ಎಳನೀರಿಗೂ ಎಕ್ಸ್​ಪೈರಿ ದಿನಾಂಕ ಇದೆ ಅನ್ನೋದು ನಿಮಗೆ ಗೊತ್ತಾ?

news18
Updated:March 13, 2018, 7:26 PM IST
ಎಳನೀರಿಗೂ ಎಕ್ಸ್​ಪೈರಿ ದಿನಾಂಕ ಇದೆ ಅನ್ನೋದು ನಿಮಗೆ ಗೊತ್ತಾ?
news18
Updated: March 13, 2018, 7:26 PM IST
ಸೌಮ್ಯ ಕಳಸ, ನ್ಯೂಸ್ 18 ಕನ್ನಡ

ಚಳಿಗಾಲ ಮುಗಿಯುವ ಮುನ್ನವೇ ಬಿಸಿಲಿ ಬೇಗೆ ಜೋರಾಗಿತ್ತು. ಈಗ ಬೇಸಿಗೆ ಆರಂಭವಾಗಿದೆ. ಇನ್ನು ಆರಂಭದಲ್ಲೇ ಬಿಸಿಲಿನ ತಾಪ ಜನರನ್ನು ಹೈರಾಣು ಮಾಡುತ್ತಿದೆ. ಇದರಿಂದ ತಪ್ಪಿಸಿಕೊಂಡು ಕೊಂಚ ತಂಪಾಗೋಕೆ ಅನೇಕರು ಎಳನೀರಿನ ಮೊರೆ ಹೋಗುತ್ತಿದ್ದಾರೆ. ಆದರೆ ಈ ಎಳನೀರಿಗೂ ಒಂದು ಎಕ್ಸ್​ಪೈರಿ ಡೇಟ್ ಇದ್ದು, ಆ ಸಮಯ ಮೀರಿದ ಎಳನೀರು ಕುಡಿದರೆ ಆರೋಗ್ಯ ಕೈಕೊಡುತ್ತೆ ಅನ್ನೋ ವಿಚಾರ ಹಲವರಿಗೆ ಗೊತ್ತಿರೋದಿಲ್ಲ.

ಸೂರ್ಯ ನೆತ್ತಿ ಸುಡುವಾಗ, ತಣ್ಣಗೆ ಒಂದು ಎಳನೀರು ಕುಡಿಯೋದು ನಿಜಕ್ಕೂ ಅದೆಂಥಾ ಸಮಾಧಾನ ಕೊಡುತ್ತೆ. ಸಾಫ್ಟ್ ಡ್ರಿಂಕ್ಸ್​ ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳೋ ಬದಲು ಎಳನೀರು ಕುಡಿದು ಆರೋಗ್ಯ ಕಾಪಾಡಿಕೊಳ್ಳೋ ಆಲೋಚನೆ ಹಲವರದ್ದು. ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಮಾತ್ರವಲ್ಲ, ರೈತರಿಗೂ ಬೆಂಬಲ ಕೊಟ್ಟಂತಾಗುತ್ತೆ ಎಂದು ಯೋಚಿಸುವವರೂ ಇದ್ದಾರೆ.

ಆದರೆ ಎಳನೀರನ್ನು ಮರದಿಂದ ಕೊಯ್ದ 15 ದಿನಗಳೊಳಗಾಗಿ ಕುಡಿಯಬೇಕು, ಇಲ್ಲದಿದ್ದರೆ ಆರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ ಆಹಾರ ತಜ್ಞರು. ಹಳೆಯದಾದ ಎಳನೀರಿನಲ್ಲಿರೋ ಅತ್ಯಮೂಲ್ಯ ಎಲೆಕ್ಟ್ರೋಲೈಟ್ ಗಳು ನಾಶವಾಗಿ ನೀರು ಹುಳಿಯಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ರೈತರ ಬಳಿ ಸೀಸನ್ ಇಲ್ಲದಾಗ ಕಡಿಮೆ ಬೆಲೆಗೆ ಎಳನೀರು ಕೊಳ್ಳುವ ದಲ್ಲಾಳಿಗಳು ಅದನ್ನು ಶೇಖರಿಸಿಟ್ಟು ಉತ್ತಮ ಬೆಲೆ ಬಂದಾಗ ಮಾರುಕಟ್ಟೆಗೆ ಬಿಡುಗಡೆ ಮಾಡ್ತಾರೆ. ಹಾಗಾಗಿ ಹಳೆಯ ಎಳನೀರುಗಳು ಎಲ್ಲೆಡೆ ಹೆಚ್ಚಿದ್ದು ಇದರ ಅರಿವಿರದ ಜನ ಅದನ್ನೇ ಕುಡಿಯುವಂತಾಗುತ್ತದೆ.

ಎಳನೀರನ್ನು ಕುಡಿದಾಗ ಅದು ಹುಳಿಯಾಗಿದ್ದರೆ, ಅದು ಹಳೆಯದು ಎಂದು ತಿಳಿಯಬೇಕು. ಇತ್ತ ರೈತರಿಗೂ ಲಾಭವಾಗದೇ, ಆರೋಗ್ಯಕ್ಕೂ ಪ್ರಯೋಜನವಾಗದ ಹುಳಿ ಎಳನೀರು ಅನೇಕರಿಗೆ ಗಂಟಲು ನೋವು ತರುತ್ತದೆ.
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ