HOME » NEWS » Lifestyle » BONES CAN BE HARVESTED OUT OF BRAIN DEAD DONORS HEREAFTER HERE IS THE KNOW HOW SKTV

ಮೂತ್ರಪಿಂಡ, ಹೃದಯ ಮಾತ್ರವಲ್ಲ… ಇನ್ಮುಂದೆ ಮೂಳೆಗಳನ್ನೂ ದಾನ ಮಾಡಬಹುದು !

ಬೆಂಗಳೂರಿನಲ್ಲಿ ತಿಂಗಳಿಗೆ ಕನಿಷ್ಠ 30 ಜನರಿಗಾದರೂ ಬದಲಿ ಮೂಳೆಗಳ ಅವಶ್ಯಕತೆ ಇರುತ್ತದೆ. ಆದರೆ ಅಗತ್ಯವಿದ್ದಷ್ಟು ಮೂಳೆಗಳು ಸಿಗುವುದು ಬಹಳ ಕಷ್ಟ. ಒಂದು ಅಸ್ಥಿದಾನ ಕನಿಷ್ಠ 40 ಜನರಿಗೆ ಜೀವದಾನ ಮಾಡಬಲ್ಲದು.

news18-kannada
Updated:April 2, 2021, 2:49 PM IST
ಮೂತ್ರಪಿಂಡ, ಹೃದಯ ಮಾತ್ರವಲ್ಲ… ಇನ್ಮುಂದೆ ಮೂಳೆಗಳನ್ನೂ ದಾನ ಮಾಡಬಹುದು !
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಏಪ್ರಿಲ್ 02) : ಅಂಗಾಂಗ ದಾನ ವಿಶ್ವದೆಲ್ಲೆಡೆ ಲೆಕ್ಕವಿಲ್ಲದಷ್ಟು ಜನರ ಜೀವ ಉಳಿಸುತ್ತಿದೆ. ಕರ್ನಾಟಕ ರಾಜ್ಯದಲ್ಲೂ ಅನೇಕ ವರ್ಷಗಳಿಂದ ಅಂಗಾಂಗ ದಾನ ಮತ್ತು ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳು ನಡೆಯುತ್ತಲೇ ಇವೆ. ಇದುವರೆಗೆ ಕಣ್ಣು, ಮೂತ್ರಪಿಂಡ, ಹೃದಯ, ಯಕೃತ್ತು, ಪಿತ್ತಕೋಶ, ರಕ್ತನಾಳಗಳು ಸಾಮಾನ್ಯವಾಗಿ ದಾನಿಗಳಿಂದ ಪಡೆಯಲಾಗ್ತಿತ್ತು. ಆದ್ರೆ ಮೆದುಳು ಸಾವು ಉಂಟಾದ ವ್ಯಕ್ತಿಗಳಿಂದ ಇನ್ಮುಂದೆ ಮೂಳೆಯನ್ನೂ ಪಡೆಯಲು ರಾಜ್ಯದಲ್ಲಿ ಕಾನೂನು ಬದ್ಧವಾಗಿ ಅಂಗಾಂಗ ದಾನದ ಸಂಯೋಜನೆ ಮಾಡುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ‘ಜೀವಸಾರ್ಥಕತೆ’ ಸಂಸ್ಥೆಗೆ ಅನುಮತಿ ಸಿಕ್ಕಿದೆ. ಮೂಳೆಗಳ ದಾನದ ಬಗ್ಗೆ ಒಂದಷ್ಟು ವಿವರಗಳು ಇಲ್ಲಿವೆ:

ಮೂಳೆಗಳ ದಾನ… ಹೇಗೆ, ಯಾರು ಮತ್ತು ಯಾವಾಗ ಮಾಡುವುದು?

ಮೂಳೆಗಳನ್ನು ಮೆದುಳು ಸಾವು ಉಂಟಾದ ವ್ಯಕ್ತಿಗಳಿಂದ ಮಾತ್ರವೇ ದಾನವಾಗಿ ಪಡೆಯಬಹುದಾಗಿದೆ. ಅನಾರೋಗ್ಯ ಅಥವಾ ಅಪಘಾತದಿಂದಾಗಿ ಮೆದುಳು ನಿಷ್ಕ್ರಿಯವಾದರೆ ಅಂಥವರನ್ನು ‘Brain Dead’ ಎಂದು ಘೋಷಿಸಲಾಗುತ್ತದೆ. ಅವರ ಕುಟುಂಬಸ್ಥರ ಅನುಮತಿ ಮೇರೆಗೆ ಆಸ್ಪತ್ರೆಯ ವೈದ್ಯರು ಮತ್ತು ಜೀವಸಾರ್ಥಕತೆ ಸಂಸ್ಥೆಯ ಸಿಬ್ಬಂದಿ ಅಗತ್ಯ ದಾಖಲೆ ಪತ್ರಗಳನ್ನು ತಯಾರಿಸಿ ಮೂಳೆಗಳನ್ನು ಪಡೆಯುತ್ತಾರೆ. ಅಸ್ಥಿದಾನಕ್ಕೆ ವಯಸ್ಸಿನ ಮಿತಿಯಿಲ್ಲ. ಜೀವಂತ ವ್ಯಕ್ತಿಗಳಿಂದ ಮೂಳೆ ದಾನವಾಗಿ ಪಡೆಯುವುದಿಲ್ಲ.

ವ್ಯಕ್ತಿ ಸತ್ತ ಎಷ್ಟು ಸಮಯದೊಳಗೆ ಮೂಳೆಗಳನ್ನು ಪಡೆಯಬಹುದು?

ವ್ಯಕ್ತಿ ಸತ್ತ 10 ರಿಂದ 12 ಗಂಟೆಗಳೊಳಗೆ ಅವರ ಮೂಳೆಗಳನ್ನು ತಜ್ಞವೈದ್ಯರ ತಂಡ ದೇಹದಿಂದ ಬೇರ್ಪಡಿಸುತ್ತದೆ. ಸದ್ಯ ಕೇವಲ ತೊಡೆಯ ಮೂಳೆಯನ್ನು ಮಾತ್ರ ದಾನವಾಗಿ ಪಡೆಯಲು ನಿರ್ಧರಿಸಲಾಗಿದೆ. ದೇಹದಿಂದ ಮೂಳೆ ತೆಗೆದ ನಂತರ ಆ ಸ್ಥಳಕ್ಕೆ ಕೃತಕ ಉಪಕರಣ (prosthesis) ಅಳವಡಿಸಲಾಗುತ್ತದೆ. ಹಾಗಾಗಿ ಮೂಳೆ ತೆಗೆದರೆ ದೇಹ ವಿಕಾರವಾಗುತ್ತದೆ ಎಂದು ಕುಟುಂಬಸ್ಥರು ಆತಂಕಪಡಬೇಕಾಗಿಲ್ಲ.

ದಾನವಾಗಿ ಪಡೆದ ಮೂಳೆಗಳಿಂದ ಯಾರಿಗೆ, ಹೇಗೆ ಪ್ರಯೋಜನವಿದೆ?

ಬದಲಿ ಮೂಳೆಗಳು ಅತೀ ಹೆಚ್ಚು ಅವಶ್ಯಕತೆ ಇರುವುದು ಮೂಳೆಯ ಕ್ಯಾನ್ಸರ್​ನಿಂದ ಬಳಲುತ್ತಿರುವವರಿಗೆ. ಕ್ಯಾನ್ಸರ್​ನಿಂದ ಅವರ ಮೂಳೆ ಸಂಪೂರ್ಣವಾಗಿ ನಾಶವಾಗಿರುತ್ತದೆ, ಆಗ ಈ ಬದಲಿ ಮೂಳೆಗಳನ್ನು ಕಸಿ ಮಾಡಿ ಅವರಿಗೆ ಚಿಕಿತ್ಸೆ ನೀಡಬಹುದಾಗಿದೆ. ಇನ್ನು ಅಪಘಾತದಿಂದ ಮೂಳೆ ಹಾನಿ ಆದವರಿಗೂ ಗ್ರಾಫ್ಟಿಂಗ್​ಗೆ ಈ ಬದಲಿ ಮೂಳೆಗಳು ಸಹಕಾರಿಯಾಗುತ್ತವೆ. ಮೂಳೆಗಳ ಸೋಂಕು ತಗುಲಿದವರಿಗೆ ಕೂಡಾ ಇವುಗಳಿಂದ ಚಿಕಿತ್ಸೆ ಸಾಧ್ಯ. ಇನ್ನು ಕೆಲವರಿಗೆ ಮೂಳೆಗಳ ಬೆಳವಣಿಗೆ ಸರಿಯಾಗಿ ಆಗಿರುವುದಿಲ್ಲ, ಅಂಥವರಿಗೂ ಈ ಮೂಳೆಗಳ ದಾನ ಪ್ರಯೋಜನಕಾರಿಯಾಗಿದೆ. ಮೂಳೆಗಳ ಕಸಿ ಚಿಕಿತ್ಸೆಗೆ ರಕ್ತದ ಗುಂಪು ಅಥವಾ ಬೇರ್ಯಾವುದೇ ವಿಚಾರದಲ್ಲಿ ಹೊಂದಾಣಿಕೆ ಆಗುವ ಅವಶ್ಯಕತೆ ಇಲ್ಲ. ಹಾಗಾಗಿ ಯಾರ ಮೂಳೆ ಯಾರಿಗೆ ಬೇಕಾದರೂ ಬಳಕೆ ಮಾಡಬಹುದು.ದಾನವಾಗಿ ಪಡೆದ ಮೂಳೆಗಳನ್ನು ಎಲ್ಲಿ ಮತ್ತು ಎಷ್ಟು ಸಮಯದವರಗೆ ಇರಿಸುತ್ತಾರೆ?

ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆ ಮತ್ತು ರೋಟರಿ ಟಿಟಿಕೆ ಈ ಎರಡು ಕೇಂದ್ರಗಳಿಗೆ Brain Dead ವ್ಯಕ್ತಿಗಳಿಂದ ಮೂಳೆ ದಾನ ಪಡೆಯಲು ಅನುಮತಿ ದೊರೆತಿದೆ. ಮೂಳೆಗಳನ್ನು ದಾನಿಯ ದೇಹದಿಂದ ಪಡೆದ ನಂತರ ಅದನ್ನು ಪರಿಷ್ಕರಣೆ ಮಾಡಿ ಶೇಖರಣೆ ಮಾಡಬೇಕು. ಅದರೊಳಗಿನ ಅಸ್ಥಿಮಜ್ಜೆಯನ್ನು ಬೇರ್ಪಡಿಸಿ, ರಾಸಾಯನಿಕಗಳಿಂದ ಟ್ರೀಟ್ ಮಾಡಿದ ಮೂಳೆಯನ್ನು -80° ತಾಪಮಾನದಲ್ಲಿ ಶೇಖರಿಸಿಡಬೇಕು. ಹೀಗೆ ಇರಿಸಿದ ಮೂಳೆಯನ್ನು ಕನಿಷ್ಠ 5 ವರ್ಷದವರೆಗೆ ಶೇಖರಣೆ ಮಾಡಿಡಬಹುದು.

ಬೆಂಗಳೂರಿನಲ್ಲಿ ತಿಂಗಳಿಗೆ ಕನಿಷ್ಠ 30 ಜನರಿಗಾದರೂ ಬದಲಿ ಮೂಳೆಗಳ ಅವಶ್ಯಕತೆ ಇರುತ್ತದೆ. ಆದರೆ ಅಗತ್ಯವಿದ್ದಷ್ಟು ಮೂಳೆಗಳು ಸಿಗುವುದು ಬಹಳ ಕಷ್ಟ. ಒಂದು ಅಸ್ಥಿದಾನ ಕನಿಷ್ಠ 40 ಜನರಿಗೆ ಜೀವದಾನ ಮಾಡಬಲ್ಲದು. ಹಾಗಾಗಿ ಜೀವಸಾರ್ಥಕತೆ ಸಂಸ್ಥೆಯ ಮೂಲಕ ಮೆದುಳು ಸಾವು ಉಂಟಾದವರಿಂದ ಮೂಳೆಗಳ ದಾನಕ್ಕೆ ಪ್ರಯತ್ನ ಆರಂಭಿಸಲಾಗಿದೆ.
Published by: Soumya KN
First published: April 2, 2021, 2:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories