ದೇಹದ ಬೊಜ್ಜನ್ನು ಕರಗಿಸಲು ಇದುವೇ ಸುಲಭ ಉಪಾಯ?

news18
Updated:September 1, 2018, 5:52 PM IST
ದೇಹದ ಬೊಜ್ಜನ್ನು ಕರಗಿಸಲು ಇದುವೇ ಸುಲಭ ಉಪಾಯ?
news18
Updated: September 1, 2018, 5:52 PM IST
-ನ್ಯೂಸ್ 18 ಕನ್ನಡ

ಆಧುನಿಕ ಜೀವನಶೈಲಿಯಲ್ಲಿ ಸ್ಥೂಲಕಾಯತೆ ಎಂಬುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ದೇಹದಲ್ಲಿ ಬೊಜ್ಜು ಹೆಚ್ಚಾದಂತೆ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತದೆ. ನಿರಂತರ ವ್ಯಾಯಾಮ ಮತ್ತು ಆಹಾರ ಕ್ರಮಗಳಿಂದ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದು ಗೊತ್ತಿರುವ ವಿಚಾರ. ಆದರೆ ದೇಹದ ತೂಕವನ್ನು ನಿಯಂತ್ರಿಸಲು ಇತ್ತೀಚಿನ ಜೀವನ ಶೈಲಿಯಲ್ಲಿ ಸಮಯ ಹೊಂದಿಸುವುದು ತುಸು ಕಷ್ಟ. ಹಾಗಾಗಿ ಎಲ್ಲರೂ ದೇಹ ತೂಕವನ್ನು ನಿಯಂತ್ರಿಸಲು ಸುಲಭ ಉಪಾಯವನ್ನು ಹುಡುಕುತ್ತಿರುತ್ತಾರೆ. ಅಂತಹದೊಂದು ಸುಲಭ ಮಾರ್ಗವನ್ನು ಸಂಶೋಧಶಕರ ತಂಡ ತಿಳಿಸಿದ್ದು, ನೀವು ಮಾಡಿಕೊಳ್ಳಬೇಕಿರುವುದು ಆಹಾರ ಸೇವನೆಯ ಸಮಯದಲ್ಲಿ ಬದಲಾವಣೆ ಅಷ್ಟೇ. ಹೊಸ ಅಧ್ಯಯನದ ಪ್ರಕಾರ ಬೆಳಗಿನ ಉಪಹಾರ ತಡವಾಗಿ ಮಾಡುವುದು. ಹಾಗೆಯೇ ರಾತ್ರಿಯ ಭೋಜನ ಬೇಗ ಸೇವಿಸುವುದರಿಂದ ಶೀಘ್ರ ಕೊಬ್ಬನ್ನು ಕರಗಿಸಬಹುದಂತೆ.

ಸಾಮಾನ್ಯವಾಗಿ ಉಪಹಾರ ಸೇವಿಸುದಕ್ಕಿಂತ 90 ನಿಮಿಷಗಳು ತಡವಾಗಿ ಮತ್ತು ರಾತ್ರಿಯ ಭೋಜನವನ್ನು 90 ನಿಮಿಷ ಮುಂಚಿತವಾಗಿ ಸೇವಿಸುವುದರಿಂದ ದೇಹದ ಕೊಬ್ಬನ್ನು ಬೇಗ ಕರಗಿಸಿಕೊಳ್ಳಬಹುದೆಂದು ಹೊಸ ಸಂಶೋಧನೆಯಿಂದ ಸಾಬೀತಾಗಿದೆ. ಅಲ್ಲದೆ ಈ ಅಧ್ಯಯನಕ್ಕಾಗಿ ಆಹಾರದ ಸಮಯವನ್ನು ಬದಲಿಸಿದವರು ಕಡಿಮೆ ಆಹಾರವನ್ನು ಸೇವಿಸುತ್ತಿದ್ದರು ಎಂದು ಸಂಶೋಧಕರು ತಿಳಿಸಿದ್ದಾರೆ. 'ಇದೊಂದು ಸಣ್ಣ ಅಧ್ಯಯನವಾಗಿದ್ದರೂ, ನಮ್ಮ ಆಹಾರ ಸಮಯದಲ್ಲಿ ನಾವು ಮಾಡಿಕೊಳ್ಳುವ ಬದಲಾವಣೆಯು ದೇಹಕ್ಕೆ ಯಾವ ರೀತಿಯಾಗಿ ಪ್ರಯೋಜನಕಾರಿ ಎಂಬುದನ್ನು ತಿಳಿಯಲು ಈ ಅಧ್ಯಯನವು ಸಹಕಾರಿಯಾಗಿದೆ' ಎಂದು ಸರ್ರೆ ವಿಶ್ವವಿದ್ಯಾಲಯದ ಜೋನಾಥನ್ ಜಾನ್ಸಟನ್ ತಿಳಿಸಿದ್ದಾರೆ.

ದೇಹದಲ್ಲಿರುವ ಕೊಬ್ಬನ್ನು ಕರಗಿಸುವುದರಿಂದ ಸ್ಥೂಲಕಾಯತೆ ಸಮಸ್ಯೆಯನ್ನು ಹೋಗಲಾಡಿಸಬಹುದು. ಅಲ್ಲದೆ ಬೊಜ್ಜಿಗೆ ಸಂಬಂಧಿತ ಖಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಒಟ್ಟಾರೆ ಆರೋಗ್ಯವನ್ನು ಸುಧಾರಿಸುವಲ್ಲಿ ಈ ರೀತಿಯ ಆಹಾರ ಕ್ರಮ ಮಹತ್ವದ್ದಾಗಿದೆ. ಜರ್ನಲ್ ಆಫ್ ನ್ಯೂಟ್ರಿಷನಲ್ ಸೈನ್ಸ್​​ನಲ್ಲಿ ಪ್ರಕಟವಾಗಿರುವ ಈ ಅಧ್ಯಯನಕ್ಕಾಗಿ 10 ವಾರಗಳ ಕಾಲ ಸಮಯ ನಿರ್ಬಂಧಿತ ಆಹಾರ ಸೇವನೆಯ ಪ್ರಯೋಗಗಳನ್ನು ನಡೆಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಸ್ಥೂಲಕಾಯತೆ ಕುರಿತಾಗಿ ನಡೆಸಲಾದ ಈ ಪ್ರಯೋಗಕ್ಕಾಗಿ ಎರಡು ಗುಂಪುಗಳ ತಂಡಗಳನ್ನು ರಚಿಸಲಾಗಿತ್ತು. ಇದರಲ್ಲಿ ಒಂದು ತಂಡದವರಿಗೆ ಉಪಹಾರ 90 ನಿಮಿಷಗಳ ತಡವಾಗಿ ಮತ್ತು ರಾತ್ರಿ ಊಟ 90 ನಿಮಿಷ ಮುಂಚಿತವಾಗಿ ನೀಡಲಾಗಿತ್ತು. ಹಾಗೆಯೇ ಮತ್ತೊಂದು ತಂಡಕ್ಕೆ ಸಾಮಾನ್ಯವಾಗಿ ಅವರ ಆಹಾರ ಕ್ರಮವನ್ನು ಮುಂದುವರಿಸಲು ತಿಳಿಸಲಾಗಿತ್ತು.

ಈ ವೇಳೆ ಆಹಾರ ಸೇವನೆಯ ಮೇಲೆ ಯಾವುದೇ ನಿರ್ಬಂಧವಿರಲಿಲ್ಲ. ಆದರೂ ಪರೀಕ್ಷಣೆಯಲ್ಲಿ ಭಾಗವಹಿಸಿದ ವ್ಯಕ್ತಿಗಳಲ್ಲಿ ಶೇ.57ರಷ್ಟು ಮಂದಿಗೆ ಹಸಿವು ಕಡಿಮೆಯಾಗಿ, ಸೇವಿಸುವ ಆಹಾರ ಪ್ರಮಾಣದಲ್ಲಿ ಇಳಿಮುಖವಾಗಿರುವುದು ಕಂಡು ಬಂದಿದೆ. ಅದರಲ್ಲೂ ಸಂಜೆಯ ಸಮಯದಲ್ಲಿ ಆಹಾರವನ್ನು ಸೇವೆನೆಯ ಆಸಕ್ತಿ ಕಡಿಮೆಯಾಗಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ. ಸ್ಥೂಲಕಾಯತೆಯನ್ನು ಹೋಗಲಾಡಿಸಲು ಉಪವಾಸದ ಕ್ರಮಗಳು ಯಾವಾಗಲೂ ಕಷ್ಟಕರ. ಏಕೆಂದರೆ ಕಟುಂಬ ಜೀವನ ಮತ್ತು ಸಾಮಾಜಿಕ ಜೀವನಕ್ಕೆ ಹೊಂದಿಕೊಂಡು ಬದುಕಬೇಕಾಗುತ್ತದೆ. ನಾವು ಯಾವಾಗಲೂ ನಮ್ಮ ಜೀವನ ಶೈಲಿಗೆ ಹೊಂದಿಕೊಳ್ಳುವ ಸುಲಭ ಕ್ರಮಗಳಿಗೆ ಒಗ್ಗುವುದರಿಂದ ಅನುಕೂಲಗಳು ಹೆಚ್ಚಿರುತ್ತದೆ. ಹೀಗಾಗಿ ಆಹಾರ ಕ್ರಮದಲ್ಲಿ ನಾವು ಮಾಡಿಕೊಳ್ಳುವ ಬದಲಾವಣೆಯು ಅತಿ ಹೆಚ್ಚು ಪ್ರಯೋಜನ ನೀಡುತ್ತದೆ ಎಂದು ಜಾನ್ಸ್​ಟನ್​ ತಿಳಿಸಿದ್ದಾರೆ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ