ಬೆಳಗ್ಗಿನ ಉಪಾಹಾರಕ್ಕೆ ದಿನವೂ ವೆರೈಟಿ ಆಹಾರ ಬೇಕು ಅನ್ನಿಸುವುದು ತುಂಬಾ ಸಾಮಾನ್ಯ. ಆದರೆ ಬೆಳಗಿನ ತಿಂಡಿಯು ಸುಲಭವಾಗಿ ತಯಾರಿಸಲು ಬರುವಂತಿಬೇಕು. ಮತ್ತು ಮನೆಯ ಎಲ್ಲಾ ಸದಸ್ಯರೂ ಇಷ್ಟ ಪಟ್ಟು ತಿನ್ನುವಂತಿರಬೇಕು. ಅದರಲ್ಲೂ ಮಕ್ಕಳಿಗೆ ಇಷ್ಟವಾಗುವ ತಿಂಡಿಯನ್ನೇ ಮಾಡಬೇಕಾಗುತ್ತದೆ. ಆರೋಗ್ಯಕರ ಮತ್ತು ಉತ್ತಮ ಭಾವನೆ ನೀಡುವ ಹಾಗೂ ದೀರ್ಘಕಾಲ ಹೊಟ್ಟೆ ತುಂಬಿಸಿಡುವ ಖಾದ್ಯ ತಯಾರಿಸಬೇಕಾಗುತ್ತದೆ. ಶಕ್ತಿ ನೀಡುವ ಹಾಗೂ ರುಚಿ ನೀಡುವ ಖಾದ್ಯವನ್ನು ಎಲ್ಲರೂ ಲೈಕ್ ಮಾಡ್ತಾರೆ. ಅಂತಹ ಮುಖ್ಯವಾದ ಭಾರತೀಯ ಪಾಕಪದ್ಧತಿಯ ಬೆಳಗಿನ ತಿಂಡಿ ಅಂದ್ರೆ ಅದು ದೋಸೆ.
ಬೆಳಗ್ಗೆ ತಿಂಡಿಗೆ ಹೆಸರು ಬೇಳೆ ದೋಸೆ ಪಾಕವಿಧಾನ
ವಿವಿಧ ರೀತಿಯ ದೋಸೆಗಳಿವೆ. ಅದರಲ್ಲಿ ಅಕ್ಕಿ ದೋಸೆ ಮುಖ್ಯವಾಗಿದೆ. ಇಂದು ನಾವು ಬೆಳಗಿನ ತಿಂಡಿಗೆ ಹೆಸರು ಬೇಳೆ ದೋಸೆ ಪಾಕವಿಧಾನದ ಬಗ್ಗೆ ನೋಡೋಣ. ವಯಸ್ಕರರು ಮತ್ತು ಮಕ್ಕಳು ಸಹ ಹೆಸರು ಬೇಳೆ ದೋಸೆಯನ್ನು ಇಷ್ಟ ಪಟ್ಟು ತಿನ್ನುತ್ತಾರೆ.
ಬೆಳಗಿನ ಉಪಾಹಾರದಲ್ಲಿ ಹೆಸರು ಬೇಳೆ ದೋಸೆ ತಿನ್ನುವುದರಿಂದ ಹಲವು ಪೋಷಕಾಂಶ ಒದಗಿಸುತ್ತದೆ. ಹೆಸರು ಬೇಳೆಯು ಸಸ್ಯ ಆಧಾರಿತ ಪ್ರೋಟೀನ್ ನ ಅತ್ಯುತ್ತಮ ಮೂಲ ಆಗಿದೆ. ಇದರಲ್ಲಿ ಉತ್ತಮ ಪ್ರಮಾಣದ ಅಮೈನೋ ಆಮ್ಲವಿದೆ. ಹೆಸರು ಬೇಳೆ ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಹೊಂದಿದೆ.
ಜೊತೆಗೆ ಫೋಲೇಟ್, ಮೆಗ್ನೀಸಿಯಮ್, ಮ್ಯಾಂಗನೀಸ್, ಕಬ್ಬಿಣ, ತಾಮ್ರ, ವಿಟಮಿನ್ ಬಿ6, ಪೊಟ್ಯಾಸಿಯಮ್ ಸೇರಿದಂತೆ ಹಲವು ವಿಟಮಿನ್ ಗಳ ಆಗರವಾಗಿದೆ. ಇದು ನಿಮ್ಮ ಒಟ್ಟಾರೆ ಆರೋಗ್ಯ ವೃದ್ಧಿಗೆ ಸಹಕಾರಿ. ಹೆಸರು ಬೇಳೆ ಸ್ಪ್ರಿಂಗ್ ದೋಸೆ ಮಾಡುವ ವಿಧಾನ ನೋಡೋಣ.
ಹೆಸರು ಬೇಳೆ ಸ್ಪ್ರಿಂಗ್ ದೋಸೆ ರೆಸಿಪಿ
ಬೇಕಾಗುವ ಪದಾರ್ಥಗಳು
ಎರಡು ಕಪ್ ಹೆಸರು ಬೇಳೆ, ಎರಡು ಹಸಿರು ಮೆಣಸಿನಕಾಯಿ, ಎರಡು ಎಸಳು ಬೆಳ್ಳುಳ್ಳಿ, ಮೂರು ಲವಂಗ, ಒಂದು ಸಣ್ಣ ತುಂಡು ತುರಿದ ಶುಂಠಿ, ಮಧ್ಯಮ ಗಾತ್ರದ ಸಣ್ಣಗೆ ಹೆಚ್ಚಿದ ಎರಡು ಈರುಳ್ಳಿ, ಅರ್ಧ ಕಪ್ ನೇರಳೆ ಎಲೆಕೋಸು, ಅರ್ಧ ಕಪ್ ಹಸಿರು ಎಲೆಕೋಸು, ಒಂದು ತುರಿದ ಕ್ಯಾರೆಟ್,
ಅರ್ಧ ಕಪ್ ಸ್ವೀಟ್ ಕಾರ್ನ್, ಎರಡು ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ, ಒಂದು ಟೀಸ್ಪೂನ್ ಕಲ್ಲು ಉಪ್ಪು, ಒಂದು ಟೀಸ್ಪೂನ್ ಕೆಚಪ್, ಒಂದು ಟೀಸ್ಪೂನ್ ಕೆಂಪು ಮೆಣಸಿನಕಾಯಿ ಸಾಸ್, ಮೂರು ಚಮಚ ಆಲಿವ್ ಎಣ್ಣೆ, ನೂರು ಗ್ರಾಂ ಪನೀರ್ ಬೇಕು.
ಹೆಸರು ಬೇಳೆ ಸ್ಪ್ರಿಂಗ್ ದೋಸೆ ರೆಸಿಪಿ ತಯಾರಿಸುವ ವಿಧಾನ
ಹೆಸರು ಬೇಳೆಯನ್ನು ರಾತ್ರಿಯಿಡೀ ನೆನೆಸಿಡಿ. ಇಲ್ಲದಿದ್ದರೆ ದೋಸೆ ಮಾಡುವ 2 ಗಂಟೆಗಳ ಮೊದಲು ನೆನೆಸಿಡಿ. ನಂತರ ನೆನೆಸಿದ ಹೆಸರು ಬೇಳೆಗೆ ಬೆಲ್ಲ, ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಮಿಕ್ಸರ್ ಗೆ ಹಾಕಿ ರುಬ್ಬಿ ದಪ್ಪ ಪೇಸ್ಟ್ ತಯಾರಿಸಿ. ನಂತರ ನುಣ್ಣಗೆ ಕತ್ತರಿಸಿದ ಎಲ್ಲಾ ತರಕಾರಿಗಳನ್ನು ಅದಕ್ಕೆ ಸೇರಿಸಿ. ಚೆನ್ನಾಗಿ ಕಲೆಸಿ.
ಹಿಟ್ಟನ್ನು ರಾತ್ರಿ ಸಹ ತಯಾರಿಸಿ ಇಟ್ಟುಕೊಂಡು ಬೆಳಗ್ಗೆ ದೋಸೆ ಮಾಡಬಹುದು. ನಂತರ ಪ್ಯಾನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಆಲಿವ್ ಎಣ್ಣೆ ಹಾಕಿ. ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇರಿಸಿ ಮತ್ತು ಬಿಸಿ ಮಾಡಿ. ನಂತರ ತರಕಾರಿಗಳನ್ನು ಸೇರಿಸಿ ಮತ್ತು ಮಧ್ಯಮ ಉರಿಯಲ್ಲಿ ಬೇಯಿಸಿ.
ನಂತರ ಎಲೆಕೋಸು ಸೇರಿಸಿ ಮತ್ತು 5 ನಿಮಿಷ ಬೇಯಿಸಿ. ನಂತರ ಕಲ್ಲು ಉಪ್ಪು, ಕೆಚಪ್ ಮತ್ತು ಚಿಲ್ಲಿ ಸಾಸ್ ಸೇರಿಸಿ ಮತ್ತು ತರಕಾರಿ ಚೆನ್ನಾಗಿ ಫ್ರೈ ಮಾಡಿ. ಈಗ ದೋಸೆಗೆ ತವಾ ಬಿಸಿ ಮಾಡಿ. ಎಣ್ಣೆ ಗ್ರೀಸ್ ಮಾಡಿ, ಹಿಟ್ಟನ್ನು ಸುರಿದು ವೃತ್ತಾಕಾರಕ್ಕೆ ತನ್ನಿರಿ. ನಂತರ ಎರಡೂ ಬದಿ ಚೆನ್ನಾಗಿ ಬೇಯಿಸಿ.
ಇದನ್ನೂ ಓದಿ: ಮುಟ್ಟಿನ ವೇಳೆ ಕಾಣಿಸಿಕೊಳ್ಳುವ ಮೊಡವೆಗಳ ನಿಯಂತ್ರಣಕ್ಕೆ ಹೀಗೆ ಮಾಡಿ
ನಂತರ ಒಂದು ಬದಿಯಲ್ಲಿ ತರಕಾರಿಗಳನ್ನು ತುಂಬಿಸಿ, ಬೇಯಿಸಿ ತೆಗೆಯಿರಿ. ಪ್ಲೇಟ್ ಗೆ ಸರ್ವ್ ಮಾಡಿ, ನಿಮ್ಮಿಷ್ಟದ ಚಟ್ನಿ ಜೊತೆ ಸವಿಯಿರಿ. ಹೆಸರು ಬೇಳೆ ದೋಸೆಯು ಕಡಿಮೆ ಕ್ಯಾಲೋರಿ ಹೊಂದಿದ್ದು, ತೂಕ ಇಳಿಕೆಗೆ ಸಹಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ