Monsoon Health Tips: ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಬೇಕೇ? ಹಾಗಿದ್ರೆ ಈ ರೂಲ್ಸ್ ಫಾಲೋ ಮಾಡಿ

ಆಹಾರ ತಜ್ಞೆ ಋಜುತಾ ದಿವಾಕರ್ ಅವರು, ತಮ್ಮ ಇತ್ತೀಚಿನ ಇನ್‍ಸ್ಟಾಗ್ರಾಂ ಲೈವ್‍ನಲ್ಲಿ ಮಳೆಗಾಲದಲ್ಲಿ ಯಾವ ಆಹಾರಗಳನ್ನು ತಿನ್ನುವುದು ಉತ್ತಮ, ಯಾವುದನ್ನು ತಿನ್ನಬಾರದು, ಯಾವ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು ಮತ್ತು ಯಾವೆಲ್ಲಾ ರೀತಿಯ ಆಹಾರಗಳನ್ನು ನಮ್ಮ ಆಹಾರ ಕ್ರಮಕ್ಕೆ ವಿಶೇಷವಾಗಿ ಸೇರಿಸಿಕೊಳ್ಳಬೇಕು ಎಂಬ ಕುರಿತು ಮಾಹಿತಿಯನ್ನು ನೀಡಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮಳೆಗಾಲ ಮತ್ತೆ ಮರಳಿದೆ, ನಮ್ಮ ಆರೋಗ್ಯದ (Health) ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದ ತಿಂಗಳಿದು. ಮಳೆಗಾಲವು ಚತುರ್ಮಾಸ ಅಥವಾ ಚೌಮಾಸದ ಆರಂಭವನ್ನು ಸೂಚಿಸುತ್ತದೆ. ಮಳೆಗಾಲದ (Rainy Season) ಈ ನಾಲ್ಕು ತಿಂಗಳಲ್ಲಿ ವಾತಾವರಣವು ತೀವ್ರವಾಗಿ ಬದಲಾವಣೆಗೆ ಒಳಗಾಗುತ್ತದೆ. ಋತುಗಳು ಹೇಗೆ ಬದಲಾಗುತ್ತವೆಯೋ, ಅದರಲ್ಲೂ ಮುಖ್ಯವಾಗಿ ಮಳೆಗಾಲದಲ್ಲಿ, ನಾವು ಕೂಡ ನಮ್ಮ ನಿತ್ಯದ ಆಹಾರ (Food) ಕ್ರಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆಹಾರ ತಜ್ಞೆ ಋಜುತಾ ದಿವಾಕರ್ ಅವರು, ತಮ್ಮ ಇತ್ತೀಚಿನ ಇನ್‍ಸ್ಟಾಗ್ರಾಂ ಲೈವ್‍ನಲ್ಲಿ ಮಳೆಗಾಲದಲ್ಲಿ ಯಾವ ಆಹಾರಗಳನ್ನು ತಿನ್ನುವುದು ಉತ್ತಮ, ಯಾವುದನ್ನು ತಿನ್ನಬಾರದು, ಯಾವ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು ಮತ್ತು ಯಾವೆಲ್ಲಾ ರೀತಿಯ ಆಹಾರಗಳನ್ನು ನಮ್ಮ ಆಹಾರ ಕ್ರಮಕ್ಕೆ ವಿಶೇಷವಾಗಿ ಸೇರಿಸಿಕೊಳ್ಳಬೇಕು ಎಂಬ ಕುರಿತು ಮಾಹಿತಿಯನ್ನು ನೀಡಿದ್ದಾರೆ.

ಅಷ್ಟೇ ಅಲ್ಲ, ಋಜುತಾ ಅವರು ಮಳೆಗಾಲದ ವಿಶೇಷ ತಿನಿಸುಗಳ ಕುರಿತು ಕೂಡ ತಿಳಿಸಿದ್ದಾರೆ. ಅವು ಏನೆಂಬುದನ್ನು ತಿಳಿಯೋಣ ಬನ್ನಿ.

ಏನೆಲ್ಲಾ ತಿನ್ನಬಾರದು?
ಮಳೆಗಾಲದಲ್ಲಿ ಹೊರಗಡೆ, ಅಂದರೆ ಬೀದಿ ಬದಿಯ ಅಂಗಡಿಗಳಲ್ಲಿ ಮತ್ತು ಹೊಟೇಲ್‍ಗಳಲ್ಲಿ ತಿನ್ನುವುದನ್ನು ಕಡಿಮೆ ಮಾಡಿ ಅಥವಾ ನಿಲ್ಲಿಸಿದರೆ ಇನ್ನೂ ಉತ್ತಮ. ಏಕೆಂದರೆ, ಮಳೆಗಾಲದಲ್ಲಿ ವೈರಸ್, ಬ್ಯಾಕ್ಟೀರಿಯಾ ಮತ್ತು ಇತರ ರೋಗಕಾರಕಗಳು ನಮ್ಮನ್ನು ಮುತ್ತಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹೊರಗಿನ ಹೊಟೇಲ್‍ಗಳಲ್ಲಿ ಮನೆಯಂತೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದಿಲ್ಲ ಮತ್ತು ಆಹಾರ ಪದಾರ್ಥಗಳನ್ನು ಶುದ್ಧವಾಗಿ ತೊಳೆದು ಆಹಾರ ತಯಾರಿಸುವುದಿಲ್ಲ ಎಂಬುವುದು ನಮಗೆಲ್ಲಾ ಗೊತ್ತೇ ಇದೆ. ಹಾಗಾಗಿ, ಮಳೆಗಾಲದಲ್ಲಿ ಮನೆಯಲ್ಲೇ ಮಾಡಿದ ಅಡುಗೆಯನ್ನು ಸೇವಿಸುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು.

ಏನನ್ನು ಕಡಿಮೆ ಮಾಡಬೇಕು?
ಮಾಂಸ, ಮೊಟ್ಟೆ ಮತ್ತು ಮೀನು ಇತ್ಯಾದಿಗಳ ಜೊತೆ ಜೊತೆಗೆ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಸೇವನೆಯನ್ನು ಕೂಡ ಆದಷ್ಟು ಕಡಿಮೆ ಮಾಡುವುದು ಉತ್ತಮ. ಇದೇ ಕಾರಣಕ್ಕಾಗಿ ಮಳೆಗಾಲದಲ್ಲಿ ಬರುವ ಶ್ರಾವಣ ಮಾಸದಲ್ಲಿ ಹೆಚ್ಚಿನ ಜನರು ಮಾಂಸಹಾರ ಮತ್ತು ಈರುಳ್ಳಿ ಬೆಳ್ಳುಳ್ಳಿಯನ್ನು ಸೇವಿಸುವುದಿಲ್ಲ.

ಏನನ್ನು ತಿನ್ನಬೇಕು?
ಮೊದಲೇ ಹೇಳಿದಂತೆ ಮಾಂಸ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಕಡಿಮೆ ಸೇವಿಸಬೇಕು. ಅಷ್ಟೇ ಅಲ್ಲ ವರ್ಷ ಪೂರ್ತಿ ಸಾಮಾನ್ಯವಾಗಿ ತಿನ್ನುತ್ತಿದ್ದ ಆಹಾರಕ್ಕಿಂತ ಭಿನ್ನವಾಗಿದ್ದನ್ನು ಸೇವಿಸಬೇಕು. ಮಳೆಗಾಲದಲ್ಲಿ ರಾಜ್‍ಗಿರಾ, ಕುಟ್ಟು, ಬಾಳೆಹಣ್ಣಿನ ಹಿಟ್ಟನ್ನು ಸೇವಿಸಿ. ಅದಲ್ಲದೇ ಪ್ರಕೃತಿ ನಮಗೆ ಆಯಾ ಋತುವಿಗೆ ತಕ್ಕಂತ ಹಣ್ಣು ತರಕಾರಿಗಳನ್ನು ಒದಗಿಸುತ್ತದೆ. ಅದನ್ನು ಸೇವಿಸಿ ಮತ್ತು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಇದನ್ನೂ ಓದಿ:  Health Tips: ಈ 4 ಸಾಂಬಾರ್ ಪದಾರ್ಥ ಬಳಸಿ ಮಾನ್ಸೂನ್ ಕಾಯಿಲೆಗಳಿಗೆ ಗುಡ್ ಬೈ ಹೇಳಿ

ಮಳೆಗಾಲದಲ್ಲಿ ಸುವರ್ಣ ಗೆಡ್ಡೆ, ಕೆಸು, ಗೆಣಸು ಮುಂತಾದ ಗೆಡ್ಡೆ ತರಕಾರಿಗಳನ್ನು ಸೇವಿಸುವುದನ್ನು ಮರೆಯಬೇಡಿ. ಮಳೆಗಾಲದಲ್ಲಿ ಕೆಸುವಿನ ಗೆಡ್ಡೆಯ ಪಲ್ಯ, ಕೆಸುವಿನ ದಂಟಿನ ಸಾಂಬಾರ್ ಮತ್ತು ಕೆಸುವಿನ ಎಲೆಯಿಂದ ಪತ್ರೊಡೆ ಮುಂತಾದ ತರಾವರಿ ತಿನಿಸುಗಳನ್ನು ತಯಾರಿಸಿ ತಿನ್ನುವ ಪದ್ಧತಿ ಕೆಲವು ಕಡೆ ಇದೆ. ಮಳೆಗಾಲದಲ್ಲಿ ಮಾತ್ರ ಬೆಳೆಯುವ ಮತ್ತು ಕೃಷಿಕರು ನಾಟಿ ಮಾಡದೆ ತಮ್ಮಷ್ಟಕ್ಕೆ ಬೆಳೆಯುವ ಮಳೆಗಾಲದ ಸಸ್ಯಗಳನ್ನು (ತಿನ್ನಲು ಅರ್ಹವಾದ) ಸೇವಿಸಿ. ಪಾತ್ರ, ಲಿಂಗ್ಡಿ, ಶೇವ್ಲಾ ಮತ್ತು ಅಂಬಾಡಿ ಅಂತಹ ಸಸ್ಯಗಳ ಸಾಲಿಗೆ ಸೇರಿವೆ. ದೇಶದ ಕೆಲವು ಭಾಗಗಳಲ್ಲಿ ಇದನ್ನು ಇಷ್ಟಪಟ್ಟು ಸೇವಿಸುತ್ತಾರೆ.

ವಿಶೇಷ ಆಹಾರಗಳು
ಮಳೆಗಾಲದ ಋತುವಿನ ವಿಶೇಷ ಖಾದ್ಯಗಳಲ್ಲಿ ಋಷಿಚಿ ಭಾಜಿ (ಕಾಡು ಮತ್ತು ಕೃಷಿ ಜಾತಿಯ ಸಸ್ಯ ಮತ್ತು ತರಕಾರಿಗಳನ್ನು ಸೇರಿಸಿ ಮಾಡುವ ಖಾದ್ಯ). ಮಳೆಗಾಲದಲ್ಲಿ ಈ ಖಾದ್ಯವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ನಾನಾ ರೀತಿಯ ಅನುಕೂಲತೆಗಳು ಇವೆ ಎನ್ನಲಾಗುತ್ತದೆ.

ಇದನ್ನೂ ಓದಿ: Health Tips: ಮಳೆಗಾಲದ ರೋಗ-ರುಜಿನಗಳನ್ನು ತಪ್ಪಿಸಲು ಈ 7 ಆರೋಗ್ಯ ಸಲಹೆಗಳನ್ನು ಪಾಲಿಸಿ

ಈ ಋತುವಿನಲ್ಲಿ ಜನರು, ಹಬೆಯಲ್ಲಿ ಬೇಯಿಸಿ ತಯಾರಿಸುವ ಸಿದ್ದು, ಮೋದಕ ಮತ್ತು ಬಾಫ್ಲಾದಂತ ತಿನಿಸುಗಳನ್ನು ಹೆಚ್ಚಾಗಿ ಸೇವಿಸಲು ಇಷ್ಟಪಡುತ್ತಾರೆ. ಮಳೆಗಾಲದಲ್ಲಿ ಬೆಳೆಯುವ ಸೌತೆಕಾಯಿಗಳನ್ನು ಕೂಡ ಅಡುಗೆಯಲ್ಲಿ ಸೇರಿಸಿಕೊಳ್ಳುವುದು ಉತ್ತಮ. ಈ ತಿಂಗಳಲ್ಲಿ, ನಾವು ಬೇರೆ ತಿಂಗಳುಗಳಲ್ಲಿ ಬಳಸದಂತಹ ತರಕಾರಿಗಳನ್ನು ಬಳಸಬೇಕು.
Published by:Ashwini Prabhu
First published: