ಚರ್ಮದ ಆರೈಕೆಯ (Skin Care) ವಿಷಯಕ್ಕೆ ಬಂದಾಗ ನಾವೆಲ್ಲರೂ ಸ್ವಲ್ಪ ಹೆಚ್ಚು ಜಾಗರೂಕರಾಗುತ್ತೇವೆ. ನಮ್ಮಲ್ಲಿ ಹೆಚ್ಚಿನವರು ಮೃದುವಾದ ಮತ್ತು ಪೋಷಣೆಯ ಚರ್ಮವನ್ನು ಉಳಿಸಿಕೊಳ್ಳಲು ಆರೋಗ್ಯಕರ ಆಹಾರವನ್ನು ಸೇವಿಸುತ್ತಾರೆ. ನಮ್ಮ ದೇಹದ ಚರ್ಮ ನೈಸರ್ಗಿಕವಾಗಿ ಹೊಳಪನ್ನು ಹೊಂದಿರಬೇಕು ಅಂತ ಅನ್ನಿಸುವುದು ಸಹಜ. ಹೊಳಪನ್ನು ಕಾಪಾಡಿಕೊಳ್ಳಲು ನಾವು ಸೀರಮ್, ತೈಲ ಮತ್ತು ಮಾಯಿಶ್ಚರೈಸರ್ ಕ್ರೀಂ ಗಳನ್ನು (Moisturizer Cream) ಎಲ್ಲವನ್ನೂ ಹಚ್ಚಿಕೊಳ್ಳುತ್ತೇವೆ. ನಮ್ಮ ಚರ್ಮದ ಆರೋಗ್ಯವು ನಾವು ಸೇವಿಸುವ ಆಹಾರಕ್ಕೆ ನೇರವಾಗಿ ಸಂಬಂಧಿಸುತ್ತದೆ ಅಂತ ಹೇಳಬಹುದು. ಸಾಕಷ್ಟು ನೀರು ಕುಡಿಯುವುದು, ಪೋಷಕಾಂಶ ಭರಿತ ಆಹಾರವನ್ನು (Food) ಸೇವಿಸುವುದು ಮತ್ತು ಆರೋಗ್ಯಕರ ಜೀವನವನ್ನು ನಡೆಸುವುದು ನಮ್ಮ ಚರ್ಮದ ಆರೋಗ್ಯವನ್ನು ಇನ್ನಷ್ಟು ಉತ್ತೇಜಿಸುತ್ತದೆ ಅಂತ ಹೇಳಬಹುದು.
ಚರ್ಮಕ್ಕೆ ಆಹಾರ ಪದಾರ್ಥಗಳಲ್ಲಿರುವ ಕೊಲಾಜನ್ ಅಂಶವು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಪೌಷ್ಟಿಕ ತಜ್ಞೆ ರೂಪಾಲಿ ದತ್ತಾ ಅವರ ಪ್ರಕಾರ "ಕೊಲಾಜನ್ ಒಂದು ಮುಖ್ಯವಾದ ಪ್ರೋಟೀನ್ ಆಗಿದ್ದು, ಇದು ಇತರ ಎಲ್ಲಾ ಅಂಗಾಂಶಗಳನ್ನು ಒಟ್ಟಿಗೆ ಇರಿಸುತ್ತದೆ.
ಕೊಲಾಜನ್ ಮೂಳೆಗಳು, ಕೀಲುಗಳು, ರಕ್ತ, ಸ್ನಾಯುಗಳು ಮತ್ತು ಕಾರ್ಟಿಲೆಜ್ ಗಳಲ್ಲಿ ಇರುತ್ತದೆ. ಇದು ಸ್ಥಿತಿಸ್ಥಾಪಕತ್ವ ಮತ್ತು ಶಕ್ತಿಯನ್ನು ನೀಡುವುದರಿಂದ ಆರೋಗ್ಯಕರವಾಗಿ ಕಾಣುವ ಚರ್ಮಕ್ಕೆ ಇದು ಅತ್ಯಂತ ಪ್ರಮುಖ ಪ್ರೋಟೀನ್ ಎಂದು ಪರಿಗಣಿಸಲಾಗಿದೆ" ಎನ್ನುತ್ತಾರೆ.
ನಮ್ಮ ಚರ್ಮದಲ್ಲಿ ಕೊಲಾಜನ್ ಉತ್ಪಾದಿಸಲು ಯಾವುದು ಸಹಾಯ ಮಾಡುತ್ತದೆ?
ಕೊಲಾಜನ್ ನೈಸರ್ಗಿಕವಾಗಿ ಹೆಚ್ಚಾಗಿ ಪ್ರಾಣಿಗಳ ಪ್ರೋಟೀನ್ ಗಳಲ್ಲಿ ಕಂಡು ಬರುತ್ತದೆ. ಆದಾಗ್ಯೂ, ಸಸ್ಯ ಆಹಾರಗಳು ನಮ್ಮ ದೇಹದಲ್ಲಿ ಕೊಲಾಜನ್ ಉತ್ಪಾದನೆಗೆ ಸಹಾಯ ಮಾಡುವ ಹಲವಾರು ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತವೆ.
ಇದನ್ನೂ ಓದಿ: ನಿಮ್ಮ ಹುಬ್ಬು ಸುಂದರವಾಗಿ ಕಾಣಬೇಕೇ? ಇಲ್ಲಿದೆ ಸಿಂಪಲ್ ಟಿಪ್ಸ್
ರೂಪಾಲಿ ದತ್ತಾ ಅವರ ಪ್ರಕಾರ, ನಮ್ಮ ದೇಹದಲ್ಲಿ ಕೊಲಾಜನ್ ಉತ್ಪಾದಿಸಲು ಸಹಾಯ ಮಾಡುವ ಪೋಷಕಾಂಶಗಳು "ಅಮೈನೋ ಆಮ್ಲಗಳು, ವಿಟಮಿನ್ ಸಿ, ಸತು, ಮ್ಯಾಂಗನೀಸ್ ಮತ್ತು ತಾಮ್ರ".
ಯಾವೆಲ್ಲಾ ಆಹಾರ ಪದಾರ್ಥಗಳು ಕೊಲಾಜನ್ ಅನ್ನು ಹೊಂದಿರುತ್ತವೆ?
1. ಕೋಳಿ ಮಾಂಸ
ಅತ್ಯಧಿಕ ಪ್ರಮಾಣದ ಕೊಲಾಜನ್ ಹೊಂದಿರುವ ಆಹಾರಗಳಲ್ಲಿ ಚಿಕನ್ ಸಹ ಒಂದಾಗಿದೆ ಎಂದು ಹೇಳಲಾಗುತ್ತದೆ. ಚಿಕನ್ ಅನ್ನು ಭಾರತದಾದ್ಯಂತ ವ್ಯಾಪಕವಾಗಿ ಸೇವಿಸಲಾಗುತ್ತದೆ. ತಜ್ಞರು ಸೂಚಿಸುವಂತೆ, ಕೋಳಿ ಮಾಂಸವನ್ನು ಸೇವಿಸುವುದರಿಂದ ಉತ್ತಮ ಪ್ರಮಾಣದ ಕೊಲಾಜನ್ ನಮಗೆ ಸಿಗುತ್ತದೆ.
2. ನೆಲ್ಲಿಕಾಯಿ
ಆಮ್ಲಾ ಎಂದರೆ ನೆಲ್ಲಿಕಾಯಿ ಸೂಪರ್ ಫುಡ್ ಆಗಿದ್ದು, ಇದರಲ್ಲಿ ವಿಟಮಿನ್ ಸಿ ಅಂಶ ಇರುತ್ತದೆ. ಇದು ಆರೋಗ್ಯಕರ ಚರ್ಮವನ್ನು ಉತ್ತೇಜಿಸಲು ಬಲವಾದ ಉತ್ಕರ್ಷಣ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಇದಲ್ಲದೆ, ಇದು ನಮ್ಮ ಚಯಾಪಚಯ ಕ್ರಿಯೆಯನ್ನು ಮತ್ತು ಪ್ರತಿರಕ್ಷಣಾ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
3. ಮೀನು
ಮೀನು ಮಾಂಸವನ್ನು ಕೊಲಾಜನ್ ನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಉಪ್ಪು ನೀರು ಮತ್ತು ಸಿಹಿ ನೀರಿನಲ್ಲಿರುವ ಮೀನುಗಳೆರಡೂ ಅಮೈನೋ ಆಮ್ಲಗಳಿಂದ ತುಂಬಿರುತ್ತವೆ, ಇದು ನಮ್ಮ ದೇಹದಲ್ಲಿ ಕೊಲಾಜನ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಅಂತ ಹೇಳಲಾಗುತ್ತದೆ.
4. ಹಾಲು ಮತ್ತು ಹಾಲಿನ ಉತ್ಪನ್ನಗಳು
ಭಾರತದಲ್ಲಿ, ಜನರು ಹೆಚ್ಚಾಗಿ ಹಾಲು, ಮೊಸರು, ಪನೀರ್ ಮತ್ತು ಇತರ ಡೈರಿ ಉತ್ಪನ್ನಗಳನ್ನು ಹೆಚ್ಚಾಗಿಯೇ ಸೇವಿಸುತ್ತಾರೆ. ಈ ಪ್ರತಿಯೊಂದು ಆಹಾರ ಪದಾರ್ಥಗಳು ಸತುವಿನಿಂದ ಸಮೃದ್ಧವಾಗಿವೆ ಅಂತ ಹೇಳಬಹುದು. ಇದು ದೇಹದಲ್ಲಿ ಕೊಲಾಜನ್ ಉತ್ಪಾದನೆಗೆ ಸಹಾಯ ಮಾಡುವ ಖನಿಜವಾಗಿದೆ.
5. ಬೇಳೆ
ಭಾರತೀಯ ಪಾಕಪದ್ಧತಿಯಲ್ಲಿ ದಾಲ್ ಎಂದರೆ ಬೇಳೆ ತುಂಬಾನೇ ಪ್ರಮುಖವಾದ ಆಹಾರ ಅಂತ ಹೇಳಬಹುದು. ದೇಶಾದ್ಯಂತ ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿ ಸ್ಥಳೀಯರು ತಮಗೆ ಗೊತ್ತಿರುವ ರೀತಿಯಲ್ಲಿ ದಾಲ್ ಅನ್ನು ಮಾಡಿಕೊಳ್ಳುತ್ತಾರೆ ಅಂತ ಹೇಳಬಹುದು.
ಇದು ಎಲ್ಲಾ ವರ್ಗದ ಜನರಿಗೂ ಕೈಗೆಟುಕುವ ಬೆಲೆಯಲ್ಲಿ ಇರುವುದರಿಂದ ಮತ್ತು ಜನರು ಇದನ್ನು ಇಷ್ಟಪಡುವುದರಿಂದ ಇದು ಒಂದು ಹೆಚ್ಚು ರೂಢಿಯಲ್ಲಿರುವ ಆಹಾರ ಪದಾರ್ಥವಾಗಿದೆ. ಇದು ತಾಮ್ರ ಮತ್ತು ಮ್ಯಾಂಗನೀಸ್ ಸೇರಿದಂತೆ ಹಲವಾರು ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ