ಸಾಮಾನ್ಯವಾಗಿ ಗರ್ಭಿಣಿಯಾದವರು (Pregnant) ಏನನ್ನು ತಿನ್ನಬೇಕು ಎಂಬುದರ ಬಗ್ಗೆ ಹೆಚ್ಚು ಜಾಗರೂಕರಾಗಿರುತ್ತಾರೆ. ಅದರಲ್ಲೂ ಮುಖ್ಯವಾಗಿ ಗರ್ಭಿಣಿಯಾಗಿದ್ದಾಗ ಪೌಷ್ಟಿಕಾಂಶವುಳ್ಳಂತಹ ಆಹಾರವನ್ನು (Healthy Food) ತೆಗೆದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ತಾಯಿಯು (Mother) ಸೇವಿಸುವ ಎಲ್ಲಾ ಪೋಷಕಾಂಶಗಳನ್ನು ಗರ್ಭದೊಳಗಿರುವ ಶಿಶು (Baby) ಪಡೆಯುತ್ತದೆ. ಆದ್ದರಿಂದ, ಗರ್ಭಿಣಿಯರು ಆರೋಗ್ಯಕರ ಆಹಾರದ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳುವುದು ಬಹಳ ಅಗತ್ಯ.
ಹಾಗಿದ್ದರೆ ಈ ಬಿರು ಬೇಸಿಗೆಯಲ್ಲಿ ಗರ್ಭಿಣಿಯಾದವರು ಯಾವ ಆಹಾರಗಳನ್ನು ಹೆಚ್ಚಾಗಿ ತಿನ್ನಬೇಕು? ಅವರು ಸೇವಿಸಲೇಬೇಕಾದ ಉತ್ತಮ ಬೇಸಿಗೆ ಆಹಾರಗಳು ಯಾವುವು ಅನ್ನೋದನ್ನು ತಿಳಿಯೋಣ.
1.ಹಸಿರು ಸೊಪ್ಪುಗಳು: ಪಾಲಕ್, ಎಲೆಕೋಸು ಮತ್ತು ಕೋಸುಗಡ್ಡೆಯಂತಹವು ಹೆಚ್ಚಿನ ಪ್ರಮಾಣದಲ್ಲಿ ಫೋಲೇಟ್, ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತದೆ.
ಭ್ರೂಣದ ಬೆಳವಣಿಗೆಗೆ ಫೋಲೇಟ್ ಅತ್ಯಗತ್ಯ. ಅದರಲ್ಲೂ ವಿಶೇಷವಾಗಿ ಗರ್ಭಾವಸ್ಥೆಯ ಆರಂಭಿಕ ಹಂತಗಳಲ್ಲಿ ಮತ್ತು ಜನ್ಮ ದೋಷಗಳ ಅಪಾಯವನ್ನು ಕಡಿಮೆ ಮಾಡಲು ಇವುಗಳು ಸಹಾಯ ಮಾಡುತ್ತದೆ.
ಕೆಂಪು ರಕ್ತ ಕಣಗಳ ಉತ್ಪಾದನೆಗೆ ಕಬ್ಬಿಣವು ಮುಖ್ಯವಾಗಿದೆ ಮತ್ತು ಗರ್ಭಾವಸ್ಥೆಯಲ್ಲಿ ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಅಂದಹಾಗೆ ಭ್ರೂಣದ ಮೂಳೆ ಬೆಳವಣಿಗೆಗೆ ಕ್ಯಾಲ್ಸಿಯಂ ಅತ್ಯಂತ ಮುಖ್ಯವಾಗಿದೆ.
2.ಹಣ್ಣುಗಳು: ಕಿತ್ತಳೆಹಣ್ಣು, ಬಾಳೆಹಣ್ಣು, ಸೇಬು ಮತ್ತು ಪೇರಳೆಗಳಂತಹ ಹಣ್ಣುಗಳು ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಫೈಬರ್ ಸೇರಿದಂತೆ ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿವೆ.
ವಿಟಮಿನ್ ಸಿ ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಆರೋಗ್ಯಕರ ರೋಗನಿರೋಧಕ ವ್ಯವಸ್ಥೆಗೆ ಸಹಕಾರಿ. ಅಲ್ಲದೇ ದೇಹದಲ್ಲಿ ಆರೋಗ್ಯಕರ ರಕ್ತದೊತ್ತಡ ಕಾಪಾಡಿಕೊಳ್ಳಲು ಪೊಟ್ಯಾಸಿಯಮ್ ಮುಖ್ಯವಾಗಿದೆ.
3.ನೇರ ಪ್ರೋಟೀನ್‌ಯುಕ್ತ ಆಹಾರ: ಕೋಳಿ, ಮೀನು, ಟರ್ಕಿ ಮತ್ತು ತೋಫುಗಳಂತಹ ನೇರ ಪ್ರೋಟೀನ್ ಮೂಲಗಳು ಕಬ್ಬಿಣ, ಸತು ಮತ್ತು ವಿಟಮಿನ್ ಬಿ 12 ನಂತಹ ಪ್ರಮುಖ ಪೋಷಕಾಂಶಗಳನ್ನು ಒದಗಿಸುತ್ತವೆ.
ಈ ಎಲ್ಲಾ ಪೋಷಕಾಂಶಗಳು ಗರ್ಭಿಣಿಯರಿಗೆ ಅಗತ್ಯ. ಏಕೆಂದರೆ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಕಬ್ಬಿಣವು ಅವಶ್ಯಕವಾಗಿದೆ. ಜೊತೆಗೆ ಸತುವು ಭ್ರೂಣದ ಪ್ರತಿರಕ್ಷಣಾ ಕಾರ್ಯ ಮತ್ತು ಜೀವಕೋಶದ ಬೆಳವಣಿಗೆಗೆ ಮುಖ್ಯವಾಗಿದೆ. ಭ್ರೂಣದ ಮೆದುಳು ಮತ್ತು ನರಮಂಡಲದ ಬೆಳವಣಿಗೆಗೆ ವಿಟಮಿನ್ ಬಿ 12 ಮುಖ್ಯವಾಗಿದೆ.
4.ಧಾನ್ಯಗಳು: ಬ್ರೌನ್ ರೈಸ್, ಕ್ವಿನೋವಾ ಮತ್ತು ಸಂಪೂರ್ಣ ಗೋಧಿ ಬ್ರೆಡ್‌ನಂತಹ ಧಾನ್ಯಗಳು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಮತ್ತು ಫೈಬರ್‌ಅನ್ನು ಒದಗಿಸುತ್ತವೆ.
ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್‌ಗಳು ಶಕ್ತಿಯ ಉತ್ತಮ ಮೂಲವಾಗಿದೆ. ಅಲ್ಲದೇ ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಫೈಬರ್ ಮಲಬದ್ಧತೆಯನ್ನು ತಡೆಯಲು ಮತ್ತು ಆರೋಗ್ಯಕರ ಜೀರ್ಣಕ್ರಿಯೆಗೆ ಸಹಕಾರಿ.
5.ಬೀಜಗಳು : ಬಾದಾಮಿ, ವಾಲ್‌ನಟ್ಸ್, ಚಿಯಾ, ಅಗಸೆಯಂಥಹ ಬೀಜಗಳು ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ ಮತ್ತು ವಿಟಮಿನ್ ಇ ಮತ್ತು ಮೆಗ್ನೀಸಿಯಮ್‌ನಂತಹ ಪ್ರಮುಖ ಪೋಷಕಾಂಶಗಳನ್ನು ಒದಗಿಸುತ್ತವೆ.
ಆರೋಗ್ಯಕರ ಕೊಬ್ಬುಗಳು ಭ್ರೂಣದ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತವೆ. ವಿಟಮಿನ್ ಇ ಭ್ರೂಣದ ಜೀವಕೋಶದ ಬೆಳವಣಿಗೆ ಮುಖ್ಯವಾಗಿದೆ.
ಇದರೊಂದಿಗೆ ಮೆಗ್ನೀಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುವುದರ ಜೊತೆಗೆ ಆರೋಗ್ಯಕರ ಸ್ನಾಯುಗಳನ್ನು ಬಲಪಡಿಸಲು ಸಹಕಾರಿಯಾಗಿದೆ.
ಇದನ್ನೂ ಓದಿ: Pregnancy Back Pain: ಗರ್ಭಾವಸ್ಥೆಯಲ್ಲಿ ಕಾಡುವ ಅಸಹನೀಯ ಬೆನ್ನು ನೋವಿಗೆ ಇಲ್ಲಿದೆ ಪರಿಹಾರ!
ಈ ಬಿರುಬೇಸಿಗೆಯಲ್ಲಿ ಗರ್ಭಿಣಿಯರು ಅಭ್ಯಾಸಗಳನ್ನು ಪಾಲಿಸಿ
*ಆರಾಮದಾಯಕ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ
*ನಿಮ್ಮನ್ನು ಹೈಡ್ರೇಟ್ ಆಗಿರಿಸಲು ಸಾಕಷ್ಟು ನೀರು ಕುಡಿಯಿರಿ
*ಫಿಟ್ನೆಸ್ ತಜ್ಞರ ಉಪಸ್ಥಿತಿಯಲ್ಲಿ ವ್ಯಾಯಾಮ ಮಾಡಿ
*ಬಿರುಸಾದ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳಬೇಡಿ
*ಆರೋಗ್ಯಕರ ಆಹಾರಗಳನ್ನು ಮಾತ್ರ ತಿನ್ನಿ
*ನಿಮ್ಮ ಕಾಲುಗಳು ಮತ್ತು ಪಾದಗಳ ಮೇಲೆ ಗಮನವಿರಲಿ
*ನಿಮ್ಮ ಊಟವನ್ನು ಬಿಡಬೇಡಿ
*ಸರಿಯಾಗಿ ನಿದ್ದೆ ಮಾಡಿ
*ಒತ್ತಡವನ್ನು ಮಾಡಿಕೊಳ್ಳಿ
ಆದರೆ ನಿಮ್ಮ ಗರ್ಭಾವಸ್ಥೆಯಲ್ಲಿ ನೀವು ಯಾವುದೇ ಅಸಹಜ ಬದಲಾವಣೆಯನ್ನು ಗಮನಿಸಿದರೆ ಅಥವಾ ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ, ಸಲಹೆ ಪಡೆದುಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ