Easy Recipe: ಗೌರಿ ಹಬ್ಬಕ್ಕೆ ಸಿಂಪಲ್ ಆಗಿ ತಯಾರಿಸಬಹುದಾದ ರುಚಿಕರ ಖಾದ್ಯಗಳಿವು; ಪಾಕ ವಿಧಾನ ಇಲ್ಲಿದೆ ನೋಡಿ

ಗೌರಿ ಪೂಜೆ ಹಾಗೂ ವೃತದ ಸಮಯದಲ್ಲಿ ವೃತಕ್ಕೆ ಸಂಬಂಧಿಸಿದ ಪಾಕ ವೈವಿಧ್ಯಗಳನ್ನು ಮಾಡಲಾಗುತ್ತದೆ, ಪೂಜೆಯ ನಂತರ ಪ್ರಸಾದ ರೂಪದಲ್ಲಿ ಇದನ್ನು ಭಕ್ತಾದಿಗಳಿಗೆ ನೀಡಲಾಗುತ್ತದೆ. ಹಾಗಿದ್ದರೆ ಗೌರಿ ವೃತಕ್ಕಾಗಿಯೇ ತಯಾರಿಸಲಾಗುವ ಈ ವಿಶೇಷ ಖಾದ್ಯ ವೈವಿಧ್ಯಗಳನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಹಿಂದೂಗಳ ಪವಿತ್ರ ಹಬ್ಬವಾಗಿರುವ (Festival) ಸ್ವರ್ಣ ಗೌರಿ ವ್ರತವನ್ನು (Swarna Gauri Vratha) ಭಾರತದ ಪಶ್ಚಿಮ ಹಾಗೂ ದಕ್ಷಿಣ ಭಾಗದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗೌರಿ ಮಾತೆ ಎಂದೂ ಕರೆಯಲ್ಪಡುವ ಪಾರ್ವತಿ (Parvathi) ದೇವಿಗೆ ಭಕ್ತಿ ತುಂಬಿದ ಕೃತಜ್ಞತೆಯನ್ನು ಅರ್ಪಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ. ಗಣೇಶ ಚತುರ್ಥಿಗೂ (Ganesha Chathurthi) ಒಂದು ದಿನ ಮುಂಚಿತವಾಗಿ ಆಚರಿಸಲಾಗುವ ಈ ಹಬ್ಬವನ್ನು ಹಲವಾರು ವಿಧಿ ವಿಧಾನಗಳ ಮೂಲಕ ಆಚರಿಸಲಾಗುತ್ತದೆ. ಈ ದಿನದಂದು ವಿವಾಹಿತ ಅಂತೆಯೇ ಅವಿವಾಹಿತ ಮಹಿಳೆಯರೂ (Married Women) ಸಹ ವೃತವನ್ನು ಆಚರಿಸಿ ಪಾರ್ವತಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.

ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯ ಮನೆಯ ಸುಖ ಶಾಂತಿ ನೆಮ್ಮದಿಗಾಗಿ ಪಾರ್ವತಿ ದೇವಿಯನ್ನು ಬೇಡಿ ವೃತವನ್ನು ಕೈಗೊಂಡರೆ ಅವಿವಾಹಿತ ಮಹಿಳೆಯರು ಶೀಘ್ರ ಕಲ್ಯಾಣ ಪ್ರಾಪ್ತಿಗಾಗಿ ಅಂತೆಯೇ ಸಚ್ಚಾರಿತ್ರ್ಯವುಳ್ಳ ಪತಿಯನ್ನು ಕರುಣಿಸು ಎಂದು ಪಾರ್ವತಿ ದೇವಿಯನ್ನು ಪ್ರಾರ್ಥಿಸಿ ವೃತ ಪೂಜೆ ಪುನಸ್ಕಾರಗಳನ್ನು ಕೈಗೊಳ್ಳುತ್ತಾರೆ. ಪೂಜೆ ಹಾಗೂ ವೃತದ ಸಮಯದಲ್ಲಿ ವೃತಕ್ಕೆ ಸಂಬಂಧಿಸಿದ ಪಾಕ ವೈವಿಧ್ಯಗಳನ್ನು ಮಾಡಲಾಗುತ್ತದೆ, ಪೂಜೆಯ ನಂತರ ಪ್ರಸಾದ ರೂಪದಲ್ಲಿ ಇದನ್ನು ಭಕ್ತಾದಿಗಳಿಗೆ ನೀಡಲಾಗುತ್ತದೆ. ಹಾಗಿದ್ದರೆ ಗೌರಿ ವೃತಕ್ಕಾಗಿಯೇ ತಯಾರಿಸಲಾಗುವ ಈ ವಿಶೇಷ ಖಾದ್ಯ ವೈವಿಧ್ಯಗಳನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳೋಣ.

ಚಿತ್ರಾನ್ನ

ದಕ್ಷಿಣ ಭಾರತದಲ್ಲಿ ಹೆಚ್ಚು ಮನೆಮಾತಾಗಿರುವ ಅಂತೆಯೇ ಜನಪ್ರಿಯವಾಗಿರುವ ಚಿತ್ರಾನ್ನವನ್ನು ಸುಲಭವಾಗಿ ತಯಾರಿಸಬಹುದು. ಅನ್ನಕ್ಕೆ ಉದ್ದಿನ ಬೇಳೆ, ಸಾಸಿವೆ, ಕಡಲೆ ಬೀಜ, ಕರಿಬೇವು, ಈರುಳ್ಳಿ, ಲಿಂಬೆ ರಸ, ಉಪ್ಪು, ಅರಶಿನ, ಇಂಗು, ಕೊತ್ತಂಬರಿ ಸೊಪ್ಪು ಸೇರಿಸಿ ಚಿತ್ರಾನ್ನವನ್ನು ತಯಾರಿಸಲಾಗುತ್ತದೆ. ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ಎಣ್ಣೆ ಬಿಸಿಯಾದ ನಂತರ ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೀಜ, ಕರಿಬೇವಿನೆಲೆ, ಇಂಗು ಹಾಕಿ ಹುರಿದುಕೊಳ್ಳಿ ತದನಂತರ ಈರುಳ್ಳಿ ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ಇದಕ್ಕೆ ಅರಶಿನ ಸೇರಿಸಿ. ನಂತರ ಅನ್ನವನ್ನು ಮಿಶ್ರಣ ಮಾಡಿ ಎಲ್ಲವನ್ನೂ ಚೆನ್ನಾಗಿ ತಿರುವಿಕೊಳ್ಳಿ. ಕೊನೆಗೆ ಸ್ವಲ್ಪ ತೆಂಗಿನ ತುರಿ ಲಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪು ಬೆರೆಸಿಕೊಳ್ಳಿ.

ಇದನ್ನೂ ಓದಿ: Breakfast Recipe: ಕೇವಲ 10 ನಿಮಿಷದಲ್ಲಿ ಈ ಉಪ್ಪಿಟ್ಟು ಮಾಡ್ಬೋದು, ಮಕ್ಕಳಿಗೂ ಇಷ್ಟವಾಗುತ್ತೆ

ತೋವೆ

ಕಟ್ಟುಸಾರು ಎಂದೇ ಜನಪ್ರಿಯವಾಗಿರುವ ತೋವೆಯನ್ನು ತೊಗರಿ ಬೇಳೆಯನ್ನು ಬೇಯಿಸಿ ತಯಾರಿಸಲಾಗುತ್ತದೆ. ಇದಕ್ಕೆ ಬೇಕಾಗಿರುವ ಸಾಮಾಗ್ರಿಗಳೆಂದರೆ ತೊಗರಿ ಬೇಳೆ, ಉದ್ದಿನ ಬೇಳೆ, ಸಾಸಿವೆ, ಇಂಗು, ಕರಿಬೇವು, ಮೆಣಸು, ಶುಂಠಿ, ಕೊತ್ತಂಬರಿ ಸೊಪ್ಪು, ಅರಶಿನ, ತುಪ್ಪು, ಜೀರಿಗೆಯಾಗಿದೆ. ಮೊದಲಿಗೆ ತೊಗರಿಬೇಳೆಯನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳಬೇಕು. ಇದೇ ಸಮಯದಲ್ಲಿ ಶುಂಠಿ, ಕರಿಬೇವು, ಮೆಣಸು, ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಪ್ಯಾನ್‌ನಲ್ಲಿ ತುಪ್ಪವನ್ನು ಬಿಸಿಮಾಡಿ ಅದಕ್ಕೆ ಜೀರಿಗೆ, ಸಾಸಿವೆ, ಹೆಚ್ಚಿಟ್ಟುಕೊಂಡ ತರಕಾರಿ ಹಾಕಿ. ಇದೇ ಮಿಶ್ರಣಕ್ಕೆ ಇಂಗು, ಅರಶಿನ ಬೆರೆಸಿ. ನಂತರ ತೊಗರಿ ಬೇಳೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ 10 ನಿಮಿಷಗಳ ಕಾಲ ಕುದಿಯಲು ಬಿಡಿ ಕೊನೆಗೆ ಲಿಂಬೆ ರಸ ಸೇರಿಸಿ.

ಸೇಮಿಗೆ ಪಾಯಸ

ಸೇಮಿಗೆ ಪಾಯಸಕ್ಕೆ ಬೇಕಾಗಿರುವ ಸಾಮಾಗ್ರಿಗಳೆಂದರೆ ಸೇಮಿಗೆ, ಹಾಲು, ತುಪ್ಪ, ಒಣ ಹಣ್ಣುಗಳು, ಏಲಕ್ಕಿ, ಸಕ್ಕರೆಯಾಗಿದೆ. ತುಪ್ಪದಲ್ಲಿ ಸೇಮಿಗೆಯನ್ನು ಕೆಂಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಿ. ನಂತರ ಒಣ ಹಣ್ಣುಗಳನ್ನು ಹುರಿದುಕೊಳ್ಳಿ. ಪಾತ್ರೆಯಲ್ಲಿ ಹಾಲು ಬಿಸಿ ಮಾಡಿ ಹಾಗೂ ಸಕ್ಕರೆ, ಏಲಕ್ಕಿ ಹುಡಿ ಮತ್ತು ಹುರಿದಿಟ್ಟುಕೊಂಡ ಸೇಮಿಗೆ ಸೇರಿಸಿ ಜೊತೆಗೆ ಒಣ ಹಣ್ಣುಗಳನ್ನು ಮಿಶ್ರ ಮಾಡಿ. 10 ನಿಮಿಷಗಳ ಕಾಲ ಕುದಿಯಲು ಬಿಡಿ.

ಕಾಯಿ ಹೋಳಿಗೆ


ದಕ್ಷಿಣ ಭಾರತದ ಹೆಸರಾಂತ ಸಿಹಿ ಖಾದ್ಯವಾದ ಕಾಯಿ ಹೋಳಿಗೆಯನ್ನು ತುರಿದ ತೆಂಗಿನ ಕಾಯಿ, ಬೆಲ್ಲ, ಎಳ್ಳೆಣ್ಣೆ, ಮೈದಾ, ಅರಶಿನ ಮತ್ತು ಕುಟ್ಟಿದ ಏಲಕ್ಕಿ ಬೆರೆಸಿ ತಯಾರಿಸಲಾಗುತ್ತದೆ. ಮೊದಲಿಗೆ ಹಿಟ್ಟು ತಯಾರಿಸಲು ಮೈದಾಗೆ ಚಿಟಿಕೆ ಅರಶಿನ, ಎಳ್ಳೆಣ್ಣೆ, ನೀರು ಸೇರಿಸಿ ತಯಾರಿಸಿ. ಒಂದು ಪಾತ್ರೆಯಲ್ಲಿ ತೆಂಗಿನ ತುರಿ, ಬೆಲ್ಲ ಹಾಗೂ ಏಲಕ್ಕಿಯನ್ನು ಬೆರೆಸಿ ಹೂರಣ ಸಿದ್ಧಪಡಿಸಿ. ಹಿಟ್ಟಿನ ಸಣ್ಣ ಉಂಡೆಯನ್ನು ಮಾಡಿ ಇದಕ್ಕೆ ಒಂದು ಚಮಚ ಹೂರಣವನ್ನು ಸೇರಿಸಿ. ಉಂಡೆಮಾಡಿಕೊಂಡು ಅದನ್ನು ಹಿಟ್ಟಿನಿಂದ ಮುಚ್ಚಿ. ಮೃದುವಾಗಿ ಲಟ್ಟಿಸಿ ಇಲ್ಲದಿದ್ದರೆ ಕೈಯಿಂದ ತಟ್ಟಿ. ತವಾ ಬಿಸಿಯಾದೊಡನೆ ಕಾಯಿಸಿ.

ಕಾಯಿ ಕಡುಬು

ಇದೊಂದು ರೀತಿಯ ಮೋದಕವಾಗಿದ್ದು ಅಕ್ಕಿ ಹಿಟ್ಟು, ತೆಂಗಿನ ತುರಿ, ಬೆಲ್ಲ, ತುಪ್ಪ, ಏಲಕ್ಕಿ ಹಾಗೂ ಉಪ್ಪು ಬೆರೆಸಿ ತಯಾರಿಸಲಾಗುತ್ತದೆ. ಕುದಿಯುವ ನೀರಿಗೆ ಉಪ್ಪು, ತುಪ್ಪ ಹಾಗೂ ಅಕ್ಕಿ ಹಿಟ್ಟು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿ ನಂತರ ಏಲಕ್ಕಿ, ಬೆಲ್ಲ ಮತ್ತು ತೆಂಗಿನ ತುರಿ ಸೇರಿಸಿ. ಮಿಶ್ರಣ ದಪ್ಪಗಾಗುತ್ತಿದ್ದಂತೆ ಹಾಗೂ ನೀರು ಆರಿದ ನಂತರ ಒಂದು ಪಾತ್ರೆಗೆ ತೆಗೆಯಿರಿ ಹಾಗೂ ಹಿಟ್ಟನ್ನು ನಾದಿಕೊಳ್ಳಿ. ಸಣ್ಣ ಉಂಡೆಯ ಆಕಾರಕ್ಕೆ ತಯಾರಿಸಿ ಅದನ್ನು ಬೆಲ್ಲ ಹಾಗೂ ತೆಂಗಿನ ತುರಿಯ ಹೂರಣದಿಂದ ತುಂಬಿಸಿ. ದೋಸೆ ಅಥವಾ ಮೋದಕದ ರೀತಿಯಲ್ಲಿ ಮಡಚಿ. ಬೇಯಿಸಿ ಬಿಸಿಯಾಗಿ ಬಡಿಸಿ.

ಇದನ್ನೂ ಓದಿ: Breakfast Recipe: ಈ ಇಡ್ಲಿಯನ್ನು ಕೇವಲ 20 ನಿಮಿಷದಲ್ಲಿ ಮಾಡಬಹುದು, ನೀವೂ ಟ್ರೈ ಮಾಡಿ

ಚಕ್ಕುಲಿ

ಚಕ್ಕುಲಿಯನ್ನು ತುಂಬಾ ಸುಲಭವಾಗಿ ಕಡಿಮೆ ಸಾಮಾಗ್ರಿಯಲ್ಲಿ ರುಚಿಯಾಗಿ ತಯಾರಿಸಬಹುದಾಗಿದೆ. ಅಕ್ಕಿ ಹಿಟ್ಟು, ಉದ್ದಿನ ಬೇಳೆ, ಎಳ್ಳು, ಇಂಗು, ಓಮ್ ಕಾಳು, ಖಾರದ ಪುಡಿ ಮತ್ತು ಉಪ್ಪು ಇದಕ್ಕೆ ಬೇಕಾದ ಪದಾರ್ಥಗಳು. ಚಕ್ಕುಲಿ ಮೇಕರ್ ಬಳಸಿಕೊಂಡು ನೀವು ಚಕ್ಕಲಿ ತಯಾರಿಸಬಹುದು. ಎಲ್ಲಾ ಸಾಮಾಗ್ರಿಗಳನ್ನು ಜೊತೆಯಾಗಿ ನೀರು ಸೇರಿಸಿ ಮಿಶ್ರ ಮಾಡಿ ಹಾಗೂ ಸಣ್ಣ ಉಂಡೆಗಳನ್ನಾಗಿ ತಯಾರಿಸಿ ನಂತರ ಇದನ್ನು ಚಕ್ಕುಲಿ ಮೇಕರ್‌ಗೆ ತುಂಬಿಸಿ ಚಕ್ಕುಲಿ ಆಕಾರದಲ್ಲಿ ಮೇಕರ್‌ನಲ್ಲಿ ಹಿಟ್ಟನ್ನು ಒತ್ತಿಕೊಳ್ಳಿ. ಬಿಸಿ ಎಣ್ಣೆಯಲ್ಲಿ ಗರಿ ಗರಿಯಾಗಿ ಚಕ್ಕುಲಿ ಕರಿದುಕೊಳ್ಳಿ.

ರಸಂ

ಖಾರ ಹುಳಿ ಮಿಶ್ರಿತ ರೆಸಿಪಿಯನ್ನು ಸುಲಭವಾಗಿ ತಯಾರಿಸಬಹುದು. ಅರಶಿನ, ಹುಳಿ, ಕರಿಬೇವು, ಇಂಗು, ಶುಂಠಿ, ಜೀರಿಗೆ, ಇವಿಷ್ಟಿದ್ದರೆ ಸಾಕು. ಹುಳಿಯನ್ನು ನೀರಿನಲ್ಲಿ ನೆನಸಿಕೊಳ್ಳಿ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಒಂದೊಂದಾಗಿ ಮೇಲೆ ತಿಳಿಸಿದ ಸಾಮಾಗ್ರಿಗಳನ್ನು ಎಣ್ಣೆಗೆ ಹಾಕಿ ಕೊನೆಯಲ್ಲಿ ಮೆಣಸು ಹಾಕಿ. ಎಲ್ಲವನ್ನೂ ಚೆನ್ನಾಗಿ ಹುರಿಯಿರಿ ಕೊನೆಗೆ ಹುಳಿ ನೀರು ಮಿಶ್ರ ಮಾಡಿ.

ಕೋಸಂಬರಿ
ಸಲಾಡ್ ರೆಸಿಪಿಯಾಗಿರುವ ಕೋಸಂಬರಿ ಆರೋಗ್ಯಕ್ಕೂ ಅತ್ಯುತ್ತಮವಾದುದು. ನೆನೆಸಿಟ್ಟ ಹೆಸರು ಕಾಳು, ಸೌತೆಕಾಯಿ, ತೆಂಗಿನ ತುರಿ, ಕೆಂಪು ಮೆಣಸು, ನಿಂಬೆ ರಸ, ಸಾಸಿವೆ, ಕರಿಬೇವಿನ ಸೊಪ್ಪು, ಉಪ್ಪು ಬೆರೆಸಿ ಕೋಸಂಬರಿ ತಯಾರಿಸಲಾಗುತ್ತದೆ. ದೊಡ್ಡ ಪಾತ್ರೆಗೆ ಈ ಎಲ್ಲಾ ಸಾಮಾಗ್ರಿಗಳನ್ನು ಹಾಕಿ. ಸಲಾಡ್‌ಗೆ ಒಗ್ಗರಣೆ ಹಾಕಲು ಕೆಂಪು ಮೆಣಸು ಮತ್ತು ಸಾಸಿವೆಯನ್ನು ಎಣ್ಣೆಯೊಂದಿಗೆ ಕರಿಯಿರಿ.

ಅಂಬೊಡೆ

ಕರ್ನಾಟಕ ಶೈಲಿಯ ಮಸಾಲೆ ವಡೆ ಖಾದ್ಯವಾಗಿರುವ ಅಂಬೊಡೆಯನ್ನು ನೆನೆಸಿಟ್ಟ ಕಡಲೆ ಬೇಳೆ, ಕೊತ್ತಂಬರಿ ಸೊಪ್ಪು, ಅಕ್ಕಿ ಹುಡಿ, ಈರುಳ್ಳಿ, ಶುಂಠಿ, ಹಸಿ ಮೆಣಸು, ಉಪ್ಪು, ಅರಶಿನ, ಇಂಗು ಬೆರೆಸಿ ತಯಾರಿಸಲಾಗುತ್ತದೆ. ದೊಡ್ಡ ಪಾತ್ರೆಗೆ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ನಂತರ ಸಣ್ಣ ಉಂಡೆಗಳನ್ನು ತಯಾರಿಸಿ. ಎಣ್ಣೆಯಲ್ಲಿ ಉಂಡೆಗಳನ್ನು ತಟ್ಟಿ ಕರಿದುಕೊಳ್ಳಿ. ಚಟ್ನಿಯೊಂದಿಗೆ ಅಂಬೊಡೆ ನೀಡಿ.

ಇದನ್ನೂ ಓದಿ:  Ganesha Chaturthi: ಗಣಪನಿಗೆ ಇಷ್ಟವಾದ ಕಡಬು ಮಾಡುವ ವಿಧಾನ

ಮೋತಿಚೂರ್ ಲಾಡು

ಸಿಹಿತಿಂಡಿಗಳಲ್ಲಿ ಅತ್ಯಂತ ಹೆಚ್ಚು ಪ್ರಿಯವಾದ ತಿನಿಸೆಂದರೆ ಮೋತಿಚೂರ್ ಲಾಡಾಗಿದೆ. ಬೂಂದಿ/ಬುಂದೆ ಉಂಡಿ ಎಂದೂ ಕರೆಯಲ್ಪಡುವ ಈ ಲಾಡುವನ್ನು ಹಬ್ಬದ ದಿನಗಳಲ್ಲಿ ಹೆಚ್ಚಾಗಿ ತಯಾರಿಸುತ್ತಾರೆ. ಕಡಲೆಹುಡಿ, ತುಪ್ಪ, ಬೇಕಿಂಗ್ ಸೋಡಾ, ಏಲಕ್ಕಿ, ಫುಡ್ ಕಲರ್ ಬಳಸಿ ಲಾಡು ತಯಾರಿಸಲಾಗುತ್ತದೆ. ಕಡಲೆ ಹಿಟ್ಟಿಗೆ ಫುಡ್ ಕಲರ್ ಬೆರೆಸಿ ಮಿಶ್ರಮಾಡಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ ಚಿಟಿಕೆ ಸೋಡಾ ಬೆರೆಸಿ. ಮಿಶ್ರಣವನ್ನು ಗಂಟಿಲ್ಲದಂತೆ ನಾದಿಕೊಳ್ಳಿ. ಮಿಶ್ರಣವು ಚೆನ್ನಾಗಿ ಹದವಾಗಿರುವಂತೆ ನಾದಿದ ನಂತರ ಒಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿಕೊಳ್ಳಿ. ಲಾಡುಗೆ ಬೇಕಾದ ಬೂಂದಿಯನ್ನು ತುಪ್ಪದಲ್ಲಿ ಹುರಿದು ತಯಾರಿಸಿ. ಸಕ್ಕರೆ ಪಾಕ ತಯಾರಿಸಿ ಇದಕ್ಕೆ ಏಲಕ್ಕಿ ಹುಡಿ ಸೇರಿಸಿ ತಣ್ಣಗಾಗಲು ಬಿಡಿ. ಬೂಂದಿಯನ್ನು ಸಕ್ಕರೆ ಪಾಕದಲ್ಲಿ ಬೇಯಿಸಿ ಹಾಗೂ ಬೂಂದಿಯನ್ನು ಮಿಶ್ರಮಾಡಿ. ಕೈಗಳಿಗೆ ತುಪ್ಪ ಸವರಿಕೊಳ್ಳಿ ಲಾಡು ತಯಾರಿಸಲು ಪ್ರಾರಂಭಿಸಿ.
Published by:Ashwini Prabhu
First published: