ಬೆಳಗಿನ ತಿಂಡಿ ನಮ್ಮ ಇಡೀ ದಿನವನ್ನು ನಿರ್ಧಾರ ಮಾಡುತ್ತದೆ. ಹೆಚ್ಚಾಗಿ ನಾವು ಇಡ್ಲಿ, ದೋಸೆ, ಉಪ್ಪಿಟ್ಟು, ರೊಟ್ಟಿ ಹೀಗೆ ಇಂಥಹ ಆಹಾರ ಪದಾರ್ಥಗಳನ್ನು ಮಾಡುತ್ತೇವೆ. ಆದರೆ ಇದನ್ನೆ ಪದೇ ಪದೇ ತಿನ್ನುವುದು ನಿಜಕ್ಕೂ ಬೋರ್, ಬೆಳಗಿನ ತಿಂಡಿಯಲ್ಲಿ ಕೊನೆಪಕ್ಷ ತಿಂಗಳಿಗೊಮ್ಮೆಯಾದಾರೂ ವಿಭಿನ್ನವಾದ ಆಹಾರ ಸೇವನೆ ಮಾಡಿದರೆ ನಿಮಗೂ ಖುಷಿಯಾಗುತ್ತದೆ. ಹಾಗಾದ್ರೆ ಈ ಸಾಮಾನ್ಯ ತಿಂಡಿಗಳನ್ನು ಬಿಟ್ಟು ಬೇರೆ ಯಾವ ತಿಂಡಿಗಳನ್ನು ಮಾಡಬಹುದು ಎಂಬುದು ಇಲ್ಲಿದೆ.
ಜೋಲ್ಪಾನ್
ಈ ತಿಂಡಿಯನ್ನು ಅಸ್ಸಾಂ ಭಾಗಗಳಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ. ಇದು ಸಿಹಿ ತಿಂಡಿಯಾಗಿದ್ದು, ಇದನ್ನು ತಯಾರಿಸುವುದು ಬಹಳ ಸುಲಭ.
ಬೇಕಾಗಿರುವ ಪದಾರ್ಥಗಳು
ಅಕ್ಕಿ
ಬೆಲ್ಲ
ಮೊಸರು
ಮಾಡುವ ವಿಧಾನ
ನಿಮ್ಮ ಎಲ್ಲಾ ಪದಾರ್ಥಗಳನ್ನು ಸಿದ್ದವಾಗಿಟ್ಟುಕೊಂಡಿದ್ದರೆ, ನಂತರ ನೀವು ಮಾಡಬೇಕಾಗಿರುವುದಿಷ್ಟೇ, ಅಕ್ಕಿಯನ್ನು ಚನ್ನಾಗಿ, ಮೃದುವಾಗಿ ಬೇಯಿಸಬೇಕು. ನಂತರ ಅದಕ್ಕೆ ಬೆಲ್ಲ ಮತ್ತು ಮೊಸರನ್ನು ಸೇರಿಸಿ, ಸರಿಯಾಗಿ ಮಿಶ್ರಣ ಮಾಡಿದರೆ ಜೋಲ್ಪಾನ್ ರೆಡಿ.
ಪುಟ್ಟು
ಇದು ನಮ್ಮ ನೆರೆಯ ರಾಜ್ಯ ಕೇರಳದ ತುಂಬಾ ಪ್ರಸಿದ್ಧವಾದ ತಿಂಡಿ. ಹೆಚ್ಚು ರುಚಿಕರ ಮತ್ತು ಆರೋಗ್ಯಕರ ಆಹಾರ ಪದಾರ್ಥಗಳಲ್ಲಿ ಪುಟ್ಟು ಕೂಡ ಒಂದು. ಇದನ್ನು ಅಕ್ಕಿಯಿಂದ ತಯಾರಿಸಲಾಗುತ್ತದೆ
.ಬೇಕಾಗುವ ಪದಾರ್ಥಗಳು
ಅಕ್ಕಿ
ತೆಂಗಿನಕಾಯಿ
ಬಾಳೆಹಣ್ಣು
ಬೇಳೆಸಾರು
ಮಾಡುವ ವಿಧಾನ
ತೆಂಗಿನಕಾಯಿಯನ್ನು ತುರಿದು ಇಟ್ಟುಕೊಳ್ಳಬೇಕು, ಅಕ್ಕಿಯನ್ನು ಪುಡಿ ಮಾಡಿಕೊಂಡು ನಂತರ ನೀರನ್ನು ಹಾಕಿ ಕಲಸಿಕೊಳ್ಳಬೇಕು. ಕಲಸಿದ ಅಕ್ಕಿ ಹಿಟ್ಟಿಗೆ ಉಪ್ಪು ಮತ್ತು ತೆಂಗಿನ ತುರಿಗಳನ್ನುಹಾಕಿ ಸರಿಯಾಗಿ ಮಿಶ್ರಣ ಮಾಡಬೇಕು. ನಂತರ ಅದನ್ನು ಸಿಲಿಂಡರ್ ಆಕಾರದಲ್ಲಿ ಮಾಡಿ, ಬೇಯಿಸಬೇಕು. ಇದನ್ನು ಬಾಳೆಹಣ್ಣು ಅಥವಾ ಬೇಳೆಸಾರು, ದಾಲ್ ಹೀಗೆ ಯಾವುದರ ಜೊತೆ ಬೇಕಾದರೂ ಸೇವನೆ ಮಾಡಬಹುದು.
ಮುತ್ತಿಯಾ
ಗುಜರಾತ್ನ ಪ್ರಸಿದ್ದ ತಿಂಡಿ ಪದಾರ್ಥ ಮುತ್ತಿಯಾ ಹಲವಾರು ಜನರಿಗೆ ಬಹಳ ಇಷ್ಟ. ಇದು ಬಹಳ ರುಚಿಕರವಾದ ಆಹಾರ ಪದಾರ್ಥ. ಇದು ಅದ್ಭುತವಾದ ಸುವಾಸನೆಯನ್ನು ಹೊಂದಿದೆ.
ಇದನ್ನು ಓದಿ: ನಿಮ್ಮ ಆರೋಗ್ಯದ ಮೇಲೆ ಜಾಯಿಕಾಯಿ ಮ್ಯಾಜಿಕ್ ಏನು ಗೊತ್ತಾ?
ಬೇಕಾಗುವ ಪದಾರ್ಥಗಳು
ಕಡಲೇ ಹಿಟ್ಟು
ಉಪ್ಪು
ಅರಿಶಿನ
ಮೆಂತ್ಯೆ
ಮೆಣಸಿನಕಾಯಿ
ಮಾಡುವ ವಿಧಾನ
ಕಡಲೇ ಹಿಟ್ಟಿಗೆ ಸ್ವಲ್ಪ ಬಿಸಿ ನೀರನ್ನು ಹಾಕಿ ಕಲಸಿಕೊಳ್ಳಿ, ಅದಕ್ಕೆ ಉಪ್ಪು, ಅರಿಶಿನ, ಮೆಂತ್ಯೆ ಹಾಗೂ ಮೆಣಸಿನಕಾಯಿಯನ್ನು ಸಣ್ಣದಾಗಿ ಕತ್ತರಿಸಿ ಹಾಕಿ, ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಸಣ್ಣ ಕಡುಬಿನ ಆಕಾರದಲ್ಲಿ ಮಾಡಿ, ಹಬೆಯಲ್ಲಿ ಬೇಯಿಸಿ. ಇದನ್ನು ಚಟ್ನಿ ಜೊತೆ ಸೇವಿಸಲು ಚನ್ನಾಗಿರುತ್ತದೆ.
ಟೊನಾಕ್
ಟೊನಾಕ್ ಗೋವಾದಲ್ಲಿ ಹೆಚ್ಚಾಗಿ ಬಳಕೆ ಮಾಡುವ ಆಹಾರ ಪದಾರ್ಥ.
ಬೇಕಾಗುವ ಪದಾರ್ಥಗಳು
ಬಟಾಣಿ
ದ್ವಿದಳ ಧಾನ್ಯಗಳು
ಕ್ಯಾರೇಟ್
ಬೀನ್ಸ್
ಆಲೂಗೆಡ್ಡೆ
ಹುಣಸೆಹಣ್ಣು
ಬ್ರೆಡ್
ತುರಿದ ತೆಂಗಿನಕಾಯಿ
ಕೊತ್ತಂಬರಿ ಬೀಜ
ಕೆಂಪು ಮೆಣಸಿನಕಾಯಿ
ಫೆನ್ನೆಲ್ ಬೀಜಗಳು
ಲವಂಗ
ದಾಲ್ಚಿನ್ನಿ
ಕರಿಮೆಣಸು
ಮಾಡುವ ವಿಧಾನ ಧಾನ್ಯಗಳನ್ನು , ಬಟಾಣಿ ಹಾಗೂ ಎಲ್ಲಾ ತರಕಾರಿಗಳನ್ನು ಉಪ್ಪು ಹಾಕಿ ಬೇಯಿಸಿಕೊಳ್ಳಿ. ಇದು ಬೇಯುತ್ತಿರುವಾಗ ಕೊತ್ತಂಬರಿ ಬೀಜ, ಕಾಳು ಮೆಣಸು, ಫೆನ್ನಲ್ ಬೀಜ, ಕೆಂಪು ಮೆಣಸು, ದಾಲ್ಚಿನ್ನಿ ಮತ್ತು ಲವಂಗವನ್ನು ಹುರಿದುಕೊಂಡು ನುಣ್ಣಗೆ ಪುಡಿ ಮಾಡಿ, ಮಸಾಲೆ ತಯಾರಿಸಿ. ಇನ್ನು ತರಕಾರಿಗಳು ಬೆಂದ ನಂತರ ಸ್ವಲ್ಪ ಆರಿಸಿಕೊಳ್ಳಿ. ಅದಕ್ಕೆ ಈ ಮಸಾಲೆಗಳನ್ನು ಸೇರಿಸಿ ಹಾಗೂ ತೆಂಗಿನ ತುರಿ ಮತ್ತು ಹುಣಸೇ ಹಣ್ಣನ್ನು ಹಾಕಿ ಚನ್ನಾಗಿ ಮಿಶ್ರಣ ಮಾಡಿ. ಹಾಗೆಯೇ ಒಂದು ಪ್ಯಾನ್ನಲ್ಲಿ ಬೆಣ್ಣೆ ಹಾಕಿ ಬ್ರೆಡ್ ರೋಸ್ಟ್ ಮಾಡಿಕೊಳ್ಳಿ. ತಯಾರಾಗಿರುವ ಮಸಾಲವನ್ನು ಬ್ರೆಡ್ ಜೊತೆ ಅಥವಾ ಚಪಾತಿ ಜೊತೆ ಸೇವನೆ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ