30ನೇ ವಯಸ್ಸಲ್ಲೇ ಬೊಕ್ಕತಲೆ ಸಮಸ್ಯೆ ಕಾಡುತ್ತಿದೆಯಾ..? ಇಲ್ಲಿದೆ ನೋಡಿ ಪರಿಹಾರ

30 ವರ್ಷ ಮೇಲ್ಪಟ್ಟವರಿಗೆ ಬೊಕ್ಕ ತಲೆ, ಕೂದಲು ಉದುರುವ ಸಮಸ್ಯೆ ಗಂಭೀರ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇದು ಕೆಲವರಿಗೆ ಅನುವಂಶೀಯವಾಗಿ ಕಂಡು ಬಂದರೆ, ಇನ್ನು ಕೆಲವರಿಗೆ ಅಸಮರ್ಪಕ ಜೀವನಶೈಲಿಯಿಂದ ಕಂಡು ಬರುತ್ತಿದೆ.

Photo: Google

Photo: Google

  • Share this:
ಕೂದಲು ಸೌಂದರ್ಯದ ಪ್ರತೀಕ. ಹೆಂಗಳೆಯರಿಗಾಗಲಿ, ಗಂಡಿಗಾಗಲೇ ಮೊಗದ ಸೌಂದರ್ಯಕ್ಕೆ ಕೂದಲೇ ಶೋಭೆ ಎಂಬ ವಾಡಿಕೆ ಮಾತು ಹಿಂದಿನಿಂದಲೂ ಇದೆ. ಪ್ರಾಚೀನ ಕಾಲದಿಂದಲೂ ಕೂದಲ ಆರೈಕೆಗಾಗಿ ಪ್ರಕೃತಿದತ್ತ ವಸ್ತುಗಳನ್ನು ಬಳಸುತ್ತಿದ್ದರು. ವಾರದಲ್ಲಿ ಒಂದೆರಡು ದಿನ ಕೂದಲಿಗೆ ಎಣ್ಣೆ ಮಸಾಜ್, ಕೂದಲ ಬೆಳವಣಿಗೆಗೆ ಬೇಕಾದ ಪೂರಕ ಆಹಾರಗಳು ಹೀಗೆ ನಾನಾ ರೀತಿಯಲ್ಲಿ ಕೂದಲ ಆರೈಕೆಗಾಗಿಯೇ ಒಂದಿಷ್ಟು ಸಮಯ ಮೀಸಲಿಡುತ್ತಿದ್ದರು. ಆದರೆ ಆಧುನಿಕ ಬದುಕಿಗೆ ಒಡ್ಡಿಕೊಂಡಿರುವ ನಾವು ನಮ್ಮ ಜೀವನಕ್ಕೆ ಸಮಯ ಕೊಡಲಾಗುತ್ತಿಲ್ಲ. ಇನ್ನು ಕೂದಲು ಆರೈಕೆಗೆ ಎಲ್ಲಿ ಸಮಯ ಎಂಬ ಮಾತುಗಳು ಸಹಜವಾಗಿಯೇ ಹುಟ್ಟುತ್ತದೆ. ಆದ ಕಾರಣ ಇನ್ನಿತರೆ ಸಮಸ್ಯೆಗಳಂತೆ ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ, ಬೊಕ್ಕತಲೆ (ಬೋಳುತಲೆ), ಕೂದಲು ಕವಲೊಡೆಯುವುದು, ಹೊಟ್ಟಿನ ಸಮಸ್ಯೆಗಳು ಯಥೇಚ್ಛವಾಗಿ ಕಂಡು ಬರುತ್ತಿದೆ.

ಅದರಲ್ಲೂ ಪುರುಷರಿಗೆ, ಅದೂ 30 ವರ್ಷ ಮೇಲ್ಪಟ್ಟವರಿಗೆ ಬೊಕ್ಕ ತಲೆ, ಕೂದಲು ಉದುರುವ ಸಮಸ್ಯೆ ಗಂಭೀರ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇದು ಕೆಲವರಿಗೆ ಅನುವಂಶೀಯವಾಗಿ ಕಂಡು ಬಂದರೆ, ಇನ್ನು ಕೆಲವರಿಗೆ ಅಸಮರ್ಪಕ ಜೀವನಶೈಲಿಯಿಂದ ಕಂಡು ಬರುತ್ತಿದೆ. ಈ ಬೋಳುತಲೆಯಿಂದ ಸಾಕಷ್ಟು ಪುರುಷರು ಕಿರಿಕಿರಿ, ಮುಜುಗರಕ್ಕೆ ಒಳಗಾಗುತ್ತಿದ್ದು, ಕೂದಲು ಕಸಿ ರೀತಿಯ ಇನ್ನಿತರೆ ವಿಧಾನಗಳಿಗೆ ಮೊರೆ ಹೋಗುತ್ತಿದ್ದಾರೆ. ಇದೆಲ್ಲದರ ಜೊತೆಗೆ ಅತ್ಯುತ್ತಮ ರೂಢಿಗಳು, ಸಮತೋಲಿತ ಆಹಾರ ಸೇವನೆ, ಯೋಗ ರೀತಿಯಾದ ಅಭ್ಯಾಸಗಳನ್ನು ಅನುಸರಿಸಿದರೆ ಈ ಬೊಕ್ಕತಲೆ ಸಮಸ್ಯೆಯಿಂದ ದೂರವಿರಬಹುದು.

ಈ ಕೆಳಗಿನ ಕೆಲವು ಅಭ್ಯಾಸಗಳನ್ನು ರೂಢಿಸಿಕೊಂಡರೆ ಖಂಡಿತವಾಗಿಯೂ ಬೋಳು ತಲೆ ಅಥವಾ ಬೊಕ್ಕತಲೆ ಸಮಸ್ಯೆಯಿಂದ ದೂರವಿರಬಹುದು.

1) ಬಿಸಿ ನೀರಿನ ಸ್ನಾನದಿಂದ ದೂರವಿರಿ

ಕೆಲವರಿಗೆ ಬಿಸಿ ಬಿಸಿ ನೀರಿನಿಂದ ತಲೆಸ್ನಾನ ಮಾಡುವ ಅಭ್ಯಾಸವಿರುತ್ತದೆ. ಬಿಸಿ ನೀರು ಸ್ನಾನದಿಂದ ಚೆನ್ನಾಗಿ ನಿದ್ರೆ ಬರುತ್ತದೆ ಎಂಬ ಕಾರಣಕ್ಕೋ ಅಥವಾ ಆರಾಮದಾಯಕವಾಗಿರುತ್ತದೆ ಎಂಬುದಕ್ಕೋ ಬಿಸಿನೀರಿನಿಂದ ತಲೆಸ್ನಾನ ಮಾಡುವ ರೂಢಿ ಬೆಳೆಸಿಕೊಂಡಿರುತ್ತಾರೆ. ಆದರೆ ಇದರ ಕೆಟ್ಟ ಪರಿಣಾಮ ನಮ್ಮ ಕೂದಲಿನ ಮೇಲಾಗುತ್ತದೆ. ನಮ್ಮ ನೆತ್ತಿಯ ಭಾಗ ತುಂಬಾ ಸೂಕ್ಷ್ಮ. ಈ ಭಾಗದಲ್ಲಿ ನೈಸರ್ಗಿಕವಾಗಿಯೇ ಎಣ್ಣೆ ಅಂಶವಿರುತ್ತದೆ. ನಾವು ಬಿಸಿ ನೀರಿನಿಂದ ಸ್ನಾನ ಮಾಡಿದರೆ ನೆತ್ತಿಯ ನೈಸರ್ಗಿಕ ಎಣ್ಣೆ ಕಡಿಮೆಯಾಗುವುದರ ಜೊತೆಗೆ ಆ ಭಾಗದಲ್ಲಿನ ಚರ್ಮವನ್ನು ಒಣಗಿಸುತ್ತದೆ, ಇದರಿಂದ ಕೂದಲು ಸರಾಗವಾಗಿ ಉದುರಲು ಶುರುವಾಗುತ್ತದೆ. 30 ರ ನಂತರವೂ ನಿಮ್ಮ ಕೂದಲನ್ನು ಕಾಪಾಡಿಕೊಳ್ಳಬೇಕೆನಿಸಿದರೆ ತಲೆ ಸ್ನಾನಕ್ಕೆ ತುಂಬಾ ಬಿಸಿ ನೀರು ಬಳಸುವ ಬದಲು ಉಗುರು ಬೆಚ್ಚಗಿನ ಅಥವಾ ತಣ್ಣೀರಿನ ಸ್ನಾನ ಮಾಡಿ. ಕೂದಲು ಉದುರುವಿಕೆಯಿಂದ ದೂರವಿರಿ.

2) ಅಸಮರ್ಪಕ ಹಾಗೂ ಅಸಮತೋಲಿತ ಆಹಾರ ಕ್ರಮ

ಆಧುನಿಕ ಜೀವನದ ಜಂಜಾಟ, ಮನೆ, ಆಫೀಸ್ ಕೆಲಸದ ನಡುವೆ ನಾವು ಸಮರ್ಪಕವಾಗಿ, ಸರಿಯಾದ ಸಮಯಕ್ಕೆ ಊಟ ಮಾಡುವುದೇ ಬಿಟ್ಟಿದ್ದೇವೆ. ಜೊತೆಗೆ ಮಸಾಲೆಭರಿತ ಆಹಾರ, ಜಂಕ್ ಫುಡ್‌ಗಳ ಮೊರೆಹೋಗಿದ್ದೇವೆ. ಇವೆಲ್ಲವೂ ನಮ್ಮ ಕೂದಲು ಹಾಗೂ ಚರ್ಮದ ಆರೈಕೆಯ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಹಾಗಾಗಿ ಇಂತಹ ಆಹಾರಗಳಿಂದ ದೂರವಿದ್ದು, ಪ್ರೋಟೀನ್, ಕಬ್ಬಿಣ, ಜೀವಸತ್ವಗಳು ಸಮೃದ್ಧವಾಗಿರುವ ಸೊಪ್ಪು, ತರಕಾರಿ ಇನ್ನಿತರೆ ಆಹಾರಗಳನ್ನು ಸೇವಿಸುವುದು ಉತ್ತಮ.

3) ಎಣ್ಣೆ ಮಸಾಜ್ ಮಾಡಿಕೊಳ್ಳಿ

ತಲೆಕೂದಲಿಗೆ ಎಣ್ಣೆ ಮಸಾಜ್ ಮಾಡಿದಷ್ಟು ಕೂದಲು ಸೊಂಪಾಗಿ ಬೆಳೆಯುತ್ತದೆ. ಆದರೆ ಕೆಲವು ಯುವಕರಿಗೆ, ವಯಸ್ಕರಿಗೆ ತಲೆಗೆ ಎಣ್ಣೆ ಹಾಕಿದರೆ ಆಗುವುದಿಲ್ಲ. ಕೂದಲಿಗೆ ಎಣ್ಣೆ ಹಾಕುವುದನ್ನು ನಿರ್ಲಕ್ಷಿಸಿದರೆ ನಾವಾಗಿಯೇ ಕೂದಲು ಉದುರುವಿಕೆಗೆ ಆಹ್ವಾನ ಕೊಟ್ಟಂತಾಗುತ್ತದೆ. ಹಾಗಾಗಿ ವಾರದಲ್ಲಿ ಎರಡು ಮೂರು ಬಾರಿಯಾದರೂ ನೈಸರ್ಗಿಕ ದತ್ತವಾದ ಎಣ್ನೆಯನ್ನು ಹಾಕಿ ಕೂದಲು ಮಸಾಜ್ ಮಾಡಿಕೊಳ್ಳುವುದು ಮುಖ್ಯ.

4) ಮದ್ಯಪಾನ, ಧೂಮಪಾನದಿಂದ ದೂರವಿರಿ

ಕೆಲಸ, ಮನೆ ಹೀಗೆ ನಾನಾ ಒತ್ತಡಕ್ಕೆ ಸಿಲುಕಿ ಹಲವರು ಧೂಮಪಾನ, ಮದ್ಯಪಾನದ ಮೊರೆ ಹೋಗುವುದುಂಟು. ಇದು ಸಹ ಕೂದಲು ಉದುರುವುದು ಮುಂದುವರಿದು ಬೊಕ್ಕ ತಲೆ ಆವರಿಸುವುದಕ್ಕೆ ಕಾರಣವಾಗಬಹುದು. ಆದ ಕಾರಣ ಮೊದಲು ಈ ಅಭ್ಯಾಸಗಳಿಂದ ದೂರವಿರುವುದು ಒಳ್ಳೆಯದು.

5) ಕೂದಲ ಆರೈಕೆಗೆ ಎಲೆಕ್ಟ್ರಾನಿಕ್‌ ಸಾಧನಗಳ ಬಳಕೆ

ಕೆಲವರು ಕೂದಲು ಒಣಗಿಸಲು ಹೇರ್ ಡ್ರೈಯರ್‌ನಂತಹ ಎಲೆಕ್ಟ್ರಾನಿಕ್‌ ಸಾಧನಗಳನ್ನು ಬಳಸುತ್ತಾರೆ. ಇದರೊಂದಿಗೆ ಅವರು ಕೂದಲ ರಕ್ಷಣೆ ಅಥವಾ ಕೂದಲು ಪೋಷಿಸುವ ದಿನಚರಿಯನ್ನು ಅನುಸರಿಸುವುದು ಒಳ್ಳೆಯದಲ್ಲ. ಹಾಗಾಗಿ ಇಂತಹ ಸಾಧನಗಳ ಬಳಕೆಯನ್ನು ಆದಷ್ಟು ತೊರೆದರೆ ಬೊಕ್ಕ ಸಮಸ್ಯೆ ತಲೆದೋರುವುದಿಲ್ಲ.

ಈ ಮೇಲಿನ ಎಲ್ಲಾ ಅಂಶಗಳನ್ನು ಫಾಲೋ ಮಾಡುವುದರ ಮೂಲಕ ಸಾಧ್ಯವಾದಷ್ಟು ಬೊಕ್ಕತಲೆ ಸಮಸ್ಯೆ ನಿವಾರಿಸಬಹುದು.
First published: