ಸಾಮಾನ್ಯವಾಗಿ ನಗರಗಳಲ್ಲಿ ಬೆಳಗ್ಗೆ ಎದ್ದು ಸ್ನಾನ ಮಾಡಿ ಕಂಪನಿಗಳ ಕೆಲಸಕ್ಕೆ ಹೋಗುವವರು ಇಡ್ಲಿ, ದೋಸೆ, ಉಪ್ಪಿಟ್ಟು, ಅವಲಕ್ಕಿ ಅಂತ ಅನೇಕ ರೀತಿಯ ಉಪಾಹಾರಗಳನ್ನು (Break Fast) ಮಾಡಿಕೊಂಡು ಹೋಗುತ್ತಾರೆ. ಅದೇ ಹಳ್ಳಿಯಲ್ಲಿ ಇರುವವರು ಬೆಳಗ್ಗೆ ತಯಾರಾಗಿ ತಮ್ಮ ಹೊಲ ಗದ್ದೆಗಳಿಗೆ ಹೋಗುವ ಮುಂಚೆ ಜೋಳದ ರೊಟ್ಟಿ ಮತ್ತು ಬಿಸಿ ಬಿಸಿ ಅನ್ನವನ್ನು (Rice) ಹೊಟ್ಟೆ ತುಂಬಾ ತಿಂದು ಹೋಗುವುದನ್ನು ನಾವೆಲ್ಲಾ ನೋಡಿರುತ್ತೇವೆ. ಹೌದು.. ಬೆಳಗ್ಗೆ ಒಳ್ಳೆ ರಾಜನ ತರಹ ಆಹಾರ ತಿನ್ನಬೇಕು ಅಂತ ಅನೇಕ ಜನರು ಹೇಳುವುದನ್ನು ನಾವು ಕೇಳಿರುತ್ತೇವೆ. ಏಕೆಂದರೆ ಬೆಳಗ್ಗೆ ನಾವು ಮಾಡುವ ಉಪಾಹಾರ ಇಡೀ ದಿನಕ್ಕೆ ಬೇಕಾಗುವ ಶಕ್ತಿಯನ್ನು ಒದಗಿಸುತ್ತದೆ ಅಂತ ಅನೇಕರು ಹೇಳುತ್ತಾರೆ. ಬೆಳಗ್ಗೆ ಹೊತ್ತು ಕೆಲವರು ತರಕಾರಿಗಳ (Vegetables) ಪಲ್ಯದೊಂದಿಗೆ ಅಥವಾ ಮೊಟ್ಟೆಯೊಂದಿಗೆ (Egg) ಅನ್ನವನ್ನು ತಿನ್ನುವುದನ್ನು ನೋಡಿರುತ್ತೇವೆ. ಈಶಾನ್ಯ ಭಾರತದ (India) ಕೆಲವು ರಾಜ್ಯಗಳಿಗೆ ಹೋದರೆ, ಸ್ಥಳೀಯರು ತಮ್ಮ ದಿನವನ್ನು ಅನ್ನ ತಿನ್ನುವುದರೊಂದಿಗೆ ಪ್ರಾರಂಭಿಸುವುದನ್ನು ನೋಡಬಹುದು.
ಜಪಾನ್ ನಂತಹ ಕೆಲವು ದೇಶಗಳಲ್ಲಿಯೂ ಸಹ, ಅನ್ನವನ್ನು ಬೆಳಗ್ಗೆ ಉಪಾಹಾರದಲ್ಲಿ ಸೇವಿಸುತ್ತಾರೆ ಎಂದು ಹೇಳಲಾಗುತ್ತದೆ. ಅನ್ನ ತಿಂದರೆ ಹೆಚ್ಚು ಗಂಟೆಗಳ ಕಾಲ ಹೊಟ್ಟೆ ತುಂಬಿದ ಹಾಗೆ ಇರುತ್ತದೆ ಮತ್ತು ಶಕ್ತಿಯುತವಾಗಿರಿಸುತ್ತದೆ. ಆದರೆ ಬೆಳಗ್ಗೆ ಬೆಳಗ್ಗೆ ಹೀಗೆ ಅನ್ನ ತಿನ್ನುವುದು ಆರೋಗ್ಯಕ್ಕೆ ಎಷ್ಟರ ಮಟ್ಟಿಗೆ ಒಳ್ಳೆಯದು ಅಂತ ಅನೇಕರಿಗೆ ಅನೇಕ ರೀತಿಯ ಗೊಂದಲಗಳಿವೆ. ಬೆಳಗ್ಗೆ ಅನ್ನ ತಿನ್ನುವುದು ಆರೋಗ್ಯಕರವೇ ಅಥವಾ ಅಲ್ಲವೇ ಎಂಬುದನ್ನು ಅರ್ಥ ಮಾಡಿಕೊಳ್ಳಲು ಗುರುಗ್ರಾಮದ ಪರಾಸ್ ಆಸ್ಪತ್ರೆಯ ಆಹಾರ ತಜ್ಞೆ ನೇಹಾ ಪಠಾನಿಯಾ ಹೀಗೆ ಹೇಳುತ್ತಾರೆ.
ಅನ್ನ ದೇಹಕ್ಕೆ ಶಕ್ತಿ ನೀಡುತ್ತದೆ..
ಅನ್ನವನ್ನು ತಿನ್ನದೆ ಇದ್ದಾಗ ಅನೇಕ ಜನರಿಗೆ ಸರಿಯಾದ ಊಟ ಮಾಡಿದ ಹಾಗೆ ಅನಿಸುವುದಿಲ್ಲವಂತೆ. ಪ್ರತಿದಿನ ಅನ್ನ ಸೇವಿಸುವುದಕ್ಕೆ ನೀವು ಹೆದರಬೇಕಾಗಿಲ್ಲ ಎಂದು ಪಠಾನಿಯಾ ಹೇಳುತ್ತಾರೆ. ಇದು ಬಹಳಷ್ಟು ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುತ್ತದೆ, ಆದ್ದರಿಂದ ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಬಟಾಣಿ, ಬೀನ್ಸ್, ಕ್ಯಾರೆಟ್, ಪಾಲಕ್ ಮತ್ತು ಕುಂಬಳಕಾಯಿಯಂತಹ ತರಕಾರಿಗಳೊಂದಿಗೆ ಅನ್ನವನ್ನು ಸೇವಿಸಿದಾಗ ಅನ್ನವು ಪೌಷ್ಟಿಕ ಖಾದ್ಯವಾಗುತ್ತದೆ.
ಯಾವುದೇ ಬಣ್ಣದ ಅನ್ನ ಪೋಷಕಾಂಶಗಳನ್ನು ಹೊಂದಿದೆ ಮತ್ತು ಗಣನೀಯ ಪ್ರಮಾಣದ ಫೋಲೇಟ್ ಅನ್ನು ಹೊಂದಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅನ್ನ ಆರೋಗ್ಯಕರ ಮತ್ತು ಪೋಷಕಾಂಶ-ದಟ್ಟವಾದ ಆಹಾರವಾಗಿದೆ.
ದಿನದ ಯಾವ ಸಮಯದಲ್ಲಿ ಅನ್ನವನ್ನು ತಿನ್ನುವುದು ಉತ್ತಮ?
ನೀವು ಅನ್ನವನ್ನು ದಿನದ ಮೊದಲ ಊಟದಲ್ಲಿಯೇ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. ನಿಮ್ಮ ದೇಹವು ಹೆಚ್ಚು ಸಕ್ರಿಯವಾಗಿರುವ ಮತ್ತು ಹೆಚ್ಚಿನ ಶಕ್ತಿಯ ಅಗತ್ಯವಿರುವ ಸಮಯ ಅದು. ತಮ್ಮ ತೂಕವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವವರಿಗೆ ಅಥವಾ ಮಧುಮೇಹ ಹೊಂದಿರುವವರಿಗೆ, ಬೆಳಗ್ಗೆ ಅನ್ನವನ್ನು ತಿನ್ನುವುದು ರಕ್ತದಲ್ಲಿನ ಸಕ್ಕರೆಯ ಹೆಚ್ಚಳವನ್ನು ತಡೆಯಲು ಸಹಾಯ ಮಾಡುತ್ತದೆ.
ಆದರೆ ಇದನ್ನು ಮಿತವಾಗಿ ಮತ್ತು ಸಮತೋಲಿತ ಊಟದ ಭಾಗವಾಗಿ ತಿನ್ನಬೇಕು ಎಂದು ಪಠಾನಿಯಾ ಹೇಳುತ್ತಾರೆ. ಆಗ ಮಾತ್ರ ಅನ್ನ ಪೌಷ್ಟಿಕ ಆಹಾರದ ಒಂದು ಅಂಶವಾಗಬಹುದು. ರಾತ್ರಿಯ ವಿಷಯಕ್ಕೆ ಬಂದರೆ, ರಾತ್ರಿ ಊಟದಲ್ಲಿ ಅನ್ನ ತಿನ್ನುವುದನ್ನು ತಪ್ಪಿಸಬೇಕು ಅಂತ ಹೇಳ್ತಾರೆ ತಜ್ಞರು.
ಬೆಳಗಿನ ಉಪಾಹಾರಕ್ಕಾಗಿ ವಿವಿಧ ರೀತಿಯ ರೈಸ್‌ಗಳು
1. ಗಾರ್ಲಿಕ್ ಮತ್ತು ಎಗ್ ಫ್ರೈಡ್ ರೈಸ್
ಹಸಿವನ್ನು ತಡೆಗಟ್ಟಲು ಇದು ತ್ವರಿತ ಮತ್ತು ಪರಿಮಳಭರಿತ ಖಾದ್ಯವಾಗಿದೆ. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ, ಮುಖ್ಯವಾಗಿ ಬೆಳ್ಳುಳ್ಳಿಯಿಂದ ಪಡೆದ ಅಲಿಸಿನ್ ಎಂಬ ವಸ್ತುವಿನಿಂದಾಗಿ. ಒಟ್ಟಾರೆಯಾಗಿ, ಈ ಖಾದ್ಯವು ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ ಮತ್ತು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ. ಪ್ರತಿಜೀವಕ ಗುಣಲಕ್ಷಣಗಳನ್ನು ಹೊಂದಿರುವ ಬೆಳ್ಳುಳ್ಳಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಮತ್ತೊಂದೆಡೆ, ಮೊಟ್ಟೆಯು ಪ್ರೋಟೀನ್ ನ ಉತ್ತಮ ಮೂಲವಾಗಿದೆ ಮತ್ತು ಹೃದಯ-ಆರೋಗ್ಯಕರ ಅಪರ್ಯಾಪ್ತ ಕೊಬ್ಬುಗಳನ್ನು ಸಹ ಹೊಂದಿರುತ್ತದೆ.
2. ಜಫ್ರಾನಿ ಪುಲಾವ್
ಈ ಖಾದ್ಯವನ್ನು ಬಾಸ್ಮತಿ ಅಕ್ಕಿಯಿಂದ ತಯಾರಿಸಲಾಗುತ್ತದೆ, ಇದಕ್ಕೆ ನಟ್ಸ್, ಕೇಸರಿ, ಹಾಲು ಮತ್ತು ಕೆನೆ ಸಹ ಸೇರಿಸಲಾಗುತ್ತದೆ. ಇದು ತುಂಬಾನೇ ರುಚಿಕರವಾಗಿರುತ್ತದೆ ಮತ್ತು ಇದು ಸಾಕಷ್ಟು ಫೈಬರ್ ಅನ್ನು ಸಹ ಹೊಂದಿರುತ್ತದೆ. ಇದು ಖಂಡಿತವಾಗಿಯೂ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರಲು ಸಹಾಯ ಮಾಡುತ್ತದೆ.
3. ಬಸಂತಿ ಪುಲಾವ್
ಮಿಶ್ತಿ ಪುಲಾವ್ ಎಂದೂ ಕರೆಯಲ್ಪಡುವ ಬಸಂತಿ ಪುಲಾವ್ ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಇದು ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಸಹ ಹೊಂದಿರುತ್ತದೆ.
ಗೋಡಂಬಿ ಬೀಜಗಳಲ್ಲಿ ಸಕ್ಕರೆ ಕಡಿಮೆ ಮತ್ತು ಫೈಬರ್ ಸಮೃದ್ಧವಾಗಿದೆ. ಅವು ತಾಮ್ರ ಮತ್ತು ಮೆಗ್ನೀಸಿಯಮ್ನ ಉತ್ತಮ ಮೂಲವಾಗಿದೆ, ಇದು ಶಕ್ತಿ, ಮೆದುಳಿನ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಉತ್ಪಾದಿಸಲು ಅವಶ್ಯಕವಾಗಿದೆ.
4. ಅನ್ನದ ಪಾಯಸ (ಚಾವಲ್ ಕಿ ಖೀರ್)
ನೀವು ಬೆಳಗ್ಗೆ ಖೀರ್ ತಿನ್ನಲು ಇಷ್ಟಪಡುತ್ತೀರಿ ಎಂದಾದರೆ, ಅನ್ನದಿಂದ ತಯಾರಿಸಿದ ಖೀರ್ ಉತ್ತಮ ಪ್ರಮಾಣದ ಪಿಷ್ಟವನ್ನು ಹೊಂದಿರುತ್ತದೆ ಮತ್ತು ಇದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಇಡೀ ದೇಹದ ಮೇಲೆ, ವಿಶೇಷವಾಗಿ ಶಾಖದಲ್ಲಿ ತಂಪಾಗಿಸುವ ಪರಿಣಾಮವನ್ನು ಬೀರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ