ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಭಾರತಕ್ಕೆ ಭೇಡಿ ನೀಡಿದ್ದ ಜಪಾನ್‌ನ ಪ್ರಧಾನಿ ಫ್ಯೂಮಿಯೊ ಕಿಶಿಡಾ ದೆಹಲಿಯಲ್ಲಿ ಗೋಲ್‌ಗಪ್ಪ (Golgappa) ಸವಿಯುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಗೋಲ್‌ಗಪ್ಪ ಸ್ಟಾಲ್‌ನಲ್ಲಿ ರುಚಿಯಾದ ಗೋಲ್‌ಗಪ್ಪ ಸವಿದ ಜಪಾನ್ ಪ್ರಧಾನಿ, ಈ ಸ್ಟ್ರೀಟ್‌ಪುಡ್‌ನ ರುಚಿಗೆ ಮನಸೋತಂತೆ ಕಾಣುತ್ತಿದ್ದುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಅತ್ಯಂತ ಉನ್ನತ ಸ್ಥಾನದಲ್ಲಿರುವ ಇಬ್ಬರೂ ವ್ಯಕ್ತಿಗಳು ತಮ್ಮ ವ್ಯಾವಹಾರಿಕ ಮಾತುಕತೆಗಳನ್ನೆಲ್ಲಾ ಬದಿಗೊತ್ತಿ ಗೋಲ್‌ಗಪ್ಪಾ ಸವಿಯುವುದರಲ್ಲಿ ನಿರತರಾಗಿದ್ದು ಇದು ಪ್ರತಿಯೊಬ್ಬರ ಗಮನ ಸೆಳೆಯುವಂತೆ ಮಾಡಿದ್ದಂತೂ ಸುಳ್ಳಲ್ಲ. ಇದರೊಂದಿಗೆ ಗೋಲ್‌ಗಪ್ಪಾದ ರುಚಿಗೆ ಮನಸೋಲದವರು ಯಾರೂ ಇಲ್ಲ ಎಂಬ ಮಾತನ್ನು ಅಕ್ಷರಶಃ ಸತ್ಯವಾಗಿಸಿದೆ.
ಎಲ್ಲರೂ ಇಷ್ಟಪಡುವ ತಿನಿಸು ಗೋಲ್‌ಗಪ್ಪ:
ಎಲ್ಲರೂ ಇಷ್ಟಪಡುವ ಹಾಗೂ ಬಾಯಲ್ಲಿ ನೀರೂರಿಸುವಂತೆ ಮಾಡುವ ಜನಪ್ರಿಯ ಸ್ಟ್ರೀಟ್ ಫುಡ್ ಆದ ಗೋಲ್‌ಗಪ್ಪಾ ಹೆಚ್ಚಾಗಿ ಪ್ರತಿಯೊಬ್ಬರೂ ಇಷ್ಟಪಡುವ ತಿನಿಸಾಗಿದೆ. ಪಾನಿಪುರಿ, ಗೋಲ್‌ಗಪ್ಪ, ಪುಚ್ಕಾ, ಪುಲ್ಕಿ ಹೀಗೆ ದೇಶದ ನಾನಾ ಭಾಗಗಳಲ್ಲಿ ವಿಧ ವಿಧವಾದ ಹೆಸರು ಪಡೆದುಕೊಂಡಿರುವ ಗೋಲ್‌ಗಪ್ಪ, ತನ್ನ ಬಣ್ಣ, ರುಚಿ, ವಾಸನೆ, ವೈವಿಧ್ಯತೆಯಿಂದ ತಿನ್ನುವವರ ಬಾಯಿಯಲ್ಲಿ ನೀರೂರುವಂತೆ ಮಾಡುತ್ತದೆ. ತನ್ನೊಳಗಿರುವ ಮಸಾಲೆ ಮಿಶ್ರಣಗಳಿಂದ ಗೋಲ್‌ಗಪ್ಪಾ ಅಪಾರ ಅಭಿಮಾನಿ ಬಳಗವನ್ನೇ ಪಡೆದುಕೊಂಡಿದೆ.
ಪಾನಿಪುರಿ ಹೇಗೆ ಪ್ರಸಿದ್ಧಿ ಪಡೆದಿದೆ?:
ಸಣ್ಣದಾದ ಟೊಳ್ಳಾದ ಪುರಿ ಅದರೊಳಗೆ ಬೇಯಿಸಿದ ಆಲೂಗಡ್ಡೆ, ಕಡಲೆ, ಬಟಾಣಿ, ಮಸಾಲೆ ಕರಿ ರಗ್ಡಾ, ಬೂಂದಿ ಹಾಗೂ ಕಾಳುಗಳ ಸ್ಟಫಿಂಗ್. ಇದರೊಂದಿಗೆ ತುಂಬಿದ ಪೂರಿಯನ್ನು ಸಿಹಿ ಹಾಗೂ ಹುಳಿ ಮಿಶ್ರಿತ ದ್ರವದಲ್ಲಿ ಅದ್ದಿ ನೀಡಲಾಗುತ್ತದೆ. ಪಾನಿ ಎಂಬ ಹೆಸರಿನಿಂದ ಕರೆಯುವ ಈ ದ್ರವ ರೂಪದ ಪದಾರ್ಥ ಕೂಡ ತನ್ನ ಸುವಾಸನೆಯಿಂದ ಮನಸೆಳೆಯುತ್ತದೆ. ಎಲ್ಲೇ ಹೋದರೂ ಪಾನಿಪುರಿ ತನ್ನದೇ ಆದ ಸುವಾಸನೆ ಹಾಗೂ ರುಚಿಯಿಂದ ಪ್ರಸಿದ್ಧಿ ಪಡೆದಿದೆ.
ಇದನ್ನೂ ಓದಿ: Health Tips: ಹಸಿರು ಮೆಣಸಿನಕಾಯಿ ಮತ್ತು ಕೆಂಪು ಮೆಣಸಿನಕಾಯಿ ಇವೆರಡರಲ್ಲಿ ಆರೋಗ್ಯಕ್ಕೆ ಹಾನಿಕಾರಕ ಯಾವುದು?
ಪಾನಿಪುರಿ ಇಷ್ಟು ಪ್ರಸಿದ್ಧಿಯನ್ನು ಪಡೆಯಲು ಕಾರಣ ಅದರ ಚಟ್ಪಟದಂತಿರುವ ರುಚಿ, ಸುವಾಸನೆ ಹಾಗೂ ಮಸಾಲೆಗಳ ಮಿಶ್ರಣವಾಗಿದೆ. ಪುರಿ ಮಸಾಲೆಯಿಂದ ತುಂಬಿದ ಸಿಹಿ, ಉಪ್ಪು, ಹಾಗೂ ಕುರುಕುಲಾದ ರುಚಿಕರ ಸಂಯೋಜನೆಯನ್ನು ಹದವಾಗಿ ಮೇಳೈಯಿಸಿಕೊಂಡಿದೆ. ದಿಲ್ಲಿಯಿಂದ ಹಿಡಿದು ಹಳ್ಳಿಯವರೆಗೂ ಪಾನಿಪುರಿ ತನ್ನದೇ ಆದ ರುಚಿಯನ್ನು ಹೊಂದಿದ್ದು, ಬಡವರಿಂದ ಹಿಡಿದು ಶ್ರೀಮಂತರವರೆಗೆ ಪಾನಿಪುರಿಗೆ ಮನಸೋಲದವರು ಯಾರೂ ಇಲ್ಲ ಎಂದೇ ಹೇಳಬಹುದು. ಪಾನಿ ಪುರಿ ತಿನ್ನುವುದು ಬಹು ಸಂವೇದನಾಶೀಲ ಅನುಭವ ಎಂದು ಮುಂಬೈನ ಓ ಪೆಡ್ರೊ ಮತ್ತು ವೆರೋನಿಕಾದ ದಿ ಬಾಂಬೆ ಕ್ಯಾಂಟೀನ್‌ನ ಕಾರ್ಯನಿರ್ವಾಹಕ ಬಾಣಸಿಗ ಹುಸೇನ್ ಶಹಜಾದ್ ತಿಳಿಸುತ್ತಾರೆ.
ಒಂದೊಂದು ಕಡೆಗಳಲ್ಲಿ ಒಂದೊಂದು ಹೆಸರು:
ಖಾದ್ಯ ಒಂದಾದರೂ ಬೇರೆ ಬೇರೆ ಹೆಸರುಗಳಿಂದ ಜನಪ್ರಿಯವಾಗಿರುವ ಪಾನಿಪುರಿ ಆಯಾಯ ಪ್ರದೇಶಕ್ಕೆ ತಕ್ಕಂತೆ ತಯಾರಿಯನ್ನು ಒಳಗೊಂಡಿದೆ. ಮುಂಬೈ, ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಪಾನಿಪುರಿಯನ್ನು ಹುಣಸೆ ಹಣ್ಣು ಹಾಗೂ ಖರ್ಜೂರದ ಚಟ್ನಿ ಬೆರೆಸಿ ತಯಾರಿಸಲಾಗುತ್ತದೆ. ನಂತರ ಇದಕ್ಕೆ ಸ್ಟಫಿಂಗ್‌ನಂತೆ ಹಿಸುಕಿದ ಆಲೂಗಡ್ಡೆ ಬಟಾಣಿಯ ಕರಿಯಿಂದ ತುಂಬಿಸಿ ನೀಡುತ್ತಾರೆ.
ಇನ್ನು ಪುರಿಯನ್ನು ಸಾಮಾನ್ಯವಾಗಿ ರವೆ ಅಥವಾ ಗೋಧಿಯಿಂದ ತಯಾರಿಸುತ್ತಾರೆ ಅಂತೆಯೇ ಯಾವ ಶೈಲಿಯಲ್ಲಿ ಪುರಿಯನ್ನು ತಯಾರಿಸಲಾಗುತ್ತದೆ ಎಂಬುದನ್ನು ಆಧರಿಸಿ ವಸ್ತುಗಳನ್ನು ನಿರ್ಧರಿಸಲಾಗುತ್ತದೆ. ಮಧ್ಯಪ್ರದೇಶ ಮತ್ತು ಗುಜರಾತ್‌ನ ಕೆಲವು ಭಾಗಗಳಲ್ಲಿ ಪಾನಿಪುರಿ ಸವಿಯುತ್ತೀರಿ ಎಂದಾದರೆ ಇದನ್ನು ಪಕೋಡಿ ಎಂದು ಕರೆಯಲಾಗುತ್ತದೆ. ಇದಕ್ಕೆ ಪುದೀನಾ ಎಲೆಗಳನ್ನು ಬಳಸಿ ಇನ್ನಷ್ಟು ಸುವಾಸನೆಯನ್ನು ಹೆಚ್ಚಿಸಲಾಗುತ್ತದೆ.
ದೆಹಲಿ ಹಾಗೂ ಉತ್ತರ ಪ್ರದೇಶಗಳಲ್ಲಿ ಗೋಲ್ಗಪ್ಪಾ ಎಂದು ಕರೆಯಲಾಗುತ್ತದೆ ಅಂತೆಯೇ ಹುಳಿ ಸಿಹಿ ಮಿಶ್ರಿತ ಪಾನಿಯೊಂದಿಗೆ ಗೋಲ್ಗಪ್ಪಾವನ್ನು ಉಣಬಡಿಸಲಾಗುತ್ತದೆ. ಕೋಲ್ಕತ್ತಾದಲ್ಲಿ ಪುಚ್ಕಾ ಎಂದೇ ಇದು ಪ್ರಸಿದ್ಧಿ ಪಡೆದುಕೊಂಡಿದೆ. ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಇದನ್ನು ಪಾನಿ ಕೆ ಬತಾಶೆ ಎಂದು ಕರೆಯಲಾಗುತ್ತದೆ ಹಾಗೂ ಇದನ್ನು ಬೇಯಿಸಿದ ಆಲೂಗಡ್ಡೆ ಹಾಗೂ ಕಡಲೆಯ ಸ್ಟಫಿಂಗ್‌ನೊಂದಿಗೆ ಉಣಬಡಿಸಲಾಗುತ್ತದೆ. ಒಡಿಶಾ ಮತ್ತು ಹೈದರಾಬಾದ್‌ನ ಕೆಲವು ಭಾಗಗಳಲ್ಲಿ 'ಗುಪ್‌ಚುಪ್' ಎಂಬ ಹೆಸರಿನಲ್ಲಿಯೂ ಪಾನಿಪುರಿಯನ್ನು ಮಾರಲಾಗುತ್ತದೆ.
ಪೌರಾಣಿಕ ಯುಗದಲ್ಲಿತ್ತು ಪಾನಿಪುರಿ:
ಹಿಂದಿನ ಪೌರಾಣಿಕ ಯುಗದಲ್ಲಿ ಕೂಡ ಪಾನಿಪುರಿಗೆ ಪ್ರಾಶಸ್ತ್ಯವಿದೆ ಎಂದರೆ ನೀವು ನಂಬಲೇಬೇಕು. ಮೊಘಲ್ ಚಕ್ರವರ್ತಿಗಳು, ಮಗಧ ಸಾಮ್ರಾಟರು ಕೂಡ ಪಾನಿಪುರಿ ಸವಿದವರೇ. ಮಗಧ ಸಾಮ್ರಾಜ್ಯದ ರಾಜಮನೆತನದ ಪಾಕಶಾಲೆಗಳಲ್ಲಿ ಪಾನಿಪುರಿಯನ್ನು ಮೊದಲು ಗುರುತಿಸಲಾಯಿತು. ಇದರ ಕುರಿತಾದ ಹಲವು ಕತೆಗಳು ಇತಿಹಾಸದಲ್ಲಿ ದೊರೆಯುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ