ಸದಾ ನಿಮ್ಮ ಜೊತೆ ಆತ್ಮವಿಶ್ವಾಸ ಒಂದಿದ್ದರೆ..!

ಆತ್ಮವಿಶ್ವಾಸವನ್ನು ಹೆಚ್ಚಿಸಲು ಉತ್ತಮ ಮಾರ್ಗವೆಂದರೆ ನಿಮ್ಮ ಹಿಂದಿನ ಸಾಧನೆಗಳು. ಅದು ಸಣ್ಣದಿರಲಿ, ದೊಡ್ಡದಿರಲಿ. ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ಗೆಲುವಿನ ಕಹಾನಿ ಇರುತ್ತದೆ.

zahir | news18-kannada
Updated:August 5, 2019, 4:13 PM IST
ಸದಾ ನಿಮ್ಮ ಜೊತೆ ಆತ್ಮವಿಶ್ವಾಸ ಒಂದಿದ್ದರೆ..!
ಸಾಂದರ್ಭಿಕ ಚಿತ್ರ
zahir | news18-kannada
Updated: August 5, 2019, 4:13 PM IST
ಯಾವುದೇ ಯಶಸ್ಸಿನ ಮೂಲ ಮಂತ್ರಗಳನ್ನು ತೆಗೆದುಕೊಂಡರೂ 'ಆತ್ಮವಿಶ್ವಾಸ' ಎಂಬುದು ಎದ್ದು ಕಾಣುತ್ತದೆ.  ಯಾವುದೇ ಪ್ರಯತ್ನವನ್ನು ಮಾಡದೆಯೇ ನಮ್ಮಿಂದಾಗುವುದಿಲ್ಲ ಎಂದು ಒಪ್ಪಿಕೊಳ್ಳಲೇಬಾರದು. ಆತ್ಮವಿಶ್ವಾಸವೊಂದಿದ್ದರೆ, ಪ್ರತಿಯೊಂದು ಕಠಿಣ ಕಾರ್ಯವೂ ಸುಲಭವೆಂದು ತೋರುತ್ತದೆ. ಆರಂಭದಲ್ಲಿ ನಮ್ಮ ಪ್ರಯತ್ನಗಳು ವಿಫಲವಾಗಬುದು. ಆದರೆ ಎದೆಗುಂದದೆ, ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ನಮ್ಮ ಪ್ರಯತ್ನವನ್ನು ಮುಂದುವರೆಸಿದರೆ ಮಾತ್ರ ಯಶಸ್ಸು ಪ್ರಾಪ್ತಿಯಾಗುತ್ತದೆ.

ನಾವು ಗೆಲ್ಲಲೇ ಬೇಕೆಂಬ ಸಂಕಲ್ಪದೊಂದಿಗೆ ಮಾಡುವ ಪ್ರಯತ್ನಗಳೇ ಗೆಲುವು ಎಂದಿದ್ದಾರೆ ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್. ಹೀಗಾಗಿ ನಾವು ಯಾವುದೇ ಪ್ರಯತ್ನಕ್ಕೂ ಕೈ ಹಾಕುವುದಿದ್ದರೂ ಅದಕ್ಕೆ ಬೇಕಾದ ಸಕಾರಾತ್ಮಕ ಮನಸ್ಥಿತಿ ರೂಪಿಸಿಕೊಳ್ಳಬೇಕು. ಈ ರೀತಿಯಾಗಿ ದೃಢ ಸಂಕಲ್ಪದೊಂದಿಗೆ ಇಳಿದರೆ ಯಶಸ್ಸು ಪ್ರಾಪ್ತಿ ಆಗುವುದರಲ್ಲಿ ಡೌಟೇ ಇಲ್ಲ. ಒಂದು ವೇಳೆ ನಿರಾಸೆಯಾದರೂ ಅದು ಹೊಸ ಪಾಠ ಕಲಿಸಿರುತ್ತದೆ. ಆತ್ಮವಿಶ್ವಾಸ ಹೆಚ್ಚಿಸಲು ನೀವು ಸಣ್ಣ ಪುಟ್ಟ ಕಾರ್ಯಗಳೇನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ನಿಮ್ಮ ಸುತ್ತ ಸಕಾರಾತ್ಮಕ ವಾತಾವರಣ ರಚಿಸಿ:

ಯಾವಾಗಲೂ ಪಾಸಿಟಿವ್ ಆಗಿ ಯೋಚಿಸುವವರೊಂದಿಗೆ ಕಾಲ ಕಳೆಯಲು ಶ್ರಮಿಸಿ. ನಿಮ್ಮ ಸಾಮರ್ಥ್ಯದ ಬಗ್ಗೆ ಹೆಚ್ಚಾಗಿ ಮಾತನಾಡುವರೊಂದಿಗೆ ಐಡಿಯಾಗಳನ್ನು ಶೇರ್ ಮಾಡಿ. ಪ್ರತಿಯೊಂದಕ್ಕೂ ಕೊಂಕು ಮಾತನಾಡುವವರು ಮತ್ತು ನೆಗೆಟಿವ್ ಆಗಿ ಯೋಚಿಸುವರಿಂದ ದೂರವಿರಿ. ಅದಕ್ಕಿಂತಲೂ ಹೆಚ್ಚಾಗಿ ಅಂತವರೊಂದಿಗೆ ನಿಮ್ಮ ಗುರಿ ಅಥವಾ ಐಡಿಯಾಗಳನ್ನು ಹಂಚಿಕೊಳ್ಳದಿರಿ. ಒಂದು ವೇಳೆ ಹೇಳಿದರೂ ಅವರ ಮಾತುಗಳಿಂದ ನಿಮ್ಮ ಆತ್ಮವಿಶ್ವಾಸಕ್ಕೆ ಹೊಡೆತ ಬೀಳಬಹುದು. ಈ ವಿಷಯ ಸದಾ ನೆನಪಿಟ್ಟುಕೊಳ್ಳಿ.

ಸಣ್ಣ ಗುರಿಗಳನ್ನೇ ಟಾರ್ಗೆಟ್​ ಮಾಡಿ:
ನೀವು ಯಾವುದೇ ಫೀಲ್ಡ್​ಗೆ ಇಳಿಯುವುದಿದ್ದರೂ ನಿಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇರಲಿ. ಇಲ್ಲಿ ಮುಖ್ಯವಾಗಿ ನೀವು ಸಾಗಬೇಕಾದ ಹಾದಿಯ ಬಗ್ಗೆ ಪ್ಲ್ಯಾನ್ ರೂಪಿಸಿಕೊಳ್ಳಿ. ಅದರಲ್ಲೂ ಸಣ್ಣ ಗುರಿಗಳಿಂದಲೇ ಪ್ರಾರಂಭಿಸಿ. ಇದರಿಂದ ಕ್ರಮೇಣ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತಾ ಹೋಗುತ್ತದೆ. ದೊಡ್ಡ ಗುರಿಯನ್ನು ಹೊಂದಿದ್ದರೂ ಅದನ್ನು ಮುಟ್ಟಲು ಬೇಕಾದ ತಯಾರಿ ಮಾಡಿಕೊಳ್ಳಿ. ಅದರಂತೆ ನಿಮ್ಮ ಟಾರ್ಗೆಟ್​ಗಳನ್ನು ವಿಭಾಗಗಳಾಗಿ ವಿಂಗಡಿಸಿ ಒಂದೊಂದೇ ಮೆಟ್ಟಿಲೇರುವತ್ತ ಗಮನ ಹರಿಸಿ.

ನಿಮ್ಮನ್ನೇ ಮೊಟಿವೇಟ್ ಮಾಡಿಕೊಳ್ಳಿ:
ಪ್ರತಿಯೊಂದು ಕಾರ್ಯಕ್ಕೂ ಇಳಿಯುವಾಗ ಒಂಚೂರು ಭಯ ಎಲ್ಲರಲಿರುತ್ತದೆ. ಆದರೆ ಆ ಭಯದ ಹಿಂದೆಯೇ ನಿಮ್ಮ ಗೆಲುವು ಇರುವುದು ನೆನಪಿಟ್ಟುಕೊಳ್ಳಿ. ಹೀಗಾಗಿ ವೈಫಲ್ಯದ ಭಯ ಕಾಡಿದಾಗೆಲ್ಲ, ಸ್ವಯಂ ಪ್ರೇರಣೆ ನೀಡಿ. ಹೆದರಿಕೆಯನ್ನು ಸದಾ ತೊಡದು ಹಾಕಲು ಪ್ರಯತ್ನಿಸಿ. ಪ್ರತಿನಿತ್ಯ ಕನ್ನಡಿ ಮುಂದೆ ನಿಂತು ನೀವು ಅಂದುಕೊಂಡ ಕೆಲಸ ಆಗುತ್ತದೆ ಎಂದು ನಿಮಗೆ ನೀವೇ ಹೇಳಿಕೊಳ್ಳಿ. ಇದರಿಂದ ಮತ್ತಷ್ಟು ಆತ್ಮ ವಿಶ್ವಾಸ ಮೂಡುತ್ತದೆ.

ಸಾಧನೆಗಳನ್ನು ನೆನಪಿಡಿ:
ಆತ್ಮವಿಶ್ವಾಸವನ್ನು ಹೆಚ್ಚಿಸಲು ಉತ್ತಮ ಮಾರ್ಗವೆಂದರೆ ನಿಮ್ಮ ಹಿಂದಿನ ಸಾಧನೆಗಳು. ಅದು ಸಣ್ಣದಿರಲಿ, ದೊಡ್ಡದಿರಲಿ. ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ಗೆಲುವಿನ ಕಹಾನಿ ಇರುತ್ತದೆ. ಅದರಲ್ಲೂ ಇತರರು ಹೀಯಾಳಿಸಿದಾಗ ಧೈರ್ಯದಿಂದಲೇ ಎದುರಿಸಿ ಗೆದ್ದ ಕಥೆ ಕಾಣಿಸುತ್ತದೆ. ಇಂತಹ ಯಶಸ್ಸುಗಳನ್ನು ನೆನಪಿಸಿಕೊಳ್ಳಿ. ಇದನ್ನೇ ನೆನೆಯುತ್ತಾ ನಿಮ್ಮ ಆತ್ಮವಿಶ್ವಾಸವನ್ನು ಬಡಿದೆಬ್ಬಿಸಿ. ಪ್ರತಿಬಾರಿ ಸಾಧಿಸಿಯೇ ತೀರುವೆ ಎಂಬ ಸಂಕಲ್ಪದೊಂದಿಗೆ ಗುರಿಯತ್ತ ಗಮನ ಕೇಂದ್ರೀಕರಿಸಿ.

ನಂಬಿಕೆ ಕಳೆದುಕೊಳ್ಳಬೇಡಿ:
ನಿಮ್ಮನ್ನು ನೀವು ನಂಬುವಷ್ಟು ಪ್ರಪಂಚದಲ್ಲೂ ಬೇರೆ ಯಾರೂ ನಂಬುವುದಿಲ್ಲ ಎಂಬುದು ಸದಾ ನೆನಪಿರಲಿ. ಹೀಗಾಗಿ ನಿಮ್ಮ ನಂಬಿಕೆಯೇ ನಿಮ್ಮ ಯಶಸ್ಸು. ಅದು ಸೋಲಾಗಲಿ, ಗೆಲುವಾಗಲಿ ನಂಬಿಕೆಯನ್ನು ಮಾತ್ರ ಕಳೆದುಕೊಳ್ಳಬೇಡಿ. ಗೆಲುವು-ಸೋಲು ಲೆಕ್ಕಚಾರದ ದುನಿಯಾದಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆದವರು ಮಾತ್ರ ಗೆಲ್ಲುತ್ತಾರೆ ಎಂಬುದು ನೆನಪಿರಲಿ. ಹೀಗಾಗಿ ಯಾವುದನ್ನು ಎದುರಿಸಲು ದೃಢ ನಂಬಿಕೆ ಇರಲಿ. ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇಬೇಕು ಎಂಬ ಸಂಕಲ್ಪದೊಂದಿಗೆ ಹೊಸ ಹೆಜ್ಜೆಯನ್ನಡಿ. ಇಲ್ಲಿ ಸೋತು ಗೆದ್ದವರಿದ್ದಾರೆ...ಗೆದ್ದು ಸೋತವರಿದ್ದಾರೆ...ಇಬ್ಬರಲ್ಲೂ ಇದ್ದದ್ದು ಮಾತ್ರ ಆತ್ಮವಿಶ್ವಾಸ ಎಂಬುದು ಸದಾ ನಿಮಗೆ ನೆನಪಿರಲಿ.

ಇದನ್ನೂ ಓದಿ: ಕ್ಷಣಾರ್ಧದಲ್ಲಿ ತಲೆನೋವಿಗೆ ಗುಡ್​ಬೈ ಹೇಳಲು ಇಲ್ಲಿದೆ ಸರಳ ಮನೆಮದ್ದುಗಳು

First published:August 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...