HOME » NEWS » Lifestyle » DOES THE POWER OF THINKING COLLAPSE WHEN THERE IS A ANXIETY CONDITION RH

ಉದ್ರೇಕದ ಮನ ಸ್ಥಿತಿ ಇದ್ದಾಗ ಆಲೋಚಿಸುವ ಶಕ್ತಿ ಕುಸಿಯುವುದೇ?; ಮನೋವಿಜ್ಞಾನದ ಅಧ್ಯಯನಗಳು ಹೇಳುವುದೇನು?

ಐದಾರು ದಶಕಗಳ ಹಿಂದಿನ ಪತ್ರಿಕಾ ವರದಿ ಎಂದಾಗ ಸತ್ಯಾಂಶದ ಬಗ್ಗೆ ಸಂದೇಹಗಳು ಮೂಡಿದರೂ ಅವುಗಳು ಅತಿಭಾವುಕತೆಯನ್ನು ಕದಡುವಂತಹದ್ದು ಆಗಿರುತ್ತಿರಲಿಲ್ಲ. ಇದಕ್ಕೆ ಬಹು ಮುಖ್ಯ ಕಾರಣವೆಂದರೆ ಸುದ್ಧಿ ವರದಿಯಲ್ಲಿ ಸತ್ಯವನ್ನು ಕಂಡುಕೊಳ್ಳುವ ಪ್ರಯತ್ನವಿದೆ ಎನ್ನುವುದರತ್ತ ಪತ್ರಿಕೆಗಳು ಗಮನ ಹರಿಸುತ್ತಿದ್ದವು. ಆದರಿಂದು ಸುದ್ಧಿ, ಸಮಾಚಾರಗಳನ್ನು ಬಹಳ ವೇಗವಾಗಿ ತಲುಪಿಸುವಂತಹ ತಂತ್ರಜ್ಞಾನದ ಲಭ್ಯವಿದ್ದರೂ ಸುದ್ಧಿಯ ಆಸ್ಫೋಟಕ್ಕೆ ಹೆಚ್ಚು ಆದ್ಯತೆ. 

news18-kannada
Updated:August 15, 2020, 7:20 AM IST
ಉದ್ರೇಕದ ಮನ ಸ್ಥಿತಿ ಇದ್ದಾಗ ಆಲೋಚಿಸುವ ಶಕ್ತಿ ಕುಸಿಯುವುದೇ?; ಮನೋವಿಜ್ಞಾನದ ಅಧ್ಯಯನಗಳು ಹೇಳುವುದೇನು?
ಡಾ. ಅಚಾರ್ಯ ಶ್ರೀಧರ್.
  • Share this:
ಉದ್ರೇಕದ ಮನದ ಸ್ಥಿತಿ ಇದ್ದಾಗ ಆಲೋಚಿಸುವ ಶಕ್ತಿ ಕುಸಿಯುವುದೇ? ಎಂಬ ಪ್ರಶ್ನೆಗೆ  ಮನೋವಿಜ್ಞಾನದ ಅಧ್ಯಯನಗಳಲ್ಲಿ ಹೌದು ಎಂಬ ಉತ್ತರ ಸಿಗುತ್ತದೆ. ಹುಸಿ ಸುದ್ಧಿಯ ಮೂಲಕವೂ ಮಾನಸಿಕ ಆಘಾತ ತಲ್ಲಣ, ಅಸಹಾಯಕತೆ ಮತ್ತು ಭೀತಿಯನ್ನು ಉಂಟುಮಾಡಿಸಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದು 1935ರ ಸಮಯದಲ್ಲಿ ಅಮೆರಿಕದಲ್ಲಿ ಪ್ರಸರಣಗೊಂಡ ರೇಡಿಯೋ ಕಾರ್ಯಕ್ರಮ ಒಂದು.

ಇದರಂತೆ ನ್ಯುಜರ್ಸಿ ನಗರದ ಮೇಲೆ ಮಂಗಳ ಗ್ರಹದ ಜೀವಿಗಳು ಭಯಂಕರ ದಾಳಿ ಮಾಡಿವೆ ಎನ್ನುವ ಹುಸಿ ಸುದ್ದಿಯನ್ನು ರೇಡಿಯೋ ಮೂಲಕ ಬಿತ್ತರಿಸಲಾಯಿತು. ಸುದ್ಧಿ ಕೇಳಿ ಬರುತ್ತಿದ್ದಂತೆಯೇ ಆ ನಗರದ ಜನರು ಭಯಭೀತರಾಗಿ ಎಲ್ಲಂದರಲ್ಲಿ ಓಡಿಹೋಗಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದರು. ಇದೊಂದು ಹುಸಿ ಸುದ್ಧಿ ಎನ್ನುವುದು ಗೊತ್ತಾದ ಮೇಲೂ ಜನರ ಮನಸಿನಲ್ಲಿದ್ದ ಭೀತಿಯ ಲಕ್ಷಣಗಳು ಬದಲಾಗಲಿಲ್ಲ. ಈ ಕಾರ್ಯಕ್ರಮದ ಬಗ್ಗೆ ವಿವಾದಗಳು ಇದ್ದಾಗ್ಯೂ ರೇಡಿಯೋ ಸುದ್ಧಿಗಳ ಮೂಲಕವೂ ಜನರ ನಂಬಿಕೆ, ಅಪನಂಬಿಕೆಗಳನ್ನು ಕದಡಬಹುದು ಎನ್ನುವುದು ಸ್ಪಷ್ಟವಾಗಿ ತಿಳಿದುಬಂತು. ಹಾಗೆಯೇ, ಅಮೆರಿಕದ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರು ಒಂದಲ್ಲಾ ಒಂದು ಪಿತೂರಿ ತತ್ವವನ್ನು ನಂಬುತ್ತಾರೆ ಮತ್ತು ಅದನ್ನೇ ಸಾಮಾಜಿಕ ಜಾಲಾತಾಣಗಳ ಮೂಲಕವೂ ಹಂಚಿಕೊಳ್ಳುತ್ತಾರೆ ಎನ್ನುವುದನ್ನು ಅಧ್ಯಯನವೊಂದು ತಿಳಿಸುತ್ತದೆ.

ವಿಜ್ಞಾನ ಮತ್ತು ರಾಜಕೀಯ ವಿಷಯಗಳ ಬಗೆಗಿನ ತಾರ್ಕಿಕ, ವೈಜ್ಞಾನಿಕ ವಿವರಣೆ, ವಿಮರ್ಶೆಗಳನ್ನು ನಂಬುವವರಿಗಿಂತಲೂ, ಅಸೂಯೆ, ಅಸಹಾಯಕತೆ ಮತ್ತು ಹಗೆತನದ ಮನೋಭಾವಗಳನ್ನು ನಂಬುವಂತಹ ಮನಸಿರುವವರ ಸಂಖ್ಯೆ ಅಧಿಕವಾಗಿರುತ್ತದೆ. ಹೀಗಾಗಿ ಪರಿಚಿತರು ಸಮ್ಮತಿಸಿದ ಡಿಜಿಟಲ್‌ ಮಾಧ್ಯಮದ ಸುದ್ಧಿಯೊಂದನ್ನು ತಕ್ಷಣದಲ್ಲಿ ಅನುಮೋದಿಸುವವರ ಸಂಖ್ಯೆ ಹೆಚ್ಚು; ಕೊವಿಡ್-19 ವೈರಾಣು ಹುಟ್ಟಿಸಿದ್ದು ಚೀನಿಯರು ಎನ್ನುವಂತಹ ಅಭಿಪ್ರಾಯ ಇಂತಹುದರ ಒಂದು ಉದಾಹರಣೆ.

ಒಳಸಂಚು ವಿವರಣೆಗಳತ್ತ ಜನಮನಸ್ಸು ಹರಿಯುವುದೇಕೆ?

ಸದ್ಯದ ಕಾಲಘಟ್ಟದಲ್ಲಿ ಪ್ರತಿಯೊಂದು ಸಾಮಾಜಿಕ, ರಾಜಕೀಯ, ವೈದ್ಯಕೀಯ ಮಹತ್ವದ ವಿಷಯ, ಪ್ರಕರಣದ ವಿವರಣೆಗಳಲ್ಲಿ ಒಳಸಂಚು ಅಥವಾ ಪಿತೂರಿ (ಕಾನ್ಸ್‌ಪೆರಿಸಿ)ಯ ದೃಷ್ಟಿಕೋನವೇ ಮುಂಚೂಣಿಗೆ ಬಂದುಬಿಡುತ್ತದೆ. ಜನರ ಮನಸಿನಲ್ಲಿ ದುಗುಡ, ಪೂರ್ವಗ್ರಹ ಮತ್ತು ಅಸಹಾಯಕತೆಯನ್ನು ಹೆಚ್ಚಿಸಿ ಪರಾವಲಂಬನೆಯತ್ತ ಮನಸು ಹೋಗುವಂತೆ ಮಾಡುವುದೇ ಇದರ ಗುರಿ. ಪಿತೂರಿ ವಿವರಣೆಗಳಿಗೆ ಅನುಯಾಯಿಗಳ ಸಂಖ್ಯೆ ವಿಪರೀತವಿರುವುದಕ್ಕೆ ಮುಖ್ಯ ಕಾರಣ ಅವಧಾನದ(ಅಟೆಂಶನ್) ರೀತಿ. ಉದ್ವೇಗ, ಮನೋಕಂಪನದ ಸಂಗತಿಗಳು ತಕ್ಷಣದಲ್ಲಿ ಗಮನ ಸೆಳೆಯಬಲ್ಲದು ಎನ್ನುತ್ತವೆ ಮನೋವೈಜ್ಞಾನಿಕ ಅವಧಾನದ ತತ್ವಗಳು.

ಪಿತೂರಿ ತತ್ವಗಳ ಹಿಂದಿರುವ ಮನೋಸ್ಥಿತಿಗಳು ಅವಧಾನದ ನಿಯಮಗಳ ಆನ್ವಯಿಕೆಯ ಮೂಲಕ ಸೃಷ್ಟಿಸಲೂಬಹುದು, ಬಲಪಡಿಸಲೂಬಹುದು. ಹೇಗೆಂದರೆ ಸುದ್ಧಿಯೊಂದರಲ್ಲಿ ನಿಜ, ನಿಜವಲ್ಲ ಎನ್ನುವ ವಿಚಾರವು ಮೂಡುವುದಕ್ಕೂ ಮುಂಚಿತವಾಗಿ ಭಾವುಕತನ ಕೆದಕುವ ವಿಷಯಗಳಿಗೆ ಒತ್ತು ಕೊಡುವುದು. ಓದುಗರ/ನೋಡುಗರ ಭಾವುಕ ಸ್ಥಿತಿಗಳನ್ನು ಉದ್ರೇಕಿಸುವುದರ ಮೂಲಕ ಸುದ್ಧಿಯ ಸತ್ವ, ಸತ್ಯಗಳನ್ನು ಮರೆಮಾಚಿಸುವುದು ಸುಲಭ. ಈಗಂತು ಓದುಗ, ವೀಕ್ಷಕನ ಮನಸಿನಲ್ಲಿ ಉದ್ರೇಕದ ಸ್ಥಿತಿಯನ್ನು ಉಂಟುಮಾಡುವುದಕ್ಕೆ ಸುಲಭದ ತಂತ್ರಜ್ಞಾನ, ಸರಳ ಪರಿಕರಗಳು, ವ್ಯಕ್ತಿ ಪೂಜೆ ಮತ್ತು ರೋಗದ ಪರಿಸ್ಥಿತಿಗಳು ಪ್ರಶಸ್ತವಾಗಿವೆ.

ಜನಸಾಮಾನ್ಯರ ನಂಬಿಕೆಗಳನ್ನು ಹುಸಿ ಮಾಡಿ ತೋರಿಸುವಂತಹ ಅವೈಜ್ಞಾನಿಕ ವಿವರಣೆ ಮತ್ತು ಪ್ರಯೋಗಗಳು, ಎರಡನೆಯದಾಗಿ ಅಧಿಕಾರವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಳ್ಳುವ ರಾಜಕೀಯ ಮುಖಂಡನೊಬ್ಬನ ಮಹದಾಸೆ. ಈ ಎರಡು ಸ್ಥಿತಿಯಲ್ಲಿಯೂ ವ್ಯವಸ್ಥೆಯ ಮೇಲೆ ಹತೋಟಿ ಸಾಧಿಸುವ ಪರಿಯೇ ಮುಖ್ಯವಾಗಿರುತ್ತದೆ. ಇದನ್ನು ಅತಿ ಸುಲಭವಾಗಿ ಸಾಧಿಸುವ ದಾರಿಯೆಂದರೆ ಪ್ರಚಲಿತ ಸುದ್ಧಿಗಳಲ್ಲಿ ದ್ವಂದ್ವ, ಗೊಂದಲಗಳು ಹುಟ್ಟುವಂತೆ ಮಾಡುವುದು. ಗೊಂದಲಗಳನ್ನು ಮೂಡಿಸುವುದಕ್ಕೆ ಧರ್ಮ, ದೇಶಭಕ್ತಿಗಳ ಬಗ್ಗೆಯಿರುವ ರೂಢಿಗತ ವರ್ತನೆ ಮತ್ತು ಪೂರ್ವಗ್ರಹಗಳನ್ನು ಮತ್ತೆ ಮತ್ತೆ ಕೆದಕುವುದು. ಪುರಾಣ, ಇತಿಹಾಸದ ಸಂಗತಿಗಳೂ ಸಹ ಪಿತೂರಿ ತತ್ವಕ್ಕೆ ವಸ್ತುವಾಗಬಲ್ಲದು. ಸಾಹಸ ಪ್ರವೃತ್ತಿ, ಸಮರ, ಸಂಹಾರದ ಸನ್ನಿವೇಶಗಳು ಮೂಡಿಸುವ ತಕ್ಷಣದ ಉದ್ವೇಗಗಳು ಸಾಹಸಿಯೊಬ್ಬನತ್ತ ಅವಲಂಬನೆಯನ್ನು ಹೆಚ್ಚಿಸುವುದರಿಂದ ಇರಬಹುದು ಎನ್ನಬಹುದೇನೋ? ಹೀಗಾಗಿ ಸಾಹಸಿ, ಸಮರ್ಥ ಎನ್ನುವಂತಹ ಬಿರುದುಗಳನ್ನು ಕೃತಕವಾಗಿ ಸೃಷ್ಟಿಸುವ ಕಾರ್ಯಯೋಜನೆಗಳಲ್ಲಿ ಒಳಸಂಚಿನ ತತ್ವಗಳು ಅತ್ಯುತ್ತಮ ನೆಲೆಯನ್ನು ಒದಗಿಸಿಕೊಡುತ್ತವೆ.ಸದ್ಧು ಮಾಡಿದರಷ್ಟೇ ಸುದ್ಧಿಯೆ?

ಕಳೆದ ಐದಾರು ದಶಕಗಳ ಹಿಂದಿನ ದಿನ ಪತ್ರಿಕೆಗಳ ವರದಿಯತ್ತ ಕಣ್ಣು ಹಾಯಿಸಿದಾಗ ತಕ್ಷಣದಲ್ಲಿ ಗಮನ ಸೆಳೆಯುವ ವಿಷಯವೆಂದರೆ ಕುತೂಹಲ, ವಿಚಾರ, ನಂಬಿಕೆ, ಸೋಜಿಗವನ್ನು ಜಾಗೃತಗೊಳಿಸುವ ಮನದ ಸ್ಥಿತಿ. ಗೊತ್ತಿರದ ಸಂಗತಿಯೊಂದರಲ್ಲಿ ಅಡಗಿರುವ ಸತ್ಯಾಸತ್ಯತೆಗಳನ್ನು ಗುರುತಿಸುವುದಕ್ಕೆ ಸಾಧ್ಯವಾಗುವಂತಹ ಸುದ್ಧಿಗಳ ಪ್ರಸರಣಕ್ಕಷ್ಟೇ ಆದ್ಯತೆ ಸಿಗುತ್ತಿತ್ತು. ಹೀಗಾಗಿ ಪತ್ರಿಕಾ ವರದಿ ಎಂದಾಗ ಸತ್ಯಾಂಶದ ಬಗ್ಗೆ ಸಂದೇಹಗಳು ಮೂಡಿದರೂ ಅವುಗಳು ಅತಿಭಾವುಕತೆಯನ್ನು ಕದಡುವಂತಹದ್ದು ಆಗಿರುತ್ತಿರಲಿಲ್ಲ. ಇದಕ್ಕೆ ಬಹು ಮುಖ್ಯ ಕಾರಣವೆಂದರೆ ಸುದ್ಧಿ ವರದಿಯಲ್ಲಿ ಸತ್ಯವನ್ನು ಕಂಡುಕೊಳ್ಳುವ ಪ್ರಯತ್ನವಿದೆ ಎನ್ನುವುದರತ್ತ ಪತ್ರಿಕೆಗಳು ಗಮನ ಹರಿಸುತ್ತಿದ್ದವು. ಆದರಿಂದು ಸುದ್ಧಿ, ಸಮಾಚಾರಗಳನ್ನು ಬಹಳ ವೇಗವಾಗಿ ತಲುಪಿಸುವಂತಹ ತಂತ್ರಜ್ಞಾನದ ಲಭ್ಯವಿದ್ದರೂ ಸುದ್ಧಿಯ ಆಸ್ಫೋಟಕ್ಕೆ ಹೆಚ್ಚು ಆದ್ಯತೆ. ಸದ್ಧು ಮಾಡಿದರಷ್ಟೇ ಸುದ್ಧಿ ಎನ್ನುವ ನಿಲುವೇ ಸ್ಪೋಟಕತೆಯನ್ನು ಸೂತ್ರವಾಗಿಸಿಕೊಂಡಿದೆ.

ಸರಳ ವಿದ್ಯುನ್ಮಾನದ ಸಲಕರಣೆಗಳ ಮೂಲಕವೂ ಆಯ್ದ ಮಾಹಿತಿಗಳನ್ನು ಸುದ್ಧಿಯ ರೂಪದಲ್ಲಿ ಹೊರತರುವುದಿಂದು ಬಹಳ ಸುಲಭವಾಗಿರುವುದರಿಂದ ಸುದ್ಧಿ ಸಮಾಚಾರಗಳ ಹಿಂದಿರಬೇಕಾದ ಸತ್ಯ, ಸಾಹಿತ್ಯವು ಕ್ಷಣ ಕ್ಷಣದ ಆವೇಗಕ್ಕೆ ಸಿಕ್ಕಿಕೊಂಡು ಮನಕೆಣಕಿಸುವ ಪದ ಸಾಲುಗಳ ಮೂಲಕ ವ್ಯಕ್ತಿಯ ಗಮನಕ್ಕೆ ಬರುತ್ತದೆ. ಭಾವಾವೇಗಗಳಿಂದ ಹೊರಹೊಮ್ಮುವ ಇವುಗಳು ವ್ಯಕ್ತಿಯ ಮನವನ್ನು ಆವರಿಸಿ ಅರಿವಿನ ಬಲವನ್ನು ಅದುಮಿರಿಸುತ್ತದೆ. ಹೀಗಾದಾಗ, ನಂಬಿಕೆ, ಅಭಿಪ್ರಾಯಗಳು ವಿಚಾರ, ತರ್ಕದ ಬದಲಿಗೆ ಮಾಹಿತಿ ಒತ್ತಡ ಮತ್ತು ಸಾಮೂಹಿಕವಾಗಿ ಹಂಚಿಕೊಂಡ ಉದ್ರಿಕ್ತತೆಯ ಫಲವಾಗಿ ಬಲಗೊಳ್ಳುತ್ತವೆ. ಇದನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ ತಂತ್ರಜ್ಞಾನಧಾರಿತ ಪ್ರಸರಣದ ವಿಧ ಮತ್ತು ವ್ಯಕ್ತಿ ಆರಾಧಕರ ಹಿತಾಸಕ್ತಿಗಳು.

ಇದನ್ನು ಓದಿ: ಐಫೆಲ್ ಗೋಪುರ ಮಾರಿದ್ದೂ, ಡ್ರೋಣ್​ಗಳನ್ನು ಹಾರಿಸಿದ್ದೂ… ನಯವಂಚಕರ ನಮೂನೆಗಳು

ಕೋವಿಡ್-19 ವಿಶ್ವವ್ಯಾಪಕವಾಗುತ್ತಿರುವ ಸನ್ನಿವೇಶದಲ್ಲಿ ರೋಗಕ್ಕೆ ಕಾರಣಗಳನ್ನು ಗುರುತಿಸುವ ವೈಜ್ಞಾನಿಕ ಸಂಶೋಧನೆಗಳನ್ನು ಅಲ್ಲಗೆಳೆಯುವ ಪ್ರಯತ್ನಗಳು ಹೇರಳವಾಗಿವೆ. ಇವುಗಳ ಹಿನ್ನೆಲೆಯಲ್ಲಿ ರಾಜಕೀಯ ದುರುದ್ದೇಶಗಳ ಪ್ರಭಾವವಿರುವುದರಲ್ಲಿ ಸಂದೇಹವಿಲ್ಲ. ಈ ಸಮಯದಲ್ಲಿಯೇ ದೇಶಭಕ್ತಿಯ ಹೆಸರಲ್ಲಿ ಹೊರ ಶತ್ರುವೊಬ್ಬನನ್ನು ಸೃಷ್ಟಿಸಿ ಅವರ ವಿರುದ್ಧ ಸಮರ, ಜನಾಕ್ರೋಶ ತಿರುಗಿಸುವುದೂ ಕೂಡ ಒಳಸಂಚಿಗೆ ಸಂಬಂಧಿಸಿದ ರೀತಿಯೇ ಆಗಿರುತ್ತದೆ ಮತ್ತು ರೋಗದ ನೆವದಿಂದ ವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿರುವುದನ್ನು ಮರೆಮಾಚುವುದಕ್ಕಾಗಿಯೇ ಹುಸಿ ಸುದ್ಧಿ, ಸಮಾಚಾರಗಳನ್ನು ಸೃಷ್ಟಿಸಿ ಅನುಯಾಯಿಗಳ ಮೂಲಕ ಹಂಚುವುದಕ್ಕೂ ಇಂದಿನ ತಂತ್ರಜ್ಞಾನದ ಮಾಧ್ಯಮಗಳು, ಅದರಲ್ಲಿಯೂ ಸಾಮಾಜಿಕ ಜಾಲತಾಣಗಳ ದುರ್ಬಳಕೆ ಹೆಚ್ಚಾಗಿಯೇ ಇವೆ. ಪಿತೂರಿ ತತ್ವಗಳ ಆಧಾರಿತ ವಿವರಣೆಗಳ ಪ್ರಭಾವವನ್ನು ತಡೆಗಟ್ಟುವಂತಹ ಪ್ರಯತ್ನಗಳು ವ್ಯಕ್ತಿ ಮಟ್ಟದಲ್ಲಿಯೇ ಆಗಬೇಕು. ವ್ಯಕ್ತಿ ಸ್ವಭಾವಗಳು, ಆತಂಕ ನಿವಾರಣ ಕ್ರಮ ಮತ್ತು ವಿಷಯ ವಿಮರ್ಶಿಸುವ ಅಭ್ಯಾಸಗಳನ್ನು ಬಲಗೊಳಿಸಿಕೊಳ್ಳುವುದರ ಮೂಲಕ ಪಿತೂರಿ ತತ್ವಗಳನ್ನು ನಿರಾಕರಿಸುವ ಗುಣ ಗಟ್ಟಿಯಾಗಬಲ್ಲದು.

ಲೇಖಕರು: ಡಾ. ಆಚಾರ್ಯ ಶ್ರೀಧರ, ಮನೋವಿಜ್ಞಾನಿ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ http://www.bruhanmati.com/

Published by: HR Ramesh
First published: August 15, 2020, 7:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories