Cancer In Woman: ಎಚ್ಚರ, ಎಚ್ಚರ! ಭಾರತೀಯ ಮಹಿಳೆಯರಲ್ಲಿ ಅತಿಹೆಚ್ಚು ಕಂಡುಬರುವ ಕ್ಯಾನ್ಸರ್​ ಇದು!

ಪ್ರಸ್ತುತ ಭಾರತ ದೇಶದಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಒಟ್ಟಾರೆ ಮಹಿಳೆಯರಲ್ಲಿ ಶೇ. 22.86 ರಷ್ಟು ಮಹಿಳೆಯರು ಸರ್ವಿಕಲ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆಂಬ ಮಾಹಿತಿಯಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇಂದು ಭಾರತ ಎಲ್ಲ ತಂತ್ರಜ್ಞಾನ ಕ್ಷೇತ್ರಗಳಲ್ಲೂ ರಭಸವಾಗಿ ಮುನ್ನುಗ್ಗುತ್ತಿದೆ. ಅದರಂತೆ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲೂ ನಮ್ಮ ದೇಶ ಸಾಧನೆಯ ಪಥದಲ್ಲಿ ನಡೆದಿದೆ. ಆದಾಗ್ಯೂ ಜೀವಕ್ಕೆ ಅಪಾಯವಾಗಬಲ್ಲ ಕೆಲವು ಗಂಭೀರ ಕಾಯಿಲೆಗಳು ಭಾರತದಲ್ಲಿ ನಿಧಾನಗತಿಯಲ್ಲಿ ಏರುತ್ತಿರುವುದು ಕಳವಳಕಾರಿ. ಅಂತಹ ಸಮಸ್ಯೆಗಳಲ್ಲಿ ಒಂದಾಗಿದೆ ಕ್ಯಾನ್ಸರ್ ಕಾಯಿಲೆ. ವಿಶ್ವದಾದ್ಯಂತ ವಿವಿಧ ಭೂಪ್ರದೇಶಗಳಲ್ಲಿರುವ ಮಹಿಳೆಯರ ಕುರಿತು ನಡೆಸಿದ ಅಧ್ಯಯನದಲ್ಲಿ ವಿವಿಧ ಬಗೆಯ ಕ್ಯಾನ್ಸರ್​ಗಳು (Cancer Treatment) ಆಯಾ ಭೂಪ್ರದೇಶಗಳ ಮಹಿಳೆಯರಲ್ಲಿ ಅತ್ತಿ ಹೆಚ್ಚೆಚ್ಚಾಗಿ ಕಂಡುಬಂದಿದ್ದನ್ನು ಗಮನಿಸಲಾಗಿದೆ. ಅದರಂತೆ ಭಾರತೀಯ ಮಹಿಳೆಯರಲ್ಲೂ ಕೆಲ ಕ್ಯಾನ್ಸರ್ ಬಗೆಗಳು ಸಾಮಾನ್ಯವಾಗಿ ಕಂಡು ಬರುವುದನ್ನು ಗಮನಿಸಲಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ಮಹಿಳೆಯರಲ್ಲಿ (Cancer Treatment For Woman) ಕಂಡುಬರುವ ಕ್ಯಾನ್ಸರ್ ಕಾಯಿಲೆಗಳಲ್ಲಿ ಅತಿ ಮಂಚೂಣಿಯಲ್ಲಿರುವ ಕ್ಯಾನ್ಸರ್ ಎಂದರೆ ಸ್ತನ ಕ್ಯಾನ್ಸರ್ (Breast Cancer) ಎನ್ನಲಾಗಿದೆ.

    ಇತ್ತೀಚಿನ ಕೆಲ ವರ್ಷಗಳಿಂದ ಪುರುಷ ಹಾಗೂ ಮಹಿಳೆಯರಿಬ್ಬರೂ ಕ್ಯಾನ್ಸರ್ ರೋಗದಿಂದ ಪೀಡಿತರಾಗುತ್ತಿರುವುದು ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು ಹಲವು ಬಗೆಯ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಭಾರತೀಯ ಮಹಿಳೆಯರಲ್ಲಿ ಅತಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ ಕಾಯಿಲೆಗಳಲ್ಲಿ ಪ್ರಥಮ ಸ್ಥಾನದಲ್ಲಿದೆ ಸ್ತನದ ಕ್ಯಾನ್ಸರ್. ಅದನ್ನು ಹೊರತುಪಡಿಸಿದರೆ ಎರಡನೇಯ ಸ್ಥಾನದಲ್ಲಿರುವ ಅತಿ ಸಾಮಾನ್ಯ ಕ್ಯಾನ್ಸರ್ ಕಾಯಿಲೆ ಎಂದರೆ ಅದು ಸರ್ವಿಕಲ್ ಕ್ಯಾನ್ಸರ್. ಇದು ಗರ್ಭನಾಳಕ್ಕೆ ಸಂಬಂಧಿಸಿದಂತೆ ಉಂಟಾಗುವ ಕ್ಯಾನ್ಸರ್ ಪ್ರಕಾರವಾಗಿದೆ. ಪ್ರತಿ ವರ್ಷ ಭಾರತದಲ್ಲಿ 77,300 ಸರ್ವಿಕಲ್ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿರುವುದಾಗಿ ವರದಿಯಾಗಿದೆ.

    ಸರ್ವಿಕಲ್ ಕ್ಯಾನ್ಸರ್ ಎಂದರೇನು?
    ಇದೊಂದು ಕ್ಯಾನ್ಸರ್ ಪ್ರಕಾರವಾಗಿದ್ದು ಮಹಿಳೆಯರಲ್ಲಿ ಕಂಡುಬರುತ್ತದೆ. ಮಹಿಳೆಯರ ಗರ್ಭಕೋಶದ ಕೆಳಭಾಗದಲ್ಲಿರುವ ಗರ್ಭನಾಳ ಅಥವಾ ಗರ್ಭಕಂಠದಲ್ಲಿ ಈ ಕ್ಯಾನ್ಸರ್ ಪ್ರಾರಂಭವಾಗುತ್ತದೆ. ಗರ್ಭಕಂಠವು ಗರ್ಭಕೋಶ ಹಾಗೂ ಯೋನಿಯ ಮಧ್ಯದ ಸಂಪರ್ಕ ಸೇತುವಾಗಿದ್ದು ಈ ಭಾಗದಲ್ಲಿ ಈ ಕ್ಯಾನ್ಸರ್ ಪ್ರಾರಂಭವಾಗುತ್ತದೆ. ಗರ್ಭಕಂಠವು ಎರಡು ಭಾಗಗಳಿಂದ ಕೂಡಿರುತ್ತದೆ. ಅದರ ಒಳಭಾಗವನ್ನು ಎಂಡೋಸರ್ವಿಕ್ಸ್ ಎಂದು ಕರೆಯುತ್ತಾರೆ. ಇದರಲ್ಲಿ ಒಂದು ರೀತಿಯ ಜೀವಕೋಶಗಳಿರುತ್ತವೆ.

    ಎಲ್ಲಿಂದ ಖಾಯಿಲೆ ಶುರುವಾಗುತ್ತೆ?
    ಎಕ್ಸೋಸರ್ವಿಕ್ಸ್ ಅಥವಾ ಎಕ್ಟೋಸರ್ವಿಕ್ಸ್ ಎನ್ನುವುದು ಇನ್ನೊಂದು ಭಾಗ. ಇದು ಒಳಭಾಗವಾಗಿದ್ದು ಇದರಲ್ಲಿ ಭಿನ್ನವಾದ ಜೀವಕೋಶಗಳಿರುತ್ತವೆ. ಸರ್ವಿಕ್ಸ್​ನ ಯಾವ ಭಾಗದಲ್ಲಿ ಈ ಎರಡೂ ಭಾಗಗಳ ಜೀವಕೋಶಗಳು ಸಮ್ಮಿಳಿತವಾಗುತ್ತದೆಯೋ ಅದನ್ನು ಟ್ರಾನ್ಸ್ಫಾರ್ಮೇಶನ್ ವಲಯ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಸರ್ವಿಕಲ್ ಕ್ಯಾನ್ಸರ್ ಪ್ರಾರಂಭವಾಗುವುದು ಈ ಭಾಗದಿಂದಲೆ.

    ಹೇಗೆ ಬರುತ್ತದೆ?
    ಕಳೆದ ಕೆಲವು ವರ್ಷಗಳಲ್ಲಿ ಸರ್ವಿಕಲ್ ಕ್ಯಾನ್ಸರ್​ಗೆ ಸಂಬಂಧಿಸಿದಂತೆ ಸಾಕಷ್ಟು ಸಂಶೋಧನೆಗಳನ್ನು ಮಾಡಲಾಗಿದೆ. ಅಲ್ಲದೆ, ಇದು ಬರಬಹುದಾದಂತಹ ಅಪಾಯಕಾರಿ ಸನ್ನಿವೇಶಗಳನ್ನೂ ಸಹ ಗುರುತಿಸಲಾಗಿದೆ. ಸಾಮಾನ್ಯವಾಗಿ ಡಿಎನ್‍ಎ ರೂಪಾಂತರಿಗಳಿಂದ ಈ ಕ್ಯಾನ್ಸರ್ ಬರುತ್ತದೆ. ಆದರೆ ಬಹುತೇಕವಾಗಿ ಸರ್ವಿಕಲ್ ಕ್ಯಾನ್ಸರ್ ಬರಲು ಮುಖ್ಯ ಕಾರಣವಾಗಿದೆ.

    ಹ್ಯೂಮನ್ ಪ್ಯಾಪಿಲೋಮಾ ವೈರಸ್ (HPV). ಈ ವೈರಾಣು ಲೈಂಗಿಕ ಕ್ರಿಯೆ ಮಾಡಿದಾಗ ಪ್ರಸರಣವಾಗುತ್ತದೆ. ಲೈಂಗಿಕ ಕ್ರಿಯೆ ನಡೆದ ನಂತರ ಯೋನಿಯಲ್ಲಿ ಹ್ಯೂಮನ್ ಪ್ಯಾಪಿಲೋಮಾ ವೈರಾಣು ಪ್ರವೇಶವಾದರೆ ಸಾಮಾನ್ಯವಾಗಿ ದೇಹದ ರೋಗ ನಿರೋಧಕ ಶಕ್ತಿಯೇ ಇದನ್ನು ಸಮರ್ಥವಾಗಿ ಎದುರಿಸುತ್ತದೆ. ಇದು ಕೆಲವೇ ಮಹಿಳೆಯರಲ್ಲಿ ಕಂಡುಬರುತ್ತದೆ. ಆದರೆ ಮಿಕ್ಕ ಪ್ರಕರಣಗಳಲ್ಲಿ ಈ ವೈರಾಣು ವರ್ಷಗಳ ಕಾಲ ಸರ್ವಿಕ್ಸ್ ಭಾಗದಲ್ಲಿ ಜೀವಂತವಾಗಿದ್ದು ಕ್ರಮೇಣ ಸರ್ವಿಕ್ಸ್ ಜೀವಕೋಶಗಳನ್ನು ಕ್ಯಾನ್ಸರ್ ಕೋಶಗಳನ್ನಾಗಿ ಪರಿವರ್ತಿಸಲು ಪ್ರಾರಂಭಿಸುತ್ತದೆ.

    ಇದನ್ನೂ ಓದಿ: Causes Sleep Disorders: ನಿದ್ರೆಯ ಸಮಸ್ಯೆಗೆ ಇದೇ ಕಾರಣವಂತೆ, ಇರಲಿ ಎಚ್ಚರ

    ಇನ್ನುಳಿದಂತೆ ತಂಬಾಕು ಹಾಗೂ ಸಿಗರೇಟ್/ಬೀಡಿ ಸೇವನೆ, ಹೆಚ್.ಐ.ವಿ, ಜನನೇಂದ್ರೀಯ ಸೋಂಕು, ಪೌಷ್ಟಿಕಾಂಶದ ಕೊರತೆ, ಹೆಚ್ಚು ಮಕ್ಕಳಿಗೆ ಜನನ ನೀಡುವುದು, ಬಲಹೀನವಾದ ರೋಗ ನಿರೋಧಕ ಶಕ್ತಿ, ದೀರ್ಘಕಾಲದವರೆಗೆ ಗರ್ಭನಿರೋಧಕ ಮಾತ್ರೆಗಳ ಸೇವನೆ ಮುಂತಾದವುಗಳಿಂದಲೂ ಈ ಕ್ಯಾನ್ಸರ್ ಬರುವ ಸಾಧ್ಯತೆಯಿರಬಹುದು.

    ಪ್ರಸ್ತುತ ಭಾರತ ದೇಶದಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಒಟ್ಟಾರೆ ಮಹಿಳೆಯರಲ್ಲಿ ಶೇ. 22.86 ರಷ್ಟು ಮಹಿಳೆಯರು ಸರ್ವಿಕಲ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆಂಬ ಮಾಹಿತಿಯಿದೆ. ಅಂದರೆ ಸ್ತನದ ಕ್ಯಾನ್ಸರ್ ನಂತರ ಇದು ಎರಡನೇ ಸಾಮಾನ್ಯ ಕ್ಯಾನ್ಸರ್ ಕಾಯಿಲೆಯಾಗಿದ್ದು ಭಾರತೀಯ ಮಹಿಳೆಯರಲ್ಲಿ ಕಂಡುಬರುತ್ತಿದೆ. ಲೈಂಗಿಕವಾಗಿ ಸಕ್ರೀಯವಾಗಿರುವ ಮಹಿಳೆಯರಲ್ಲಿ ಈ ಕಾಯಿಲೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಭಾರತದಲ್ಲಿ ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಭಾಗಗಳ ಮಹಿಳೆಯರು ಈ ಕ್ಯಾನ್ಸರ್ ಕಾಯಿಲೆಗೆ ಹೆಚ್ಚು ಒಳಗಾಗುತ್ತಾರೆ ಎನ್ನಲಾಗಿದೆ.

    ಸರ್ವಿಕಲ್ ಕ್ಯಾನ್ಸರ್ ಲಕ್ಷಣಗಳು
    ಸಾಮಾನ್ಯವಾಗಿ ಸರ್ವಿಕಲ್ ಕ್ಯಾನ್ಸರ್ ಬಂದಾಗ ಅದರ ಮೊದಲ ಹಂತದಲ್ಲಿ ಯಾವುದೇ ರೀತಿಯ ಲಕ್ಷಣಗಳು ಕಂಡುಬರುವುದಿಲ್ಲ. ಕ್ರಮೇಣ ಕ್ಯಾನ್ಸರ್ ಬೆಳೆದಂತೆ ಈ ಕೆಳಗಿನ ಲಕ್ಷಣಗಳು ಕಾಣಿಸಬಹುದು.

    ಯೋನಿಯಿಂದ ರಕ್ತಸ್ರಾವ : ವೆಜೈನಲ್ ಬ್ಲೀಡಿಂಗ್ ಎಂದು ಇದನ್ನು ಕರೆಯಲಾಗುತ್ತದೆ. ವೆಜೈನಾದಿಂದ ರಕ್ತಸ್ರಾವವಾಗುವುದು ಇದರ ಒಂದು ಲಕ್ಷಣವಾಗಿದೆ.

    ಯೋನಿಯಿಂದ ದ್ರವ ವಿಸರ್ಜನೆ : ಒಮ್ಮೊಮ್ಮೆ ರಕ್ತಸ್ರಾವ ಹೊರತುಪಡಿಸಿ ಅಸಹಜವಾಗಿ ಇತರೆ ದ್ರವ ಸಹ ಯೋನಿಯಿಂದ ವಿಸರ್ಜನೆಯಾಗಬಹುದು. ಈ ರೀತಿ ವಿಸರ್ಜಿತವಾಗುವ ದ್ರವ ದುರ್ವಾಸನೆಯಿಂದ ಕೂಡಿರುತ್ತದೆ.

    ಲೈಂಗಿಕ ಕ್ರಿಯೆಯಲ್ಲಿ ನೋವು : ಲೈಂಗಿಕ ಕ್ರಿಯೆ ನಡೆಸುವಾಗ ಪೆಲ್ವಿಕ್ ನೋವು ಕಾಣಿಸಿಕೊಳ್ಳುವುದು.

    ತಡೆಗಟ್ಟುವ ವಿಧಾನ
    ಇಂದು ಸರ್ವಿಕಲ್ ಕ್ಯಾನ್ಸರ್ ಲಸಿಕೆ ಲಭ್ಯವಿದೆ. ಈ ಲಸಿಕೆಯನ್ನು ಇತ್ತೀಚಿಗಷ್ಟೆ ನ್ಯಾಶನಲ್ ಇಮ್ಮ್ಯೂನೈಸೇಶನ್ ಶೆಡ್ಯೂಲ್​ನಲ್ಲಿ ಸೇರಿಸಲಾಗಿದೆ. ಈ ಲಸಿಕೆಯನ್ನು 9-15 ವರ್ಷ ಪ್ರಾಯದ ಹುಡುಗಿಯರಿಗೆ ಎರಡು ಡೋಸ್ ಗಳನ್ನು ಹಾಗೂ 16-26 ವರ್ಷ ಪ್ರಯದ ಹುಡುಗಿಯರಿಗೆ ಮೂರು ಡೋಸ್ ಗಳನ್ನು ನೀಡಬೇಕಾಗಿರುತ್ತದೆ. ಈ ಕುರಿತು ಪೋಷಕರು ವೈದ್ಯರನ್ನು ಭೇಟಿ ಮಾಡಿ ಹೆಚ್ಚಿನ ವಿವರಗಳನ್ನು ಬೇಕಿದ್ದರೆ ಪಡೆಯಬಹುದು.

    ಇದನ್ನೂ ಓದಿ: Sleeping Disorder: ಇದು ನಿದ್ರೆ ಸಮಸ್ಯೆಯ ವಿಧಗಳು, ನಿಮಗೆ ಯಾವ ತೊಂದರೆ ಇದೆ ನೋಡಿ

    ಸುರಕ್ಷಿತ ಲೈಂಗಿಕ ಕ್ರಿಯೆಯನ್ನು ಅಂದರೆ ಕಾಂಡೋಮ್ ಬಳಸಿ ಲೈಂಗಿಕ ಕ್ರಿಯೆ ನಡೆಸುವುದರ ಮೂಲಕ ಇದನ್ನು ಬರದಂತೆ ತಡೆಗಟ್ಟಬಹುದು. ನೀಮಗೆ ಸಿಗರೇಟ್ ಸೇದುವ ಅಭ್ಯಾಸವಿದ್ದರೆ ಅದನ್ನು ತ್ವರಿತವಾಗಿ ಬಿಡುವುದು ಉತ್ತಮ. ಇದರಿಂದಲೂ ನಿಮಗೆ ಸರ್ವಿಕಲ್ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. Pap Smear (Pap Test) ಪರೀಕ್ಷೆಗಳನ್ನು ಆಗಾಗ ಮಾಡಿಸುವುದರಿಂದ ಈ ರೋಗ ಬರದಂತೆ ಅಥವಾ ಉಲ್ಬಣಗೊಳ್ಳದಂತೆ ತಡೆಯಬಹುದು. ಆಗಾಗ HPV ಸೋಂಕು ಪರೀಕ್ಷೆ ಹಾಗೂ ಅದರ ವಿರುದ್ಧ ಲಸಿಕೆ ಪಡೆಯುವುದರಿಂದ ಈ ಕ್ಯಾನ್ಸರ್ ಅನ್ನು ದೂರವಿಡಬಹುದು.

    ಅಂತಿಮವಾಗಿ ಇಷ್ಟು ವಿಷಯ ಮರೀಬೇಡಿ
    ಹಿಂದೊಮ್ಮೆ ಕ್ಯಾನ್ಸರ್ ಎಂಬ ಶಬ್ದ ಕೇಳಿದರೆ ಸಾಕು ಜನರಲ್ಲಿ ಆತಂಕ ಹಾಗೂ ಭಯದ ವಾತಾವರಣ ನಿರ್ಮಾಣವಾಗುತ್ತಿತ್ತು. ಇನ್ನೇನು ನಮ್ಮ ಜೀವನ ಮುಗಿದಂತೆಯೇ ಎಂದು ಭಯಭೀತರಾಗುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ವೈದ್ಯಕೀಯ ವಿಜ್ಞಾನದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಕಾಲ ಕಾಲಕ್ಕೆ ದೇಹದ ವಿವಿಧ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವ ಮೂಲಕ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

    ಇದನ್ನೂ ಓದಿ: Periods Hacks: ಮಹಿಳೆಯರೇ, ಪಿರಿಯಡ್ಸ್​ ಲೇಟಾಗಿ ಆಗ್ಬೇಕು ಅಂದ್ರೆ ಮಾತ್ರೆ ಬೇಡ, ಈ ವಸ್ತುಗಳು ಸಾಕು

    ಅಲ್ಲದೇ ಮೊದಲ ಹಂತದಲ್ಲೇ ಕ್ಯಾನ್ಸರ್ ಕಾಯಿಲೆ ಇರುವುದು ಬೆಳಕಿಗೆ ಬಂದರೆ ಅದಕ್ಕೆ ಸೂಕ್ತ ಚಿಕಿತ್ಸೆ ಲಭ್ಯವಿದ್ದು ಕ್ಯಾನ್ಸರ್ ಮುಕ್ತರೂ ಆಗಬಹುದು. ಹಾಗಾಗಿ ಯಾವುದೇ ಕಾರಣಕ್ಕೆ ಕ್ಯಾನ್ಸರ್ ಎಂಬ ಪದ ಕೇಳಿದರೆ ಆತಂಕ ಪಡದಿರಿ. ಇನ್ನು, ಕೇವಲ ಮಹಿಳೆಯರಷ್ಟೇ ಅಲ್ಲ ಪುರುಷರೂ ಸಹ ಸರ್ವಿಕಲ್ ಕ್ಯಾನ್ಸರ್​ಗೆ ಸಂಬಂಧಿಸಿದಂತೆ ಅರಿವು ಮೂಡಿಸಿಕೊಳ್ಳುವುದು ಉತ್ತಮ. ಇದರಿಂದ ಮಹಿಳೆಯರಿಗೆ ಲಾಭವೇ ಆಗುವುದು ಹೊರತು ನಷ್ಟವಲ್ಲ.
    Published by:guruganesh bhat
    First published: