• Home
  • »
  • News
  • »
  • lifestyle
  • »
  • Health Tips: ನಿಮಗೆ ಕಾಡುವ ಸಾಮಾನ್ಯ ಆರೋಗ್ಯ ಸಂಬಂಧಿತ ಪ್ರಶ್ನೆಗಳಿಗೆ ಇಲ್ಲಿವೆ ನೋಡಿ ಉತ್ತರಗಳು!

Health Tips: ನಿಮಗೆ ಕಾಡುವ ಸಾಮಾನ್ಯ ಆರೋಗ್ಯ ಸಂಬಂಧಿತ ಪ್ರಶ್ನೆಗಳಿಗೆ ಇಲ್ಲಿವೆ ನೋಡಿ ಉತ್ತರಗಳು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮಗೆ ಮಧುಮೇಹವಿದ್ದರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ, ಸ್ಥೂಲಕಾಯ ಹೊಂದಿದ್ದರೆ ನಿಮ್ಮ ದೇಹದಲ್ಲಿರುವ ಅತಿಯಾದ ತೂಕವನ್ನು ಕಡಿಮೆ ಮಾಡಿಕೊಳ್ಳಿರಿ,

  • Share this:

ದಿನಾ ಬೆಳಿಗ್ಗೆ ಆದರೆ ನಮಗೆ ಈ ಆರೋಗ್ಯಕ್ಕೆ(Health) ಸಂಬಂಧಿಸಿದಂತೆ ಅನೇಕ ರೀತಿಯ ಗೊಂದಲಗಳು ನಮ್ಮ ತಲೆಯಲ್ಲಿ ಸುಳಿದಾಡುತ್ತಿರುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಉದಾಹರಣೆಗೆ ನಾವು ದಿನನಿತ್ಯ ಎಷ್ಟು ಮೈಲಿ ನಡೆಯಬೇಕು? ಕೆಮ್ಮಿಗೆ ಯಾವ ರೀತಿಯ ಸಿರಪ್(Syrup) ಅನ್ನು ತೆಗೆದುಕೊಳ್ಳಬೇಕು? ಮಧ್ಯಂತರ ಉಪವಾಸ(Fasting) ದೇಹದ ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ಹೇಗೆ ಮುಖ್ಯವಾಗುತ್ತದೆ? ಸ್ಕಿಪ್ಪಿಂಗ್ ಆಡುವುದು ದೇಹಕ್ಕೆ ಯಾವ ರೀತಿಯ ಲಾಭವನ್ನು ತಂದುಕೊಡುತ್ತದೆ ಮತ್ತು ಈ ಕಾಫಿಗೂ ಕ್ಯಾನ್ಸರ್(Cancer) ಗೂ ಏನು ಲಿಂಕ್.. ಹೀಗೆ ಅನೇಕ ರೀತಿಯ ಪ್ರಶ್ನೆಗಳು ನಮ್ಮ ತಲೆಯಲ್ಲಿ ಓಡಾಡುತ್ತಿರುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಬನ್ನಿ ಹಾಗಾದರೆ ಈ ಪ್ರಶ್ನೆಗಳಿಗೆ ತಜ್ಞರು ನೀಡಿದ ಉತ್ತರವೇನು ಅಂತ ತಿಳಿದುಕೊಳ್ಳೋಣ.


ಆರೋಗ್ಯಕರವಾಗಿರಲು ದಿನಕ್ಕೆ 10,000 ಹೆಜ್ಜೆ ನಡೆಯಬೇಕೆ?


ನಮ್ಮನ್ನು ತುಂಬಾನೇ ಕಾಡುವ ಪ್ರಶ್ನೆ ಎಂದರೆ ಆರೋಗ್ಯಕರವಾಗಿರಲು ಪ್ರತಿದಿನ 10,000 ಹೆಜ್ಜೆ ನಡೆಯಬೇಕು ಎಂದು ಹೇಳುವುದನ್ನು ಈಗಂತೂ ಸ್ವಲ್ಪ ಹೆಚ್ಚಾಗಿಯೇ ಕೇಳುತ್ತಿದ್ದೇವೆ ಅಂತ ಹೇಳಬಹುದು. ಇದರ ಬಗ್ಗೆ ತಜ್ಞರು ನೀಡಿದ ಉತ್ತರವೇನು ಅಂತ ನೋಡಿ.


ದಿನಕ್ಕೆ 10,000 ಹೆಜ್ಜೆಗಳು ನಡೆದರೆ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಸುಮಾರು 78,000 ಸ್ಪರ್ಧಿಗಳ ದತ್ತಾಂಶದೊಂದಿಗೆ ಸಂಶೋಧಕರು ತಯಾರಿಸಿದ ಮ್ಯಾಜಿಕ್ ಸಂಖ್ಯೆಯಾಗಿದೆ. ಇದು ಸುಮಾರು ಎಂಟು ಕಿಲೋಮೀಟರ್ ದೂರವಾಗಿದ್ದು, ಇದು ನಡೆಯಲು ಒಂದು ಗಂಟೆ ಮತ್ತು 40 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಈ 40 ನಿಮಿಷ ಅಥವಾ 1 ಗಂಟೆ ಹಗಲಿನಲ್ಲಿ ಯಾವುದೇ ಸಮಯದಲ್ಲಿಯಾದರೂ ನೀವು ತೆಗೆದುಕೊಳ್ಳಬಹುದು, ನಿಮ್ಮ ಬೆಳಗಿನ ನಡಿಗೆಯಲ್ಲಿಯೇ ಇದನ್ನು ಮುಗಿಸಬೇಕು ಅಂತಿಲ್ಲಾ.


ದಿನಕ್ಕೆ 3,800 ಹೆಜ್ಜೆಗಳು ಬುದ್ಧಿಮಾಂದ್ಯತೆಯ ಅಪಾಯವನ್ನು ಶೇಕಡಾ 25 ರಷ್ಟು ಕಡಿಮೆ ಮಾಡುತ್ತದೆ. ಪ್ರತಿ 2,000 ಹೆಜ್ಜೆಗಳು ಅಕಾಲಿಕ ಮರಣದ ಅಪಾಯವನ್ನು ಶೇಕಡಾ 10 ರಷ್ಟು ಕಡಿಮೆ ಮಾಡಬಹುದು. ಅನೇಕ ಜನರು ಧರಿಸಬಹುದಾದ ಫಿಟ್ನೆಸ್ ಸಾಧನಗಳು ಅಥವಾ ಸ್ಮಾರ್ಟ್‌ಫೋನ್ ಗಳಲ್ಲಿ ತಮ್ಮ ಹೆಜ್ಜೆಗಳನ್ನು ಟ್ರ್ಯಾಕ್ ಮಾಡುತ್ತಾರೆ. ನೀವು ಎಷ್ಟು ವೇಗವಾಗಿ ನಡೆಯುತ್ತೀರೋ ಅಷ್ಟು ಆರೋಗ್ಯ ಪ್ರಯೋಜನಗಳೂ ಸಹ ಹೆಚ್ಚುತ್ತವೆ.


ಇದನ್ನೂ ಓದಿ: Green Tea: ಗ್ರೀನ್ ಟೀ ಕುಡಿದರೆ ತೂಕ ಕಡಿಮೆಯಾಗುತ್ತಾ? ಇಲ್ಲಿದೆ ಮಾಹಿತಿ


ಮಧ್ಯಂತರ ಉಪವಾಸ ಮಾಡುವುದರಿಂದ ತೂಕ ಕಡಿಮೆಯಾಗುತ್ತದೆಯೇ?


ಮಧ್ಯಂತರ ಉಪವಾಸವನ್ನು ಮಾಡಿದರೆ, ವೇಗವಾಗಿ ದೇಹದ ತೂಕವನ್ನು ಕಳೆದುಕೊಳ್ಳಬಹುದೇ ಅನ್ನೋ ಒಂದು ಪ್ರಶ್ನೆ ಸಹ ಅನೇಕರಲ್ಲಿ ಇರುತ್ತದೆ ಅಂತ ಹೇಳಬಹುದು.


ದೇಹದ ತೂಕವು ನಾವು ಸೇವಿಸಿದ ಆಹಾರಗಳಿಂದ ಬರುವ ಕ್ಯಾಲೊಗಳಿಂದ ನಿರ್ಧರಿಸಲ್ಪಡುತ್ತದೆ ಮತ್ತು ನಾವು ವ್ಯಾಯಾಮ ಮಾಡಿ ಖರ್ಚು ಮಾಡಿದ ಕ್ಯಾಲೋರಿಗಳನ್ನು ಅದರಲ್ಲಿ ಕಳೆದಾಗ ಬಂದದ್ದು ಮೈನಸ್ ಕ್ಯಾಲೋರಿಗಳು.


ಮಧ್ಯಂತರ ಉಪವಾಸವು ಅಂತಿಮವಾಗಿ ಕ್ಯಾಲೊರಿ ಕೊರತೆಯನ್ನು ಉಂಟು ಮಾಡಬಹುದು. ನೀವು ಸಾಮಾನ್ಯವಾಗಿ ದಿನಕ್ಕೆ 4-5 ಬಾರಿ ಊಟ ಮತ್ತು ತಿಂಡಿಗಳನ್ನು ಮಾಡಿದರೆ ಸುಮಾರು 2,500-3,000 ಕ್ಯಾಲೊರಿಗಳನ್ನು ಪಡೆದುಕೊಳ್ಳಬಹುದು.


ನಂತರ ಮಧ್ಯಂತರ ಉಪವಾಸ, ಅದರಲ್ಲೂ ಎರಡು ಊಟ ಅಥವಾ ತಿಂಡಿಗಳನ್ನು ಕಡಿತಗೊಳಿಸುವುದು ನಿಮ್ಮ ಒಟ್ಟು ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ಅಂತಿಮವಾಗಿ, ನೀವು ಊಟಕ್ಕೆ ಕೂತಾಗ ಹಸಿವಾಗಿದೆ ಅಂತ ಹೆಚ್ಚಾಗಿ ತಿನ್ನದಿದ್ದರೆ ತೂಕ ಕಡಿಮೆ ಆಗುತ್ತದೆ.


ಒಂದು ಕಿಲೋ ತೂಕವನ್ನು ಕಳೆದುಕೊಳ್ಳಲು 7,700 ಕ್ಯಾಲೋರಿಗಳನ್ನು ಕಳೆದುಕೊಳ್ಳಬೇಕು. ಉಪವಾಸದೊಂದಿಗೆ ಅಥವಾ ಪ್ರತಿ ಊಟದಲ್ಲಿ ಸೇವಿಸುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ನೀವು ಇದನ್ನು ಮಾಡಬಹುದು. ಆದರೆ ತೂಕ ಇಳಿಕೆಯು ವ್ಯಾಯಾಮದಿಂದಾದರೆ ಅದು ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.


ಮಕ್ಕಳಿಗೆ ಕೆಮ್ಮಿನ ಸಿರಪ್ ಗಳನ್ನು ನೀಡುವುದು ಒಳ್ಳೆಯದೇ?


ಮನೆಯಲ್ಲಿ ಎರಡು ವರ್ಷದ ಮಗು ತುಂಬಾನೇ ಕೆಮ್ಮುತ್ತಿದ್ದರೆ, ನಾವು ತಕ್ಷಣಕ್ಕೆ ವಾಸಿ ಆಗುತ್ತದೆಯೇ ಅಂತ ನೋಡಲು ಸ್ಥಳೀಯ ಫಾರ್ಮಸಿಯಲ್ಲಿ ಸಿಗುವಂತಹ ಯಾವುದಾದರೂ ಒಂದು ಕೆಮ್ಮಿನ ಸಿರಪ್ ಅನ್ನು ತೆಗೆದುಕೊಂಡು ಬಂದು ಮಗುವಿಗೆ ಕೊಡುತ್ತೇವೆ. ಕೆಲವೊಮ್ಮೆ ಅದು ಮಕ್ಕಳನ್ನು ಮಂಪರುಗೊಳ್ಳುವಂತೆ ಮಾಡುತ್ತದೆ ಮತ್ತು ಕೆಲ ಸಂದರ್ಭಗಳಲ್ಲಿ ಮಗು ಸಿರಪ್ ಕುಡಿದ ನಂತರ ವಾಂತಿ ಮಾಡಲು ಪ್ರಾರಂಭಿಸುತ್ತದೆ.


ಕೆಮ್ಮಿನ ಸಿರಪ್ ಗಳು ಹೆಚ್ಚಾಗಿ ಹಲವಾರು ಪದಾರ್ಥಗಳನ್ನು ಹೊಂದಿರುತ್ತವೆ. ಅಲ್ಲದೆ, ಮಕ್ಕಳಲ್ಲಿ, ಡೋಸೇಜ್ ವೇಳಾಪಟ್ಟಿ ಮತ್ತು ಪ್ರಮಾಣವು ವಯಸ್ಸನ್ನು ಆಧರಿಸಿಲ್ಲ ಆದರೆ ದೇಹದ ತೂಕವನ್ನು ಆಧರಿಸಿದೆ.


ಒಂದೇ ವಯಸ್ಸಿನ ಮಕ್ಕಳು ತೂಕದಲ್ಲಿ ವ್ಯಾಪಕವಾಗಿ ವ್ಯತ್ಯಾಸ ಹೊಂದಿರಬಹುದು. ಆದ್ದರಿಂದ, ಡೋಸೇಜ್ ಅನ್ನು ಎಚ್ಚರಿಕೆಯಿಂದ ಲೆಕ್ಕಹಾಕಬೇಕು. ಕೆಲವೊಮ್ಮೆ, ದ್ರವ ಪ್ರತ್ಯಾಮ್ಲವು ಸೂಕ್ತವಲ್ಲ. ಯಾವಾಗಲೂ ನಿಮ್ಮ ಮಕ್ಕಳ ತಜ್ಞರೊಂದಿಗೆ ಪರಿಶೀಲಿಸಿಕೊಂಡು ಅವರು ಸೂಚಿಸಿದ ಕೆಮ್ಮಿನ ಸಿರಪ್ ಅನ್ನು ಮಾತ್ರ ಬಳಸಿ. ಅದು ಪ್ರತಿಷ್ಠಿತ ಕಂಪನಿಯಿಂದ ಬಂದಿರುವುದನ್ನು ಮತ್ತು ಐಎಸ್ಐ ಪ್ರಮಾಣೀಕೃತವಾಗಿದೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ.


ಕೊಬ್ಬಿನ ಯಕೃತ್ತು ಅಪಾಯಕಾರಿಯೇ?


ಹಲವರಿಗೆ ಈ ಕಿಬ್ಬೊಟ್ಟೆಯ ಸ್ಕ್ಯಾನ್ ಗಳನ್ನು ಮಾಡಿದಾಗ ಅದರಲ್ಲಿ ಕೊಬ್ಬಿನ ಯಕೃತ್ತು ಇರುವುದಾಗಿ ತಿಳಿಯುತ್ತದೆ. ಇದು ನಿಜಕ್ಕೂ ಅಪಾಯಕಾರಿಯೇ ಎಂಬ ಪ್ರಶ್ನೆ ಅನೇಕರಿಗೆ ಕಾಡುತ್ತಿರುತ್ತದೆ. ಸಾಮಾನ್ಯವಾಗಿ ಜನರಲ್ಲಿ ಅತಿಯಾದ ಮದ್ಯಪಾನದಿಂದ ಹೀಗಾಗುತ್ತದೆ ಅಂತ ತಿಳಿದುಕೊಳ್ಳುತ್ತಾರೆ. ಆದರೆ ಕುಡಿಯದೇ ಇರುವವರಿಗೂ ಸಹ ಕೊಬ್ಬಿನ ಯಕೃತ್ತು ಕಾಯಿಲೆ ಕಾಡುತ್ತಿರುತ್ತದೆ ಅಂತ ಹೇಳಬಹುದು.


ಕೊಬ್ಬಿನ ಯಕೃತ್ತು ಎರಡು ವಿಧವಾಗಿದೆ, ಆಲ್ಕೋಹಾಲ್ ಮತ್ತು ಆಲ್ಕೋಹಾಲ್ ರಹಿತ ಅಂತ ಹೇಳಬಹುದು. ನೀವು ಆಲ್ಕೋಹಾಲ್ ಕುಡಿಯದೇ ಇದ್ದರೂ ಕಾಯಿಲೆಯಿಂದ ಬಳಲುತ್ತಿದ್ದರೆ, ಇದು ರಕ್ತದಲ್ಲಿನ ಹೆಚ್ಚಿನ ಮಟ್ಟದ ಕೊಬ್ಬು, ಮಧುಮೇಹ ಅಥವಾ ಬೊಜ್ಜು ಇದಕ್ಕೆ ಮುಖ್ಯವಾಗಿ ಕಾರಣವಾಗಿರಬಹುದು ಎಂದು ಹೇಳಲಾಗುತ್ತದೆ.


ಅನೇಕ ಜನರಲ್ಲಿ, ಇದು ಅಸ್ಪಷ್ಟ ಕಿಬ್ಬೊಟ್ಟೆಯ ಅಸ್ವಸ್ಥತೆಯನ್ನು ಹೊರತುಪಡಿಸಿ ಬೇರೆ ಯಾವುದೇ ಸಮಸ್ಯೆಗಳನ್ನು ಉಂಟು ಮಾಡುವುದಿಲ್ಲ. ಆದಾಗ್ಯೂ, ಇತರರಲ್ಲಿ, ಯಕೃತ್ತು ಕ್ರಮೇಣ ಹಾನಿಗೊಳಗಾಗಬಹುದು ಮತ್ತು ಅದು ಯಕೃತ್ತಿನ ವೈಫಲ್ಯದ ಅಪಾಯಕ್ಕೂ ಸಹ ದಾರಿ ಮಾಡಿ ಕೊಡಬಹುದು.


ನಿಮಗೆ ಮಧುಮೇಹವಿದ್ದರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ, ಸ್ಥೂಲಕಾಯ ಹೊಂದಿದ್ದರೆ ನಿಮ್ಮ ದೇಹದಲ್ಲಿರುವ ಅತಿಯಾದ ತೂಕವನ್ನು ಕಡಿಮೆ ಮಾಡಿಕೊಳ್ಳಿರಿ, ನಿಮ್ಮ ಲಿಪಿಡ್ ಗಳನ್ನು ನಿಯಂತ್ರಿಸಿ ಮತ್ತು ವರ್ಷಕ್ಕೊಮ್ಮೆ ನಿಮ್ಮ ಯಕೃತ್ತು ಚೆನ್ನಾಗಿ ಕೆಲಸ ಮಾಡುತ್ತಿದೆಯೇ ಅಂತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿರಿ.


ಸ್ಕಿಪ್ಪಿಂಗ್ (ಹಗ್ಗದಾಟ) ಆಡುವುದು ಕ್ಯಾಲೋರಿಗಳನ್ನು ಬರ್ನ್ ಮಾಡಲು ಉತ್ತಮವಾದ ಮಾರ್ಗ


ಕೆಲವರು ಪ್ರತಿದಿನ ತಪ್ಪದೆ ಅರ್ಧಗಂಟೆ ಅಥವಾ ಒಂದು ಗಂಟೆಗಳ ಕಾಲ ವ್ಯಾಯಾಮ ಮಾಡಿ ಬರುತ್ತಾರೆ. ಆದರೆ ಇನ್ನೂ ಕೆಲವರಿಗೆ ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ವಾಕಿಂಗ್ ಹೋಗಲು ಮತ್ತು ವ್ಯಾಯಾಮ ಮಾಡಲು ಸಮಯ ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ಸ್ಕಿಪ್ಪಿಂಗ್ ಅಥವಾ ಹಗ್ಗದಾಟವಾಡುವುದರಿಂದ ನಮ್ಮ ದೇಹದಲ್ಲಿನ ಅತಿಯಾದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದೇ ಅಂತ ಅನೇಕರಿಗೆ ಗೊಂದಲವಿರುತ್ತದೆ.


ಸ್ಕಿಪ್ಪಿಂಗ್ ಮಾಡುವುದು ಕ್ಯಾಲೋರಿಗಳನ್ನು ಬರ್ನ್ ಮಾಡಿಕೊಳ್ಳುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಇನ್ನೂ ಕೆಲವೊಮ್ಮೆ ನೀವು ಹಗ್ಗವನ್ನು ಬಳಸದೆಯೂ ಸಹ ಪ್ರತಿ ನಿಮಿಷಕ್ಕೆ ಇಂತಿಷ್ಟು ಜಿಗಿತಗಳನ್ನು ಹಾಗೆಯೇ ಜಿಗಿಯುವುದರ ಮೂಲಕ 10-15 ಕ್ಯಾಲೊರಿಗಳವರೆಗೆ ಬರ್ನ್ ಮಾಡಿಕೊಳ್ಳಬಹುದು.


ಸ್ಪಾಟ್ ಜಾಗಿಂಗ್ ಪ್ರತಿ ನಿಮಿಷಕ್ಕೆ ಎಂದರೆ ಸರಿ ಸುಮಾರು 60 ಹೆಜ್ಜೆಗಳು ಸುಮಾರು ಒಂಬತ್ತು ಕ್ಯಾಲೊರಿಗಳನ್ನು ಸುಡುತ್ತದೆ. ಕ್ಯಾಲೊರಿಗಳನ್ನು ಬರ್ನ್ ಮಾಡಿಕೊಳ್ಳಲು ಈ ಮೆಟ್ಟಿಲುಗಳನ್ನು ಹತ್ತುವುದು ಸಹ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಪ್ರತಿ ನಿಮಿಷಕ್ಕೆ ಸುಮಾರು ಹನ್ನೊಂದು ಕ್ಯಾಲೊರಿಗಳು ಬರ್ನ್ ಆಗುತ್ತವೆ.


ಈ ವ್ಯಾಯಾಮಗಳಿಗೆ ಯಾವುದೇ ಸಲಕರಣೆಗಳ ಅಗತ್ಯವಿಲ್ಲ. ಸರಿಯಾದ ಪಾದರಕ್ಷೆಗಳಿಲ್ಲದೆ ಮನೆಯಲ್ಲಿಯೂ ಸಹ ವ್ಯಾಯಾಮ ಮಾಡಬೇಡಿ, ಏಕೆಂದರೆ ಅದು ಮೊಣಕಾಲುಗಳ ಮೇಲೆ ಪರಿಣಾಮ ಬೀರಬಹುದು.


ಈ ಕಾಫಿಗೂ ಮತ್ತು ಕ್ಯಾನ್ಸರ್ ರೋಗಕ್ಕೂ ಹೇಗೆ ಲಿಂಕ್?


ಕೆಲವರು ಕಾಫಿ ಅಂತ ಹೆಸರು ಕೇಳಿದರೆ ಸಾಕು ಎಲ್ಲೆ ಇರಲಿ ಮೊದಲು ಬಂದು ಕಾಫಿ ಲೋಟಕ್ಕೆ ತುಟಿ ಹಚ್ಚುತ್ತಾರೆ. ಇನ್ನೂ ಕೆಲವರು ಕಾಫಿ ಕುಡಿದರೆ ಅದಾಗುತ್ತೆ, ಇದಾಗುತ್ತೆ ಅಂತ ಹೇಳುವುದನ್ನು ಸಹ ನಾವು ಅನೇಕ ಬಾರಿ ಕೇಳಿರುತ್ತೇವೆ.


ಇದನ್ನೂ ಓದಿ: Cough Home Remedy: ಚಳಿಗಾಲದಲ್ಲಿ ಕಾಡುವ ನೆಗಡಿ, ಕೆಮ್ಮಿಗೆ ಅರಿಶಿಣ ಟೀ ಬೆಸ್ಟ್, ಮಾಡುವ ವಿಧಾನ ಇಲ್ಲಿದೆ


ಎಷ್ಟೋ ಜನರು ಈ ಕಾಫಿಯನ್ನು ಹೆಚ್ಚು ಆನಂದಿಸುತ್ತಾರೆ, ಆದರೆ ಇತ್ತೀಚೆಗೆ ಅದು ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತದೆ ಅಂತ ಎಲ್ಲೋ ಓದಿದ್ದು ಕಾಫಿ ಕುಡಿಯಬೇಕೋ ಅಥವಾ ಕುಡಿಯಬಾರದೇ ಅನ್ನೋ ಗೊಂದಲಕ್ಕೀಡುಮಾಡಿದೆ.


ಕೆಲವು ಅಧ್ಯಯನಗಳು ಪ್ರತಿದಿನ ನಾಲ್ಕು ಕಪ್ ಕಾಫಿಯನ್ನು ಕುಡಿಯುವುದರಿಂದ ಪಿತ್ತಜನಕಾಂಗ, ಪ್ರಾಸ್ಟೇಟ್ ಮತ್ತು ಗರ್ಭಾಶಯದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳುತ್ತವೆ. ಆದಾಗ್ಯೂ, ಇದನ್ನು ಕ್ಯಾನ್ಸರ್ ನ ಹೆಚ್ಚಿದ ಅಪಾಯದೊಂದಿಗೆ ಸಂಪರ್ಕಿಸುವ ಯಾವುದೇ ಅಧ್ಯಯನಗಳು ಸಹ ಇನ್ನು ಕಂಡು ಬಂದಿಲ್ಲ ಅಂತ ಹೇಳಬಹುದು.

Published by:Latha CG
First published: