ನವದೆಹಲಿ(ಜೂ.17): ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯನ್ನು ಜನಸಾಮಾನ್ಯರು ಅರಗಿಸಿಕೊಳ್ಳುವ ಮೊದಲೇ ಕಳೆದ ಮಾರ್ಚ್ ತಿಂಗಳಲ್ಲಿ ಅಡುಗೆ ಎಣ್ಣೆ ಅಥವಾ ಖಾದ್ಯ ತೈಲ ಬೆಲೆಯೂ ಇದಕ್ಕಿದ್ದಂತೆ ಏರಿಕೆ ಕಂಡು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿತ್ತು. ಅಂದರೆ ಡಿಸೇಲ್, ಪೆಟ್ರೋಲ್ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದರೆ, ಇನ್ನೊಂದೆಡೆ ಅಡುಗೆ ಅನಿಲ ಅಡುಗೆ ಮನೆಯ ಲೆಕ್ಕಾಚಾರವನ್ನೇ ಬುಡಮೇಲು ಮಾಡಿತ್ತು.
ಹೌದು, ಕಳೆದೊಂದು ವರ್ಷದಿಂದ ಕಚ್ಚಾ ತೈಲ ಬೆಲೆ ಶೇ. 95ರಷ್ಟು ಏರಿಕೆಯಾದರೆ, ಇನ್ನೊಂದೆಡೆ ವಿವಿಧ ಖಾದ್ಯ ತೈಲ ಬೆಲೆ ಶೇ.60 ರಷ್ಟು ಏರಿಕೆ ಕಂಡಿತ್ತು. ಇದೀಗ ಅಡುಗೆ ಪ್ರಿಯರಿಗೆ ಕೊಂಚ ರಿಲೀಫ್ ಸಿಕ್ಕಿದಂತಾಗಿದೆ. ಖಾದ್ಯ ತೈಲದ ಬೆಲೆ ಇಳಿಕೆಯು ಮುಂದಿನ ದಿನಗಳಲ್ಲಿ ಎಲ್ಲಾ ತೈಲ ಬೆಲೆ ಇಳಿಕೆಗೆ ಸಾಕ್ಷಿಯಾಗಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಬುಧವಾರ ತಿಳಿಸಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯ ಅಂಕಿಅಂಶಗಳ ಪ್ರಕಾರ, ಕಳೆದ ಒಂದು ತಿಂಗಳಿನಿಂದ ಖಾದ್ಯ ತೈಲಗಳ ಬೆಲೆಗಳು ಈಗ ಕಡಿಮೆಯಾಗುತ್ತಿದೆ ಮತ್ತು ಕೆಲವು ವಿಭಾಗಗಳಲ್ಲಿ ಬೆಲೆ ಶೇ. 20 ರಷ್ಟು ಕುಸಿತವಾಗಿದೆ ಎಂದು ಸಚಿವಾಲಯ ಹೇಳಿದೆ.
ಖಾದ್ಯ ತೈಲದ ಬೆಲೆಗಳು ಕಾಂಪ್ಲೆಕ್ಸ್ ಸಂಖ್ಯೆಗಳ ಅಂಶಗಳ ಮೇಲೆ ಅವಲಂಬಿತವಾಗಿವೆ. ಇದರಲ್ಲಿ ಅಂತಾರಾಷ್ಟ್ರೀಯ ಬೆಲೆಗಳು ಮತ್ತು ದೇಶೀಯ ಉತ್ಪಾದನೆಯೂ ಸೇರಿದೆ. ದೇಶೀಯ ಉತ್ಪಾದನೆ ಮತ್ತು ಬಳಕೆಯ ನಡುವೆ ದೊಡ್ಡ ಅಂತರವಿರುವುದರಿಂದ ದೇಶವು ಗಮನಾರ್ಹ ಪ್ರಮಾಣದ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಮಧ್ಯ ಮತ್ತು ದೀರ್ಘಕಾಲೀನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಖಾದ್ಯ ತೈಲ ಬೆಲೆ ಏರಿಕೆ ಬಗ್ಗೆ ಅಂಗಡಿ ಮಾಲೀಕರು ಕಳವಳ ವ್ಯಕ್ತಪಡಿಸಿದ್ದರು. ಗ್ರಾಹಕರು ಬೆಲೆ ಏರಿಕೆಯನ್ನು ಕಡಿತಗೊಳಿಸುವಂತೆ ಒತ್ತಾಯಿಸುತ್ತಿರುವ ಬೆನ್ನಲ್ಲೇ ಅಂಗಡಿ ಮಾಲೀಕರು ಬೆಲೆ ಏರಿಕೆ ಬಗ್ಗೆ ಗ್ರಾಹಕರು ಪ್ರಶ್ನೆ ಮಾಡುತ್ತಿರುವ ಬಗ್ಗೆ ಅಳಲು ತೋಡಿಕೊಂಡಿದ್ದರು.
ಲಾಕ್ ಡೌನ್ ಸಮಯದಲ್ಲಿ ಮಸಾಲೆಗಳು, ದ್ವಿದಳ ಧಾನ್ಯಗಳ ಬೆಲೆಯೂ ಹೆಚ್ಚಳ ಕಂಡಿತ್ತು. ತೈಲದ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. ಖಾದ್ಯ ತೈಲ ಬೆಲೆಯನ್ನು ಪ್ರತಿ ಲೀಟರ್ಗೆ ರೂ. 60 ರಿಂದ 70 ಹೆಚ್ಚಿಸಲಾಗಿದೆ. ಈ ಮೊದಲು ರೂ. 100 ವೆಚ್ಚದ ತೈಲಕ್ಕೆ ಈಗ ರೂ. 170 ವೆಚ್ಚವಾಗುತ್ತಿದೆ. ಹಠಾತ್ ಬೆಲೆ ಏರಿಕೆ ಬಗ್ಗೆ ಗ್ರಾಹಕರು ಪ್ರಶ್ನಿಸುತ್ತಿದ್ದಾರೆ ಎಂದು ದೆಹಲಿ ಅಂಗಡಿ ಮಾಲೀಕ ಡಿ.ಎಸ್.ಬಿಂದ್ರಾ ಕಳೆದ ವಾರ ಎಎನ್ಐಗೆ ಹೇಳಿದರು. ಲಾಕ್ಡೌನ್ ನಂತರ ಗ್ರಾಹಕರ ಖರೀದಿ ಸಾಮರ್ಥ್ಯವು 50% ರಷ್ಟು ಕುಸಿದಿದೆ ಎಂದು ಬಿಂದ್ರಾ ಎತ್ತಿ ತೋರಿಸಿದರು.
ಖಾದ್ಯ ತೈಲಗಳ ಬೆಲೆಗಳು ಕೆಳಕಂಡಂತಿವೆ (ಮುಂಬೈ ದರ):
ಪಾಮ್ ಎಣ್ಣೆ:ಒಂದು ಲೀಟರ್ಗೆ ರೂ.115 (ಹಿಂದಿನ ದರ ರೂ.142)
ಸನ್ಫ್ಲವರ್ :ಒಂದು ಲೀ.ಗೆ ರೂ.157 (ಹಿಂದಿನ ದರ ರೂ.188)
ಸೋಯಾ :ಒಂದು ಲೀ.ಗೆ ರೂ.138 (ಹಿಂದಿನ ದರ ರೂ.162)
ಸಾಸಿವೆ ಎಣ್ಣೆ:ಒಂದು ಲೀ.ಗೆ ರೂ.157 (ಹಿಂದಿನ ದರ ರೂ.175)
ಶೇಂಗಾ ಎಣ್ಣೆ:ಒಂದು ಲೀ.ಗೆ ರೂ.174 (ಹಿಂದಿನ ದರ ರೂ.190)
ವನಸ್ಪತಿ:ಒಂದು ಲೀ.ಗೆ ರೂ.141 (ಹಿಂದಿನ ದರ ರೂ.154)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ