ದಾಲ್ಚಿನ್ನಿ (Cinnamon) ಎಂದರೆ ತಕ್ಷಣಕ್ಕೆ ನೆನಪಾಗೋದು ಮಸಾಲೆ ಪದಾರ್ಥ ಅನ್ನೋದು. ದಾಲ್ಚಿನ್ನಿಯನ್ನು ನಮ್ಮಲ್ಲಿ ಸಾವಿರಾರು ವರ್ಷಗಳಿಂದ ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ. ಅಂದಹಾಗೆ ಇದು ಕೇವಲ ಪಾಕಪದ್ಧತಿಯಲ್ಲಿ ಬಳಸುವ ಮಸಾಲೆ ಪದಾರ್ಥ ಮಾತ್ರವಲ್ಲ, ಬದಲಾಗಿ ದಾಲ್ಚಿನ್ನಿಯಲ್ಲಿ ಸಾಕಷ್ಟು ಔಷಧೀಯ ಗುಣಗಳೂ ಇವೆ. ಹಲವಾರು ಆರೋಗ್ಯ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡುವ ಅತ್ಯಂತ ಪ್ರಬಲವಾದ ಮಸಾಲೆ ಪುಡಿಗಳಲ್ಲಿ (Masala Powder) ಇದೂ ಒಂದಾಗಿದೆ. ಅಷ್ಟಕ್ಕೂ ದಾಲ್ಚಿನ್ನಿ ತಿಂದರೆ ಮಧುಮೇಹ (Diabetes) ಕಡಿಮೆಯಾಗುತ್ತಾ? ಈ ಬಗ್ಗೆ ಅಧ್ಯಯನಗಳು ಏನು ಹೇಳುತ್ತವೆ ಅನ್ನೋದನ್ನು ನೋಡೋಣ.
ದಾಲ್ಚಿನ್ನಿ ತಿಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತಾ?
ಸುದ್ದಿ ಮಾಧ್ಯಮದ ವರದಿಯೊಂದರ ಪ್ರಕಾರ ಮಧುಮೇಹಿಗಳು ದಾಲ್ಚಿನ್ನಿಯನ್ನು ಪಥ್ಯದ ಪೂರಕವಾಗಿ ಮಾತ್ರ ಬಳಸಬಹುದು. ಇದು ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಕೆಲವು ಅಧ್ಯಯನಗಳು ಅದರ ಪ್ರಯೋಜನಗಳನ್ನು ವಿವರಿಸಿದರೆ ಮತ್ತೆ ಕೆಲವು ಈ ಬಗ್ಗೆ ಸ್ಪಷ್ಟತೆ ನೀಡಿಲ್ಲ. ಅಲ್ಲದೇ ಪ್ರತಿ ಅಧ್ಯಯನದಲ್ಲಿ ವಿಭಿನ್ನ ಪ್ರಮಾಣದ ಮತ್ತು ಬೇರೆ ಬೇರೆ ವಿಧದ ದಾಲ್ಚಿನ್ನಿ ಬಳಸಲಾಗಿರುವುದರಿಂದ ಫಲಿತಾಂಶಗಳನ್ನು ಹೋಲಿಸುವುದು ಕಷ್ಟ.
ಅಧ್ಯಯನಗಳು ಏನು ಹೇಳುತ್ತವೆ?
2012 ರಲ್ಲಿ ಈ ಕುರಿತು ಒಂದು ಅಧ್ಯಯನವನ್ನು ನಡೆಸಲಾಯ್ತು. ಈ ವೇಳೆ ಟೈಪ್ 2 ಮಧುಮೇಹ ಹೊಂದಿರುವ 69 ಚೈನೀಸ್ ಜನರನ್ನು ಪರೀಕ್ಷೆಗೆ ಒಳಪಡಿಸಲಾಯ್ತು. ಈ ವೇಳೆ ಒಂದು ಗುಂಪು ಪ್ರತಿದಿನ 120 ಮಿಲಿಗ್ರಾಂ ದಾಲ್ಚಿನ್ನಿ ಸೇವಿಸಿತು. ಮತ್ತೊಂದು ಗುಂಪು 360 ಮಿಲಿಗ್ರಾಂಗಳನ್ನು ದಾಲ್ಚಿನ್ನಿ ತೆಗೆದುಕೊಂಡಿತು. ಮೂರು ತಿಂಗಳುಗಳ ನಂತರ ದಾಲ್ಚಿನ್ನಿ ಸೇವಿಸಿದ ಗುಂಪಿನವರಲ್ಲಿ A1C ಮಟ್ಟಗಳನ್ನು ಕಡಿಮೆಯಾಗಿದ್ದು ಕಂಡುಬಂತು.
ಇದನ್ನೂ ಓದಿ: Modi ಸರ್ಕಾರದಿಂದ ಗುಡ್ ನ್ಯೂಸ್; Diabetes, BP, Cancer Medicine ಔಷಧಿಗಳ ಬೆಲೆ ಇಳಿಕೆ
ಅಲ್ಲದೇ 2013 ರ 10 ಪ್ರಯೋಗಗಳ ಮೆಟಾ-ವಿಶ್ಲೇಷಣೆಯು ದಾಲ್ಚಿನ್ನಿ ಸೇವನೆಯು ರಕ್ತದಲ್ಲಿನ ಸಕ್ಕರೆ, ಒಟ್ಟು ಕೊಲೆಸ್ಟ್ರಾಲ್ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಹೇಳಿದೆ.
ಈ ಮಧ್ಯೆ ಪ್ರತಿ ಅಧ್ಯಯನದಲ್ಲಿ ಬಳಸುವ ದಾಲ್ಚಿನ್ನಿ ವಿಧದಲ್ಲಿ ವ್ಯತ್ಯಾಸಗಳಿವೆ ಎಂದು ಸಂಶೋಧಕರು ಗಮನಿಸಿದ್ದಾರೆ. 2019 ರಲ್ಲಿ ನಡೆದ ಅಧ್ಯಯನವು ಪ್ರತಿದಿನ 3 ರಿಂದ 6 ಗ್ರಾಂ ದಾಲ್ಚಿನ್ನಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಕಂಡುಹಿಡಿದಿದೆ.ಆದ್ದರಿಂದ ದಾಲ್ಚಿನ್ನಿ ಮಧುಮೇಹವನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ಹೇಳಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದೇ ಹೇಳಬಹುದು.
ದಾಲ್ಚಿನ್ನಿಯ ಇತರ ಪ್ರಯೋಜನಗಳು
ದಾಲ್ಚಿನ್ನಿ ಸಾಕಷ್ಟು ಆರೋಗ್ಯ ಪ್ರಯೋಜನಳನ್ನು ಹೊಂದಿದೆ. ದಾಲ್ಚಿನ್ನಿ ಸಾರವನ್ನು ಸಾಂಪ್ರದಾಯಿಕ ಆಯುರ್ವೇದದಲ್ಲಿ ಉರಿಯೂತದ ಕಾಯಿಲೆಗಳು, ಸಂಧಿವಾತ, ಅತಿಸಾರ ಮತ್ತು ಅನಿಯಮಿತ ಮುಟ್ಟಿನ ಚಕ್ರಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ರಕ್ತದ ಸಕ್ಕರೆಯನ್ನು ಕಡಿಮೆ ಮಾಡುವ ಸಾಮರ್ಥ್ಯ ಮತ್ತು ಇತರ ಆರೋಗ್ಯ ಪ್ರಯೋಜನಗಳಿಂದಾಗಿ ಬಹಳಷ್ಟು ಜನರು ಇದನ್ನು ಹೆಚ್ಚಾಗಿ ಬಳಸುತ್ತಾರೆ.
ದಾಲ್ಚಿನ್ನಿಯನ್ನು ಹೇಗೆ ಸೇವಿಸಬಹುದು?
ದಾಲ್ಚಿನ್ನಿಯನ್ನು ಹಲವಾರು ವಿಧಗಳಲ್ಲಿ ಸೇವಿಸಬಹುದು. ಭಾರತೀಯ ಗ್ರೇವಿಗಳಲ್ಲಿ ಬಳಸುವಂಥ ಪ್ರಮುಖ ಮಸಾಲೆಗಳಲ್ಲಿ ದಾಲ್ಚಿನ್ನಿ ಕೂಡ ಒಂದಾಗಿದೆ. ಪಲಾವ್, ಬಿರಿಯಾನಿಗಳನ್ನು ಮಾಡುವಾಗ ಪರಿಮಳಕ್ಕಾಗಿ ಇದನ್ನು ಬಳಸಲಾಗುತ್ತದೆ. ಅಲ್ಲದೇ ಚಹಾ, ಸಿಹಿತಿಂಡಿಗಳಲ್ಲಿ ಸುವಾಸನೆಗಾಗಿ ಇದನ್ನು ಬಳಸುತ್ತಾರೆ. ಇನ್ನು, ರೋಲ್‌ಗಳು, ಬೇಯಿಸಿದ ಭಕ್ಷ್ಯಗಳು ಮತ್ತು ಸ್ಮೂಥಿಗಳಲ್ಲಿಯೂ ದಾಲ್ಚಿನ್ನಿ ಬಳಸಬಹುದು. ಆದಾಗ್ಯೂ, ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಮುಖ್ಯ. ದಾಲ್ಚಿನ್ನಿಯನ್ನು ಅರ್ಧ ಅಥವಾ ಒಂದು ಟೀಸ್ಪೂನ್ (3-5 ಗ್ರಾಂ) ಗಳಷ್ಟು ಪ್ರತಿದಿನ ಸೇವಿಸಬಹುದು.
ಅಂದಹಾಗೆ ತಜ್ಞರ ಪ್ರಕಾರ, ವಿವಿಧ ಅಧ್ಯಯನಗಳು ವಿಭಿನ್ನ ಫಲಿತಾಂಶಗಳನ್ನು ತೋರಿಸುವ ಕಾರಣ ಯಾವುದೇ ಒಂದು ಪೋಷಕಾಂಶವು ಮಧುಮೇಹವನ್ನು ಗುಣಪಡಿಸುವುದಿಲ್ಲ ಎನ್ನಬಹುದು. ಆದ್ದರಿಂದ ನೀವು ಮಧುಮೇಹವನ್ನು ನಿಯಂತ್ರಿಸಬೇಕಾದರೆ ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ರಕ್ತದ ಸಕ್ಕರೆಯನ್ನು ಆಗಾಗ ಪರೀಕ್ಷಿಸುವುದು, ಮಧುಮೇಹ ಔಷಧ ತೆಗೆದುಕೊಳ್ಳುವುದು ಅಥವಾ ಇನ್ಸುಲಿನ್ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು ಮುಖ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ