ರತಿಯೊಬ್ಬ ತಂದೆಯಲ್ಲೂ ಒಂದು ತಾಯಿಜೀವವಿರುತ್ತದೆ. ಆದರೆ, ತಾಯಿಯ ಅಕ್ಕರೆ, ಪ್ರೀತಿ, ಕಾಳಜಿಯನ್ನು ಅವರು ತೋರಿಸಿಕೊಳ್ಳುವುದಿಲ್ಲವಷ್ಟೆ. ಸದಾ ದೂರದಲ್ಲೆಲ್ಲೋ ನಿಂತು ಮಕ್ಕಳಿಗೆ ಬೆಂಗಾವಲಾಗಿರುವ ಅಪ್ಪ ಮಕ್ಕಳು ತನ್ನ ಎತ್ತರಕ್ಕೆ ಬೆಳೆದು ನಿಂತಾಗ ಗೆಳೆಯನಾಗುತ್ತಾನೆ, ಸೋತಾಗ ಬೆನ್ನು ತಟ್ಟಿ ಮುಂದೆ ಕಳಿಸುತ್ತಾನೆ, ಅತ್ತಾಗ ಅಮ್ಮನಂತೆ ಕಣ್ಣೊರೆಸದಿದ್ದರೂ ಇನ್ನೆಂದೂ ತನ್ನ ಮಕ್ಕಳು ಕಣ್ಣೀರು ಹಾಕದಂತೆ ನೋಡಿಕೊಳ್ಳುತ್ತಾನೆ. ಸೋತು ಗೆಲ್ಲುವ, ಎದ್ದು ನಿಲ್ಲುವ, ಕುಗ್ಗಿ ಬೀಗುವ ಪಾಠವನ್ನು ಕಲಿಸುತ್ತ ಮಕ್ಕಳ ಖುಷಿಯಲ್ಲೇ ತನ್ನ ಹೆಮ್ಮೆಯನ್ನು ಕಾಣುವ ಅಪ್ಪ ಎಲ್ಲ ಮಕ್ಕಳ ಪಾಲಿಗೆ ಮೊದಲ ಹೀರೋ.

ಗಂಡನಾಗಿ, ಅಪ್ಪನಾಗಿ, ಅಜ್ಜನಾಗಿ, ಮುತ್ತಜ್ಜನಾಗಿ ಹಲವಾರು ಬಡ್ತಿ ಪಡೆಯುವ ಗಂಡು ತಾನು ಅಪ್ಪನಾದ ಗಳಿಗೆಯನ್ನು ಮರೆಯಲು ಸಾಧ್ಯವೇ ಇಲ್ಲ. ಕೈಯಲ್ಲಿ ಹಿಡಿದ ಆ ಪುಟ್ಟ ಕಾಲು, ಕೆನ್ನೆಗೆ ಬಡಿಯುವ ಕೈಗಳಲ್ಲೇ ಸ್ವರ್ಗ ಕಾಣುವ ಅಪ್ಪ ಅಂದಿನಿಂದಲೇ ಮಕ್ಕಳ ಭವಿಷ್ಯವನ್ನು ಕಟ್ಟತೊಡಗುತ್ತಾನೆ. ಅದುವರೆಗೆ ತನಗಾಗಿ ಬದುಕಿದ ಜೀವ ಆಮೇಲೆ ಮಕ್ಕಳಿಗಾಗಿ ಮುಡಿಪಾಗುತ್ತದೆ. ರೆಕ್ಕೆ ಬಂದ ಹಕ್ಕಿಗಳು ಹಾರಿಹೋದರೂ ಮತ್ತೆ ಬರಬಹುದೆಂಬ ನಿರೀಕ್ಷೆಯಲ್ಲಿ ಕಾಯುತ್ತಾ ಕೂರುವ ಅಪ್ಪ ಎಂದಿಗೂ ಮಕ್ಕಳ ಬಗ್ಗೆ ಬೇಸರ ಮಾಡಿಕೊಳ್ಳುವುದಿಲ್ಲ. ಹಿಂತಿರುಗಿಯೂ ನೋಡದೆ ಯಾವುದೋ ವೃದ್ಧಾಶ್ರಮದಲ್ಲಿ ಬಿಟ್ಟುಹೋದ ಮಕ್ಕಳ ಬರುವಿಕೆಯನ್ನೇ ಕಾಯುವ ಅಪ್ಪ ಅದೇ ಮಕ್ಕಳು ಕಷ್ಟದಲ್ಲಿದ್ದಾಗ ತನ್ನ ಅವಮಾನವನ್ನೆಲ್ಲ ಬದಿಗಿಟ್ಟು ಓಡಿಹೋಗಿ ಧೈರ್ಯತುಂಬುತ್ತಾನೆ.

ಅಪ್ಪ ಬದುಕಲು ತೋರಿಸುವ ಬೆಳಕು:
ಸಾಮಾನ್ಯವಾಗಿ ಎಲ್ಲ ಮಕ್ಕಳು ಅಮ್ಮನೊಂದಿಗೆ ಆತ್ಮೀಯವಾಗಿದ್ದಷ್ಟು ಅಪ್ಪನನ್ನು ಹಚ್ಚಿಕೊಳ್ಳುವುದಿಲ್ಲ. ಹಿಂದಿನ ಕಾಲದಲ್ಲಂತೂ ಅಪ್ಪನ ಎದುರು ನಿಲ್ಲೋಕೆ ಕೂಡ ಮಕ್ಕಳು ಹೆದರೋ ಪರಿಸ್ಥಿತಿಯಿತ್ತು. ಅಪ್ಪ ಜಗಲಿಯಲ್ಲಿ ಕೂತಿದ್ದರೆ ಮಕ್ಕಳು ಹಿಂದಿನ ಬಾಗಿಲಿನಿಂದಲೇ ಓಡಾಡುವಷ್ಟು ಭಯವಿತ್ತು. ಆದರೆ, ಆ ಭಯದ ನಡುವೆಯೂ ಒಂದು ಗೌರವವಿತ್ತು. ಆದರೆ, ಈಗಿನ ಕಾಲದಲ್ಲಿ ಅಪ್ಪ-ಮಕ್ಕಳ ನಡುವೆ ಆಪ್ತವಾದ ಬಾಂಧವ್ಯ ಬೆಳೆಯುತ್ತಿದೆ. ಅಮ್ಮನಷ್ಟೇ ಸಲಿಗೆಯಿಂದ ಅಪ್ಪನೂ ಮಕ್ಕಳೊಂದಿಗೆ ಬೆರೆಯಲಾರಂಭಿಸಿದ್ದಾರೆ. ಕಾಲಘಟ್ಟ ಬದಲಾಗುತ್ತಿದ್ದರೂ, ಅಪ್ಪಂದಿರ ನಡವಳಿಕೆಯಲ್ಲಿ ಬದಲಾವಣೆಯಾಗುತ್ತಿದ್ದರೂ ಮಕ್ಕಳ ಬಗೆಗೆ ಅಪ್ಪನ ಕಾಳಜಿಯಲ್ಲಿ ಕೊಂಚವೂ ಬದಲಾವಣೆಯಾಗಿಲ್ಲ. ಅಮ್ಮನೆಂದರೆ ಪ್ರೀತಿ, ಅಪ್ಪನೆಂದರೆ ಗೌರವ. ಅಮ್ಮ ಬದುಕು ಕಲಿಸಿದರೆ ಅಪ್ಪ ಆ ಬದುಕಿಗೆ ದಾರಿ ತೋರಿಸುವ ಬೆಳಕು.
Loading...

ಇಂದು ಅಪ್ಪಂದಿರ ದಿನ:

ತಾಯಿ, ಪ್ರೇಮಿ, ಮಕ್ಕಳು  ಎಲ್ಲರಿಗೂ ವರ್ಷದಲ್ಲಿ ಒಂದೊಂದು ದಿನವನ್ನು ವಿಶೇಷವಾಗಿ ಮೀಸಲಿಡಲಾಗಿದೆ. ಅದೇರೀತಿ, ಜೂನ್​ ಮೂರನೇ ಭಾನುವಾರವನ್ನು ಪ್ರತಿವರ್ಷ ರಾಷ್ಟ್ರೀಯ ತಂದೆಯಂದಿರ ದಿನವನ್ನಾಗಿ ಆಚರಿಸಲಾಗುತ್ತಿದೆ. ಇಂತಹ ಅಪ್ಪಂದಿರಿಗೆ ಒಂದು ದಿನವೆಂದು ರೂಪುಗಂಡಿದ್ದು 1910ರಲ್ಲಿ. ವಾಷಿಂಗ್ಟನ್​ನ  ಸೊನಾರಾ ಸ್ಮಾರ್ಟ್ ಡೊಡ್ ಎಂಬಾಕೆ ಅಪ್ಪಂದಿರ ದಿನವನ್ನು ಮೊದಲ ಬಾರಿಗೆ ಆಚರಿಸಿದಳು.

ಬೆಚ್ಚನೆಯ ಅಪ್ಪುಗೆ, ಪ್ರೀತಿಯ ಮಾತು ಸಾಕು:
ಮಕ್ಕಳಿಗಾಗಿ ಜೀವನವನ್ನೇ ಸವೆಸಿದ ಅಪ್ಪನಿಗೆ ದಿನದ ಒಂದು ಗಂಟೆಯನ್ನೂ ಕೊಡಲಾಗದವರು ಕೂಡ ಇದ್ದಾರೆ. ಅಮ್ಮನ ಬಗ್ಗೆ ಸಾವಿರಾರು ತ್ಯಾಗದ ಕತೆಗಳಿವೆ. ಅದರಲ್ಲೆಲ್ಲ ಅಪ್ಪ ಸೈಡ್​ ಕ್ಯಾರೆಕ್ಟರ್​ ಆಗಿರುತ್ತಾನೆ ಅಥವಾ ವಿಲನ್​ ಆಗಿರುತ್ತಾನೆ. ನಮ್ಮ ಮನೆಯಲ್ಲಿರುವ ಹೀರೋವನ್ನು ನಾವೇ ಗುರುತಿಸದಿದ್ದರೆ ಬೇರೆ ಯಾರು ಗುರುತಿಸಲು ಸಾಧ್ಯ? ನಿಮ್ಮ ಮನೆಯಲ್ಲಿರುವ ಆ ಹೀರೋಗೆ ಫಾದರ್ಸ್​ ಡೇ ವಿಷ್​ ಮಾಡಿದ್ರಾ? ಒಂದು ಪ್ರೀತಿಯ ಅಭಿನಂದನೆ, ಬೆಚ್ಚನೆಯ ಅಪ್ಪುಗೆಯಷ್ಟೇ ಬೇಕು ಅಪ್ಪನಿಗೆ. ನಾವು ದುಡಿಯುವ ಹಣ, ಅಧಿಕಾರ, ಆಸ್ತಿಗಳೆಲ್ಲ ಅಪ್ಪನಿಗೆ ನಗಣ್ಯ. ಪ್ರೀತಿಯಿಂದ ಒಂದೆರಡು ಮಾತನಾಡಿದರೆ ಅದೇ ದೊಡ್ಡ ಉಡುಗೊರೆ. ನಮಗಾಗಿ ತನ್ನೆಲ್ಲ ಇಷ್ಟಗಳನ್ನು ತ್ಯಾಗ ಮಾಡಿದಾತನಿಗಾಗಿ ಅಷ್ಟೂ ಮಾಡದಿದ್ದರೆ ಹೇಗೆ ಹೇಳಿ...
First published:June 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...