ನವಜಾತ ಶಿಶುವಿಗೆ (Newborn) ತನ್ನ ತಾಯಿಯ ಹಾಲು (Breastfeed) ಅಮೃತವಿದ್ದಂತೆ ಎಂದು ಹೇಳುವ ಮಾತು ಅಕ್ಷರಶಃ ಸತ್ಯವಾದ ಮಾತು, ಏಕೆಂದರೆ ಆ ನವಜಾತ ಶಿಶುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ (Physical Development) ಇದು ತುಂಬಾನೇ ಸೂಕ್ತ ಎಂದು ಹೇಳಲಾಗುತ್ತದೆ.ತಾಯಿ ಎದೆಯ ಹಾಲು ನವಜಾತ ಶಿಶುವಿಗೆ ಪೌಷ್ಟಿಕವಾದ ಮತ್ತು ಸಂಪೂರ್ಣ ಸುರಕ್ಷಿತ, ಅಲ್ಲದೆ ಸರಳವಾಗಿ ಮಗುವಿಗೆ ಜೀರ್ಣವಾಗುವ ಆಹಾರ ಎಂದು ಹೇಳಬಹುದು. ಈ ಹಾಲಿನಲ್ಲಿ ಶಿಶುವಿನ ಬೆಳವಣಿಗೆಗೆ ಪೂರಕವಾದ ಎಲ್ಲಾ ರೀತಿಯ ಪೌಷ್ಟಿಕಾಂಶಗಳು (Nutrients) ಇರುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಅನಾರೋಗ್ಯದಿಂದ ಮಗುವನ್ನು ರಕ್ಷಣೆ
ಆದರೆ ಕೆಲವೊಬ್ಬ ಉದ್ಯೋಗಸ್ಥ ಮಹಿಳೆಯರು ತಾವು ಕೆಲಸಕ್ಕೆ ಹೋಗಲು ಮಗುವಿಗೆ ಬೇಗ ಎದೆ ಹಾಲುಣಿಸುವುದನ್ನು ಬಿಡಿಸುತ್ತಾರೆ ಮತ್ತು ಇನ್ನೂ ಕೆಲವರು ತಮ್ಮ ದೇಹ ಸೌಂದರ್ಯ ಎಲ್ಲಿ ಹಾಳಾಗುತ್ತದೆಯೋ ಅಂತಲೂ ಸಹ ಮಗುವಿಗೆ ಎದೆ ಹಾಲುಣಿಸುವುದನ್ನು ಬೇಗ ಬಿಡಿಸುವುದನ್ನು ನಾವು ನೋಡಿರುತ್ತೇವೆ ಮತ್ತು ಕೇಳಿಯೂ ಇರುತ್ತೇವೆ.
ಆದರೆ ಹೀಗೆ ಮಾಡುವುದು ತಾಯಿ ಮತ್ತು ಶಿಶುವಿಗೆ ಇಬ್ಬರಿಗೂ ಒಳ್ಳೆಯದಲ್ಲ ಎಂದು ಹೇಳಬಹುದು. ಹೆಚ್ಚಿನ ವೈದ್ಯಕೀಯ ತಜ್ಞರು ತಾಯಂದಿರಿಗೆ ತಮ್ಮ ನವಜಾತ ಶಿಶುವಿಗೆ ಕನಿಷ್ಠ ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಎದೆ ಹಾಲುಣಿಸಲು ಹೇಳುತ್ತಾರೆ. ಎದೆ ಹಾಲಿನಲ್ಲಿ ದೀರ್ಘಕಾಲೀನ ಕಾಯಿಲೆ ಮತ್ತು ಅನಾರೋಗ್ಯದಿಂದ ಮಗುವನ್ನು ರಕ್ಷಿಸುವ ಪ್ರತಿಕಾಯಗಳಿವೆ.
ಇದನ್ನೂ ಓದಿ: Breast Milk: ಟ್ರೆಂಡ್ ಆಗುತ್ತಿದೆ ಎದೆ ಹಾಲಿನ ಪೆಂಡೆಂಟ್..!ಆಧುನಿಕ ಯುಗದ ಹೊಸ ಆಭರಣಕ್ಕೆ ಜನರು ಫಿದಾ
ಫ್ರೀಡಂ ಟು ಫೀಡ್
ಮೊದಲನೆಯ ಬಾರಿಗೆ ಒಂದು ಮಗುವಿಗೆ ನೀವು ಜನ್ಮ ನೀಡಿದ ತಾಯಿ ನೀವಾಗಿದ್ದರೆ ನಿಮಗೆ ಎದೆ ಹಾಲುಣಿಸುವ ಬಗ್ಗೆ ಅನೇಕ ರೀತಿಯ ಗೊಂದಲಗಳಿರುತ್ತವೆ. ಅದರಲ್ಲಿ ಸಾಮಾನ್ಯ ಪ್ರಶ್ನೆಯೆಂದರೆ, ತನ್ನ ನವಜಾತ ಶಿಶುವಿಗೆ ಎಷ್ಟು ತಿಂಗಳುಗಳ ಕಾಲ ತನ್ನ ಎದೆ ಹಾಲುಣಿಸಬೇಕು ಎಂಬುದಾಗಿರುತ್ತದೆ. ಬನ್ನಿ ಹಾಗಾದರೆ ಈ ಎದೆ ಹಾಲು ಮಕ್ಕಳಿಗೆ ಎಷ್ಟು ಮುಖ್ಯವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಸಾಮಾಜಿಕ ಮಾಧ್ಯಮವಾದ ಇನ್ಸ್ಟಾಗ್ರಾಮ್ನಲ್ಲಿ ಒಂದು ಪುಟವಿದೆಯಂತೆ, ಅದು ‘ಫ್ರೀಡಂ ಟು ಫೀಡ್’ ಅಂತ, ಇದನ್ನು ಪ್ರಾರಂಭಿಸಿದವರು ಬಾಲಿವುಡ್ ನಟಿ ನೇಹಾ ಧೂಪಿಯಾ ಎಂದು ಹೇಳಲಾಗುತ್ತಿದೆ. ಇದರಲ್ಲಿ ತಾಯಿಯ ಎದೆ ಹಾಲು ನವಜಾತ ಶಿಶುವಿಗೆ ಯಾವ ಯಾವ ಹಂತದಲ್ಲಿ ಹೇಗೆ ಆರೋಗ್ಯಕರ ಪ್ರಯೋಜನ ನೀಡುತ್ತದೆ ಎಂಬುದರ ಬಗ್ಗೆ ತಿಳಿಸುತ್ತದೆ.
ಮೊದಲ ದಿನ: ನವಜಾತ ಶಿಶುವು ಜನಿಸಿದ ಮೊದಲ ದಿನ ಅದಕ್ಕೆ ಕುಡಿಸುವ ಎದೆ ಹಾಲನ್ನು ಕೊಲೊಸ್ಟ್ರಮ್ ಎಂದೂ ಕರೆಯಲ್ಪಡುತ್ತದೆ ಮತ್ತು ಈ ಕೊಲೊಸ್ಟ್ರಮ್ ಅಂಶವು ಈಗತಾನೇ ಜನಿಸಿದ ಶಿಶುವಿನ ಸೂಕ್ಷ್ಮ ಕರುಳನ್ನು ರಕ್ಷಿಸುತ್ತದೆ.
ಒಂದನೇ ತಿಂಗಳು: ತಾಯಿ ಮತ್ತು ಮಗು ಇಬ್ಬರನ್ನೂ ಶುಶ್ರೂಷೆ ಮಾಡುವ ಸಮಯ ಇದಾಗಿದ್ದು, ಶಿಶುವಿಗೆ ಜನ್ಮ ನೀಡಿದ ಮಹಿಳೆಯ ಗರ್ಭಾಶಯ ಅದರ ಮೂಲ ಗಾತ್ರಕ್ಕೆ ಹಿಂತಿರುಗಲು ಅನುಕೂಲ ಮಾಡಿಕೊಡುವುದು. ಮೊದಲನೆಯ ತಿಂಗಳಿನಲ್ಲಿ ಮಗುವಿಗೆ ಎದೆ ಹಾಲು ಉಣಿಸುವುದರಿಂದ ಅದು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಿಸುವ ಅಪಾಯ ಕಡಿಮೆ ಮಾಡುತ್ತದೆ.
ನಾಲ್ಕನೇ ತಿಂಗಳು: ನಾಲ್ಕನೇ ತಿಂಗಳಿನಲ್ಲಿ ಈ ಎದೆ ಹಾಲು ಈ ಹಠಾತ್ ಶಿಶು ಮರಣ ಸಿಂಡ್ರೋಮ್ ಮತ್ತು ಆಸ್ತಮಾದ ದೀರ್ಘಕಾಲೀನ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ತಾಯಿಯ ಪ್ರಸವ ನಂತರದ ಖಿನ್ನತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆರನೇ ತಿಂಗಳು: ಈ ಸಮಯದಲ್ಲಿ ಘನ ಆಹಾರ ನೀಡಲು ಮಗುವಿನ ಕರುಳು ಪಕ್ವವಾಗುತ್ತದೆ. ಈ ಹಂತದಲ್ಲಿ, ಎದೆ ಹಾಲುಣಿಸುವುದು ಹಾಗೆಯೇ ಮುಂದುವರಿದರೆ, ಕೆಲವು ಕ್ಯಾನ್ಸರ್ ಅಪಾಯಗಳನ್ನು ಸಹ ಇದು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: Breastfeeding: ಹಾಲುಣಿಸುವ ತಾಯಂದಿರೇ ತೂಕ ಇಳಿಸುವ ಚಿಂತೆಯೇ? ಹಾಗಾದರೆ ಇವುಗಳ ಬಗ್ಗೆ ತಿಳಿಯಿರಿ
ಒಂಬತ್ತನೇ ತಿಂಗಳು: ಮಗುವಿಗೆ ಘನ ಆಹಾರಗಳಲ್ಲಿ ಹೆಚ್ಚು ಆಸಕ್ತಿ ಇಲ್ಲದಿದ್ದಾಗ, ಎದೆ ಹಾಲು ಎಲ್ಲಾ ಪೌಷ್ಟಿಕಾಂಶವನ್ನು ಒದಗಿಸುವುದನ್ನು ಮುಂದುವರಿಸುತ್ತದೆ.
ಹನ್ನೆರಡನೇ ತಿಂಗಳು: ಒಂದು ವರ್ಷ ಕಳೆದರೂ ಸಹ ನಿಮ್ಮ ಮಗು ಎದೆ ಹಾಲು ಕುಡಿಯುತ್ತಿದ್ದರೆ, ಇದು ಮಗುವಿನ ಜೀವನ ಪರ್ಯಂತ ಹೃದ್ರೋಗ, ಕ್ಯಾನ್ಸರ್, ಅಧಿಕ ರಕ್ತದೊತ್ತಡ ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಹದಿನೆಂಟನೇ ತಿಂಗಳು: ಈ ಅವಧಿಯವರೆಗೆ ನೀವು ನಿಮ್ಮ ಮಗುವಿಗೆ ಎದೆ ಹಾಲನ್ನು ಕುಡಿಸುವುದನ್ನು ಮುಂದುವರಿಸಿದರೆ, ಇದು ನಿಮ್ಮ ಮಗುವಿನ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ಹೇಳಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ