ಇತ್ತೀಚೆಗೆ ಎಲ್ಲಿ ಕೇಳಿದರೂ ಹೃದಯಾಘಾತದ (Heart Attack) ಸುದ್ದಿ. ಅಲ್ಲದೇ ಹೃದ್ರೋಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ (Heart Disease) ಹೆಚ್ಚಿನ ಸಂಖ್ಯೆಯ ಜನರು ಬಳಲುತ್ತಿರುವುದೇ ಹೆಚ್ಚಾಗಿದೆ. ಹೌದು, ದೇಶದಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಯುವ ಸೆಲೆಬ್ರಿಟಿಗಳ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ವರದಿಗಳಿಂದಾಗಿ ಜನರು ಹೆಚ್ಚಾಗಿ ಹೃದಯದ ಆರೋಗ್ಯದ (Heart Health) ಕಡೆಗೆ ಗಮನ ನೀಡುತ್ತಿದ್ದಾರೆ. ಕೆಲವು ತಿಂಗಳ ಹಿಂದೆ, ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಹೃದಯ ಸ್ತಂಭನದಿಂದ ನಿಧನರಾಗಿದ್ದರು. ಇತ್ತೀಚೆಗೆ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಹೃದಯಾಘಾತದ ನಂತರ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಕಳೆದ ವರ್ಷ, ಅನೇಕ ಪ್ರಸಿದ್ಧ ಟಿವಿ ಮತ್ತು ಚಲನಚಿತ್ರ ತಾರೆಯರು ಹೃದಯಾಘಾತದಿಂದ ನಿಧನರಾದರು. ಆದ್ದರಿಂದ ಹೃದ್ರೋಗಕ್ಕೆ ಸಂಬಂಧಿಸಿದ ಮಾರಣಾಂತಿಕ ಪರಿಸ್ಥಿತಿಗಳಿಂದ ಹೆಚ್ಚಿನ ಜನರು ಸಮಸ್ಯೆ ಅನುಭವಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಹಾಗಿದ್ರೆ ಹೃದಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಏನೆಲ್ಲ ಮುಂಜಾಗ್ರತೆ ತೆಗೆದುಕೊಳ್ಳಬಹುದು ಅನ್ನೋದಕ್ಕೆ ಇಲ್ಲಿವೆ ಕೆಲವು ಸಲಹೆಗಳು.
ಈ ಅಂಶಗಳು ಹೃದಯದ ಮೇಲೆ ಪರಿಣಾಮ ಬೀರುತ್ತದೆ!
ನವದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞೆ ಡಾ. ವನಿತಾ ಅರೋರಾ, ಕಳಪೆ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ಜಂಕ್ ಫುಡ್ ಸೇವನೆ, ಧೂಮಪಾನ, ಮಾಲಿನ್ಯ ಮತ್ತು ದೈಹಿಕ ಚಟುವಟಿಕೆಯ ಕೊರತೆಯು ಹೃದಯದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ. ಅಲ್ಲದೇ ಅತಿಯಾದ ಒತ್ತಡ, ಖಿನ್ನತೆ ಮತ್ತು ಆತಂಕದ ಸಮಸ್ಯೆಗಳಿಂದ ಹೃದಯಾಘಾತದ ಅಪಾಯವೂ ಹೆಚ್ಚುತ್ತಿದೆ.
ನೀವು ಜಂಕ್ ಫುಡ್, ಧೂಮಪಾನ ಮತ್ತು ಮದ್ಯಪಾನವನ್ನು ಸೇವಿಸುವುದನ್ನು ತಪ್ಪಿಸಬೇಕು ಎಂದು ಹೇಳುವ ಡಾ. ಅರೋರಾ, ಕೆಲವು ಸುಲಭ, ಸರಳ ವಿಧಾನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಿಮ್ಮ ಹೃದಯವನ್ನು ತೀವ್ರತರವಾದ ಕಾಯಿಲೆಗಳಿಂದ ರಕ್ಷಿಸಬಹುದು ಎಂದು ಸಲಹೆ ನೀಡುತ್ತಾರೆ.
ಬ್ರಿಸ್ಕ್ ವಾಕಿಂಗ್ ಹೃದಯದ ಆರೋಗ್ಯಕ್ಕೆ ಬೆಸ್ಟ್
ವಾಕಿಂಗ್ ಅನ್ನೋದು ಎಲ್ಲಾ ವಯೋಮಾನದವರೂ ಮಾಡಬಹುದಾದ ವ್ಯಾಯಾಮ. ನಿಮ್ಮ ಹೃದಯವನ್ನು ಆರೋಗ್ಯವಾಗಿಡಬೇಕು ಎಂದರೆ ನೀವು ಪ್ರತಿದಿನ ಬೆಳಗ್ಗೆ ಎದ್ದು ಬಿರುಸಾಗಿ ವಾಕಿಂಗ್ ಮಾಡಬೇಕು. ಪ್ರತಿದಿನ 4 ಕಿಲೋಮೀಟರ್ ವಾಕಿಂಗ್ ನಿಮ್ಮ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ನಿಯಮಿತ ದೈಹಿಕ ಚಟುವಟಿಕೆಯು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಪ್ರತಿ ದಿನ 6000 ರಿಂದ 9000 ಹೆಜ್ಜೆಗಳನ್ನು ನಡೆಯುವುದು 60 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಶೇ.40 ರಿಂದ 50ರಷ್ಟು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಗಳು ಹೇಳಿವೆ.
ಈ ಅಂಶವನ್ನು ಉಲ್ಲೇಖಿಸಿದ ಡಾ. ಅರೋರಾ, ವಾಕಿಂಗ್ ದೈಹಿಕ ಆರೋಗ್ಯವನ್ನು ಹೆಚ್ಚಿಸುವುದಲ್ಲದೆ ಮಾನಸಿಕ ಆರೋಗ್ಯವನ್ನು ಸಹ ಕಾಪಾಡುತ್ತದೆ ಎನ್ನುತ್ತಾರೆ. ಆದರೆ, ಬ್ರಿಸ್ಕ್ ವಾಕಿಂಗ್ ಅನ್ನೋದು ಮ್ಯಾಜಿಕ್ ಪರಿಹಾರವಲ್ಲ ಅನ್ನೋದನ್ನು ನೆನಪಿಟ್ಟುಕೊಳ್ಳಬೇಕು. ಏಕೆಂದರೆ ಇಂದು ನೀವು ಬ್ರಿಕ್ಸ್ ವಾಕಿಂಗ್ ಮಾಡಿದೊಡನೇ ಎಲ್ಲ ಆರೋಗ್ಯ ಸಮಸ್ಯೆಗಳು ಬಗೆಹರಿದುಬಿಡುತ್ತವೆ ಎಂದಲ್ಲ. ಬದಲಾಗಿ ಇದನ್ನು ನಿಯಮಿತವಾಗಿ ಮಾಡಬೇಕು. ದಿನವೂ ಮಾಡಬೇಕು. ಅಂದಾಗ ಮಾತ್ರ ಅದು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡಲು ಸಾಧ್ಯ.
ಇದನ್ನೂ ಓದಿ: Heart Attack: ಮಹಿಳೆಯರಲ್ಲಿ ಹೆಚ್ಚುತ್ತಿರುವುದೇಕೆ ಹೃದಯಾಘಾತ? ಹೆಲ್ದಿ ಹಾರ್ಟ್‌ಗೆ ವೈದ್ಯರ ಸಲಹೆ ಇಲ್ಲಿದೆ ಓದಿ
ಅದರ ಜೊತೆಗೆ, ನಿಧಾನಗತಿಯಲ್ಲಿ ಪ್ರಾರಂಭಿಸುವುದು ಮತ್ತು ಕಾಲಾನಂತರದಲ್ಲಿ ನಿಮ್ಮ ವ್ಯಾಯಾಮದ ತೀವ್ರತೆ ಕ್ರಮೇಣ ಹೆಚ್ಚಿಸುವುದು ಮುಖ್ಯ. ವಾಕಿಂಗ್ ಜೊತೆಗೆ ಪೌಷ್ಟಿಕ ಆಹಾರ ಸೇವಿಸುವುದೂ ಅಷ್ಟೇ ಮುಖ್ಯ. ಆರೋಗ್ಯಯುತ ಪೌಷ್ಠಿಕ ಆಹಾರ ಸೇವನೆಯು ವಾಕಿಂಗ್ ಪ್ರಯೋಜನಗಳನ್ನು ಶೀಘ್ರವಾಗಿ ನೀಡಲು ಸಹಕಾರಿ. ಆದ್ದರಿಂದ ಸರಿಯಾದ ಪ್ರಮಾಣದ ಬ್ರಿಸ್ಕ್ ವಾಕಿಂಗ್, ಪೌಷ್ಠಿಕ ಆಹಾರ ಸೇವನೆಯಂಥ ಜೀವನಶೈಲಿಯ ಬದಲಾವಣೆಯಿಂದ ನೀವು ಇನ್ನಷ್ಟು ಆರೋಗ್ಯವಾಗಿ ಜೀವನ ನಡೆಸಲು ಸಾಧ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ