ಸಾಮಾನ್ಯವಾಗಿ ನಾವು ಯಾವುದೇ ಹಣ್ಣನ್ನು ಅಥವಾ ತರಕಾರಿಯನ್ನು (Fruits and Vegetables) ಸೇವಿಸಿದ ನಂತರ ಅದರೊಳಗಿರುವ ಬೀಜಗಳನ್ನು (Seeds) ಹಾಗೆಯೇ ಬಿಸಾಡುತ್ತೇವೆ. ಆದರೆ ಪ್ರತಿಯೊಂದು ಹಣ್ಣು ಮತ್ತು ತರಕಾರಿ ಕೆಲವು ಸೂಪರ್ ಫುಡ್ (Super Foods) ಗುಣಮಟ್ಟವನ್ನು ಹೊಂದಿರುತ್ತವೆ ಎಂಬ ಸತ್ಯವನ್ನು ಬಹುತೇಕರು ಮರೆಯುತ್ತಾರೆ. ಹಣ್ಣು ಮತ್ತು ತರಕಾರಿಗಳಲ್ಲಿರುವ ಬೀಜಗಳು ಅಗತ್ಯ ಜೀವಸತ್ವಗಳು ಮತ್ತು ಪೋಷಕಾಂಶಗಳ ಶಕ್ತಿಕೇಂದ್ರವಾಗಿರುತ್ತವೆ ಅಂತ ಹೇಳಬಹುದು. ಆದರೆ ನಾವು ಎಷ್ಟೋ ಬಾರಿ ಈ ಬೀಜಗಳು ವ್ಯರ್ಥ ಅಂತ ಬಿಸಾಡುತ್ತೇವೆ.
ಹಣ್ಣು ಮತ್ತು ತರಕಾರಿಯನ್ನು ಬಳಸಿಕೊಂಡು ಅದರೊಳಗಿರುವ ಬೀಜಗಳನ್ನು ಮತ್ತು ಅವುಗಳ ಆರೋಗ್ಯಕರ ಪ್ರಯೋಜನಗಳನ್ನು ನಾವು ಕಡೆಗಣಿಸುತ್ತೇವೆ. ಆದರೆ, ಪೌಷ್ಠಿಕಾಂಶದ ಮೌಲ್ಯದಲ್ಲಿ ಸಮೃದ್ಧವಾಗಿರುವ ಕೆಲವು ಆರೋಗ್ಯಕರ ಬೀಜಗಳಿದ್ದು, ಅವು ನಿಮ್ಮ ಆರೋಗ್ಯಕ್ಕೆ ಅದ್ಭುತಗಳನ್ನು ಮಾಡಬಹುದು. ಹೆಲ್ತ್ ಶಾಟ್ಸ್ ಮುಂಬೈ ಮೂಲದ ಪೌಷ್ಟಿಕ ತಜ್ಞೆ ಮತ್ತು ಜೀವನಶೈಲಿ ಶಿಕ್ಷಕಿ ಕರಿಷ್ಮಾ ಚಾವ್ಲಾ ಅವರು ಕೆಲವು ಆರೋಗ್ಯಕರ ಬೀಜಗಳ ಬಗ್ಗೆ ಇಲ್ಲಿ ಹೇಳಿದ್ದಾರೆ ನೋಡಿ.
ನಿಮ್ಮ ಆಹಾರದಲ್ಲಿ ನೀವು ಸೇರಿಸಬೇಕಾದ 6 ಆರೋಗ್ಯಕರ ಬೀಜಗಳು ಇಲ್ಲಿವೆ ನೋಡಿ..
ಈ ಬೀಜಗಳಲ್ಲಿ ಫೈಬರ್ ಅಂಶ ಸಮೃದ್ಧವಾಗಿರುತ್ತದೆ. ಸಂಕೀರ್ಣ ಸಸ್ಯಗಳಾಗಿ ಬೆಳೆಯಲು ಅಗತ್ಯವಾದ ಎಲ್ಲಾ ಆರಂಭಿಕ ವಸ್ತುಗಳನ್ನು ಅವು ಹೊಂದಿವೆ . ಅದಕ್ಕಾಗಿಯೇ ಅವು ಹೆಚ್ಚು ಪೌಷ್ಟಿಕವಾಗಿವೆ. ಜೊತೆಗೆ, ಅವು ಆರೋಗ್ಯಕರ ಮೊನೊಸ್ಯಾಚುರೇಟೆಡ್ ಕೊಬ್ಬುಗಳು, ಪಾಲಿ ಅನ್ ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಇತರ ಅಗತ್ಯ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ.
ನಮ್ಮ ದೈನಂದಿನ ಆಹಾರದ ಭಾಗವಾಗಿ ಬೀಜಗಳನ್ನು ಮಿತವಾಗಿ ಸೇವಿಸಿದಾಗ, ಅವು ರಕ್ತದಲ್ಲಿನ ಸಕ್ಕರೆ, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಲವರು ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಬೀಜಗಳನ್ನು ತಿನ್ನುತ್ತಾರೆ.
1. ಕಲ್ಲಂಗಡಿ ಬೀಜಗಳು
ಕಲ್ಲಂಗಡಿ ಬೀಜಗಳು ಒಮೆಗಾ-6 ಕೊಬ್ಬನ್ನು ಹೊಂದಿರುತ್ತವೆ ಮತ್ತು ಮೆಗ್ನೀಸಿಯಮ್, ರಂಜಕ, ಸತು, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ತಾಮ್ರದಂತಹ ಬಿ-ಕಾಂಪ್ಲೆಕ್ಸ್ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ.
2. ಕುಂಬಳಕಾಯಿ ಬೀಜಗಳು
ಕುಂಬಳಕಾಯಿ ಬೀಜಗಳಲ್ಲಿ ಮುಫಾ ಮತ್ತು ಒಮೆಗಾ-6 ಕೊಬ್ಬುಗಳಿವೆ. ಅವುಗಳಲ್ಲಿ ವಿಟಮಿನ್ ಇ ಮತ್ತು ಬಿ ಕಾಂಪ್ಲೆಕ್ಸ್ ಕೂಡ ಸಮೃದ್ಧವಾಗಿದೆ. "ಅವುಗಳು ತಾಮ್ರ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಸತು ಮತ್ತು ಸೆಲೆನಿಯಂನಂತಹ ಖನಿಜಗಳನ್ನು ಸಹ ಹೊಂದಿರುತ್ತವೆ" ಎಂದು ತಜ್ಞರು ಹೇಳುತ್ತಾರೆ.
3. ಸೂರ್ಯಕಾಂತಿ ಬೀಜಗಳು
ಸೂರ್ಯಕಾಂತಿ ಬೀಜಗಳು ಒಮೆಗಾ-6 ಕೊಬ್ಬನ್ನು ಹೊಂದಿರುತ್ತವೆ ಮತ್ತು ವಿಟಮಿನ್ ಇ ಮತ್ತು ಬಿ ಕಾಂಪ್ಲೆಕ್ಸ್ ನ ಸಮೃದ್ಧ ಮೂಲವಾಗಿದೆ. ಇದು ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ಸತು ಮತ್ತು ಅಮೈನೋ ಆಮ್ಲ ಟ್ರಿಪ್ಟೋಫಾನ್ ನಂತಹ ಖನಿಜಗಳನ್ನು ಸಹ ಹೊಂದಿರುತ್ತದೆ.
4. ಚಿಯಾ ಸೀಡ್ಸ್
ಚಿಯಾ ಬೀಜಗಳು ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳ ಜೊತೆಗೆ ಒಮೆಗಾ-3 ಕೊಬ್ಬಿನ ಉತ್ತಮ ಮೂಲವಾಗಿದೆ.
5. ಅಗಸೆ ಬೀಜಗಳು
ಅಗಸೆ ಬೀಜಗಳು ಒಮೆಗಾ-3 ಕೊಬ್ಬಿನ ಸಮೃದ್ಧ ಮೂಲವಾಗಿದ್ದು, ಅವು ಫೈಬರ್, ವಿಟಮಿನ್ ಬಿ 1 ಮತ್ತು ತಾಮ್ರ, ಮೆಗ್ನೀಸಿಯಮ್ ಮತ್ತು ಸೆಲೆನಿಯಮ್ ನಂತಹ ಖನಿಜಗಳನ್ನು ಹೊಂದಿರುತ್ತವೆ.
6. ಪಪ್ಪಾಯಿ ಬೀಜಗಳು
ಪಪ್ಪಾಯಿ ಬೀಜಗಳಲ್ಲಿ ಕ್ಯಾಲ್ಸಿಯಂ, ರಂಜಕ ಮತ್ತು ಮೆಗ್ನೀಸಿಯಮ್ ನಂತಹ ಖನಿಜಗಳು ಸಮೃದ್ಧವಾಗಿವೆ. ಅವು ಜೀರ್ಣಾಂಗ ವ್ಯವಸ್ಥೆಯ ಮೇಲೆ ಬಲವಾದ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಪರಿಣಾಮವನ್ನು ಹೊಂದಿವೆ.
1. ಬೀಜಗಳು ಉತ್ತಮ ಕೊಬ್ಬನ್ನು ಹೊಂದಿರುತ್ತವೆ
ಈ ಬೀಜಗಳು ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತವೆ, ಅದು ಮೆದುಳಿನ ಕಾರ್ಯವನ್ನು ಉತ್ತೇಜಿಸುವಾಗ ರಕ್ತ ಕಣಗಳನ್ನು ಆರೋಗ್ಯಕರವಾಗಿರಿಸುತ್ತದೆ.
2. ಉರಿಯೂತವನ್ನು ಕಡಿಮೆ ಮಾಡುತ್ತವೆ
ಬೀಜಗಳು ನಮ್ಮ ದೇಹದಲ್ಲಿನ ಉರಿಯೂತದ ಮಟ್ಟವನ್ನು ನಿಗ್ರಹಿಸುತ್ತವೆ, ಅದು ವಯಸ್ಸಾಗುವಿಕೆಯ ಲಕ್ಷಣಗಳನ್ನು ತಡೆಯುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಸಹ ಕಡಿಮೆ ಮಾಡುತ್ತವೆ.
3. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತವೆ
ಬೀಜಗಳಲ್ಲಿ ಸಸ್ಯ ಸ್ಟೆರಾಲ್ ಗಳು ಸಮೃದ್ಧವಾಗಿದ್ದು, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
4. ತೂಕ ಹೆಚ್ಚಾಗುವುದನ್ನು ತಡೆಯಲು ಸಹಾಯ ಮಾಡುತ್ತವೆ
ಕಾಲಾನಂತರದಲ್ಲಿ, ಈ ಬೀಜಗಳನ್ನು ನಿಯಮಿತವಾಗಿ ಸೇವಿಸಿದರೆ, ಅವು ಅನಗತ್ಯ ತೂಕ ಹೆಚ್ಚಳವನ್ನು ಸಹ ತಡೆಯಲು ಸಹಾಯ ಮಾಡುತ್ತವೆ.
"ಅಗಸೆ ಮತ್ತು ಚಿಯಾದಂತಹ ಬೀಜಗಳು ಒಮೆಗಾ-3 ಕೊಬ್ಬಿನ ಮೂಲಗಳಾಗಿವೆ ಮತ್ತು ಇದನ್ನು ಮಹಿಳೆಯರು ಸೇವಿಸಬೇಕು, ಇವು ಫೈಟೊ ಈಸ್ಟ್ರೊಜೆನ್ ಗಳನ್ನು ಹೊಂದಿರುವುದರಿಂದ ಪುರುಷರು ಇವುಗಳನ್ನು ತಿನ್ನಬಾರದು.
ಕುಂಬಳಕಾಯಿ, ಸೂರ್ಯಕಾಂತಿ ಅಥವಾ ಕಲ್ಲಂಗಡಿಗಳಲ್ಲಿರುವ ಬೀಜಗಳನ್ನು ಅವುಗಳ ವಿಟಮಿನ್ ಮತ್ತು ಖನಿಜಾಂಶಗಳಿಂದ ಪ್ರಯೋಜನ ಪಡೆಯಲು ಸಣ್ಣ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು" ಎಂದು ತಜ್ಞರು ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ