ಗೋವಿನಜೋಳವನ್ನ (Corn) ದೇಶದ ವಿವಿಧ ಭಾಗಗಳಲ್ಲಿ ಬೆಳೆಯುತ್ತಾರೆ. ಗೋವಿನಜೋಳ ಹಲವು ರೀತಿಯಲ್ಲಿ ಆಹಾರ ಕ್ರಮದಲ್ಲಿ (Food Plan) ಬಳಕೆ ಮಾಡಲಾಗುತ್ತದೆ. ಬಯಲುಸೀಮೆ ಭಾಗಗಳಲ್ಲಿ ಗೋವಿನಜೋಳದ ಹಿಟ್ಟಿನ ರೊಟ್ಟಿ (Roti) ಮಾಡಿ ತಿನ್ನುವುದು ರೂಢಿಯಲ್ಲಿದೆ. ಗೋವಿನಜೋಳ ಪೋಷಕಾಂಶ ಸಮೃದ್ಧವಾಗಿದ್ದು, ಎಲ್ಲಾ ಜನರು ತಮ್ಮ ಆಹಾರದಲ್ಲಿ ಸೇರಿಸಬಹುದು. ಗೋವಿನಜೋಳ ಒಂದು ಸೂಪರ್ ಫುಡ್ ಆಗಿದೆ. ಸಾಮಾನ್ಯವಾಗಿ ನೀವು ರವೆಯ ಇಡ್ಲಿಯನ್ನು ಬೆಳಗಿನ ತಿಂಡಿಗೆ (Morning Breakfast) ಸೇವನೆ ಮಾಡಿರಬಹುದು. ಆದ್ರೆ ಇಂದು ನಾವು ಬೆಳಗಿನ ತಿಂಡಿಗೆ ಗೋವಿನಜೋಳದ ಇಡ್ಲಿ (Idli) ಮಾಡುವುದು ಹೇಗೆ ಅಂತಾ ನೋಡೋಣ. ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಗೋವಿನಜೋಳ ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ.
ಬೆಳಗಿನ ತಿಂಡಿಗೆ ಗೋವಿನಜೋಳದ ಹಿಟ್ಟಿನ ಇಡ್ಲಿ ರೆಸಿಪಿ
ಚಳಿಗಾಲದಲ್ಲಿ ಗೋವಿನಜೋಳದ ಹಿಟ್ಟಿನಿಂದ ಮಾಡಿದ ಖಾದ್ಯಗಳು ಹಲವು ಕಾಯಿಲೆಗಳಿಂದ ರಕ್ಷಣೆ ನೀಡುತ್ತವೆ. ಮಲಬದ್ಧತೆ, ಕೊಲೆಸ್ಟ್ರಾಲ್, ರಕ್ತದೊತ್ತಡ ಸ್ಥಿತಿಯಿಂದ ರಕ್ಷಣೆ ನೀಡುತ್ತವೆ. ರಕ್ತಹೀನತೆ ಮತ್ತು ಮೂಳೆಗಳ ಆರೋಗ್ಯ ಕಾಪಾಡಲು ಸಹಕಾರಿ ಆಗಿವೆ.
ಗೋವಿನಜೋಳದ ಹಿಟ್ಟಿನ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳು
ಎರಡು ಬಟ್ಟಲು ಕಾರ್ನ್ ಹಿಟ್ಟು, ಒಂದು ಟೀಸ್ಪೂನ್ ಉದ್ದಿನಬೇಳೆ, ಕಡಲೆಬೇಳೆ ಒಂದು ಟೀ ಸ್ಪೂನ್, ಅರ್ಧ ಕಪ್ ಮೊಸರು, ಒಂದು ಟೀ ಸ್ಪೂನ್ ಜೀರಿಗೆ, ಸಣ್ಣದಾಗಿ ಕೊಚ್ಚಿದ ಎರಡು ಹಸಿರು ಮೆಣಸಿನಕಾಯಿ, ಒಂದು ಟೀ ಸ್ಪೂನ್ ಸಾಸಿವೆ ಬೀಜ ,
ಸಣ್ಣದಾಗಿ ಕೊಚ್ಚಿದ ಆರು ಕರಿಬೇವಿನ ಎಲೆಗಳು, ಸಣ್ಣದಾಗಿ ಕೊಚ್ಚಿದ ಎರಡು ಟೀ ಸ್ಪೂನ್ ಕೊತ್ತಂಬರಿ ಸೊಪ್ಪು, ಇನೋ ಒಂದು ಟೀ ಸ್ಪೂನ್, ಒಂದು ಟೀ ಸ್ಪೂನ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಬೇಕು.
ಗೋವಿನಜೋಳದ ಹಿಟ್ಟಿನ ಇಡ್ಲಿ ತಯಾರಿಸುವುದು ಹೇಗೆ?
ಮೊದಲು ಪ್ಯಾನ್ ಅನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಲು ಇಡಿ. ನಂತರ ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಕುಡಲೇ ಸಾಸಿವೆ ಮತ್ತು ಜೀರಿಗೆ ಹಾಕಿ ತಿಳಿ ಕೆಂಪಗಾಗಲು ಬಿಡಿ. ನಂತರ ಉದ್ದಿನಬೇಳೆ ಮತ್ತು ಕಡಲೆ ಬೇಳೆಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಬಾಣಲೆಗೆ ಕರಿಬೇವಿನ ಸೊಪ್ಪು ಮತ್ತು ಹಸಿಮೆಣಸಿನಕಾಯಿ ಹಾಕಿ. ಅವುಗಳನ್ನು 30 ಸೆಕೆಂಡು ಚೆನ್ನಾಗಿ ಫ್ರೈ ಮಾಡಿ. ನಂತರ ಅದಕ್ಕೆ ಗೋವಿನಜೋಳದ ಹಿಟ್ಟು ಹಾಕಿ.
ಗೋವಿನಜೋಳದ ಹಿಟ್ಟನ್ನು ನಿರಂತರವಾಗಿ ಬೆರೆಸಿ ಮೂರು ನಿಮಿಷ ಚೆನ್ನಾಗಿ ಫ್ರೈ ಮಾಡಿ. ನಂತರ ದೊಡ್ಡ ಬೌಲ್ ಗೆ ಹಾಕಿ ಬ್ಯಾಟರ್ ಮಾಡಿ. ಅದಕ್ಕೆ ಮೊಸರು ಸುರಿಯಿರಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ. ಬ್ಯಾಟರ್ ಸ್ಥಿರತೆ ಸರಿಯಾಗಿಸಿ. ಬೇಕಾದ್ರೆ ತರಕಾರಿಗಳಾದ ಬಟಾಣಿ, ಕ್ಯಾರೆಟ್, ಬೀನ್ಸ್ ಇತ್ಯಾದಿ ಸೇರಿಸಬಹುದು.
ನಂತರ ಅದಕ್ಕೆ ಎನೋ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 15 ನಿಮಿಷ ನೆನೆಯಲು ಬಿಡಿ. ನಂತರ ಇಡ್ಲಿ ಸ್ಟ್ಯಾಂಡ್ನಲ್ಲಿ ನೀರು ತುಂಬಿಸಿ ಮತ್ತು ಅದನ್ನು ಬಿಸಿ ಮಾಡಿ. ಕೈಯಲ್ಲಿ ಸ್ವಲ್ಪ ಎಣ್ಣೆ ಹಚ್ಚಿ, ಇಡ್ಲಿ ಉಂಡೆಗಳನ್ನು ಗ್ರೀಸ್ ಮಾಡಿ. ಇಡ್ಲಿ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲಾ ಇಡ್ಲಿ ಅಚ್ಚುಗಳಲ್ಲಿ ಸುರಿಯಿರಿ. ನಂತರ ಇಡ್ಲಿ ಸ್ಟ್ಯಾಂಡ್ನೊಳಗೆ ಹಾಕಿ ಮುಚ್ಚಿ.
ಇದನ್ನೂ ಓದಿ: ಟೈಪ್ 2 ಮಧುಮೇಹ ಎಂದರೇನು? ಈ ಸಮಸ್ಯೆಯ ಲಕ್ಷಣಗಳು ಇಲ್ಲಿದೆ
ಮತ್ತು 20 ನಿಮಿಷ ಬೇಯಿಸಿ. ಅದು ಬೆಂದಾಗ ಚಮಚದ ಸಹಾಯದಿಂದ ಹೊರ ತೆಗೆದು ನಿಮ್ಮಿಷ್ಟದ ಚಟ್ನಿ ಜೊತೆ ಸೇವಿಸಿ. ನಿಮ್ಮ ನೆಚ್ಚಿನ ಚಟ್ನಿಯೊಂದಿಗೆ ಬಡಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ