ನಮ್ಮಲ್ಲಿ ಬಹಳಷ್ಟು ಜನರಿಗೆ ದಾಲ್ ಚಾವಲ್ (Dal Chawal) ಅಥವಾ ಅನ್ನ ಸಾಂಬಾರ್ನಷ್ಟು (Sambar) ವಿಶೇಷವಾದ್ದು ಬೇರೆ ಮತ್ತೊಂದಿರಲ್ಲ. ಅದನ್ನು ಉಣ್ಣದೇ ಹೋದರೆ ಸಂಪೂರ್ಣವಾಗಿ ತೃಪ್ತಿ ಸಿಗೋದೇ ಇಲ್ಲ. ಹಾಗಾಗಿಯೇ ಅದು ಕಂಫರ್ಟ್ ಫುಡ್ ಅಥವಾ ಆರಾಮದಾಯಕ ಆಹಾರಗಳ (Food) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹಾಗಿದ್ರೆ ನಾವು ಇಂಥ ಕಂಫರ್ಟ್ (Comfort) ಊಟವವನ್ನೇ ಯಾಕಾಗಿ ಬಯಸುತ್ತೇವೆ ಅನ್ನುವುದರ ಬಗ್ಗೆ ಯಾವತ್ತಾದರೂ ಯೋಚಿಸಿದ್ದೀರಾ. ತಜ್ಞರ ಪ್ರಕಾರ, ಇದು ಭಾವನಾತ್ಮಕ ಆರಾಮವನ್ನು (Feel Good) ನೀಡುವ ವಿಷಯ ಎಂಬುದಾಗಿ ಹೇಳಲಾಗುತ್ತದೆ.
'ಅಪೆಟೈಟ್' ನಿಯತಕಾಲಿಕದಲ್ಲಿ ಪ್ರಕಟವಾದ ಒಂದು ಅಧ್ಯಯನವು, ನಮಗೆ ನೆಮ್ಮದಿ ನೀಡುವ ಆಹಾರಗಳಲ್ಲಿ "ಸಾಮಾಜಿಕ" ಅಂಶವಿದೆ ಎಂದು ಕಂಡುಹಿಡಿದಿದೆ.
ನಾವು ಇಂಥ ಆಹಾರಗಳ ಜೊತೆಗೆ ಬಾಲ್ಯದ ನೆನಪುಗಳನ್ನು ಹೊಂದಿರುತ್ತೇವೆ. ಈ ಕಂಫರ್ಟ್ ಊಟಗಳು ನಮಗೆ ಮನೆಯ, ಅಮ್ಮನ, ತುಂಬಾ ಇಷ್ಟಪಡುವವರ, ಹತ್ತಿರದವರ ನೆನಪನ್ನು ತರುತ್ತದೆ. ಬಾಂಧವ್ಯದ ಬಂಧವನ್ನು ಇವು ಹೊಂದಿರುತ್ತದೆ ಎಂಬುದಾಗಿ ಅಧ್ಯಯನ ಹೇಳುತ್ತದೆ.
ನಾವು ಯಾವಾಗ ಆರಾಮ ಆಹಾರಕ್ಕಾಗಿ ಹಂಬಲಿಸುತ್ತೇವೆ?
ಅನೇಕರಿಗೆ ಇಂಥ ಆರಾಮ ಆಹಾರವನ್ನು ತಿಂದರೆ ತೃಪ್ತಿ ಸಿಗುತ್ತದೆ. ಆದರೆ ಇಂಟರ್ನ್ಯಾಷನಲ್ ಜರ್ನಲ್ ಆಫ್ ಗ್ಯಾಸ್ಟ್ರೋನಮಿ ಅಂಡ್ ಫುಡ್ ಸೈನ್ಸ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಕಂಫರ್ಟ್ ಆಹಾರ ಸೇವಿಸುವುದರಿಂದ ಹೆಚ್ಚು ನೆಮ್ಮದಿ ಸಿಗುತ್ತದೆ.
ಇದು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ತುಂಬಾ ದಣಿದ ದಿನ ನೀವು ಇಂತ ಸಮಾಧಾನ ನೀಡುವಂಥ ಆಹಾರವನ್ನು ತಿನ್ನಲು ಬಯಸುತ್ತೀರಿ ಎಂಬುದಾಗಿ ಹೇಳಲಾಗಿದೆ.
ಭಾರತೀಯ ಕಂಫರ್ಟ್ ಊಟಗಳು ಯಾವವು?
1. ದಾಲ್-ಚಾವಲ್: ದಾಲ್ ಬಹುಶಃ ಭಾರತೀಯ ಆಹಾರ ಸಂಸ್ಕೃತಿಯಲ್ಲಿ ಅತ್ಯಂತ ಜನಪ್ರಿಯ ಭಕ್ಷ್ಯವಾಗಿದೆ. ಇದು ಆರೋಗ್ಯಕರವಾದ ಆಹಾರ ಕೂಡ ಆಗಿದೆ.
ಬಹಳಷ್ಟು ವಿಧದ ತರಕಾರಿ ಹಾಗೂ ಬೇಳೆಯೊಂದಿಗೆ ನೀವು ದಾಲ್ ತಯಾರಿಸಬಹುದು. ಅಲ್ಲದೇ ಇದನ್ನು ಬೇರೆ ಬೇರೆ ವಿಧಾನಗಳಲ್ಲೂ ಟ್ರೈ ಮಾಡಬಹುದು. ಬಿಸಿಯಾದ ದಾಲ್ ಹಾಗೂ ಅನ್ನದ ಕಾಂಬಿನೇಷನ್ ನೀಡುವ ತೃಪ್ತಿಗೆ ಸರಿಸಾಟಿ ಯಾವುದೂ ಇಲ್ಲ ಬಿಡಿ.
2. ಕಿಚಡಿ: ಇದು ತುಂಬಾ ವೇಗವಾಗಿತಯಾರಿಸಬಹುದಾದ ಊಟವಾಗಿದೆ. ಸಖತ್ ಟೇಸ್ಟಿಯಾಗಿರುವ ಕಿಚಡಿಯನ್ನು ತುಂಬಾ ಸುಲಭವಾಗಿ ಮಾಡಬಹುದು.
ಬೇಳೆ, ಅಕ್ಕಿಯನ್ನು ಮಸಾಲೆ ಮತ್ತು ತರಕಾರಿಯೊಂದಿಗೆ ಬೆರೆಸಿ ಬೇಯಿಸಿದರೆ ಕಿಚಡಿ ರೆಡಿಯಾಗುತ್ತದೆ. ನಂತರ ಅದನ್ನು ಪಾಪಡ್, ಆಚಾರ್ ಅಥವಾ ಉಪ್ಪಿನಕಾಯಿ ಮತ್ತು ಮೊಸರಿನೊಂದಿಗೆ ತಿನ್ನಬಹುದು. ಅಲ್ಲದೇ ಇದು ಆರೋಗ್ಯಕ್ಕೂ ಒಳ್ಳೆಯದು.
ಇದನ್ನೂ ಓದಿ: Food List: ಈ ವಿಚಾರದಲ್ಲಿ ಭಾರತ ನಂಬರ್ 1 ಅಂತೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆಗೆ ಪಾತ್ರವಾದ ಇಂಡಿಯಾ!
3. ರಾಜ್ಮಾ-ಚಾವಲ್: ಪಂಜಾಬಿಯವರನ್ನು ಕೇಳಿ ನೋಡಿ... ಅವರಿಗೆ ಸಂಪೂರ್ಣ ಸಂತೃಪ್ತಿ ನೀಡುವ ಊಟವೆಂದರೆ ಅದು ರಾಜ್ಮಾ ಚಾವಲ್. ರಾಜ್ಮಾ ಹಾಗೂ ಅನ್ನದ ಕಾಂಬಿನೇಷನ್ ಊಟ ಮಾಡಿದರೆ ಅವರಿಗೆ ಅದಕ್ಕಿಂತ ಖುಷಿ ಬೇರೊಂದಿಲ್ಲ. ರಾಜ್ಮಾ ಕಾಳಿನೊಂದಿಗೆ ಸುಲಭವಾಗಿ ಇದನ್ನು ತಯಾರಿಸಬಹುದು.
4.ಅನ್ನ- ಸಾಂಬಾರ್ : ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಊಟಗಳಲ್ಲಿ ಅನ್ನ ಸಾಂಬಾರ್ ಪ್ರಮುಖವಾದದ್ದು. ವಿವಿಧ ತರಕಾರಿ ಹಾಗೂ ಬೇಳೆಗಳನ್ನು ಬೇಯಿಸಿ ಅದಕ್ಕೆ ಸಾಂಬಾರು ಪದಾರ್ಥಗಳ ಮಸಾಲೆ ಸೇರಿಸಿದರೆ ಸಾಂಬಾರ್ ರೆಡಿಯಾಗುತ್ತದೆ. ಬಿಸಿಯಾದ ಅನ್ನ ಸಾಂಬಾರ್ ಊಟ ಮಾಡುವ ತೃಪ್ತಿಗೆ ಸರಿಸಮ ಬೇರೆ ಯಾವುದೂ ಇಲ್ಲ ಎಂದೇ ಹೇಳಬಹುದು.
5. ದೋಸೆ: ದಕ್ಷಿಣ ಭಾರತದ ಖಾದ್ಯವಾಗಿರುವ ದೋಸೆ ಬರೀ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಜನಪ್ರಿಯ. ಗರಿಗರಿಯಾದ ದೋಸೆಯನ್ನು ಚಟ್ನಿ, ಪಲ್ಯ ಅಥವಾ ಸಾಂಬಾರ್ ಜೊತೆಗೆ ಸೇವಿಸಿದರೆ ಅದರಂಥ ಖುಷಿ ಬೇರೊಂದಿಲ್ಲ.
ಅಕ್ಕಿ ದೋಸೆ, ರವೆ ದೋಸೆ, ರಾಗಿ ದೋಸೆ, ಮಸಾಲೆ ದೋಸೆ, ವೆಜಿಟೇಬಲ್ ದೋಸೆ, ಈರುಳ್ಳಿ ದೋಸೆ ಹೀಗೆ ಬಗೆ ಬಗೆಯ ದೋಸೆಗಳ ರುಚಿ ಅದನ್ನು ತಿಂದವರಿಗೇ ಗೊತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ