ಇಂದಿನ ಕಾಲದಲ್ಲಿ ಕೂದಲು ಉದುರುವ ಸಮಸ್ಯೆ ಎಲ್ಲರಲ್ಲಿಯೂ ಸಾಮಾನ್ಯವಾಗಿದೆ. ಹೆಚ್ಚು ಕೂದಲು ಉದುರುವುದು, ಕೂದಲು ತೆಳ್ಳಗಾಗುವುದು, ಕೂದಲು ಬೆಳೆಯದೇ ಇರುವುದು, ಬೊಕ್ಕತಲೆ (Baldness) ಹೀಗೆ ಒಂದಲ್ಲ ಒಂದು ಕೂದಲ ಸಮಸ್ಯೆ ಸಾಮಾನ್ಯ. ಬಹಳಷ್ಟು ಜನರು ಕೂದಲು ಬೆಳೆಯಲು ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಾರೆ. ಇನ್ನೂ ಕೆಲವರು ಮನೆಯಲ್ಲಿಯೇ ಕೂದಲ ಆರೈಕೆ ಮಾಡಿಕೊಳ್ಳುತ್ತಾರೆ. ಕೂದಲು (Hair) ಬೆಳೆಯುವಂಥ ಬಗೆ ಬಗೆಯ ಎಣ್ಣೆಗಳನ್ನು ಟ್ರೈ ಮಾಡುತ್ತಾರೆ. ಅಂಥ ಪ್ರಯೋಗಗಳಲ್ಲಿ ಒಂದು ಹೇರ್ ಸೀರಮ್ (serum). ಹೇರ್ ಸೀರಮ್ ಅನ್ನೋದು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನಪ್ರಿಯವಾಗಿರುವ ಕೂದಲ ಉತ್ಪನ್ನವಾಗಿದೆ. ಬಹಳಷ್ಟು ಜನರು ಕೂದಲಿನ ಆರೋಗ್ಯಕ್ಕಾಗಿ ಈ ಸೀರಮ್‌ಗಳನ್ನು ಉಪಯೋಗಿಸುತ್ತಾರೆ.
ಏಕೆಂದರೆ ಇದು ಕೂದಲು ಉದುರುವಿಕೆಯನ್ನು ನಿಯಂತ್ರಿಸಲು, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಕೂದಲು ದಪ್ಪನಾಗಿ ಬೆಳೆಯುವಂತೆ ಮಾಡುತ್ತದೆ ಎಂದು ನಂಬಲಾಗಿದೆ. ಆದರೆ ಈ ಹೇರ್ ಸೀರಮ್‌ಗಳು ಹೇಗೆ ಕೆಲಸ ಮಾಡುತ್ತವೆ? ಅವು ಎಷ್ಟು ಪರಿಣಾಮಕಾರಿ? ಈ ಬಗ್ಗೆ ಚರ್ಮರೋಗತಜ್ಞರು ಏನು ಹೇಳುತ್ತಾರೆ ಅನ್ನೋದನ್ನು ತಿಳಿದುಕೊಳ್ಳೋಣ.
ಹೇರ್ ಸೀರಮ್‌ಗಳು ಹೇಗೆ ಕೆಲಸ ಮಾಡುತ್ತವೆ?
"ಕೂದಲಿನ ಕಿರುಚೀಲಗಳಿಗೆ ನೇರವಾಗಿ ಪೋಷಕಾಂಶಗಳು ಮತ್ತು ಸಕ್ರಿಯ ಪದಾರ್ಥಗಳನ್ನು ಒದಗಿಸುವ ಮೂಲಕ ಹೇರ್ ಸೀರಮ್‌ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ. ಇವು ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲಿನ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ." ಎಂಬುದಾಗಿ ಜಸ್ಲೋಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಚರ್ಮರೋಗ ಶಾಸ್ತ್ರ ನಿರ್ದೇಶಕರಾದ ಡಾ. ಇಂದೂರ್ ರಾಮಚಂದಾನಿ ಹೇಳುತ್ತಾರೆ.
ಇದನ್ನೂ ಓದಿ: ಎಣ್ಣೆ ಸ್ನಾನ ಆದ್ಮೇಲೆ ಎಳನೀರು ಕುಡಿದ್ರೆ ಹಾರಿ ಹೋಗುತ್ತೆ ಪ್ರಾಣ! ಹೀಗೆ ಸತ್ತವರ ಸಂಖ್ಯೆ ಇಲ್ಲಿದೆ
ಇನ್ನು, ಡಾ. ಚೈತನ್ಯ ಅವರು, ಕೂದಲು ಮತ್ತೆ ಬೆಳೆಯುವಂತೆ ಮಾಡುವ ಸೀರಮ್‌ಗಳಲ್ಲಿ ಕಂಡುಬರುವ ಅಂಶಗಳು ನಿರ್ದಿಷ್ಟ ಉತ್ಪನ್ನ ಮತ್ತು ಬ್ರ್ಯಾಂಡ್ ಅನ್ನು ಅವಲಂಬಿಸಿ ಬದಲಾಗುತ್ತವೆ ಎಂಬುದಾಗಿ ಹೇಳುತ್ತಾರೆ. ಆದರೆ ಅವುಗಳಲ್ಲಿ ಕೆಲವು ಸಾಮಾನ್ಯ ಪದಾರ್ಥಗಳು ಸೇರಿವೆ ಎಂಬುದಾಗಿ ಅವರು ಮಾಹಿತಿ ನೀಡಿದ್ದಾರೆ. ಅವುಗಳಲ್ಲಿ ಮಖ್ಯವಾದವುಗಳೆಂದರೆ,
*ಮಿನೊಕ್ಸಿಡಿಲ್: ಇದು ಎಫ್‌ಸಿಎ ಅನುಮೋದಿತ ಘಟಕಾಂಶವಾಗಿದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದರ ಜೊತೆಗೆ ಕೂದಲು ಉದುರುವಿಕೆಯನ್ನು ತಡೆಯುತ್ತದೆ.
*ಬಯೋಟಿನ್: ಇದು ಆರೋಗ್ಯಕರ ಕೂದಲು ಬೆಳವಣಿಗೆಗೆ ಅಗತ್ಯವಾದ ಬಿ-ವಿಟಮಿನ್ ಆಗಿದೆ.
*ಪೆಪ್ಟೈಡ್‌ಗಳು: ಇವು ಅಮೈನೋ ಆಮ್ಲಗಳಾಗಿದ್ದು, ಕೂದಲ ಕಿರುಚೀಲಗಳನ್ನು ಉತ್ತೇಜಿಸುತ್ತದೆ. ಹಾಗೆಯೇ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
*ಕೆಫೀನ್: ಈ ಘಟಕಾಂಶವು ನೆತ್ತಿಯ ರಕ್ತ ಪರಿಚಲನೆಯನ್ನು ಹೆಚ್ಚಿಸುವುದರ ಜೊತೆಗೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
*ಸಾ ಪಾಮೆಟ್ಟೊ: ಈ ಮೂಲಿಕೆಯು ಕೂದಲು ಉದುರುವಿಕೆಗೆ ಕಾರಣವಾಗಬಹುದಾದ ಡಿಎಚ್‌ಟಿ ಎಂಬ ಹಾರ್ಮೋನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ.
ಹೇರ್ ಸೀರಮ್‌ಗಳು ಎಷ್ಟು ಪರಿಣಾಮಕಾರಿ? ಕೂದಲ ಆರೋಗ್ಯಕ್ಕೆ ಹೇರ್ ಸೀರಮ್‌ಗಳು ಪರಿಣಾಮಕಾರಿಯಾಗಿವೆ. ಆದರೆ ಅವು ಎಷ್ಟು ಪರಿಣಾಮಕಾರಿ ಎಂಬುದು ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದೆ ಎಂದು ಡಾ. ತೇಜಸ್ವಿನಿ ರತ್ನಪಾರ್ಖಿ ವಿವರಿಸುತ್ತಾರೆ.
ಅವರ ಪ್ರಕಾರ, ಕೂದಲು ಉದುರುವಿಕೆಯ ತೀವ್ರತೆ ಎಷ್ಟಿದೆ ಎಂಬುದು ಹಾಗೂ ಅದಕ್ಕೆ ಪ್ರಮುಖ ಕಾರಣ ಏನು ಎಂಬುದು ಮುಖ್ಯ. ಇವುಗಳ ಆಧಾರದ ಮೇಲೆ ಸೀರಮ್ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದು ನಿರ್ಧರಿತವಾಗುತ್ತದೆ.
ಉದಾಹರಣೆಗೆ, ನಿಮ್ಮ ಕೂದಲು ಉದುರುವಿಕೆಯು ಆನುವಂಶಿಕ ಅಂಶಗಳಿಂದ ಅಥವಾ ವೈದ್ಯಕೀಯ ಸ್ಥಿತಿಯಿಂದ ಉಂಟಾದರೆ, ಸೀರಮ್ ಅಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ. ಆದರೆ ಒತ್ತಡದ ಕಾರಣದಿಂದಾಗಿ ಕೂದಲು ಉದುರುತ್ತಿದ್ದರೆ ಅಥವಾ ಕೂದಲಿಗೆ ಸರಿಯಾದ ಪೋಷಣೆ ಸಿಗದೇ ಹೋದಂಥ ಕಾರಣಗಳಿದ್ದರೆ ಈ ಸೀರಮ್‌ಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಹುದು ಎಂದು ಡಾ. ತೇಜಸ್ವಿನಿ ಹೇಳುತ್ತಾರೆ.
ಇದನ್ನೂ ಓದಿ: ಈ ವೈದ್ಯೆಯ ವಯಸ್ಸು ಬರೋಬ್ಬರಿ 102; ಇವರ ಲೈಫ್ಸ್ಟೈಲ್ ನೋಡಿದ್ರೆ ನೀವೇ ಶಾಕ್ ಆಗ್ತೀರಾ!
ಹೆಚ್ಚುವರಿಯಾಗಿ, ಕೂದಲಿನ ಬೆಳವಣಿಗೆಯು ನಿಧಾನ ಪ್ರಕ್ರಿಯೆಯಾಗಿರುವುದರಿಂದ ಫಲಿತಾಂಶಗಳನ್ನು ನೋಡಲು ಸೀರಮ್‌ಅನ್ನು ಸ್ಥಿರವಾಗಿ ಹಾಗೂ ದೀರ್ಘಕಾಲದವರೆಗೆ ಬಳಸುವುದು ಅವಶ್ಯಕವಾಗಿದೆ ಎಂದು ಅವರು ಹೇಳುತ್ತಾರೆ.
ಹೇರ್ ಸೀರಮ್ ಉಪಯೋಗದ ಅಡ್ಡ-ಪರಿಣಾಮಗಳೇನು?
ಡಾ. ಚೈತನ್ಯ ಅವರು ಹೇಳುವ ಪ್ರಕಾರ, ಕೂದಲು ಆರೋಗ್ಯಕ್ಕಾಗಿ ಹಾಗೂ ಕೂದಲ ಬೆಳವಣಿಗೆಗಾಗಿ ಹೇರ್ ಸೀರಮ್ ಬಳಸುವಾಗ ನಿರ್ದಿಷ್ಟ ಉತ್ಪನ್ನ ಮತ್ತು ಅದರ ಸೂಚನೆ, ನಿರ್ದೇಶಗಳನ್ನು ಅನುಸರಿಸುವುದು ಮುಖ್ಯವಾಗಿದೆ. ಸಾಮಾನ್ಯವಾಗಿ, ಕೂದಲು ಬೆಳೆಯುವ ಸೀರಮ್‌ಗಳನ್ನು ಪ್ರತಿದಿನ ಹಚ್ಚಲು ಹೇಳಲಾಗುತ್ತದೆ ಅಥವಾ ಹಲವಾರು ವಾರಗಳು ಅಥವಾ ತಿಂಗಳುಗಳವರೆಗೆ ಅನ್ವಯಿಸಲು ಹೇಳಲಾಗುತ್ತದೆ.
ಇನ್ನು, ಅಪರೂಪದ ಸಂದರ್ಭಗಳಲ್ಲಿ, ಕೆಲವು ಜನರು ತಲೆ ತಿರುಗುವಿಕೆ ಹಾಗೂ ಉಸಿರಾಡವು ಕಷ್ಟವಾಗುವಂಥ ಹೆಚ್ಚು ತೀವ್ರವಾದ ಅಡ್ಡಪರಿಣಾಮಗಳನ್ನು ಅನುಭವಿಸಬಹುದು. ಒಟ್ಟಾರೆ, ಕೂದಲು ಬೆಳೆಯುವ ಸೀರಮ್‌ಗಳಲ್ಲಿನ ಕೆಲವು ಅಂಶಗಳು ಎಲ್ಲರಿಗೂ ಸುರಕ್ಷಿತವಾಗಿರುವುದಿಲ್ಲ ಎಂದು ಗಮನಿಸುವುದು ಮುಖ್ಯ.
ಅದರಲ್ಲೂ ಮುಖ್ಯವಾಗಿ ಗರ್ಭಿಣಿಯರು, ಬಾಣಂತಿಯರು, ಕೆಲ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಕೂದಲು ಬೆಳೆಯುವ ಸೀರಮ್ ಅಥವಾ ಇತರ ಕೂದಲಿನ ಉತ್ಪನ್ನಗಳನ್ನು ಬಳಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು ಎಂಬುದನ್ನು ನೆನಪಿಡಿ.
ಕೂದಲಿನ ಸೀರಮ್ ಬಳಸುವಾಗ ಈ ಅಂಶಗಳನ್ನು ನೆನಪಿಡಿ: ಚರ್ಮರೋಗ ತಜ್ಞರ ಪ್ರಕಾರ, ಕೂದಲು ಬೆಳೆಯುವ ಸೀರಮ್‌ಗಳನ್ನು ಬಳಸುವಾಗ ಕೆಲವಷ್ಟು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಜೊತೆಗೆ ಕೆಲವು ಮುನ್ನೆಚ್ಚರಿಕೆಗಳು ಮತ್ತು ಸಲಹೆಗಳನ್ನು ಪಾಲಿಸಬೇಕು.
*ಸೂಚನೆಗಳನ್ನು ಅನುಸರಿಸಿ: ಬಳಸುವ ಮೊದಲು ಯಾವಾಗಲೂ ಲೇಬಲ್ ಅನ್ನು ಓದಿ. ಸೂಚನೆಗಳನ್ನು ಎಚ್ಚರಿಕೆಯಿಂದ ಅನುಸರಿಸಿ. ಸೀರಮ್ ಅನ್ನು ಹೆಚ್ಚು ಬಳಸುವುದು ಅಥವಾ ಶಿಫಾರಸು ಮಾಡಿದ್ದಕ್ಕಿಂತ ಹೆಚ್ಚಾಗಿ ಬಳಸುವುದರಿಂದ ಅವು ಪ್ರತಿಕೂಲ ಪರಿಣಾಮಗಳು ಉಂಟಾಗಬಹುದು.
*ಸ್ವಚ್ಛವಾದ ಹಾಗೂ ಒಣಗಿದ ನೆತ್ತಿಗೆ ಅನ್ವಯಿಸಿ: ಸೀರಮ್ ಅನ್ನು ಅನ್ವಯಿಸುವ ಮೊದಲು ನಿಮ್ಮ ನೆತ್ತಿಯು ಸ್ವಚ್ಛವಾಗಿದೆ ಮತ್ತು ಶುಷ್ಕವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಇದು ಸೀರಮ್ ನೆತ್ತಿಯೊಳಗೆ ತೂರಿಕೊಳ್ಳಲು ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.
*ತಾಳ್ಮೆಯಿಂದಿರಿ: ಕೂದಲು ಬೆಳೆಯುವ ಸೀರಮ್‌ಗಳು ಕೆಲಸ ಮಾಡಲು ಸಮಯ ತೆಗೆದುಕೊಳ್ಳುತ್ತದೆ. ನೀವು ಫಲಿತಾಂಶಗಳನ್ನು ನೋಡಲು ಪ್ರಾರಂಭಿಸುವ ಮೊದಲು ಇದು ಹಲವಾರು ವಾರಗಳು ಅಥವಾ ತಿಂಗಳುಗಳನ್ನು ತೆಗೆದುಕೊಳ್ಳಬಹುದು. ಹಾಗಾಗಿ ಫಲಿತಾಂಶಕ್ಕಾಗಿ ಸ್ವಲ್ಪ ತಾಳ್ಮೆಯಿಂದಿರಿ.
*ಇತರ ಕೂದಲ ರಕ್ಷಣೆಯ ಉತ್ಪನ್ನಗಳನ್ನು ಬಳಸುವುದನ್ನು ನಿಲ್ಲಿಸಬೇಡಿ: ಸೀರಮ್ ಬಳಸುತ್ತಿದ್ದೀರಿ ಎಂದ ಮಾತ್ರಕ್ಕೆ ಶ್ಯಾಂಪೂಗಳು ಮತ್ತು ಕಂಡಿಷನರ್‌ಗಳಂತಹ ಇತರ ಕೂದಲ ರಕ್ಷಣೆಯ ಉತ್ಪನ್ನಗಳನ್ನು ನಿಲ್ಲಿಸಿಬಿಡಬೇಡಿ. ಏಕೆಂದರೆ ಇವುಗಳೊಂದಿಗೆ ಸೀರಮ್ ಬಳಕೆಯು ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಬಿಸಿಯಾಗಿರುವ ಟ್ಯಾಂಕ್ ತಂಪಾಗಿಸಲು ಈ ಟಿಪ್ಸ್ ಟ್ರೈ ಮಾಡಿ!
*ಹೀಟ್ ಸ್ಟೈಲಿಂಗ್ ಉಪಕರಣಗಳನ್ನು ಬಳಸುವುದನ್ನು ನಿಲ್ಲಿಸಿ: ಸೀರಮ್ ಬಳಸುತ್ತಿರುವಾಗ ಹೇರ್ ಡ್ರೈಯರ್‌ಗಳು ಮತ್ತು ಸ್ಟ್ರೈಟ್‌ನರ್‌ಗಳಂತಹ ಹೀಟ್ ಸ್ಟೈಲಿಂಗ್ ಉಪಕರಣಗಳನ್ನು ಬಳಸುವುದು ನಿಲ್ಲಿಸಿ. ಏಕೆಂದರೆ ಇವು ನಿಮ್ಮ ಕೂದಲು ಮತ್ತು ನೆತ್ತಿಯನ್ನು ಹಾನಿಗೊಳಿಸಬಹುದು. ಕೂದಲು ಮತ್ತೆ ಬೆಳೆಯುವ ಸೀರಮ್ ಬಳಸುವಾಗ ಅವುಗಳನ್ನು ಬಳಸುವುದನ್ನು ತಪ್ಪಿಸಿ ಅಥವಾ ಮಿತವಾಗಿ ಬಳಸಿ.
* ಯಾವುದೇ ಅಡ್ಡಪರಿಣಾಮಗಳು ಕಂಡುಬಂದರೆ ಬಳಕೆಯನ್ನು ನಿಲ್ಲಿಸಿ: ಹೇರ್ ಸೀರಮ್ ಬಳಸುತ್ತಿರುವಾಗ ನೀವು ಯಾವುದೇ ತುರಿಕೆ, ತಲೆ ಕೆಂಪಾಗುವುದು ಅಥವಾ ಇತರ ಯಾವುದೇ ಅಡ್ಡಪರಿಣಾಮಗಳನ್ನು ಅನುಭವಿಸಿದರೆ, ಅಂಥ ಉತ್ಪನ್ನದ ಬಳಕೆಯನ್ನು ಕೂಡಲೇ ನಿಲ್ಲಿಸಿ, ವೈದ್ಯರನ್ನು ಸಂಪರ್ಕಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ