ಕ್ಯಾನ್ಸರ್ ಗುಣಪಡಿಸಲು ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟೇಶನ್‌ – ಭಯ ಬಿಡಿ, ಜಾಗೃತರಾಗಿ

ಎಷ್ಟೋ ಕ್ಯಾನ್ಸರ್‌ಗಳು ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟೇಶನ್ ಚಿಕಿತ್ಸೆ ಇಲ್ಲದೆಯೂ ವಾಸಿಯಾಗುತ್ತವೆ. ಹಾಗೆಯೇ ಎಲ್ಲ ಕ್ಯಾನ್ಸರ್‌ಗಳು ಮಾರಕವಲ್ಲ ಹಾಗೂ ಎಲ್ಲ ಕ್ಯಾನ್ಸರ್‌ಗಳು ಒಂದೇ ಅಲ್ಲ.

ತಜ್ಞರು

ತಜ್ಞರು

 • Share this:
  ಕ್ಯಾನ್ಸರ್‌ ಎಂದ ತಕ್ಷಣ ಜನ ಭಯಪಡುತ್ತಾರೆ. ಕ್ಯಾನ್ಸರ್‌ (Cancer) ಅಂದರೆ ಅದೊಂದು ಮಾರಕ ಕಾಯಿಲೆ (deadly disease). ಅದನ್ನು ಗುಣಪಡಿಸಲು ಸಾಧ್ಯವಿಲ್ಲದ ಕಾಯಿಲೆ ಎನ್ನುವ ಮನೋಭಾವ ಜನರಲ್ಲಿ ಇದೆ. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ ಗೆ ತುತ್ತಾಗುತ್ತಿರುವ ಜನರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ ನಾವು ಇದರ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ. ಯಾಕೆಂದರೆ, ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟೇಶನ್‌ (Bone Marrow Transplantation) ರೀತಿಯ ಆಧುನಿಕ ಗುಣಮಟ್ಟದ ಚಿಕಿತ್ಸಾ (Treatment) ವಿಧಾನಗಳು ಇಂದು ಲಭ್ಯ ಇರುವ ಕಾರಣ ಕ್ಯಾನ್ಸರ್‌ ಅನ್ನು ಗುಣಪಡಿಸಬಹುದು. ಇದರ ಬಗ್ಗೆ ಜನರಲ್ಲಿ ಸಾಕಷ್ಟು ಅರಿವನ್ನು ಸಹ ಈ ದಿನಗಳಲ್ಲಿ ಮೂಡಿಸಲಾಗುತ್ತಿದೆ.

  ಮಣಿಪಾಲ್ ಹಾಸ್ಪಿಟಲ್ಸ್ ಮತ್ತು Network18 ಜೊತೆಗೂಡಿ Can Conquer Cancer ಉಪಕ್ರಮವನ್ನು ಆರಂಭಿಸಿವೆ. ಈ ವಿಷಯದ ಬಗ್ಗೆ ಹೆಮಟಾಲಜಿಸ್ಟ್‌ ಮತ್ತು ಹೆಮಾಟೊ ಆಂಕಾಲಜಿಸ್ಟ್‌ ಆದ ತಜ್ಞ ವೈದ್ಯ ಡಾ. ಸತೀಶ್‌ ಕುಮಾರ್ ಮತ್ತು ಹೆಮಟಾಲಾಜಿಸ್ಟ್‌, ಹೆಮಾಟೊ ಆಂಕಾಲಾಜಿಸ್ಟ್‌ ಮತ್ತು ಬೋನ್‌ಮ್ಯಾರೋ ಟ್ರಾನ್ಸ್‌ಪ್ಲಾಂಟೇಶನ್‌ ಫಿಜೀಷಿಯನ್‌ ಡಾ. ಮಲ್ಲಿಕಾರ್ಜುನ ಕಲಶೆಟ್ಟಿ ಇವರೊಂದಿಗೆ ನಡೆಸಿದ ಸಂವಾದವನ್ನು ಈ ಲೇಖನದಲ್ಲಿ ನೀಡಲಾಗಿದೆ.

  ಸ್ಟೆಮ್ ಸೆಲ್ ಟ್ರಾನ್ಸ್ಪ್ಲಾಂಟೇಶನ್

  ಡಾ. ಸತೀಶ್‌ ಕುಮಾರ್ ಅವರು ವಿವರಿಸುವಂತೆ ಬೋನ್‌ ಮ್ಯಾರೋ ಅಂದರೆ ಅಸ್ಥಿ ಮಜ್ಜೆ. ಅಸ್ಥಿ ಮಜ್ಜೆಯ ಟ್ರಾನ್ಸ್‌ಪ್ಲಾಂಟೇಶನ್‌ ಬಗ್ಗೆ ವಿವರಿಸುತ್ತಾ, ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟೇಶನ್ ಅನ್ನು ಸ್ಟೆಮ್‌ ಸೆಲ್‌ ಟ್ರಾನ್ಸ್‌ಪ್ಲಾಂಟೇಶನ್ ಎಂತಲೂ ಕರೆಯುತ್ತಾರೆ. ಯಾವುದೇ ಕಾರಣದಿಂದಾಗಿ ಹಾನಿಗೊಳಗಾದ ಬೋನ್‌ ಮ್ಯಾರೋ ಅಥವಾ ಅಸ್ಥಿಮಜ್ಜೆಯನ್ನು, ಆರೋಗ್ಯಕರ ರಕ್ತಕಣಗಳನ್ನು ಉತ್ಪತ್ತಿ ಮಾಡುವಂತಹ ಕಾಂಡಕೋಶಗಳೊಂದಿಗೆ (ಸ್ಟೆಮ್ ಸೆಲ್‌ಗಳು) ಬದಲಾಯಿಸುವ ವಿಧಾನವನ್ನು ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟೇಶನ್ ಎನ್ನುತ್ತಾರೆ. ಮೂಳೆಯಲ್ಲಿರುವ ಬೋನ್‌ ಮ್ಯಾರೋ, ಬಿಳಿ ರಕ್ತಕಣ, ಕೆಂಪು ರಕ್ತಕಣ ಹಾಗೂ ಪ್ಲೇಟ್‌ಲೆಟ್‌ ಕಣಗಳನ್ನು ಉತ್ಪತ್ತಿ ಮಾಡುತ್ತದೆ. ಈ ಬೋನ್‌ ಮ್ಯಾರೋಗೆ ಹಾನಿಯಾದರೆ, ಕಾರ್ಯನಿರ್ವಹಿಸದೇ ಇದ್ದರೆ, ದೇಹದಲ್ಲಿ ರಕ್ತಕಣಗಳು ಉತ್ಪತ್ತಿಯಾಗುವುದಿಲ್ಲ. ಆಗ ಟ್ರಾನ್ಸ್‌ಪ್ಲಾಂಟೇಶನ್ ಮಾಡಬೇಕಾಗುತ್ತದೆ.

  ಎರಡು ಕಾರಣಗಳಿಂದಾಗಿ ಬೋನ್‌ ಮ್ಯಾರೋ ಚಿಕಿತ್ಸೆಯನ್ನು ಕೊಡಲಾಗುತ್ತದೆ. ಮೊದಲನೆಯದು ಬೋನ್‌ ಮ್ಯಾರೋ ವೈಫಲ್ಯ – ಇದರಿಂದಾಗಿ ಬೋನ್‌ ಮ್ಯಾರೋ ತನ್ನ ಕೆಲಸ ಮಾಡುವುದಿಲ್ಲ. ಅಂದರೆ ಅದು ರಕ್ತಕಣಗಳನ್ನು ಉತ್ಪತ್ತಿ ಮಾಡುವುದಿಲ್ಲ. ಎರಡನೆಯದು ಬೋನ್‌ ಮ್ಯಾರೋ ಕ್ಯಾನ್ಸರ್‌. ಈ ಎರಡೂ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸದ ಬೋನ್‌ ಮ್ಯಾರೋ ಬದಲು, ಸುಸ್ಥಿತಿಯಲ್ಲಿ ಇರುವ ಹಾಗೂ ಸಮರ್ಥವಾಗಿ ಕಾರ್ಯನಿರ್ವಹಿಸುವ ಬೋನ್‌ ಮ್ಯಾರೋವನ್ನು ವರ್ಗಾಯಿಸಲಾಗುತ್ತದೆ. ಈ ವಿಧಾನವನ್ನು ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಅಥವಾ ಸ್ಟೆಮ್‌ ಸೆಲ್‌ ಟ್ರಾನ್ಸ್‌ಪ್ಲಾಂಟ್ ಎನ್ನುತ್ತೇವೆ.

  ಯಾವೆಲ್ಲಾ ಕ್ಯಾನ್ಸರ್ಗೆ ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್ ಅಗತ್ಯ

  ಕ್ಯಾನ್ಸರ್‌ನ ವಿಧಗಳು ಹಾಗೂ ಯಾವ ವಿಧದ ಕ್ಯಾನ್ಸರ್ ರೋಗಗಳಿಗೆ ಬೋನ್‌ ಮ್ಯಾರೋ ಚಿಕಿತ್ಸೆಯ ಅಗತ್ಯವಿದೆ ಎಂಬುದರ ಬಗ್ಗೆ ಡಾ. ಮಲ್ಲಿಕಾರ್ಜುನ ಕಲಶೆಟ್ಟಿ ವಿವರಿಸಿ, ರಕ್ತ ಉತ್ಪಾದನೆ ಮಾಡುವ ಬೋನ್‌ ಮ್ಯಾರೋ ಕೆಲವೊಂದು ಕಾಯಿಲೆಗಳಲ್ಲಿ ಕೆಲಸ ಮಾಡುವುದಿಲ್ಲ. ಇನ್ನು ಕೆಲವೊಂದು ಕಾಯಿಲೆಗಳಲ್ಲಿ ಬೋನ್‌ ಮ್ಯಾರೋವನ್ನು ಹಾಳಾದ ಸೆಲ್‌ಗಳು ಅತಿಕ್ರಮಿಸಿರುತ್ತವೆ. ಕ್ಯಾನ್ಸರ್‌ ಎನ್ನುವ ಪದ ಕೇಳುವುದಕ್ಕೇ ಜನ ಭಯ ಪಡುತ್ತಾರೆ. ಕ್ಯಾನ್ಸರ್‌ ಯಾವುದೇ ಇರಲಿ ಅದಕ್ಕೆ ಚಿಕಿತ್ಸೆ ಇಲ್ಲ ಎಂದೇ ಜನ ಭಾವಿಸಿದ್ದಾರೆ. ಆದರೆ ಇದು ಸತ್ಯಕ್ಕೆ ದೂರ.

  ನಾನು ಹಾಗೂ ಡಾ. ಸತೀಶ್‌ ರಕ್ತದ ಕ್ಯಾನ್ಸರ್‌ನ ವೈದ್ಯರು. ರಕ್ತದ ಕ್ಯಾನ್ಸರ್‌ ಅಲ್ಲದೆಯೂ ಅನೇಕ ವಿಧದ ಕ್ಯಾನ್ಸರ್‌ಗಳು ಇವೆ. ಎಷ್ಟೋ ಕ್ಯಾನ್ಸರ್‌ಗಳು ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟೇಶನ್ ಚಿಕಿತ್ಸೆ ಇಲ್ಲದೆಯೂ ವಾಸಿಯಾಗುತ್ತವೆ. ಹಾಗೆಯೇ ಎಲ್ಲ ಕ್ಯಾನ್ಸರ್‌ಗಳು ಮಾರಕವಲ್ಲ ಹಾಗೂ ಎಲ್ಲ ಕ್ಯಾನ್ಸರ್‌ಗಳು ಒಂದೇ ಅಲ್ಲ.

  ಕ್ಯಾನ್ಸರ್‌ನಲ್ಲಿ ಎರಡು ವಿಧ – ಮೊದಲನೆಯದು ಅಟೊಲಾಗಸ್‌ ಬೋನ್‌ ಮ್ಯಾರೋ ಟ್ರಾನ್ಸಪ್ಲಾಂಟೇಶನ್‌. ಈ ವಿಧದ ಚಿಕಿತ್ಸೆ ವಿಧಾನದಲ್ಲಿ ಸ್ಟೆಮ್‌ ಸೆಲ್‌ಗಳನ್ನು ರೋಗಿಯಿಂದಲೇ ಪಡೆಯಲಾಗುತ್ತದೆ. ಮಲ್ಟಿಪಲ್‌ ಮೈಲೋಮಾ, ನಾನ್-ಹಾಡ್‌ಕಿನ್ ಲಿಂಫೋಮಾ, ಹಾಡ್‌ಕಿನ್ ಲಿಂಫೋಮಾ, ಮಲ್ಟಿಪಲ್ ಸ್ಕ್ಲೀರೋಸಿಸ್ಗಳಂತ ಕಾಯಿಲೆಗಳಿಗೆ ಅಟೊಲಾಗಸ್‌ ಬೋನ್‌ ಮ್ಯಾರೋ ಚಿಕಿತ್ಸೆ ಕೊಡಲಾಗುತ್ತದೆ.  ಎರಡನೆಯದಾಗಿ ಅಲೊಜನಿಕ್‌ ಬೋನ್‌ ಮ್ಯಾರೋ ಟ್ರಾನ್ಸಪ್ಲಾಂಟೇಶನ್‌ - ಈ ವಿಧದ ಚಿಕಿತ್ಸೆಯಲ್ಲಿ ಒಬ್ಬ ಆರೋಗ್ಯವಂತ, ಸ್ವಯಂಪ್ರೇರಿತ ದಾನಿಯಿಂದ ಬೋನ್‌ ಮ್ಯಾರೋವನ್ನು ಪಡೆಯುತ್ತೇವೆ. ಇದನ್ನು ಅಕ್ಯೂಟ್ ಲಿಂಫೋಬ್ಲಾಸ್ಟಿಕ್ ಲ್ಯೂಕೇಮಿಯಾ, ಎಪ್ಲಾಸ್ಟಿಕ್ ಅನೀಮಿಯಾ, ರಿಫ್ರ್ಯಾಕ್ಟರಿ ಲಿಂಫೋಮಾ, ಚಿಕ್ಕ ಮಕ್ಕಳಲ್ಲಿ ಕಂಡುಬರುವ ತಲಸ್ಸೇಮಿಯಾದಂತಹ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

  ತಪ್ಪುಕಲ್ಪನೆ ಬೇಡ, ಇದು ಸರಳ ಚಿಕಿತ್ಸೆ

  ಬೋನ್‌ ಮ್ಯಾರೋ ಬಗೆಗೆ ಜನರಿಗೆ ಇರುವ ಹೆದರಿಕೆ, ನೋವು, ಚಿಕಿತ್ಸಾ ವಿಧಾನ ಮುಂತಾದವುಗಳ ವಿವರಣೆಯನ್ನು ನೀಡುತ್ತಾ ಡಾ. ಮಲ್ಲಿಕಾರ್ಜುನ, ಜನರಲ್ಲಿ ತುಂಬಾ ತಪ್ಪುಕಲ್ಪನೆಗಳಿವೆ. ಸುಧಾರಿತ ತಂತ್ರಜ್ಞಾನದಿಂದಾಗಿ ಈ ಚಿಕಿತ್ಸೆ ಸರಳವಾಗಿದೆ. ಜನರಲ್ಲಿ ಇರುವ ಒಂದು ದೊಡ್ಡ ತಪ್ಪುಕಲ್ಪನೆ ಎಂದರೆ, ಬೋನ್‌ ಮ್ಯಾರೋ ಒಂದು ಶಸ್ತ್ರಚಿಕಿತ್ಸಾ ವಿಧಾನ ಎಂದು. ಅದು ಸತ್ಯವಲ್ಲ. ರೋಗಿಯನ್ನು ಬೋನ್‌ಮ್ಯಾರೋ ಚಿಕಿತ್ಸೆಗೆ ಒಳಪಡಿಸಿದಾಗ, ಮೊದಲನೆಯದಾಗಿ ರೋಗಿಗೆ ಯಾವುದೇ ತರಹದ ಸೋಂಕು ಹರಡಬಾರದೆಂದು ಅವರನ್ನು ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟ್‌ ವಾರ್ಡ್‌ನಲ್ಲಿ ದಾಖಲಿಸುತ್ತೇವೆ.

  ಅಟೊಲಾಗಸ್‌ ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟ್‌ನಲ್ಲಿ ಸ್ಟೆಮ್‌ ಸೆಲ್‌ಗಳನ್ನು ಸ್ವತಃ ರೋಗಿಯಿಂದಲೇ ಪಡೆಯುತ್ತೇವೆ ಹಾಗೂ ಅಲೊಜೆನಿಕ್‌ ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟ್‌ನಲ್ಲಿ ಸ್ಟೆಮ್‌ ಸೆಲ್‌ಗಳನ್ನು ಸ್ವಯಂಪ್ರೇರಿತ ದಾನಿಯಿಂದ ಪಡೆಯುತ್ತೇವೆ. ಈ ಸೆಲ್‌ಗಳಿಗೆ ಜಾಗ ಮಾಡಿಕೊಡಲು ಹಾಗೂ ಕಾಯಿಲೆಯನ್ನು ನಿರ್ಮೂಲನೆಗೊಳಿಸಲು ‘ಕಂಡೀಷನಿಂಗ್ ಕೀಮೊಥೆರಪಿ’ ಮಾಡಲಾಗುತ್ತದೆ. ಇದು ನೋವು ರಹಿತವಾಗಿದೆ ಹಾಗೂ ಶಸ್ತ್ರಚಿಕಿತ್ಸೆಯೂ ಇರುವುದಿಲ್ಲ. ಇದರ ನಂತರದಲ್ಲಿ ಸ್ಟೆಮ್ ಸೆಲ್‌ಗಳನ್ನು ದೇಹದ ಒಳಗೆ ಸೇರಿಸಲಾಗುತ್ತದೆ. ಇದರ ನಂತರ ಈ ಸ್ಟೆಮ್ ಸೆಲ್‌ಗಳು 14 ರಿಂದ 21 ದಿನಗಳಲ್ಲಿ ಹೊಸ ಬೋನ್ ಮ್ಯಾರೋ ಉತ್ಪತ್ತಿ ಮಾಡಲಾರಂಭಿಸುತ್ತವೆ. ಇದೆಲ್ಲವೂ 20 ರಿಂದ 30 ದಿನಗಳನ್ನು ತೆಗೆದುಕೊಳ್ಳುತ್ತದೆ.

  90%ರಷ್ಟು ಸಕ್ಸಸ್ ರೇಟ್

  ಈ ಚಿಕಿತ್ಸೆಯ ಅಪಾಯ ಹಾಗೂ ಸಫಲತೆಯ ಬಗ್ಗೆ ವಿವರಿಸುತ್ತಾ ಡಾ. ಸತೀಶ್‌ ಹೀಗೆ ಹೇಳುತ್ತಾರೆ - ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟೇಶನ್‌ನಲ್ಲಿ ಸ್ವಲ್ಪ ಪ್ರಮಾಣದ ಅಪಾಯ ಇದ್ದೇ ಇರುತ್ತದೆ. ಎಷ್ಟರ ಮಟ್ಟಿಗೆ ಅಪಾಯ ಇದೆ ಎಂದು ನಿರ್ಣಯಿಸುವುದು ಬಹಳಷ್ಟು ಅಂಶಗಳನ್ನು ಅವಲಂಬಿಸಿದೆ. ಮೊದಲನೆಯ ಅಂಶ ರೋಗಿಯ ವಯಸ್ಸು. ಚಿಕ್ಕ ವಯಸ್ಸಿನವರು ತಡೆದುಕೊಳ್ಳುತ್ತಾರೆ. ವಯಸ್ಸಾದವರಲ್ಲಿ ಅಪಾಯ ಜಾಸ್ತಿ ಇರುತ್ತದೆ. ಹಾಗೆಯೇ ಕ್ಯಾನ್ಸರ್‌ ಯಾವ ರೀತಿಯದ್ದು ಎಂಬುದು, ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟೇಶನ್‌ ವೈಫಲ್ಯ ಮುಂತಾದ ಅಂಶಗಳ ಮೇಲೂ ಅಪಾಯದ ಮಟ್ಟ ಅವಲಂಬಿತವಾಗಿದೆ.

  ಸ್ಟೆಮ್‌ ಸೆಲ್‌ ದಾನಿ ಹಾಗೂ ಅದನ್ನು ಪಡೆಯುವಾತ (ರೋಗಿ) ಮಧ್ಯ ಇರುವ ಹೊಂದಾಣಿಕೆ, HLA ಹೊಂದಾಣಿಕೆಯನ್ನು  ಅಪಾಯ ಮಟ್ಟ ಅವಲಂಬಿಸಿದೆ. ಹೀಗೆ ಹಲವಾರು ಅಂಶಗಳನ್ನು ಅವಲಂಬಿಸಿ ಅಪಾಯಮಟ್ಟದ ಬದಲಾವಣೆ ಆಗುತ್ತದೆ. ಸಾಮಾನ್ಯವಾಗಿ ಹೇಳುವುದಾದರೆ, ಅಟೊಲಾಗಸ್‌ ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟ್‌ನಲ್ಲಿ 90% ಸಫಲತೆ ಇದ್ದರೆ, ಅಲೊಜನಿಕ್‌ ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟ್‌ನಲ್ಲಿ ಸಫಲತೆ ಪ್ರಮಾಣವು 80% ರಿಂದ 90% ಇರುತ್ತದೆ. ಆದರೆ ಇದು ರೋಗಿಯಿಂದ ರೋಗಿಗೆ ಹಾಗೂ ರೋಗಿಯ ಸ್ಥಿತಿಯನ್ನು ಆಧರಿಸಿರುತ್ತದೆ.

  ಸವಾಲು, ಸಹಕಾರ, ಪರಿಹಾರ

  ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟ್‌ಗೆ ಒಳಪಡುವ ರೋಗಿ ಮತ್ತು ಅವರ ಕುಟುಂಬದವರು ಎದುರಿಸುವ ಸಮಸ್ಯೆಗಳನ್ನು ವಿವರಿಸುತ್ತಾ ಡಾ. ಸತೀಶ್‌ ಹೀಗೆ ಹೇಳುತ್ತಾರೆ. ಮೊದಲನೆಯದಾಗಿ ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟ್‌ ಮಾಡಬೇಕು ಎಂದು ನಿರ್ಣಯಿಸುವ ಮೊದಲು, ರೋಗಿ ಹಾಗೂ ಅವರ ಕುಟುಂಬ ಸದಸ್ಯರ ಜೊತೆ ಸಮಾಲೋಚನೆ ಮಾಡಬೇಕು. ಎಲ್ಲದರ ಬಗ್ಗೆ ವಿವರವಾಗಿ ಹೇಳಿ ಅವರಿಗೆ ಮನದಟ್ಟು ಮಾಡಬೇಕಾಗುತ್ತದೆ. ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟ್‌ನ ಕಾರ್ಯವಿಧಾನ ಹೇಗೇ? ಚಿಕಿತ್ಸೆಗೆ ತೆಗೆದುಕೊಳ್ಳುವ ಕಾಲಾವಧಿ ಎಷ್ಟು? ಸುರಕ್ಷತೆಯ ವಿಧಾನಗಳು – ಹೀಗೆ ಹಂತ ಹಂತವಾಗಿ ವಿವರಿಸಬೇಕಾಗುತ್ತದೆ. ಅವರು ಸತ್ಯಾಂಶವನ್ನು ಪೂರ್ಣ ಪ್ರಮಾಣದಲ್ಲಿ ತಿಳಿದಿರಬೇಕು.

  ಎರಡನೆಯದಾಗಿ, ರೋಗಿ ಹಾಗೂ ಕುಟುಂಬದವರಿಗೆ ಆಗುವ ಭಾವನಾತ್ಮಕ ಹಾಗೂ ಆರ್ಥಿಕ ಹೊರೆ. ರೋಗಿಯು ಎಷ್ಟು ಸಲ ಕೀಮೊಥೆರಪಿಗೆ ಒಳಗಾಗಿದ್ದಾರೆ ಎನ್ನುವುದು ಗಮನಿಸಬೇಕಾದ ಅಂಶ. ಕೀಮೊಥೆರಪಿಯ ಪರಿಣಾಮ ಅವರ ಮೇಲೆ ಆಗಿರುತ್ತದೆ. ಅದಲ್ಲದೆ ಭಾವನಾತ್ಮಕವಾಗಿ ತುಂಬಾ ದುರ್ಬಲರಾಗಿರುತ್ತಾರೆ. ಕುಟುಂಬದವರಿಗೂ ಅದು ಸುಲಭದ ವಿಷಯವಲ್ಲ. ತಿಂಗಳುಗಟ್ಟಲೆ ನಿರಂತರ ಚಿಕಿತ್ಸೆ ನಡೆಯುತ್ತಿರುತ್ತದೆ. ಕುಟುಂಬದವರಿಗೂ ಬಹಳ ಜವಾಬ್ದಾರಿಗಳಿರುತ್ತವೆ. ಹಾಗಾಗಿ ಕಾಳಜಿ ವಹಿಸುವವರಿಗೂ ಅದು ಹೊರೆಯಾಗುತ್ತದೆ. ರೋಗಿ, ಕುಟುಂಬ, ದಾದಿಯರು ಹಾಗೂ ವೈದ್ಯರು ಇವರೆಲ್ಲರೂ ಇಲ್ಲಿ ಪ್ರಶಂಸನೀಯರು. ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟ್‌ನಲ್ಲಿ ಹಾಗೂ ಅದಕ್ಕೂ ಮೊದಲಿನ ಸಮಯದಲ್ಲಿ ರೋಗಿ ಹಾಗೂ ಕುಟುಂಬದವರಿಗೆ ಚಿಕಿತ್ಸೆಯ ಹಂತದ ಲಕ್ಷಣಗಳು ಹಾಗೂ ಪರಿಣಾಮಗಳ ಬಗ್ಗೆ ತಿಳಿದಿರಬೇಕು. ವೈದ್ಯಕೀಯ ಸಹಾಯವನ್ನು ಹೇಗೆ ಪಡೆಯಬೇಕು ಹಾಗೂ ಎಲ್ಲಿಯವರೆಗೆ ತೆಗೆದುಕೊಳ್ಳಬೇಕೆಂದು ಅವರು ಅರಿತಿರಬೇಕು.

  ಅದಲ್ಲದೇ ಟ್ರಾನ್ಸ್‌ಪ್ಲಾಂಟ್‌ ಚಿಕಿತ್ಸೆ ಯಶಸ್ವಿಯಾಗಿ, ಮನೆಗೆ ಮರಳಿದ ನಂತರವೂ ರೋಗಿಯು ಮಾಡಬೇಕಾದ / ಮಾಡಬಾರದ ಅಂಶಗಳನ್ನು ಅರಿತಿರಬೇಕು. ಆಹಾರ ಪದ್ಧತಿಯ ಅರಿವಿರಬೇಕು. ಜನಜಂಗುಳಿಯಿಂದ ದೂರ ಇರಬೇಕು. ಯಾವುದೇ ರೀತಿಯ ಸೋಂಕು ಅಂಟದಂತೆ ನೋಡಿಕೊಳ್ಳಬೇಕು. ಸೋಂಕು ಹರಡುವಂತಹ ವ್ಯಕ್ತಿಗಳಿಂದ ದೂರ ಇರಬೇಕು. ಸಾಕುಪ್ರಾಣಿಗಳಿಂದ ದೂರ ಇರುವುದು ಸೂಕ್ತ. ಚರ್ಮವನ್ನು ಹೇಗೆ ಆರೈಕೆ ಮಾಡಿಕೊಳ್ಳಬೇಕು – ಹೀಗೆ ಹಲವಾರು ಅಂಶಗಳಿವೆ. ಒಟ್ಟಿನಲ್ಲಿ ರೋಗಿ ಹಾಗೂ ಆತನ ಕುಟುಂಬಸ್ಥರು ಹಲವಾರು ವಿಷಯಗಳಲ್ಲಿ ಜಾಗರೂಕರಾಗಿರಬೇಕು ಎಂದು ಡಾ. ಸತೀಶ್ ಕುಮಾರ್ ಅವರು ವಿವರಿಸಿದ್ದಾರೆ.
  Published by:Soumya KN
  First published: