ಇತ್ತೀಚಿನ ದಿನಗಳಲ್ಲಿ ಮದುವೆಯಾದ (Marriage) ಮೊದಲ ವರ್ಷದಲ್ಲೇ ಸಾಕಷ್ಟು ಜನರು ಡಿವೋರ್ಸ್ (Divorce) ಮೊರೆ ಹೋಗ್ತಿದ್ದಾರೆ. ವಿವಾಹೇತರ ಸಂಬಂಧಗಳು ಇದಕ್ಕೆ ಬಹು ಮುಖ್ಯ ಕಾರಣವಾಗಿದೆ. ಮದುವೆಯಾದ ವರ್ಷವನ್ನು ಹನಿಮೂನ್ ವರ್ಷ (Honeymoon Year) ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಗಂಡ ಅಥವಾ ಹೆಂಡತಿ ತಮ್ಮ ಸಂಗಾತಿಯನ್ನು (Couple) ಬಿಟ್ಟು ಬೇರೆ ಸಂಗಾತಿಗಳೊಟ್ಟಿಗೆ ಸಮಯ ಕಳೆಯಲು ಬಯಸುತ್ತಾರೆ ಎನ್ನುವ ಆಘಾತಕಾರಿ ಅಂಶವನ್ನು ಭಾರತದ ಡೇಟಿಂಗ್ ಆಪ್ ಗ್ಲೀಡೆನ್ (Dating app Gleeden) ತನ್ನ ಸಮೀಕ್ಷೆಯಲ್ಲಿ ಬಹಿರಂಗಗೊಳಿಸಿದೆ.
ಸಮೀಕ್ಷೆಯಲ್ಲಿ ಭಾಗವಹಿಸಿದ್ದ 55 ರಷ್ಟು ಜನ ಭಾರತೀಯರು ಒಬ್ಬರನ್ನು ಪ್ರೀತಿಸುತ್ತಲೇ ಇನ್ನೊಬ್ಬರೊಟ್ಟಿಗೆ ಸಾಂಗತ್ಯ ಬೆಳೆಸಿಕೊಳ್ಳಬಹುದು ಎನ್ನುವ ಆತಂಕಕಾರಿ ಅಂಶವನ್ನು ಹಂಚಿಕೊಂಡಿದ್ದಾರೆ.
2017 ರಲ್ಲಿ ಭಾರತದಲ್ಲಿ ಪ್ರಾರಂಭವಾದ ಗ್ಲೀಡೆನ್ ಡೇಟಿಂಗ್ ಆಪ್ನಲ್ಲಿ 2 ಮಿಲಿಯನ್ಗಿಂತಲೂ ಹೆಚ್ಚಿನ ಬಳಕೆದಾರರಿದ್ದಾರೆ. ಅಭಿವೃದ್ಧಿಹೊಂದಿದ ಮತ್ತು ಅಭಿವೃಧ್ಧಿ ಹೊಂದುತ್ತಿರುವ ನಗರಗಳಲ್ಲಿ ವಾಸಿಸುತ್ತಿರುವ 25 ರಿಂದ 50 ವರ್ಷ ವಯಸ್ಸಿನ 1,503 ವಿವಾಹಿತ ಭಾರತೀಯ ಪುರುಷರು ಮತ್ತು ಮಹಿಳೆಯರು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು.
ಸಮೀಕ್ಷೆಯಲ್ಲಿ ತಿಳಿದು ಬಂದಿದ್ದು ಏನು?
ವೈಯಕ್ತಿಕವಾಗಿ ದಾಂಪತ್ಯದಲ್ಲಿ ಮೋಸಕ್ಕೆ ಒಳಗಾದವರ ಅಭಿಪ್ರಾಯಗಳು, ಕೋವಿಡ್ ಸಂದರ್ಭದಲ್ಲಿನ ಪರಿಣಾಮಗಳು ಮತ್ತು ಹೆಚ್ಚುತ್ತಿರುವ ಈ ವಿವಾಹೇತರ ಸಂಬಂಧಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಈ ಸಮೀಕ್ಷೆ ನೀಡಿದೆ.
ಗ್ಲೀಡೆನ್ನ ಭಾರತದ ಮ್ಯಾನೇಜರ್ ಸಿಬಿಲ್ ಶಿಡೆಲ್ ಹೇಳುವಂತೆ ‘ಮದುವೆ ಮತ್ತು ಸಂಬಂಧಗಳ ವಿಷಯಗಳಲ್ಲಿ ವಿಸ್ತಾರವಾಗುತ್ತಿರುವ ಭಾರತೀಯರ ಮನಸ್ಥಿತಿ ನಿಜಕ್ಕೂ ಆಶ್ಚರ್ಯ ಮೂಡಿಸುತ್ತದೆ. ಜನರು ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಮಾನದಂಡಗಳನ್ನು ಮೀರುವ ಪ್ರಯತ್ನದಲ್ಲಿ ಹೆಚ್ಚು ಮುಕ್ತವಾಗುತ್ತಿದ್ದಾರೆ ಎನ್ನುವುದು ಸಮೀಕ್ಷೆಯಲ್ಲಿ ತಿಳಿಯಿತು’ ಎನ್ನುತ್ತಾರೆ.
ಈ ಜಗತ್ತು ಅಂದುಕೊಂಡಿರುವುದಕ್ಕಿಂತಲೂ ಹೆಚ್ಚು ಸಾಹಸಿಗಳು ಭಾರತೀಯರು
ಅವಕಾಶ ಸಿಕ್ಕರೆ ಮುಕ್ತ ದಾಂಪತ್ಯ, ಶುಗರ್ ಬೇಬಿ/ಡ್ಯಾಡಿ ಮತ್ತು ನಡವಳಿಕೆಗಳಲ್ಲಿ ಫ್ಯಾಂಟಸಿಯ ಅತೀರೇಕಗಳನ್ನು ಒಳಗೊಂಡ ಬಿಡಿಎಸ್ಎಮ್ ಪ್ರಯೋಗ ಮಾಡಲು ಭಾರತೀಯರು ಸಿದ್ಧರಾಗಿದ್ದಾರೆ ಎಂದು ಗ್ಲೀಡೆನ್ ಆಪ್ ತನ್ನ ಸಮೀಕ್ಷೆಯಲ್ಲಿ ಹೇಳಿದೆ.
ಹತ್ತರಲ್ಲಿ ಆರು ಜನರು ಅಸಾಂಪ್ರದಾಯಿಕ ಸಂಬಂಧವನ್ನು ಹೊಂದಿದ್ದು, 22 ರಷ್ಟು ಜನರು ಮುಕ್ತ ದಾಂಪತ್ಯವನ್ನು ಪಾಲಿಸುತ್ತಿದ್ದಾರೆ. ಆದರೆ ‘82 ರಷ್ಟು ಜನರು ಮಾತ್ರ ತಮ್ಮ ಇಡೀ ಜೀವನದಲ್ಲಿ ಒಬ್ಬ ವ್ಯಕ್ತಿಗೆ ನಿಷ್ಠರಾಗಿರಲು ಸಾಧ್ಯ’ ಎನ್ನುವ ಭರವಸೆಯ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ 44 ರಷ್ಟು ಜನರು ಒಂದೇ ಸಮಯದಲ್ಲಿ ಇಬ್ಬರೊಟ್ಟಿಗೆ ಸಾಂಗತ್ಯ ಸಾಧ್ಯವಿದೆ ಎಂದಿದ್ದಾರೆ.
ಹನಿಮೂನ್ ಹಂತದಲ್ಲೇ ನಂಬಿಕೆ ದ್ರೋಹ!
ಶೇಕಡಾ 59 ರಷ್ಟು ಪುರುಷರು ಮತ್ತು 53 ರಷ್ಟು ಮಹಿಳೆಯರು ತಮ್ಮ ಸಂಗಾತಿಗೆ ನಿಷ್ಠರಾಗಿಲ್ಲ ಎನ್ನುವುದನ್ನು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮದುವೆಯಾದ ಮೊದಲ ವರ್ಷವನ್ನು ಹನಿಮೂನ್ ಹಂತ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲೇ ತಮ್ಮ ಸಂಗಾತಿಯ ನಂಬಿಕೆಯನ್ನು ಮುರಿದಿದ್ದಾರೆ ಎನ್ನುವುದನ್ನು ಗ್ಲೀಡೆನ್ ಸಮೀಕ್ಷೆ ತಿಳಿಸುತ್ತದೆ.
ಸ್ನೇಹಿತರ ವಲಯದಲ್ಲೇ ಮೋಸ
ಬಹುತೇಕರು ತಮ್ಮ ಸ್ನೇಹವಲಯದಲ್ಲೇ ನಂಬಿಕೆ ದ್ರೋಹ ಮಾಡುತ್ತಾರೆ. ಖಾಸಗಿ ಕಾರ್ಯಕ್ರಮಗಳು, ಪಾರ್ಟಿಗಳು ಈ ನಂಬಿಕೆ ದ್ರೋಹಗಳಿಗೆ ಸಾಕ್ಷಿಯಾಗಿವೆ. ಆದರೆ ಶೇಕಡಾ 44 ರಷ್ಟು ಜನರು ಆನ್ಲೈನ್ನಲ್ಲಿ ಅಂದರೆ ಸಾಮಾಜಿಕ ಜಾಲತಾಣ, ಡೇಟಿಂಗ್ ಆಪ್ಗಳ ಮೂಲಕ ವಂಚಿಸಿ ದಾಂಪತ್ಯದ ನಂಬಿಕೆ ಮುರಿಯುತ್ತಾರೆ ಎನ್ನುತ್ತದೆ ಗ್ಲೀಡೆನ್ ಸಮೀಕ್ಷೆ.
ಈ ಅನೈತಿಕ ಸಂಬಂಧಗಳು ಮೆಟ್ರೋ ಮತ್ತು ಸಣ್ಣ ನಗರಗಳಲ್ಲಿ ಒಂದೇ ಪ್ರಮಾಣದಲ್ಲಿದೆ. (ಶೇಕಡಾ 58 ರಷ್ಟು ಮತ್ತು 56 ರಷ್ಟು )ಅಭಿವೃದ್ಧಿ ಹೊಂದುತ್ತಿರುವ ನಗರಗಳಾದ ಭೂಪಾಲ್, ಗುರುಗಾವ್, ವಡೋದರ, ನವದೆಹಲಿ, ಕೊಚ್ಚಿ, ಥಾಣೆ, ಡೆಹ್ರಡೂನ್, ಪಾಟ್ನಾ, ನಾಸಿಕ್ ಮತ್ತು ಗೌಹಾಟಿಗಳಲ್ಲಿ ಗ್ಲೀಡೆನ್ ಡೇಟಿಂಗ್ ಆಪ್ ಚಂದಾದಾರಿಕೆ ಹೆಚ್ಚಾಗಿರುವುದು ಇದಕ್ಕೆ ಸಾಕ್ಷಿ.
ಇದನ್ನೂ ಓದಿ: Relationship Tips: ಬೆಳಗ್ಗೆ ಎಂದಾಗ ಗಂಡ, ಹೆಂಡತಿ ಹೀಗೆ ಮಾಡಿದರೆ ಸಂಬಂಧ ಗಟ್ಟಿಯಾಗುತ್ತೆ!
ಅನೈತಿಕ ಸಂಬಂಧದ ಬಗ್ಗೆ ಹೇಳಿದ್ದೇನು?
ಕೋವಿಡ್ ಸಾಂಕ್ರಾಮಿಕದ ಬಳಿಕ ಅನೈತಿಕ ಸಂಬಂಧಗಳ ಬಗ್ಗೆ ಕಾಲು ಭಾಗದಷ್ಟು ಭಾರತೀಯರು ಮೃದು ಧೋರಣೆ ತಾಳಿದ್ದಾರೆ. ಇನ್ನೂ ಲಾಕ್ಡೌನ್ ಸಮಯದಲ್ಲಿ ಬೇರೊಬ್ಬ ಸಂಗಾತಿಯೊಂದಿಗಿನ ಕಲ್ಪನೆಗಳು ಈ ಬದಲಾವಣೆಗೆ ಕಾರಣವಾಗಿವೆ ಎನ್ನುವುದನ್ನು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇಕಡಾ 50 ರಷ್ಟು ಜನರು ತಿಳಿಸಿದ್ದಾರೆ.
ಅದೇನೇ ಇರಲಿ, ನಂಬಿಕೆಯೊಂದಿಗೆ ಕಟ್ಟುವ ಸಂಬಂಧಗಳು ಹಾದಿ ತಪ್ಪದಂತೆ ಎಚ್ಚರವಹಿಸಬೇಕು. ಆರೋಗ್ಯಪೂರ್ಣ ದಾಂಪತ್ಯವನ್ನು ಹೊಂದುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ. ಜೊತೆಗೆ ಮುಂದಿನ ಪೀಳಿಗೆಗೂ ಪರಿಣಾಮಕಾರಿ ನಡವಳಿಕೆ ಎನ್ನುವುದು ಹಿರಿಯರ ನಂಬಿಕೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ