ಐರೋಪ್ಯ ಒಕ್ಕೂಟದಿಂದ ಹೊರ ಬಿದ್ದ ಬ್ರಿಟನ್​ನಲ್ಲಿ 'ವೀರ್ಯಾಣು' ಕೊರತೆ

news18
Updated:August 27, 2018, 1:24 PM IST
ಐರೋಪ್ಯ ಒಕ್ಕೂಟದಿಂದ ಹೊರ ಬಿದ್ದ ಬ್ರಿಟನ್​ನಲ್ಲಿ 'ವೀರ್ಯಾಣು' ಕೊರತೆ
news18
Updated: August 27, 2018, 1:24 PM IST
-ನ್ಯೂಸ್ 18 ಕನ್ನಡ

ಯುರೋಪಿಯನ್ ಒಕ್ಕೂಟದಿಂದ ಹೊರ ಹೋಗಿರುವ ಬ್ರಿಟನ್​ನಲ್ಲಿ ಹೊಸ ಸಮಸ್ಯೆಯೊಂದು ಸೃಷ್ಟಿಯಾಗಿದೆ.    ಐರೋಪ್ಯ ರಾಷ್ಟ್ರಗಳ ಒಕ್ಕೂಟದಿಂದ ಹೊರ ಉಳಿದ ಪರಿಣಾಮ ಕೃತಕ ಗರ್ಭಧಾರಣೆ ಪ್ರಕಿಯೆಗೆ ಬ್ರಿಟನ್​ನಲ್ಲಿ ವೀರ್ಯದ ಕೊರತೆ ಉಂಟಾಗಿದೆ. ಈ ಒಕ್ಕೂಟದಿಂದ ಹೊರ ಬರುವಾಗ ವೀರ್ಯದ ಆಮದಿನ ಕುರಿತು ಯಾವುದೇ ಒಪ್ಪಂದ ಮಾಡಿಕೊಂಡಿರಲಿಲ್ಲ. ಇದರಿಂದ ಬ್ರಿಟನ್ ವೀರ್ಯ ಬ್ಯಾಂಕಿನಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಸಲು ವೀರ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ. ಬ್ರಿಟನ್​ನಲ್ಲಿ ಕೃತಕ ಗರ್ಭಧಾರಣೆಗೆ ವೀರ್ಯಾಣುಗಳ ಬೇಡಿಕೆ ಹೆಚ್ಚಾಗಿದ್ದು, ಕಳೆದ ವರ್ಷ ಡೆನ್ಮಾರ್ಕ್​ನ ವಾಣಿಜ್ಯ ವೀರ್ಯ ಬ್ಯಾಂಕಿನಿಂದ 3 ಸಾವಿರ ವೀರ್ಯ ಮಾದರಿಗಳನ್ನು ಆಮದು ಕೊಂಡಿತ್ತು. ಹಾಗೆಯೇ 4 ಸಾವಿರ ವೀರ್ಯ ಮಾದರಿಗಳನ್ನು ಯುನೈಟೆಡ್ ಸ್ಟೇಟ್ಸ್​ನಿಂದ ಆಮದು ಮಾಡಿ ಕೃತಕ ಗರ್ಭಧಾರಣೆಗೆ ಬಳಸಲಾಗಿದೆ.

ವಿಶ್ವದ ಅತಿ ದೊಡ್ಡ ವೀರ್ಯ ಬ್ಯಾಂಕ್ ಡೆನ್ಮಾರ್ಕ್​ನಲ್ಲಿದ್ದು, ಬ್ರಿಟನ್ ಸೇರಿದಂತೆ ಹಲವು ದೇಶಗಳ ಆಸ್ಪತ್ರೆಗಳು ವೀರ್ಯಕ್ಕಾಗಿ ಡೆನ್ಮಾರ್ಕ್​ನ್ನು ಅವಲಂಬಿಸಿದೆ. 2005 ರಲ್ಲಿ ಜಾರಿಗೆ ಬಂದ ಕಾನೂನಿನಡಿಯಲ್ಲಿ ಅನಾಮಧೇಯರು ಬ್ರಿಟನ್​ನಲ್ಲಿ ವೀರ್ಯ ದಾನ ಮಾಡುವಂತಿಲ್ಲ. ಇದರಿಂದ ಬ್ರಿಟನ್ನಿನ ವೀರ್ಯ ಬ್ಯಾಂಕಿನಲ್ಲಿ ವೀರ್ಯ ದೇಣಿಗೆಯು ಕುಸಿದಿದೆ. ವೀರ್ಯಾಣು ಅಲ್ಲದೆ ಯುರೋಪಿಯನ್ ಒಕ್ಕೂಟದಿಂದ ಭ್ರೂಣಗಳನ್ನು ಆಮದು ಮಾಡಿ ಕೃತಕ ಗರ್ಭಧಾರಣೆ ಮಾಡಲಾಗುತ್ತದೆ. ಕಳೆದ ವರ್ಷ ಈ ರೀತಿಯಾಗಿ ಐನೂರು ಭ್ರೂಣಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಅಂಕಿ ಅಂಶಗಳು ತಿಳಿಸಿದೆ.

ಬ್ರೆಕ್ಸಿಟ್ ನಿರ್ಣಯದಿಂದ ಐರೋಪ್ಯ ಒಕ್ಕೂಟದಿಂದ ಹೊರ ಬಂದ ಮೇಲೆ ವೀರ್ಯ , ಅಂಗಾಂಗ, ಮತ್ತು ಜೀವಕೋಶಗಳ ಆಮದಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಬ್ರಿಟನ್​ ಸರ್ಕಾರ ಹೇಳಿದೆ. ಇದಕ್ಕಾಗಿ ಆಯಾ ವೈದ್ಯಕೀಯ ಬ್ಯಾಂಕುಗಳು ಹೊಸ ಲಿಖಿತ ಒಪ್ಪಂದಗಳನ್ನು ಅಗತ್ಯವಾದ ಐರೋಪ್ಯ ಸಂಸ್ಥೆಗಳೊಂದಿಗೆ ಮಾಡಿಕೊಳ್ಳಬೇಕಾಗಿದೆ ಎಂದು  ಸರ್ಕಾರ ಸ್ಪಷ್ಟಪಡಿಸಿದ್ದು, ಇದರಿಂದ ಬ್ರಿಟನ್ ಮೂಲದ ಕೆಲ ವೈದ್ಯಕೀಯ ಉದ್ಯಮದ ಮೇಲೆ ಹೊರೆಯಾಗಲಿದೆ ಎನ್ನಲಾಗಿದೆ.

ಈಗಾಗಲೇ ಒಪ್ಪಂದದಲ್ಲಿರುವ ಯುಎಸ್​ ವೀರ್ಯಾಣು ಆಮದು ಕಾನೂನಿನ ಪ್ರಕಾರ ಮುಂದಿನ ಮೂರು ತಿಂಗಳವರೆಗೆ ವೀರ್ಯ ಆಮದು ಮಾಡಿಕೊಳ್ಳಬಹುದು. ಆದರೆ ಇದೇ ಒಪ್ಪಂದ ಡೆನ್ಮಾರ್ಕ್​​ನೊಂದಿಗೆ ಮುಗಿಯಲು ಕೇವಲ ಒಂದು ವಾರವಷ್ಟೇ ಉಳಿದಿದೆ. ಈ ಒಪ್ಪಂದವನ್ನು ಪುನರಾರಂಭಿಸಲು ಹೆಚ್ಚುವರಿ ವೆಚ್ಚ ಮತ್ತು ದಾಖಲೆಗಳ ಅನಿವಾರ್ಯತೆ ಇದೆ. ಯುರೋಪಿಯನ್ ಒಕ್ಕೂಟದೊಂದಿಗೆ ಒಪ್ಪಂದ ಆಗದಿದ್ದರೆ ಮುಂದಿನ ದಿನಗಳಲ್ಲಿ ಚಿಕಿತ್ಸೆ ನೀಡುವುದು ಕಷ್ಟಸಾಧ್ಯ. ಈಗಾಗಲೇ ಇದರ ಬಗ್ಗೆ ರೋಗಿಗಳು ಕೂಡ ಭಯಭೀತರಾಗಿದ್ದಾರೆ ಎಂದು ಬಿಬಿಸಿ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಭಾರತ ಮೂಲದ ಬ್ರಿಟನ್ ವೈದ್ಯೆ ಗೀತಾ ವೆಂಕಟ್ ತಿಳಿಸಿದ್ದಾರೆ.
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...