ಜಗತ್ತಿನಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಇದರಿಂದ ಬಳಲಿ ಬೆಂಡಾಗುತ್ತಿದ್ದಾರೆ. ಆದರೆ ಇದೀಗ ಪುರುಷರಲ್ಲೂ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದ್ದು, ಇದರ ಕುರಿತು ಜಾಗೃತಿ ನಡೆಯುತ್ತಿದೆ. ಈ ಬಗ್ಗೆ ಎಚ್‍ಸಿಜಿ ಆಸ್ಪತ್ರೆಯ ಹಿರಿಯ ವೈದ್ಯಕೀಯ ಆಂಕೊಲಾಜಿಸ್ಟ್ ಡಾ. ರಾಧೆಶ್ಯಾಂ ನಾಯಕ್ ಪುರುಷರಲ್ಲಿ ಕಾಣಿಸಿಕೊಳ್ಳುತ್ತಿರುವ ಸ್ತನ ಕ್ಯಾನ್ಸರ್ ಕುರಿತ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಮತ್ತು ಅದನ್ನು ಯಾಕೆ ಗಂಭೀರವಾಗಿ ಪರಿಗಣಿಸಬೇಕು ಎಂದು ವಿವರಿಸಲಿದ್ದಾರೆ.
ಪುರುಷರಿಗೂ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆಯೇ..?
ಹೌದು, ಪುರುಷರಲ್ಲೂ ಮಹಿಳೆಯರ ರೀತಿಯಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಆದರೆ ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಕಂಡು ಬರುವುದು ಕಡಿಮೆ. ಆದರೆ ಬೇರೆ ಅಂಗಗಳಲ್ಲಿ ಕಂಡು ಬರುವಂತೆ ಸ್ತನದಲ್ಲೂ ಕ್ಯಾನ್ಸರ್ ಬರಬಹುದು. ಒಟ್ಟಾರೆ ಕ್ಯಾನ್ಸರ್ ರೋಗಿಗಳಲ್ಲಿ ಕೇವಲ ಶೇಕಡಾ 1ರಷ್ಟು ಪುರುಷರಲ್ಲಿ ಮಾತ್ರ ಬಂದಿದೆ. ಆದರೆ ಶೇ 1ರಷ್ಟು ಮಂದಿಗೆ ಗಂಭೀರ ಚಿಕಿತ್ಸೆಯ ಅಗತ್ಯವಿರುತ್ತದೆ ಅಥವಾ ಮಾರಣಾಂತಿಕವಾಗಬಹುದು.
ಪುರುಷರ ಸ್ತನ ಕ್ಯಾನ್ಸರ್ನ ಲಕ್ಷಣಗಳೇನು?
ಸ್ತನದ ಸುತ್ತಮುತ್ತಲಿನ ಜಾಗದಲ್ಲಿ ಒಂದು ರೀತಿಯ ಉಂಡೆಗಳು, ಅಸಾಮಾನ್ಯ ಬೆಳವಣಿಗೆ, ಹುಣ್ಣು ಮತ್ತು ದುರ್ವಾಸನೆ ಇವು ಸಾಮಾನ್ಯ ಲಕ್ಷಣಗಳಾಗಿವೆ. ಈ ಎಲ್ಲಾ ಲಕ್ಷಣಗಳನ್ನು ಮೊದಲೇ ಗುರುತಿಸಿಕೊಂಡರೆ ಉತ್ತಮ.
ಪುರುಷರ ಸ್ತನ ಕ್ಯಾನ್ಸರ್ ಅನುವಂಶೀಯತೆಯೇ?
ಇದು ಅನುವಂಶಿಯ ರೋಗವಲ್ಲ. ಆದರೆ ಕುಟುಂಬದಲ್ಲಿ ಯಾರಿಗಾದರೂ ಕಾಣಿಸಿಕೊಂಡಿದ್ದರೆ ಮನೆಯ ಇತರರಿಗೆ ಬರುವ ಸಾಧ್ಯತೆಗಳಿರುತ್ತವೆ. ವ್ಯಕ್ತಿಯ ತಾಯಿಗೆ ಸ್ತನ ಕ್ಯಾನ್ಸರ್ ಇದ್ದರೆ ಮಗನಿಗೆ ಬರುವ ಸಾಧ್ಯತೆ ಇತರರಿಗಿಂತ ಹೆಚ್ಚಿರುತ್ತದೆ. ಒಟ್ಟಾರೆ ಬರುವುದು ತೀರಾ ಕಡಿಮೆ. ಆದರೆ ಭಯಪಡದೆ ಜಾಗರೂಕರಾಗಿರಬೇಕು.
ಅನುವಂಶೀಯತೆ ಹೊರತುಪಡಿಸಿ ಉಳಿದ ಪುರುಷರು ಸ್ತನ ಕ್ಯಾನ್ಸರ್ ತಡೆಯಲು ಏನು ಮಾಡಬೇಕು?
ಬಿಆರ್‌ಸಿಎ ರೂಪಾಂತರ ಪರೀಕ್ಷೆ ಮಾಡಿಸಿದ ವ್ಯಕ್ತಿಗೆ ಪಾಸಿಟಿವ್ ಕಂಡು ಬಂದರೆ ಅವರು ಜಾಗರೂಕರಾಗಿರಬೇಕಾಗುತ್ತದೆ. ಏಕೆಂದರೆ ಅಂತಹ ವ್ಯಕ್ತಿಗಳಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಈ ರೂಪಾಂತರವು ರಕ್ತ ಪರೀಕ್ಷೆಯ ಮೂಲಕ ಮಾತ್ರ ಕಂಡುಬರುತ್ತದೆ ಮತ್ತು ಇದು ಬಹಳ ಅಪರೂಪ.
ಯಾರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚು ಅಪಾಯಕಾರಿ?
ಮಧ್ಯವಯಸ್ಕರು ಅಂದರೆ ಸುಮಾರು 40 ರಿಂದ 60 ವರ್ಷದೊಳಗಿನ ಪುರುಷರಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಗೈನೆಕೊಮಾಸ್ಟಿಯಾ, 40 ರಿಂದ 60 ವರ್ಷದೊಳಗಿನ ಪುರುಷರಲ್ಲಿ ಸ್ತನ ಗ್ರಂಥಿ ಅಂಗಾಂಶಗಳ ಪ್ರಮಾಣ ಹೆಚ್ಚಳವಾಗುವಂತೆ ಮಾಡುತ್ತದೆ. ಅಲ್ಲದೆ, ಕುಟುಂಬದಲ್ಲಿ ಸ್ತನ ಕ್ಯಾನ್ಸರ್ ಇತಿಹಾಸ, ಬೊಜ್ಜು, ಕೆಟ್ಟ ಜೀವನಶೈಲಿ ಸಹ ಕ್ಯಾನ್ಸರ್ ಕೋಶಗಳನ್ನು ತಗ್ಗಿಸಲೂಬಹುದು.
ಪುರುಷರ ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ ಏನು?
ಕೀಮೋಥೆರಪಿ ನಂತರ ಅಂಗಾಂಶಗಳ ಕುಗ್ಗುವಿಕೆ. ಕ್ಯಾನ್ಸರ್ ಅಂಗಾಂಶಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವುದು ಮತ್ತು ಹಾರ್ಮೋನ್ ಚಿಕಿತ್ಸೆ ಜೊತೆಗೆ ವಿಕಿರಣ ಚಿಕಿತ್ಸೆಯು ಚಿಕಿತ್ಸೆಯ ತಂತ್ರವಾಗಿದೆ. ಇದನ್ನು ಗುಣಪಡಿಸಬಹುದಾಗಿದೆ.
ಪುರುಷರಲ್ಲಿ ಕಾಣುವ ಸ್ತನ ಕ್ಯಾನ್ಸರ್ ಇತರೆ ಅಂಗಗಳಿಗೂ ಹರಡುತ್ತದೆಯೇ?
ಹೌದು. ಕ್ಯಾನ್ಸರ್ ರೋಗಿಗಳು ಸಾಮಾನ್ಯವಾಗಿ ಮೂರನೇ ಮತ್ತು ನಾಲ್ಕನೇ ಹಂತದಲ್ಲಿದ್ದಾಗ ಆಸ್ಪತ್ರೆಗೆ ಬರುತ್ತಾರೆ. ಕ್ಯಾನ್ಸರ್ ನೆರೆಯ ಅಂಗಗಳಾದ ಕುತ್ತಿಗೆ, ಎದೆಯ ಭಾಗ, ಪಿತ್ತಜನಕಾಂಗ, ಶ್ವಾಸಕೋಶ ಮತ್ತು ಕೆಲವೊಮ್ಮೆ ಮೆದುಳಿಗೆ ಹರಡುತ್ತಿತ್ತು. ಸ್ತನ ಅಂಗಾಂಶಗಳ ಪ್ರಮಾಣ ಕಡಿಮೆ ಇರುವುದರಿಂದ, ಪುರುಷ ಸ್ತನ ಕ್ಯಾನ್ಸರ್ ಪ್ರಕರಣಗಳಲ್ಲಿ ಕ್ಯಾನ್ಸರ್‌ನ ಆಂತರಿಕವಾಗಿ ಹರಡುವುದು ಹೆಚ್ಚಾಗಿರುತ್ತದೆ.
ತಡೆಗಟ್ಟುವುದು ಹೇಗೆ?
ಯಾವುದೇ ಕಾಯಿಲೆ ನಿವಾರಣೆಗೆ ಆರೋಗ್ಯಕರ ಜೀವನ ಶೈಲಿ ಅನುಸರಣೆ. ಆರಂಭದಲೇ ಕ್ಯಾನ್ಸರ್ ಬಗ್ಗೆ ತಿಳಿದರೆ ವ್ಯಕ್ತಿಯ ಜೀವ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಂಗದಲ್ಲಾಗಿರುವ ಬದಲಾವಣೆ ಯಥೇಚ್ಛವಾಗಿದೆಯಾ ಅಥವಾ ಸಾಮಾನ್ಯವಾಗಿದೆಯಾ ಎಂಬುದನ್ನು ತಿಳಿದುಕೊಳ್ಳಬೇಕು. ನಾವು ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವ ಬದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ