ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ, ಮಕ್ಕಳನ್ನು (Children) ಒಬ್ಬ ಉತ್ತಮ ನಾಗರೀಕರನ್ನಾಗಿ ಮಾಡಲು ಅವರನ್ನು ಆರಂಭದಿಂದಲೇ ಸಜ್ಜುಗೊಳಿಸಬೇಕು. ಮಗುವಿಗೆ ಒಂದು ಉತ್ತಮ ವಿಷಯವನ್ನು ಅವರ ಪ್ರಾರಂಭ ದಿನದಿಂದಲೇ ನೀಡುವುದು ಭವಿಷ್ಯದಲ್ಲಿ (future) ಅವರ ನೀತಿ, ನಡವಳಿಕೆ, ಬುದ್ಧಿವಂತಿಕೆ, ಅಭ್ಯಾಸ ಕ್ರಮಗಳ ಮೇಲೆ ಪರಿಣಾಮ ಬೀರುತ್ತದೆ. ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ (Physical and mental development) ಬಂದಾಗ ಮಗುವಿನ ಜೀವನದ ಮೊದಲ ಐದು ವರ್ಷಗಳು ಅತ್ಯಂತ ನಿರ್ಣಾಯಕವಾಗಿವೆ. ಏಕೆಂದರೆ ಅವರ ಬುದ್ಧಿ, ಏಕಾಗ್ರತೆ, ಗ್ರಹಿಸುವ ಶಕ್ತಿ, ಕಲಿಯುವ ಮನೋಭಾವ, ನೆನಪಿನಲ್ಲಿಟ್ಟುಕೊಳ್ಳುವ ಪರಿ ಬೇರೆಯವರಿಗಿಂತ ಹತ್ತಾರು ಪಟ್ಟು ಹೆಚ್ಚಿರುತ್ತದೆ.
ಈ ವಯಸ್ಸಿನಲ್ಲಿ ಮಕ್ಕಳು ಸುಲಭವಾಗಿ ಹೊಸ ವಿಷಯಗಳನ್ನು ಅರ್ಥಮಾಡಿಕೊಂಡು ಕಲಿತು ಬಿಡುತ್ತಾರೆ. ಹೀಗಾಗಿ ಈ ವಯಸ್ಸಿನಲ್ಲಿ ಹೊಸ ಪ್ರಪಂಚದ, ವಿಷಯದ ಬಗ್ಗೆ ಮುಕ್ತವಾಗಿ ತಿಳಿದುಕೊಳ್ಳಲು ಪೋಷಕರು ತಮ್ಮ ಮಗುವಿಗೆ ಅನುವು ಮಾಡಿಕೊಡಬೇಕು.
ಮಕ್ಕಳ ಕಲಿಕೆ ಯೋಗಕ್ಷೇಮ ಮತ್ತು ನಡವಳಿಕೆಯ ಬಗ್ಗೆ ಆಲೋಚಿಸಬೇಕು
ಆರಂಭಿಕ ವರ್ಷಗಳಲ್ಲಿ (0 ರಿಂದ 5 ವರ್ಷಗಳು) ಮಕ್ಕಳಿಗೆ ಕಲಿಕೆ, ಯೋಗಕ್ಷೇಮ ಮತ್ತು ನಡವಳಿಕೆಯ ಅಡಿಪಾಯವನ್ನು ಪೋಷಕರು ರೂಪಿಸಬೇಕು. ಇದು ಅವರಿಗೆ ಸಾಮಾಜಿಕ, ಭಾವನಾತ್ಮಕ, ವರ್ತನೆಯ ಮತ್ತು ಆಲೋಚನಾ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಮಗುವಿನ ವ್ಯಕ್ತಿತ್ವವು ಆರಂಭಿಕ ವರ್ಷಗಳಲ್ಲಿ ಅವರ ಮೆದುಳು ಹೇಗೆ ರೂಪುಗೊಂಡಿದೆ ಎಂಬುದರ ಪ್ರತಿಬಿಂಬವಾಗಿದೆ. ಮಕ್ಕಳ ಮೆದುಳು ತ್ವರಿತ ಗತಿಯಲ್ಲಿ ಬೆಳವಣಿಗೆಯಾಗುತ್ತಿರುತ್ತದೆ.
ಪೋಷಕರು ತಮ್ಮ ಮಕ್ಕಳೊಂದಿಗೆ ಗುಣಮಟ್ಟದ ಸಮಯ ಕಳೆಯಬೇಕು
ಮಕ್ಕಳು ಉತ್ತಮವಾದದ್ದನ್ನು ಕಲಿಯಲು, ಅವರ ಮೆದುಳು ಚುರುಕುಗೊಳ್ಳುವಲ್ಲಿ ಪೋಷಕರ ಪಾತ್ರವೂ ಸಹ ದೊಡ್ಡದು. ಪೋಷಕರು ತಮ್ಮ ಮಕ್ಕಳಿಗೆ ತಮ್ಮ ಗರಿಷ್ಠ ಆನುವಂಶಿಕ ಸಾಮರ್ಥ್ಯವನ್ನು ತಲುಪಲು ಆರೋಗ್ಯಕರ ವಾತಾವರಣವನ್ನು ನೀಡಬೇಕೆಂದು ತಜ್ಞರು ಸಲಹೆ ನೀಡುತ್ತಾರೆ.
ಇದನ್ನೂ ಓದಿ: Health Tips: ಮಕ್ಕಳಿಗೆ ಎಷ್ಟು ಪ್ರಮಾಣದಲ್ಲಿ ಮಿಲ್ಕ್ ಕೊಡ್ಬೇಕು? ಎಮ್ಮೆ ಹಾಲು ಅಥವಾ ಹಸು ಹಾಲು ಯಾವುದು ಬೆಸ್ಟ್?
ಪೋಷಕರು ತಮ್ಮ ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬೇಕು ಮತ್ತು ಓದುವುದು, ಆಟವಾಡುವುದು, ನೃತ್ಯ ಮಾಡುವುದು, ಚಿತ್ರಕಲೆ ಮುಂತಾದ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ಮಕ್ಕಳನ್ನು ಉತ್ತೇಜಿಸಬೇಕು ಮತ್ತು ಅದಕ್ಕೆ ಪೂರಕವಾದ ವಾತಾವರಣ, ಪರಿಕರಗಳನ್ನು ಒದಗಿಸುವುದು ಅತ್ಯಗತ್ಯ.
ಮಕ್ಕಳಿಗೆ ಪುಸ್ತಕ ಓದುವ, ಕಥೆ ಹೇಳುವ, ಕೇಳುವ ಅಭ್ಯಾಸವನ್ನು ರೂಢಿಸಬೇಕು
ಓದುವುದು ಮತ್ತು ಸಂಗೀತವನ್ನು ಕೇಳುವಂತೆ ಮಾಡುವುದು ನಿಮ್ಮ ಮಗುವಿಗೆ ಆರಂಭಿಕ ಕಲಿಕೆಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಮತ್ತು ಪೋಷಕರು ಮಕ್ಕಳೊಂದಿಗೆ ಆಡುವುದು ಅವರನ್ನು ಉತ್ತಮ ಮನಸ್ಥಿತಿಯಲ್ಲಿ ಇರಿಸುತ್ತದೆ.
ನಿಮ್ಮ ಕೆಲವು ಕೆಲಸಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದು ಉತ್ತಮ
ಮಕ್ಕಳ ಇಷ್ಟದ ಹಾಡುಗಳಿಗೆ ನೃತ್ಯ ಮಾಡುವುದರಿಂದ ಅವರ ಮೂಡ್ ಹಗುರವಾಗುತ್ತದೆ. ಅಂತೆಯೇ, ನಿಮ್ಮ ಮಕ್ಕಳಿಗೆ ದೈಹಿಕ ಸೌಕರ್ಯವನ್ನು ಒದಗಿಸುವುದು ಅವರಿಗೆ ಒತ್ತಡ-ಮುಕ್ತವಾಗಿರಲು ಮುಖ್ಯವಾಗಿದೆ. ವಯಸ್ಸಿಗೆ ಅನುಗುಣವಾದ ಕೆಲವು ಬುದ್ಧಿಶಕ್ತಿಯ, ಮೋಜಿನ ಚಟುವಟಿಕೆಗಳು ಮಕ್ಕಳನ್ನು ಫೋನ್, ಟಿವಿಯಿಂದ ದೂರವಿಡಬಹುದಾದ ಉತ್ತಮ ಮಾರ್ಗಗಳು.
ಜೊತೆಗೆ ನಿಮ್ಮ ಕೆಲವು ಕೆಲಸಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದು ಅವರಿಗೆ ಕೆಲವು ಹೊಸ ವಿಷಯಗಳನ್ನು ಕಲಿಯಲು ಸಹಕಾರಿಯಾಗುತ್ತದೆ ಮತ್ತು ಮಕ್ಕಳೂ ಸಹ ಇದನ್ನು ಖುಷಿಯಿಂದ ಮಾಡುತ್ತಾರೆ.
ದಿನದಲ್ಲಿ ಕೆಲ ಹೊತ್ತಾದರೂ ಮಕ್ಕಳ ಜೊತೆ ಬೆರೆತು ಅವರು ಏನು ಮಾಡುತ್ತಿದ್ದಾರೆ, ಹೇಗೆಲ್ಲಾ ಗ್ರಹಿಸುತ್ತಾರೆ ಎಂಬುವುದನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಮಕ್ಕಳನ್ನೂ ಪ್ರೋತ್ಸಾಹಿಸುವುದು ಪೋಷಕರ ಜವಾಬ್ದಾರಿ.
ತಜ್ಞರ ಸಲಹೆಗಳೇನು?
ಮಕ್ಕಳ ನರವಿಜ್ಞಾನಿ ಮತ್ತು ಕಂಟಿನ್ವಾ ಕಿಡ್ಸ್‌ನ ಸಹ-ಸಂಸ್ಥಾಪಕಿ ಡಾ.ಪೂಜಾ ಕಪೂರ್ ಅವರು ಮಗುವಿನ ಬೆಳವಣಿಗೆಯನ್ನು ಉತ್ತೇಜಿಸಲು ಕೆಲವು ಸಲಹೆಗಳನ್ನು ಸೂಚಿಸಿದ್ದಾರೆ. 2 ವರ್ಷಕ್ಕಿಂತ ಮುಂಚೆಯೇ ಮಗು ಮೊಬೈಲ್ ಗಳಿಗೆ ಒಡ್ಡಿಕೊಳ್ಳುವುದರಿಂದ ಮಾತು ವಿಳಂಬವಾಗಬಹುದು. ಹೀಗಾಗಿ 2-3 ವರ್ಷಗಳವರೆಗೆ ಮಕ್ಕಳನ್ನು ಮೊಬೈಲ್ ಫೋನ್‌ಗಳಿಂದ ದೂರವಿಡುವುದು ಮುಖ್ಯ ಎಂದು ಅವರು ಹೇಳುತ್ತಾರೆ. ಫೋನ್ ಬಳಕೆ ಅವರ ಕಲಿಯುವ ಸಾಮರ್ಥ್ಯ ಮತ್ತು ಅವರ ಕೋಪದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: Healthy Tips: ಮಳೆಗಾಲದಲ್ಲಿ ಮಕ್ಕಳ ಆರೋಗ್ಯವನ್ನು ಈ ರೀತಿಯಾಗಿ ಕಾಪಾಡಿಕೊಳ್ಳಿ
ನಿಮ್ಮ ಮಕ್ಕಳನ್ನು ಹೊರಗೆ ಇತರೆ ಮಕ್ಕಳ ಜೊತೆ ಆಟವಾಡಲು ಕಳುಹಿಸುವುದರಿಂದ ಅವರು ಹೊಸ ಪ್ರಪಂಚದ ಬಗ್ಗೆ ತಿಳಿದುಕೊಳ್ಳುತ್ತಾರೆ. ಮಕ್ಕಳಿಗೆ ಮಕ್ಕಳೇ ಸಾಟಿ ಎನ್ನುವಂತೆ ಮಾತು, ಮೋಜು ಎಲ್ಲವನ್ನೂ ಅವರೊಟ್ಟಿಗೆ ನಡೆಸುತ್ತಾರೆ. ಈ ವಿಷಯಗಳು ಅವರ ಇಂದ್ರೀಯಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ