ಕ್ರಿಸ್ಟಿಯಾನೊ ರೊನಾಲ್ಡೊ : ಆಕ್ರಮಣಕಾರಿ ಆಟಗಾರನ ಮಾನವೀಯತೆ

news18
Updated:July 21, 2018, 9:20 PM IST
ಕ್ರಿಸ್ಟಿಯಾನೊ ರೊನಾಲ್ಡೊ : ಆಕ್ರಮಣಕಾರಿ ಆಟಗಾರನ ಮಾನವೀಯತೆ
  • News18
  • Last Updated: July 21, 2018, 9:20 PM IST
  • Share this:
ಜಾಹಿರ್, ನ್ಯೂಸ್ 18 ಕನ್ನಡ

ಫುಟ್​ಬಾಲ್​ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ತಾನೇಗೆ ಇತರೆ ತಾರೆಗಳಿಕ್ಕಿಂತ ಭಿನ್ನ ಎಂದು ಮತ್ತೊಮ್ಮೆ ನಿರೂಪಿಸಿದ್ದಾರೆ. ಫುಟ್​ಬಾಲ್​ ಅಂಗಳದ ಆಕ್ರಮಣಕಾರಿ ಆಟಗಾರ ಎಂದು ಖ್ಯಾತಿ ಪಡೆದಿರುವ ಕ್ರಿಸ್ಟಿಯಾನೊ ಮೈದಾನದ ಹೊರಗೆ ಮಾತ್ರ ಮಾನವೀಯತೆಯ ಸರದಾರ. ಸ್ಪೇನ್​ನ ಖ್ಯಾತ ಫುಟ್​ಬಾಲ್ ಕ್ಲಬ್ ರಿಯಲ್ ಮ್ಯಾಡ್ರಿಡ್​ನಿಂದ ದಾಖಲೆ ಮೊತ್ತಕ್ಕೆ ಮಾರಾಟವಾಗಿದ್ದ ರೊನಾಲ್ಡೊ ಸದ್ಯ ಪ್ರವಾಸದ ಮೂಡ್​ನಲ್ಲಿದ್ದಾರೆ.

ಪತ್ನಿ ಮತ್ತು ಪುತ್ರನೊಂದಿಗೆ ಗ್ರೀಸ್ ಪ್ರವಾಸದಲ್ಲಿರುವ ಪೋರ್ಚುಗಲ್​ ಆಟಗಾರ ಇತ್ತೀಚೆಗೆ ಕೋಸ್ಟಾ ನವರಿನೊ ಎಂಬ ರೆಸ್ಟೊರೆಂಟ್​ನಲ್ಲಿ ತಂಗಿದ್ದರು. ಫುಟ್​ಬಾಲ್ ಮೈದಾನದಲ್ಲಿ ಕಾಲಿನಿಂದಲೇ ಕಾವ್ಯ ರಚಿಸುವ ಆಟಗಾರನ ಉಪಚರಿಸುವುದೇ ಭಾಗ್ಯ ಎಂದು ತಿಳಿದಿದ್ದ ಅಲ್ಲಿನ ಸಿಬ್ಬಂದಿಗೆ ಕೊನೆಗೆ ಅಚ್ಚರಿಯೊಂದು ಕಾದಿತ್ತು.

ತಮ್ಮ ವಿಶ್ರಾಂತಿ ಮುಗಿಸಿ ಪಯಣ ಮುಂದುವರೆಸಿದ್ದ ರೊನಾಲ್ಡೊ ಹೊರಡುವ ಮುನ್ನ 20000 ಯೂರೋ ಹಣವನ್ನು ಟಿಪ್ಸ್​ ಆಗಿ ನೀಡಿದ್ದರು. ಅಂದರೆ ಬರೋಬ್ಬರಿ 16 ಲಕ್ಷಕ್ಕೂ ಹೆಚ್ಚಿನ ಮೊತ್ತ. ಈ ಟಿಪ್ಸ್​ ಅನ್ನು ತಮಗಾಗಿ ಸಮಯ ವ್ಯಯಿಸಿದ ಸಿಬ್ಬಂದಿಗಳಿಗೆ ಹಂಚುವಂತೆ ಕ್ರಿಸ್ಟಿಯಾನೊ ರೆಸ್ಟೊರೆಂಟ್​ ಮ್ಯಾನೇಜರ್​ಗೆ ತಿಳಿಸಿದ್ದರು.

ರೊನಾಲ್ಡೊ ಕುಟುಂಬವನ್ನು 10 ಮಂದಿಯ ತಂಡ ಉಪಚರಿಸಿದ್ದು, ತಲಾ 2 ಸಾವಿರ ಯುರೋನಂತೆ ಈ ಟಿಪ್ಸ್​ ಹಣವನ್ನು ಹಂಚಲಾಯಿತು.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಸ್ಟಿಯಾನೊ ಫೋಟೋವನ್ನು ಹಾಕಿ ರೆಸ್ಟೊರೆಂಟ್​ ಸಿಬ್ಬಂದಿಗಳು ಧನ್ಯವಾದ ತಿಳಿಸಿದ್ದಾರೆ. ಈ ಫೋಟೊಗಳು ವೈರಲ್ ಆಗುತ್ತಿದ್ದಂತೆ ಮತ್ತೊಮ್ಮೆ ಮೈದಾನದ ಹೊರಗೆ ಕ್ರಿಸ್ಟಿಯಾನೊ ರೊನಾಲ್ಡೊ ಹೀರೋ ಆಗಿ ಮಿಂಚಿದ್ದಾರೆ. ಅಲ್ಲದೆ ಫುಟ್​ಬಾಲ್​ ಲೋಕದ ವಿಶಾಲ ಹೃದಯಿ ಎಂಬ ಮೆಚ್ಚುಗೆಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದು ಬರುತ್ತಿದೆ.

ವಿಶ್ವಕಪ್-​2018 ನಲ್ಲಿ ಪೋರ್ಚುಗಲ್ ತಂಡವನ್ನು ಮುನ್ನೆಡೆಸಿದ್ದ ರೊನಾಲ್ಡೊ ಟೀಮನ್ನು 8ರ ಘಟಕ್ಕೆ ಕೊಂಡೊಯ್ಯಲು ವಿಫಲರಾಗಿದ್ದರು. ಇದರ ಬೆನ್ನಲ್ಲೇ ನಡೆದ ಕ್ಲಬ್ ಬಿಡ್ಡಿಂಗ್​ನಲ್ಲಿ 'ರಿಯಲ್​ ಮ್ಯಾಡ್ರಿಡ್'​ ತಂಡದಿಂದ 'ಜುವೆಂಟಸ್'​ ತಂಡಕ್ಕೆ ದಾಖಲೆ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಇದರೊಂದಿಗೆ ವಿಶ್ವ ಫುಟ್​ಬಾಲ್​ನ​ ಅತೀ ಬೇಡಿಕೆಯ ಆಟಗಾರ ಎಂಬ ಖ್ಯಾತಿ ಇದೀಗ ರೊನಾಲ್ಡೊ ಪಾಲಾಗಿದೆ.

ಇಟಲಿಯ 'ಜುವೆಂಟಸ್' ಕ್ಲಬ್​ ಬರೊಬ್ಬರಿ 100 ಮಿಲಿಯನ್ ಯೂರೋಗಳನ್ನು ನೀಡಿ ರೊನಾಲ್ಡೋ ಅವರನ್ನು ಖರೀದಿ ಮಾಡಿದೆ. ಅಲ್ಲದೆ ಪ್ರತೀ ಟೂರ್ನಿಗೆ ಸುಮಾರು 30 ಮಿಲಿಯನ್ ಯೂರೋಗಳನ್ನು ಕ್ರಿಸ್ಟಿಯಾನೊಗೆ ನೀಡಲು ಜುವೆಂಟಸ್ ತಂಡ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಕ್ರಿಸ್ಟಿಯಾನೊ ರೊನಾಲ್ಡೊ ಎಲ್ಲರನ್ನೂ ಆಕರ್ಷಿಸುವುದು ಅವರ ಮಾನವೀಯ ಗುಣಗಳಿಂದ ಎಂಬುದೇ ಸತ್ಯ.  ಮನಸ್ಸು ಮಾಡಿದರೆ ಯಾವುದೇ ಬ್ರಾಂಡ್ ಅಂಬಾಸಿಡರ್​ ಆಗಿ ಮಿಂಚಬಹುದಾದ ಕ್ರಿಸ್ಟಿಯಾನೊ ಆರಿಸಿಕೊಂಡಿರುವುದು ಮೂರು ಸಂಸ್ಥೆಗಳ ರಾಯಭಾರಿ ಪಟ್ಟವನ್ನು ಎಂಬುದು ವಿಶೇಷ.'ಸೇವ್​ ದಿ ಚೈಲ್ಡ್', 'ಯುನಿಸೆಫ್' ಮತ್ತು 'ವರ್ಲ್ಡ್​​ವಿಶ್' ಎಂಬ ಮಕ್ಕಳಿಗಾಗಿ ಸೇವೆ ಸಲ್ಲಿಸುವ ಸಂಘಟನೆಗಳ ರಾಯಭಾರಿಯಾಗಿದ್ದಾರೆ. ಮಕ್ಕಳ ಬಾಲ್ಯ ಉತ್ತಮವಾಗಿದ್ದರೆ ಭವಿಷ್ಯದ ಪ್ರಪಂಚ ಅತ್ಯುತ್ತಮವಾಗಿರುತ್ತದೆ ಎಂದು ಸಾರುವ ವಿಶ್ವ ಮೂರು ಮಕ್ಕಳ ಸಂಘಟನೆಯ ರಾಯಭಾರಿ ಆಗಿದ್ದಾರೆ. ಇದು ಸಮಾಜದ ಮೇಲಿನ ಕ್ರಿಸ್ಟಿಯಾನೊ  ರೊನಾಲ್ಡೊ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ.

ಇದಲ್ಲದೆ, 2011 ರಲ್ಲಿ ದೊರೆತ 'ಗೋಲ್ಡನ್ ಬೂಟ್'​ ಅನ್ನು ಕ್ರಿಸ್ಟಿಯಾನೊ ಹರಾಜಿಗಿಟ್ಟಿದ್ದರು. ಇದರಿಂದ ಬಂದ 1.2 ಮಿಲಿಯನ್ ಪೌಂಡ್​ ಮೊತ್ತವನ್ನು ಯುದ್ದ ಪೀಡಿತ ಪ್ಯಾಲೇಸ್ತೀನ್​ನ ಶಾಲೆಗಳ ಪುನರ್ಸ್ಥಾಪನೆಗೆ ದಾನ ಮಾಡಿದ್ದರು. 2013 ರಲ್ಲಿ ಲಭಿಸಿದ ಫುಟ್​ಬಾಲ್​ ಲೋಕದ ಆಸ್ಕರ್ ಎಂದು ಕರೆಯಲ್ಪಡುವ 'ಬಾಲನ್ ಡಿ ಒರ್' ಪ್ರಶಸ್ತಿಯನ್ನು ಕೂಡ ಹರಾಜಿಗೆ ನೀಡಿದ್ದರು. ಇದರಿಂದ ದೊರೆತ 5.3 ಲಕ್ಷ ​ ಪೌಂಡ್​ ಅನ್ನು 'ಮೇಕ್ ಎ ವಿಶ್' ಎಂಬ ಸಂಸ್ಥೆಗೆ ಕೊಟ್ಟಿದ್ದರು. ಅನಾರೋಗ್ಯ ಪೀಡಿತ ಮಕ್ಕಳ ಶ್ರುಶೂಷೆಯಲ್ಲಿ ಈ ಸಂಸ್ಥೆಯು ಪ್ರಮುಖ ಪಾತ್ರವಹಿಸುತ್ತದೆ ಎಂಬುದೇ ವಿಶೇಷ.

ಹಾಗೆಯೇ, 2014 ರಲ್ಲಿ ರಿಯಲ್​ ಮ್ಯಾಡ್ರಿಡ್​ ತಂಡಕ್ಕೆ 10ನೇ ಚಾಂಪಿಯನ್ ಟ್ರೋಫಿ ಗೆದ್ದು ಕೊಡುವಲ್ಲಿ ಕ್ರಿಸ್ಟಿಯಾನೊ ಪಾತ್ರ ಬಲು ದೊಡ್ಡದು. ಈ ಸಂದರ್ಭದಲ್ಲಿ 'ರಿಯಲ್ ಮ್ಯಾಡ್ರಿಡ್'​ ಕ್ಲಬ್ ಆಟಗಾರರಿಗೆ 4.5 ಲಕ್ಷ ಪೌಂಡ್​ ಮೊತ್ತವನ್ನು ಬೋನಸ್​ ಆಗಿ ನೀಡಿದ್ದರು. ಈ ಮೊತ್ತವನ್ನು ತಾನು ರಾಯಭಾರಿಯಾಗಿರುವ ಮೂರು ಸಂಘಟನೆಗಳಿಗೆ ರೊನಾಲ್ಡೊ ದಾನವಾಗಿ ನೀಡಿದ್ದರು. ಸಾಮಾಜಿಕ ತಾಣದಲ್ಲಿ ವಿವಾದಕ್ಕೀಡಾಗಿದ್ದ 'ಐಸ್ ಬಕೆಟ್'​ ಚಾಲೆಂಜ್​ನಲ್ಲೂ ಕ್ರಿಸ್ಟಿಯಾನೊ ಭಾಗವಹಿಸಿದ್ದರು. ಆದರೆ ಇದರಿಂದ ಸಿಕ್ಕಿರುವ ಫಂಡ್​ ಅನ್ನು 'ಮೊಟೊರ್ ನ್ಯೂರೊನ್' ಕಾಯಿಲೆ ಬಾಧಿಸಿದವರ ಚಿಕಿತ್ಸೆಗೆ ರೊನಾಲ್ಡೊ ದಾನ ಮಾಡಿದ್ದರು.

ಫುಟ್​ಬಾಲ್​ ಮೈದಾನದಲ್ಲಿ ಸ್ಟೈಲಿಸ್ಟ್​ ಲುಕ್​ಗಳಿಂದಲೇ ಕೋಟಿ ಸಂಪಾದಿಸುವ ಆಟಗಾರರಲ್ಲಿ ಕ್ರಿಸ್ಟಿಯಾನೊ ಭಿನ್ನವಾಗಿ ನಿಲ್ಲುತ್ತಾರೆ. ಸದ್ಯದ ಟ್ರೆಂಡ್ ಆಗಿರುವ ಟ್ಯಾಟೂ ಹಾಕಿಸಿಕೊಳ್ಳುವಲ್ಲಿ ರೊನಾಲ್ಡೊ ಹಿಂದೆ ಬಿದ್ದಿದ್ದಾರೆ ಎಂಬ ಮಾತುಗಳು ಈ ಹಿಂದೆ ಕೇಳಿ ಬಂದಿತ್ತು. ಆದರೆ ಅಸಲಿ ವಿಷಯ ಬೇರೆಯದ್ದೇ ಆಗಿತ್ತು. ದೇಹಕ್ಕೆ ಟ್ಯಾಟೂ ಹಾಕಿಸಿಕೊಂಡರೆ ರಕ್ತದಾನ ಮಾಡಲು ಕೆಲ ವಿಷಯಗಳು ಅಡ್ಡಿಯಾಗುತ್ತದೆ. ಈ ಏಕ ಕಾರಣದಿಂದ ಕ್ರಿಸ್ಟಿಯಾನೊ ಟ್ಯಾಟು ಹಾಕಿಸಲು ಮುಂದಾಗಿರಲಿಲ್ಲ. ಒಂದು ಬಾರಿ ಟ್ಯಾಟು ಹಾಕಿಸಿಕೊಂಡರೆ 6 ತಿಂಗಳು ಕಾಲ ರಕ್ತದಾನ ಮಾಡುವಂತಿಲ್ಲ ಎಂದೇಳಾಗುತ್ತದೆ. ಆದರೆ ನಿರಂತರ ರಕ್ತದಾನ ಮಾಡುವ ಕ್ರಿಸ್ಟಿಯಾನೊ ಟ್ಯಾಟು ಹಾಕಿಸಿದರೆ ತುರ್ತು ಸಂದರ್ಭದಲ್ಲಿ ರಕ್ತ ನೀಡಲು ಸಾಧ್ಯವಿಲ್ಲ ಎಂಬುದು ಅರಿತಿದ್ದಾರೆ. ಇದು ಕ್ರಿಸ್ಟಿಯಾನೊ ರೊನಾಲ್ಡೊ ರಕ್ತದಾನದ ಮಹತ್ವವನ್ನು ಎತ್ತಿ ಹಿಡಿದಿರುವುದಕ್ಕೆ  ಸಾಕ್ಷಿ.

ಕ್ಲಬ್ ಪರ ಆಡುವ ಆಟಗಾರರಿಗೆ ಮೋಜು ಮಸ್ತಿಗೆ ಸದಾ ಅವಕಾಶವಿರುತ್ತದೆ. ಆದರೆ ರೊನಾಲ್ಡೊ ಮಾತ್ರ ಯಾವತ್ತೂ ಮದ್ಯಪಾನ ಮಾಡಲ್ಲ. ಏಕೆಂದರೆ ತನ್ನ ತಂದೆ ಮದ್ಯಪಾನಿಯಾಗಿದ್ದರು, ಇದರಿಂದ ನೊಂದಿರುವ ಕ್ರಿಸ್ಟಿಯಾನೊ ಯಾವತ್ತೂ ಮದ್ಯಪಾನವನ್ನು ಬೆಂಬಲಿಸುವುದಿಲ್ಲ ಎಂಬುದೇ ಅಸಲಿ ಸತ್ಯ. ತನ್ನ ತಾಯಿಯ ಕ್ಯಾನ್ಸರ್​ಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯಲ್ಲಿ ಕಳೆಯುತ್ತಿರುವ ರೋಗಿಗಳಾಗಿ 1.2 ಲಕ್ಷ ಪೌಂಡ್​ ಅನ್ನು ಕ್ರಿಸ್ಟಿಯಾನೊ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದರು.

ಇಷ್ಟೇ ಅಲ್ಲದೆ ತಂಡ ಗೆಲ್ಲುವಾಗ ತನಗೆ ದೊರೆಯುವ ಮೊತ್ತದಿಂದ ಇತರೆ ಆಟಗಾರರಿರೂ ಸಂಭಾವನೆ ನೀಡುವುದರಲ್ಲೂ ಕ್ರಿಸ್ಟಿಯಾನೊ ಕೊಡುಗೈ ದಾನಿ ಎನ್ನಲಾಗುತ್ತದೆ. ತಮ್ಮ ಹೆಸರಿನಲ್ಲಿರುವ ಆ್ಯಪ್​ನಿಂದ ಸಿಗುವ ಹಣವನ್ನು ಕೂಡ ಸಂಘಟನೆಗಳಿಗೆ ನೀಡುವ ರೋನಾಲ್ಡೊ ಅವರ ಹೆಸರಿನಲ್ಲಿ CR7 ಎಂಬ ಮ್ಯೂಸಿಯಂ ಕೂಡ ಇದೆ.

ಹೌದು, 15 ವಯಸ್ಸಿನಲ್ಲೇ ಹೃದಯ ರೋಗದಿಂದ ಬಳಲುತ್ತಿದ್ದ ಪೋರ್ಚುಗಲ್​ನ ಬಾಲಕ ಇಂದು ವಿಶ್ವ ಫುಟ್​ಬಾಲನ್ನು ಆಳುವ ಅಧಿಪತಿ. ಅವೆಲ್ಲಕ್ಕಿಂತ ಮುಖ್ಯವಾಗಿ ಮಾನವೀಯತೆಯಿಂದ ವಿಶ್ವದ ಮೂಲೆ ಮೂಲೆಗಳಲ್ಲಿ ಅಭಿಮಾನಿಗಳ ಹೃದಯ ಗೆದ್ದ ಆಟಗಾರ #CR7.
First published: July 21, 2018, 7:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading