Fathers Day 2019: ವಿಶ್ವ ಅಪ್ಪಂದಿರ ದಿನ: ಅಪ್ಪ ಎಂದರೆ..?

ಆ ಗಾಂಭೀರ್ಯದ ಮಾತು, ಕಟ್ಟು ನಿಟ್ಟಿನ ಜೀವನ ಕೆಲವೊಮ್ಮೆ ಅಹಿತವೆನಿಸಿರುತ್ತದೆ. ಆದರೆ ಅದೇ ಗಾಂಭೀರ್ಯತೆಯು ನಿಮಗೆ ಗೊತ್ತಿಲ್ಲದೆ ನೀವು ಅಪ್ಪನಾದಾಗ ಆವರಿಸಿಕೊಳ್ಳುತ್ತದೆ. ಇಂತಹ ಸಣ್ಣ ಪುಟ್ಟ ನಡತೆಗಳಿಂದಲೇ ಅಪ್ಪ ಆದರ್ಶ ಜೀವನವನ್ನು ಹೇಳಿಕೊಟ್ಟಿರುತ್ತಾರೆ.

zahir | news18
Updated:June 15, 2019, 9:24 PM IST
Fathers Day 2019: ವಿಶ್ವ ಅಪ್ಪಂದಿರ ದಿನ:     ಅಪ್ಪ ಎಂದರೆ..?
@nrf.com
  • News18
  • Last Updated: June 15, 2019, 9:24 PM IST
  • Share this:
ಜೂನ್ 16 ವಿಶ್ವ ಅಪ್ಪಂದಿರ ದಿನ. ಅತ್ತಾಗ ಬಿಗಿದಪ್ಪಿದ, ಬಿದ್ದಾಗ ಕೈ ಹಿಡಿದು ಮೇಲೆತ್ತಿದ, ತ್ಯಾಗ ಎಂಬ ಪಾಠ ಕಲಿಸಿದ ಅಪ್ಪನಿಗೆ ಕೃತಜ್ಞತೆ ಹೇಳುವ ದಿನ. ಅಪ್ಪ ಎಂದರೇನೇ ಆಕಾಶ. ಅವರೊಬ್ಬರು ಜೊತೆಗಿದ್ದರೆ ಅದೇನೊ ವಿಶ್ವಾಸ. ಬಾಲ್ಯದಲ್ಲಿ ಪ್ರತಿಯೊಬ್ಬರಿಗೂ ಅಪ್ಪನೇ ಸೂಪರ್ ಹೀರೋ.

ಪ್ರೀತಿ, ವಾತ್ಸಲ್ಯದ ಸ್ಥಾನ ಹೆತ್ತಮ್ಮನಿಗಾದರೆ, ಸ್ನೇಹ, ಅಕ್ಕರೆಯ ಪ್ರತಿ ರೂಪ ಎಂದರೆ ಅದು ಅಪ್ಪ ಮಾತ್ರ. ತನ್ನ ಜೀವನವನ್ನೇ ಇಡೀ ಕುಟುಂಬಕ್ಕಾಗಿ ಮುಡಿಪಾಗಿಡುವ ತ್ಯಾಗಮಯಿ. ತನ್ನೆಲ್ಲಾ ಸುಖವನ್ನು ಮಕ್ಕಳಿಗಾಗಿ ಮೀಸಲಿಡುವ ನಿಜವಾದ ಹೀರೋ. ಎಲ್ಲಾ ರೀತಿಯಲ್ಲೂ ಆದರ್ಶಪ್ರಾಯವಾಗುವ ಮಕ್ಕಳ ಆದರ್ಶ ವ್ಯಕ್ತಿ.

ಅಪ್ಪನ ಗದರಿಕೆಯಲ್ಲೂ ಒಂದು ಪ್ರೀತಿ ಅಡಗಿರುತ್ತದೆ. ಅತ್ತಾಗ ಕಣ್ಣೊರೆಸುವ ಕೈಗಳೇ ಮುಂದೆ ತಪ್ಪು ಮಾಡಿದಾಗ ಶಿಕ್ಷಿಸುತ್ತದೆ. ಆ ಶಿಕ್ಷೆಯೇ ಮುಂದೆ ಹೊಸ ಅನುಭವಕ್ಕೆ ದಾರಿ ಮಾಡಿಕೊಟ್ಟಿರುತ್ತದೆ.  ಯಾರ ಮುಂದೆಯೂ ತನ್ನ ಮಕ್ಕಳು ಸೋಲಬಾರದೆಂಬ ಅಪ್ಪಟ  ಕಾಳಜಿವಹಿಸುವ ಏಕೈಕ ಗಂಡಸು ಜೀವವಿದ್ದರೆ ಅದು ಅಪ್ಪ ಮಾತ್ರ.

ಪ್ರತಿ ಸೋಲಿನಲ್ಲೂ ದೈರ್ಯ ತುಂಬುವ, ಎದ್ದು ನಿಲ್ಲಲೇಬೇಕೆಂದು ಹುರಿದುಂಬಿಸುವ ಆ ಬಡ ಜೀವವೇ ಅಪ್ಪ. ಅದೆಷ್ಟೊ ಜನರ ಸಾಧನೆಗೆ ಅಪ್ಪ ತೋರಿದ ಆ ಅಚಲ ನಂಬಿಕೆಯೇ ಶ್ರೀರಕ್ಷೆಯಾಗಿದೆ. ಆತನ ಆ ಗುಣವೇ ಅಪ್ಪನನ್ನು ಆಕಾಶದೆತ್ತರಕ್ಕೇರಿಸಿದೆ ಎನ್ನಬಹುದು.

ಆ ಗಾಂಭೀರ್ಯದ ಮಾತು, ಕಟ್ಟು ನಿಟ್ಟಿನ ಜೀವನ ಕೆಲವೊಮ್ಮೆ ಅಹಿತವೆನಿಸಿರುತ್ತದೆ. ಆದರೆ ಅದೇ ಗಾಂಭೀರ್ಯತೆಯು ನಿಮಗೆ ಗೊತ್ತಿಲ್ಲದೆ ನೀವು ಅಪ್ಪನಾದಾಗ ಆವರಿಸಿಕೊಳ್ಳುತ್ತದೆ. ಇಂತಹ ಸಣ್ಣ ಪುಟ್ಟ ನಡತೆಗಳಿಂದಲೇ ಅಪ್ಪ ಆದರ್ಶ ಜೀವನವನ್ನು ಹೇಳಿಕೊಟ್ಟಿರುತ್ತಾರೆ.

ಪ್ರತಿವರ್ಷ ಜೂನ್ ತಿಂಗಳ ಮೂರನೆಯ ಭಾನುವಾರವನ್ನು ವಿಶ್ವ ಅಪ್ಪಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. 1910ರಲ್ಲಿ ವಾಷಿಂಗ್ಟನ್​ನಲ್ಲಿ ಮೊದಲ ಬಾರಿಗೆ ಅಪ್ಪಂದಿರ ದಿನವನ್ನು ಆಚರಿಸಲಾಯಿತು. ಹಾಗೆಯೇ ಈ ವರ್ಷ ಜೂನ್ 16 ರಂದು ಫಾದರ್ಸ್ ಡೇ ಆಚರಿಸಲಾಗುತ್ತಿದೆ.

ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸುವಲ್ಲಿ ಅಮ್ಮನ ಪಾತ್ರ ಬಹಳಷ್ಟಿದೆ. ಹಾಗೆಯೇ ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಂದೆಯ ತ್ಯಾಗ ಕೂಡ ಅಷ್ಟೇ  ಇದೆ. ಸಾಮಾನ್ಯವಾಗಿ ಎಲ್ಲರೂ ಅಮ್ಮನೊಂದಿಗೆ ಹೆಚ್ಚಿನ ಪ್ರೀತಿ ತೋರುತ್ತೀರಿ. ಹೆತ್ತಮ್ಮನಿಗಾಗಿ ಅನೇಕ ವಸ್ತುಗಳನ್ನು ಕೊಡಿಸಿರುತ್ತೀರಿ. ಆದರೆ ಅಪ್ಪ...ಆ ಜೀವ ? ಸೋ, ಒಂದು ಬಾರಿ ಅಪ್ಪನನ್ನು ಬಿಗಿದಪ್ಪಿಕೊಳ್ಳಿ. ಒಂದೇ ಒಂದು ಅಪ್ಪಂದಿರ ದಿನದ ಶುಭಾಶಯ ವಿನಿಮಯ ಮಾಡಿಕೊಳ್ಳಿ. ಆ ವ್ಯಕ್ತಿ ಇದಕ್ಕಿಂತ ನಿಮ್ಮಿಂದ ಬೇರೇನೂ ನಿರೀಕ್ಷಿಸಿರಲ್ಲ. ಏಕೆಂದರೆ ಆತನ ಗುಣವೇ ಮುಗಿಲೆತ್ತರ. ಎಲ್ಲವನ್ನೂ ನಿಮಗಾಗಿ ತ್ಯಾಗ ಮಾಡಿದ ಬಾಲ್ಯದ ನಿಮ್ಮ ಪಾಲಿನ ಸೂಪರ್ ಹೀರೋಗೆ ಒಂದು ವಿಶಸ್ ಹೇಳಿ : )
First published:June 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ