ಜೀವನದಲ್ಲಿ (life) ಬರುವ ಸುವರ್ಣ (golden) ಗಳಿಗೆ (moment) ಮದುವೆ (marriage). ಆ ಮದುವೆಯನ್ನು ಫೀಲ್ (Feel) ಮಾಡಬೇಕು. ತುಂಬು ಜೀವನ ನಡೆಸಬೇಕು. ಖುಷಿಯಾಗಿ (happiness), ಜೊತೆ ಜೊತೆಯಾಗಿ ಕೂಡಿ ಕಳೆಯಬೇಕು. ವೈವಾಹಿಕ ಜೀವನವೆಂಬ ಸುಂದರ ಸಾಗರದಲ್ಲಿ ಜೋಡಿ ಮೀನಾಗಿ ಈಸಬೇಕು. ಕಷ್ಟ, ನಷ್ಟ, ಸುಖ, ದುಃಖ, ಕೊರತೆ, ಏನೇ ಬರಲಿ ಎಲ್ಲವನ್ನೂ ಜೊತೆಯಾಗಿ ಎದುರಿಸಬೇಕು. ಬದುಕನ್ನು ಬೋರಿಂಗ್ ಆಗಿಸದೇ, ಮಧುರವಾಗಿಸಬೇಕು. ಇದು ಎಲ್ಲಾ ನವ ವಿವಾಹಿತರ ಕನಸು. ಆದರೆ ಈ ಕನಸು (dream) ಹೆಚ್ಚು ದಿನ ಇರುವುದು ಅನುಮಾನ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬ್ರೆಕಪ್ (breakup), ವಿಚ್ಛೇದನ ಪ್ರಕರಣಗಳು ಹೊಸದಾಗಿ ಮದುವೆಯಾಗುತ್ತಿರುವವರಿಗೆ ಮತ್ತು ಮದುವೆಯಾಗಿ ಹೊಸ ಜೀವನ ನಡೆಸುತ್ತಿರುವವರ ಮನಸ್ಸಿನ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತದೆ.
ಪ್ರೀತಿಯಿಂದ ಬಾಳುವುದೇ ಜೀವನದಲ್ಲಿ ಮುಖ್ಯ
ವೈವಾಹಿಕ, ಸಾಂಸಾರಿಕ ಜೀವನಕ್ಕೆ ಕಾಲಿಟ್ಟಾಗ ಸಾಕಷ್ಟು ಬದಲಾವಣೆಗಳಾಗುತ್ತವೆ. ಒಂದು ಹೆಣ್ಣು ಗಂಡಿನ ಮನೆಗೆ ಸೊಸೆಯಾಗಿ, ಮನೆ ಬೆಳಗುವ ಮಹಾಲಕ್ಷ್ಮೀಯಾಗಿ ಕಾಲಿಡುತ್ತಾಳೆ. ಇಷ್ಟು ದಿನ ತವರು ಮನೆಯಲ್ಲಿ ಸುಖವಾಗಿ ಕಾಲ ಕಳೆದ ಆಕೆಗೆ ಗಂಡನ ಮನೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಒಂದು ಸವಾಲು. ಹೀಗಿದ್ದಾಗ ಪತಿ ಮತ್ತು ಪತ್ನಿಯ ನಡುವೆ ಮುನಿಸು, ಕೋಪ, ಬೇಡದ ವಿಷಯದ ಬಗ್ಗೆ ಚರ್ಚೆ ಅದೇ ಮುಂದೆ ಜಗಳಕ್ಕೂ ಕಾರಣವಾಗುತ್ತದೆ.
ಇಂತಹ ಚಿಕ್ಕ-ಪುಟ್ಟ ಮನಸ್ತಾಪ ಎಲ್ಲರ ಮನೆಯಲ್ಲೂ, ಎಲ್ಲಾ ಜೋಡಿಗಳ ಮಧ್ಯೆ ನಡೆಯುತ್ತದೆ. ಆದರೆ ಈ ಚಿಕ್ಕ-ಪುಟ್ಟ ಮನಸ್ತಾಪಗಳನ್ನು ತೆಗೆದು ಹಾಕಿ, ಮತ್ತೆ ಖುಷಿಯಾಗಿ ಸಮಾಧಾನವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಂಡು ಮತ್ತೆ ಪ್ರೀತಿಯಿಂದ ಬಾಳುವುದೇ ಜೀವನದಲ್ಲಿ ಮುಖ್ಯ. ಇದು ಹೊಸ ಜೀವನವನ್ನು ಕೊನೆಯವರೆಗೂ ಕಟ್ಟಿ ಕೊಡುತ್ತದೆ. ದ್ವೇಷ, ರೋಷಕ್ಕೆ ಜಾಗ ಮಾಡಿಕೊಡದೇ ಉತ್ತಮ ಬದುಕು ಹೊಂದಬೇಕು. ಹಾಗಾದರೆ ನಿಮ್ಮ ವೈವಾಹಿಕ ಜೀವನ ಮತ್ತಷ್ಟು ಸುಂದರ, ಸಿಹಿಯಾಗಲು ಇಲ್ಲಿವೆ ಕೆಲ ಟಿಪ್ಸ್…
ಮದುವೆಯ ನಂತರ ಆದಷ್ಟು ಹೊರಗೆ ಒಬ್ಬೊಬ್ಬರೇ ಓಡಾಡುವುದನ್ನು ತಪ್ಪಿಸಿ. ನಿಮ್ಮ ಜೀವನ ಸಂಗಾತಿಯನ್ನು ಕರೆದುಕೊಂಡು ಸುತ್ತಾಡಲು ಹೋಗಿ. ನಿಮ್ಮ ಊರು, ಕುಟುಂಬ ಸದಸ್ಯರು, ಸಂಬಂಧಿಕರನ್ನು ಪರಿಚಯಿಸಿ. ನಿಮ್ಮ ಸಂಗಾತಿಗಾಗಿ ನಿಮ್ಮ ಸಮಯವನ್ನು ತೆಗೆದಿಡಿ.
ಮೊಬೈಲ್, ಚಾಟಿಂಗ್ ನಲ್ಲಿ ಸಮಯ ಕಳೆಯದೇ, ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳಿ. ಇಬ್ಬರ ಇಷ್ಟ ಮತ್ತು ಮನೆಯ ಜವಾಬ್ದಾರಿಯ ಕುರಿತು ಸಮನಾದ ಯೋಜನೆ ಹಾಕಿಕೊಳ್ಳಿ. ಇಷ್ಟದ ತಿಂಡಿ, ತಿನಿಸುಗಳನ್ನು ಒಟ್ಟಿಗೆ ಮಾಡುತ್ತ, ಎಂಜಾಯ್ ಮಾಡಿ. ಅಡುಗೆ ಮನೆ ಕೇವಲ ಹೆಂಡತಿಗೆ ಸೀಮಿತವಾಗಿಲ್ಲ. ನಿಮ್ಮ ಹೆಂಡತಿಯ ಚಟುವಟಿಕೆಗಳಲ್ಲಿ ನೀವೂ ಭಾಗಿಯಾಗಿ. ಆಗ ಜೀವನದ ಆನಂದ ದುಪ್ಪಟ್ಟಾಗುತ್ತದೆ.
ವಿಚಾರಗಳ ನಡುವೆ ವ್ಯತ್ಯಾಸ ಉಂಟಾಗಿ ಅದು ಮಾತಿಗೆ ಮಾತು ಬೆಳೆದಾಗ ಆ ವಿಷಯವನ್ನು ಆದಷ್ಟು ಮುಂದುವರೆಸದೇ ಚರ್ಚಿಸದೆ ಕೆಲ ಹೊತ್ತು ಸುಮ್ಮನಿರಿ. ನಂತರ ಒಬ್ಬರಿಗೊಬ್ಬರು ಒಂದು ಸ್ಮೈಲ್ ಮಾಡಿ, ಕಹಿಯನ್ನು ಮರೆಯಲು ಪ್ರಯತ್ನಿಸಿ.
ಫ್ಯಾಮಿಲಿ ಫಂಕ್ಷನ್, ಪಾರ್ಟಿಗಳಿಗೆ ಜೊತೆಯಾಗಿ ಹೋಗಿ. ಒಬ್ಬರನ್ನೊಬ್ಬರು ಗೌರವಿಸಿ. ಪಾರ್ಟಿಯಲ್ಲಿ ಒಟ್ಟಿಗೆ ಇರಿ. ಪರಸ್ಪರ ಮರ್ಯಾದೆ ಕೊಡಿ. ಸಂಗಾತಿಯ ಒಳ್ಳೆಯ ಕೆಲಸದ ಬಗ್ಗೆ ಮಾತನಾಡಿ. ಇದರಿಂದ ನಿಮ್ಮಿಬ್ಬರ ನಡುವಿನ ಹೊಂದಾಣಿಕೆ ಗಟ್ಟಿಗೊಳ್ಳುತ್ತದೆ.
ಪರಸ್ಪರ ಪ್ರೀತಿ, ಭಾವನೆಯನ್ನು ಹಂಚಿಕೊಳ್ಳಿ. ನೀವು ಒಟ್ಟಿಗೆ ಕಳೆಯುವ ಸಮಯದಲ್ಲಿ ಪ್ರೀತಿ, ಪ್ರೇಮವೇ ಹೆಚ್ಚು ಜಾಗವನ್ನು ಆವರಿಸಿಕೊಳ್ಳುವಂತೆ ನೋಡಿಕೊಳ್ಳಿ. ಖರ್ಚು ವೆಚ್ಚಗಳು ಇಬ್ಬರಿಗೂ ಗೊತ್ತಿರುವಂತೆ ನೋಡಿಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಇಬ್ಬರೂ ಸಮನಾಗಿ ಪಾಲು ಪಡೆಯಿರಿ. ಖರ್ಚು ವೆಚ್ಚದ ಬಗ್ಗೆ ಪಟ್ಟಿ ಮಾಡಿಡಿ.