ಮಳೆಗಾಲದ ಖಾದ್ಯ: ನಾಲಿಗೆ ರುಚಿ ಹೆಚ್ಚಿಸುತ್ತವೆ ಕರಾವಳಿಯ ಕಲ್ಲಣಬೆಗಳು

news18
Updated:June 11, 2018, 1:30 PM IST
ಮಳೆಗಾಲದ ಖಾದ್ಯ: ನಾಲಿಗೆ ರುಚಿ ಹೆಚ್ಚಿಸುತ್ತವೆ ಕರಾವಳಿಯ ಕಲ್ಲಣಬೆಗಳು
news18
Updated: June 11, 2018, 1:30 PM IST
  ಪರೀಕ್ಷಿತ್ ಶೇಟ್
-ನ್ಯೂಸ್ 18 ಕನ್ನಡ

ಕರಾವಳಿಯಲ್ಲಿ ಮಳೆಗಾಲ ಆರಂಭವಾಯಿತೆಂದರೆ ಸಾಕು, ಮಳೆಗಾಲದ ಕೊನೆವರೆಗೂ ಪಕೃತಿ ದತ್ತವಾಗಿ ಸಿಗುವ ಆಹಾರ ಪದಾರ್ಥಗಳಿಂದ ವಿಶಿಷ್ಟ ಬಗೆಯ ಖಾದ್ಯಗಳು ತಯಾರಿಸಲಾಗುತ್ತದೆ. ಅದರಲ್ಲೂ ಮಳೆಗಾಲ ಆರಂಭದ 15 ದಿವಸದ ಒಳಗೆ ಮಳೆ ನೀರು ಭೂಮಿಯೊಳಗೆ ಬೀಳುತ್ತಿದ್ದಂತೆ ಒಂದು ವಿಶಿಷ್ಟವಾದ ಸಸ್ಯ ಸಂಕುಲದ ಆಹಾರ ಪದಾರ್ಥ ದೊರೆಯುತ್ತದೆ.

ಅಣಬೆ ಪ್ರಭೇದಕ್ಕೆ ಸೇರುವ ಈ ಆಹಾರವನ್ನು ಕನ್ನಡದಲ್ಲಿ ಕಲ್ಲಣಬೆ ಎಂದು ಕರೆಯಲಾಗುತ್ತದೆ. ಕರಾವಳಿ ಭಾಗದಲ್ಲಿ ಕಂಡು ಬರುವ ಗೋಲಿಯಾಕಾರದ ಈ ಅಣಬೆಯನ್ನು ತುಳುವಿನಲ್ಲಿ ಕಲ್ಲಾಲಾಂಬು ಎಂದು ಕೂಡ ಕರೆಯುತ್ತಾರೆ.

ಮಳೆಗಾಲದ ಆರಂಭದಲ್ಲಿ ಗುಡುಗಿನ ಆರ್ಭಟ ಜೋರಾಗಿರುತ್ತದೆ. ಈ ಸಂದರ್ಭದಲ್ಲಿ ಮೊಳಕೆಯೊಡೆಯುವ ಈ ಅಣಬೆ ಜೌಗುಮಣ್ಣಿನ ಪ್ರದೇಶದಲ್ಲಿ ಕಾಣ ಸಿಗುತ್ತದೆ. ಇಂತಹ ಭಾಗದಲ್ಲಿ ಕತ್ತಿ ಅಥವಾ ಕೋಲಿನಿಂದ ಅಗೆದರೆ ಈ ವಿಶಿಷ್ಟವಾದ ಕಲ್ಲಣಬೆ ದೊರೆಯುತ್ತೆ. ಮೇಲ್ನೊಟಕ್ಕೆ ಇದರ ಇರುವಿಕೆ ಗೊತ್ತಾಗದೇ ಇರುವುದರಿಂದ ಇದರ ಸಂಗ್ರಹ ಸುಲಭವಾಗಿರುವುದಿಲ್ಲ.

ತುಳುನಾಡಿನ ಪ್ರದೇಶದ ಮಳೆಗಾಲದ ಆಹಾರದಲ್ಲಿ ಒಂದಾಗಿರುವ ಈ ಕಲ್ಲಣಬೆಯನ್ನು ಆ ಪ್ರದೇಶದ ಜನರು ಬಹಳಷ್ಟು ಇಷ್ಟ ಪಡುತ್ತಾರೆ. ಹೀಗಾಗಿ ಅವರು ಈ ಅಣಬೆಯನ್ನು ಸುಲಭವಾಗಿ ಗುರುತಿಸುತ್ತಾರೆ. ಇದನ್ನು ನೀರಿನಲ್ಲಿ ತೊಳೆದು, ಸಿಪ್ಪೆಯನ್ನು ತೆಗೆದು ಸಾಂಬಾರ ಪದಾರ್ಥಗಳನ್ನು ಹಾಕಿ ರುಚಿಯಾದ ಸಾರು, ಪಲ್ಯ ತಯಾರಿಸುತ್ತಾರೆ. ಈ ಆಹಾರವು ಕರಾವಳಿಯ ನೀರ್ ದೋಸೆಯೊಂದಿಗಿನ ಅತ್ಯುತ್ತಮ ಕಾಂಬಿನೇಷನ್ ಆಗಿದೆ.

ಕಲ್ಲಣಬೆಯ ಪದಾರ್ಥಗಳನ್ನು ಒಮ್ಮೆ ಸವಿದರೆ ಮತ್ತೊಮ್ಮೆ ಸವಿಬೇಕು ಅನಿಸುವುದರಲ್ಲಿ ಸಂದೇಹವಿಲ್ಲ. ಹೀಗಾಗಿಯೇ ಇಂದು ಕರಾವಳಿ ಭಾಗದ ಮಾರುಕಟ್ಟೆಯಲ್ಲಿ ಇದನ್ನು ಒಂದು ಸೇರಿಗೆ 250 ರಿಂದ 300 ರೂ.ವರೆಗೂ ಬೆಲೆ ನೀಡಿ ಕೊಂಡು ಕೊಳ್ಳಲಾಗುತ್ತದೆ. ಈ ಹಣಬೆಯು ಕೇವಲ ಒಂದು ದಿನ ಮಾತ್ರ ತಾಜಾತನದಿಂದ ಕೂಡಿರುವುದರಿಂದ ಇದಕ್ಕಾಗಿ ಮಳೆಗಾಲದಲ್ಲಿ ಗ್ರಾಹಕರ ಡಿಮ್ಯಾಂಡ್ ಕೂಡ ಹೆಚ್ಚುತ್ತದೆ.
Loading...

ಇದರ ಸಂಗ್ರಹ ಸಮಯದಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಕಪ್ಪು ಬಣ್ಣಕ್ಕೆ ತಿರುಗಿದ ಕಲ್ಲಣಬೆ ವಿಷಪೂರಿತವಾಗಿರುತ್ತದೆ. ಆಹಾರಕ್ಕೆ ಯೋಗ್ಯವಾದ ಅಣಬೆ ಯಾವುದು, ವಿಷಪೂರಿತ ಕಲ್ಲಣಬೆ ಯಾವುದೆಂಬ ಅರಿವು ಇದರ ಹುಡುಕಾಟದಲ್ಲಿ ಅನುಭವ ಇದ್ದವರಿಗೆ ಮಾತ್ರ ತಿಳಿಯುತ್ತದೆ.

ರಾಸಾಯನಿಕಗಳಿಂದಲೇ ತುಂಬಿರುವ ಇಂದಿನ ಆಹಾರ ಪದಾರ್ಥಗಳಿಗಿಂತ ಪ್ರಕೃತಿದತ್ತವಾಗಿ ಸಿಗುವ ಇಂತಹ ಆಹಾರ ಪದಾರ್ಥಗಳೇ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಹಾಗಾಗಿ ಹಳ್ಳಿಗರು ಇಂತಹ ಆಹಾರ ಕ್ರಮವನ್ನು ಇಂದಿಗೂ ಸಹ ಮುಂದುವರಿಸಿಕೊಂಡು ಬಂದಿದ್ದಾರೆ.
First published:June 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...