ಕೋವಿಡ್-19 ಸಾಂಕ್ರಾಮಿಕ ರೋಗ ಆರಂಭವಾದಾಗಿನಿಂದ ಜನರು ತಾವು ಸೇವಿಸುವ ಆಹಾರದ ಮೇಲೆ ತುಂಬಾ ಗಮನ ಹರಿಸುತ್ತಿದ್ದಾರೆ. ಯಾವ ಆಹಾರವನ್ನು ನಾವು ಸೇವಿಸಿದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ ಮತ್ತು ದೇಹದ ಆರೋಗ್ಯಕ್ಕೆ ಉತ್ತಮವಾಗಿರುತ್ತವೆ ಎಂಬುದಕ್ಕೆ ಆದ್ಯತೆ ನೀಡಿ ನಿತ್ಯಜೀವನದಲ್ಲಿ ಆಹಾರದ ಆಯ್ಕೆ ಮಾಡಿಕೊಳ್ಳುತ್ತಿರುವುದು ಉತ್ತಮ ವಿಚಾರವಾಗಿದೆ.
ತುಂಬಾ ಜನರಿಗೆ ಯಾವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು ಮತ್ತು ಯಾವ ಆಹಾರವನ್ನು ಸೇವಿಸಿದರೆ ನಮ್ಮ ದೇಹಕ್ಕೆ ಕಿಂಚಿತ್ತೂ ಲಾಭವಿಲ್ಲ ಎನ್ನುವುದರ ಬಗ್ಗೆ ಅನೇಕ ಗೊಂದಲಗಳಿರುತ್ತವೆ. ಇಂತವರು ಯಾವುದೋ ಕರಿದಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ತಿಂದು ತಮ್ಮ ಆರೋಗ್ಯವನ್ನು ಹದಗೆಡಿಸಿ ಕೊಳ್ಳುವುದಕ್ಕಿಂತ, ಸಾತ್ವಿಕ ಆಹಾರವನ್ನು ರೂಢಿಸಿಕೊಳ್ಳುವುದು ಉತ್ತಮ ಅನ್ನಿಸುತ್ತದೆ. ಹಾಗಾದರೆ ಈ ಸಾತ್ವಿಕ ಆಹಾರ ಹಾಗೂ ಅದರ ಸೇವನೆಯಿಂದ ದೇಹಕ್ಕೆ ಉಂಟಾಗುವ ಪ್ರಯೋಜನಗಳನ್ನು ಕುರಿತು ಅರಿತುಕೊಳ್ಳೋಣ.
ಏನಿದು ಸಾತ್ವಿಕ ಆಹಾರ ಅಂತೀರಾ?
ಸಾತ್ವಿಕ ಆಹಾರವು ಆಯುರ್ವೇದದ ಅಂಶಗಳನ್ನು ಆಧರಿಸಿದ ಶುದ್ಧ ಸಸ್ಯಾಹಾರವಾಗಿದೆ. ಈ ಆಹಾರದಲ್ಲಿ ಫೈಬರ್ ಅಂಶ ಜಾಸ್ತಿ ಇದ್ದು, ಕೊಬ್ಬಿನಾಂಶವು ತುಂಬಾ ಕಡಿಮೆ ಇರುತ್ತದೆ. ಇಂತಹ ಆಹಾರವು ನಮ್ಮನ್ನು ದೈಹಿಕವಾಗಿ ಆರೋಗ್ಯವಾಗಿ ಇರಿಸುವುದಲ್ಲದೆ, ಮಾನಸಿಕ ಆರೋಗ್ಯಕ್ಕೂ ತುಂಬಾ ಸಹಾಯಕವಾಗಿದೆ. ಸಾತ್ವಿಕ ಆಹಾರ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತವೆ. ಈ ಆಹಾರವನ್ನು ಸೇವಿಸುವುದನ್ನು ರೂಢಿಸಿಕೊಂಡರೆ, ನಮ್ಮ ದೇಹಕ್ಕೆ ಹೆಚ್ಚಿನ ಫೈಬರ್, ಪೌಷ್ಟಿಕಾಂಶ ಲಭಿಸುತ್ತದೆ ಮತ್ತು ಇದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ.
ಸಂಪೂರ್ಣವಾದ ಆಹಾರ
ಸಾತ್ವಿಕ ಆಹಾರವನ್ನು ಸಂಪೂರ್ಣವಾದ ಆಹಾರ ಅಂತ ಹೇಳಬಹುದು, ಏಕೆಂದರೆ ಇದು ದೇಹಕ್ಕೆ ಅವಶ್ಯಕವಾಗಿರುವಂತಹ ಪೋಷಕಾಂಶಗಳು, ಜೀವಸತ್ವಗಳು, ಆರೋಗ್ಯಕರ ಕೊಬ್ಬು, ಪ್ರೊಟೀನ್ ಅಂಶಗಳನ್ನು ಒಳಗೊಂಡಿರುತ್ತದೆ. ಈ ರೀತಿಯ ಪೋಷಕಾಂಶಗಳು ಮತ್ತು ಜೀವಸತ್ವಗಳು ಹಣ್ಣುಗಳಲ್ಲಿ ಸಹ ನಾವು ಕಾಣಬಹುದಾಗಿದ್ದು, ದೇಹಕ್ಕೆ ರೋಗಗಳ ವಿರುದ್ಧ ಹೊರಡುವ ಶಕ್ತಿಯನ್ನು ಒದಗಿಸುತ್ತವೆ.
ದೀರ್ಘಕಾಲದ ಕಾಯಿಲೆಯನ್ನು ವಾಸಿ ಮಾಡುತ್ತದೆ
ಸಾತ್ವಿಕ ಆಹಾರವು ಸೇವಿಸುವುದರಿಂದ ನೀವು ಬೇರೆ ಎಣ್ಣೆಯಲ್ಲಿ ಕರಿದಂತಹ ಆಹಾರ ಪದಾರ್ಥಗಳನ್ನು ಸೇವಿಸಿ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡಿಕೊಳ್ಳುವುದನ್ನು ತಪ್ಪಿಸಿಕೊಳ್ಳಬಹುದು. ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ಅರಿಶಿನ, ದಾಲ್ಚಿನ್ನಿ, ಶುಂಠಿ ಮತ್ತು ಇನ್ನಿತರೆ ಪದಾರ್ಥಗಳನ್ನು ಸೇವಿಸುವುದರಿಂದ ಸಹ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವಲ್ಲಿ ಸಹಾಯಕವಾಗಿದೆ
ಸಾತ್ವಿಕ ಆಹಾರದಲ್ಲಿ ಫೈಬರ್ ಅಂಶವು ಹೆಚ್ಚಿರುವುದರಿಂದ ನೀವು ನಿಮ್ಮ ದೇಹದ ತೂಕ ಹೆಚ್ಚಾಗದಂತೆ ಹಾಗೆಯೇ ಕಾಪಾಡಿಕೊಂಡು ಹೋಗಬಹುದು. ನಿಮ್ಮ ದೇಹಕ್ಕೆ ಬೇಕಾಗುವಂತಹ ಪೋಷಕಾಂಶವನ್ನು ಆರೋಗ್ಯಕರ ಕೊಬ್ಬು, ದ್ವಿದಳ ಧಾನ್ಯಗಳು ಮತ್ತು ತರಕಾರಿಗಳು ಒದಗಿಸುವುದರಿಂದ ನಿಮ್ಮ ಜೀರ್ಣಕ್ರಿಯೆಯು ಉತ್ತಮವಾಗಿ ದೇಹದ ತೂಕ ಹೆಚ್ಚಾಗದಂತೆ ಕಾಪಾಡುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಆಹಾರದ ಮೂಲಕ ನಿಮ್ಮ ದೇಹದಲ್ಲಿ ಪ್ರವೇಶ ಪಡೆದಿರುವಂತಹ ಅನವಶ್ಯಕವಾದ ಪದಾರ್ಥಗಳನ್ನು ಈ ಸಾತ್ವಿಕ ಆಹಾರದಲ್ಲಿರುವ ಪೋಷಕಾಂಶಗಳು ಹೊಡೆದೊಡಿಸುತ್ತದೆ. ಸಾತ್ವಿಕ ಆಹಾರದಲ್ಲಿರುವಂತಹ ಪೌಷ್ಟಿಕ ಅಂಶಗಳು ರೋಗ ನಿರೋಧಕ ಶಕ್ತಿಯನ್ನು ಬಳಪಡಿಸುತ್ತದೆ. ಈ ಆಹಾರವು ನಮ್ಮ ದೇಹದಲ್ಲಿನ ಚಯಾಪಚಯ ಕ್ರಿಯೆಯನ್ನು ಉತ್ತಮವಾಗಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ