Pet Care: ಮುದ್ದಿನ ನಾಯಿ ನಿಮ್ಮ ಮಾತು ಕೇಳಬೇಕೇ? ಇಲ್ಲಿದೆ ಉಪಯುಕ್ತ ಟಿಪ್ಸ್

ನಾವು ಸಾಕುವ ನಾಯಿಗಳು ನಾವು ಹೇಳಿದಂತೆ ಕೇಳಿದಂತೆ ಎಷ್ಟು ಖುಷಿ ಅಲ್ವಾ? ಹಾಗಿದ್ರೆ ಮುದ್ದಿನ ನಾಯಿಗಳು ನಮ್ಮ ಮಾತು ಕೇಳಲು ಏನು ಮಾಡಬೇಕು? ಇಲ್ಲಿದೆ ಕೆಲವೊಂದಿಷ್ಟು ಸಲಹೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ನಿಮ್ಮ ಮುದ್ದಿನ ನಾಯಿ ಮರಿಗೆ (Pet Dogs) ಸೂಕ್ತ ರೀತಿಯ ತರಬೇತಿಯನ್ನು (Training) ನೀಡುವುದು ಅವುಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಾಯಿ ಮರಿಗಳು (Puppy) ಪರಿಸರ (Environment) ಹಾಗೂ ಜನರು (People) ಅಂತೆಯೇ ಇತರ ಪ್ರಾಣಿಗಳಿಂದ ನಿರಂತರವಾಗಿ ಕಲಿಯುತ್ತಲೇ ಇರುತ್ತವೆ ಮತ್ತು ಚುರುಕಾಗಿರುತ್ತವೆ. ತರಬೇತಿ ನೀಡುವುದು ನಿಮ್ಮ ನಾಯಿ ಮರಿಯನ್ನು ಸಂತಸವಾಗಿರಿಸುತ್ತದೆ ಹಾಗೂ ಅವುಗಳಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಇನ್ನು ತರಬೇತಿ ಪಡೆದ ನಿಮ್ಮ ಮುದ್ದಿನ ನಾಯಿ ಮರಿ ಆಕರ್ಷಣೆಯ ಕೇಂದ್ರ ಬಿಂದು ಕೂಡ ಆಗಿರುತ್ತದೆ. ಬಂಧು ಮಿತ್ರರ ಪ್ರಶಂಸೆಗೆ ಕೂಡ ನೀವು ಪಾತ್ರರಾಗುತ್ತೀರಿ. ಹಾಗಿದ್ದರೆ ನಾಯಿ ಮರಿಗೆ ಯಾವಾಗ ತರಬೇತಿ ಆರಂಭಿಸಬೇಕು? ಅವುಗಳಿಗೆ ಕಲಿಸಬೇಕಾದ ಮುಖ್ಯ ಕೌಶಲ್ಯಗಳೇನು ಎಂಬುದನ್ನು ಅರಿತುಕೊಳ್ಳೋಣ.


8ನೇ ವಾರದಲ್ಲೇ ತರಬೇತಿ ಪ್ರಾರಂಭಿಸಿ


ನಾಯಿ ಮರಿ ಕನಿಷ್ಟ 8 ವಾರಗಳದ್ದಾದರೆ ಶೀಘ್ರವೇ ಅವುಗಳಿಗೆ ತರಬೇತಿ ನೀಡುವುದು ಸೂಕ್ತ. ಅವುಗಳು ಹರೆಯಕ್ಕೆ ಬಂದೊಡನೆ ಕೆಟ್ಟ ಹವ್ಯಾಸಗಳನ್ನು ಬೆಳೆಸಿಕೊಳ್ಳುತ್ತವೆ. ಈ ಸಮಯದಲ್ಲಿ ಸೂಕ್ತ ತರಬೇತಿ ನೀಡುವುದು ಅವುಗಳನ್ನು ಚುರುಕಾಗಿಸುತ್ತವೆ. ಯಾವುದು ಸರಿ ಯಾವುದು ತಪ್ಪು ಎಂಬ ಪಾಠವನ್ನು ಅವುಗಳಿಗೆ ತಿಳಿಸಿ ಹೇಳಲು ಈ ವಯಸ್ಸು ಸೂಕ್ತವಾದುದು. ನಾಯಿ ಮರಿಗೆ ಮೊದಲಿಗೆ ಹೇಳಿಕೊಡಬೇಕಾದ ಪಾಠವೆಂದರೆ ಕುಳಿತುಕೊಳ್ಳುವುದು, ಅಲ್ಲಿಯೇ ಇರುವಂತೆ ಹೇಳುವುದು ಹಾಗೂ ಬರುವಂತೆ ಹೇಳುವುದಾಗಿದೆ. ಇವುಗಳಲ್ಲಿ ಅವು ಪರಿಣಿತಿ ಪಡೆದುಕೊಳ್ಳುತ್ತಿದ್ದಂತೆಯೇ ಇತರ ಕೌಶಲ್ಯಗಳನ್ನು ಸುಲಭವಾಗಿ ಅರಿತುಕೊಳ್ಳುತ್ತವೆ.


6 ತಿಂಗಳ ನಂತರ ತರಬೇತಿ ಕಷ್ಟಸಾಧ್ಯ

ನಾಯಿ ಮರಿಯು 6 ತಿಂಗಳದ್ದಾಗಿದ್ದರೆ ತರಬೇತಿ ನೀಡುವುದು ಕೊಂಚ ಸವಾಲಿನದ್ದಾಗಿರುತ್ತದೆ. ಇದನ್ನು ನಾಯಿ ಮರಿಯ ಹದಿಹರೆಯದ ವಯಸ್ಸು ಎಂಬುದಾಗಿ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಅವುಗಳಿಗೆ ತರಬೇತಿ ನೀಡುವಾಗ ನೀವು ಹೆಚ್ಚಿನ ತಾಳ್ಮೆ ವಹಿಸಬೇಕಾಗುತ್ತದೆ. ಏಕೆಂದರೆ ಅವುಗಳು ಕೊಂಚ ಶಕ್ತಿಶಾಲಿಯಾಗಿರುತ್ತವೆ. ಅಂತೆಯೇ ಮೊಂಡಾಟ ಕೂಡ ತುಸು ಹೆಚ್ಚೇ ಮಾಡುತ್ತಿರುತ್ತದೆ.

ಈ ಸಮಯದಲ್ಲಿ ನೀವು ಅವುಗಳಿಗೆ ನೀಡುವ ತರಬೇತಿಯಲ್ಲಿ ಕೂಡ ಕೊಂಚ ವಿಭಿನ್ನತೆಗಳನ್ನು ಅನುಸರಿಸಬಹುದಾಗಿದೆ. ಅವುಗಳಿಗೆ ಆದೇಶಗಳನ್ನು ನೀಡುವಾಗ ಆದಷ್ಟು ಅರ್ಥವಾಗುವ ರೀತಿಯಲ್ಲಿ ನೀಡಿ. ನಿಮ್ಮ ಆದೇಶಗಳು ಆದಷ್ಟು ಸರಳವಾಗಿರುವಂತೆ ನೋಡಿಕೊಳ್ಳಿ. ಒಂದೇ ರೀತಿಯ ಧಾಟಿಯಲ್ಲಿ ಹೇಳಿ. ಇದರಿಂದ ಅವುಗಳು ಅದನ್ನು ಮನನ ಮಾಡಿಕೊಳ್ಳುವುದು ಸುಲಭವಾಗಿರುತ್ತದೆ.

ಇದನ್ನೂ ಓದಿ: Pet Care: ಬರೀ ಮುದ್ದು ಮಾಡೋದಷ್ಟೇ ಅಲ್ಲ, ನಾಯಿಯಿಂದ ದುಡ್ಡೂ ಗಳಿಸಬಹುದು ಅಂತಿದ್ದಾರೆ ಈ ಮಹಿಳೆ!

ಬೇರೆ ಬೇರೆಯವರು ತರಬೇತಿ ನೀಡುವಾಗ ಜಾಗೃತೆ


ನಾಯಿ ಮರಿಯನ್ನು ಬೇರೆ ಬೇರೆ ಜನರು ತರಬೇತಿ ನೀಡುತ್ತಿದ್ದಾರೆ ಎಂದಾದಲ್ಲಿ ನೀವೆಲ್ಲರೂ ಒಂದೇ ರೀತಿಯ ಪದಗಳು ಹಾಗೂ ಆದೇಶಗಳನ್ನು ಬಳಸುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನಿಮ್ಮ ನಾಯಿ ಮರಿ ಮೂಲ ತರಬೇತಿಯಲ್ಲಿ ನಿಷ್ಣಾತ ಎಂದೆನಿಸಿದರೆ ಮೋಜಿನ ಆದೇಶಗಳಾದ ಹಾಡು, ನೃತ್ಯ, ಮೊದಲಾದ ಚಟುವಟಿಕೆಗಳನ್ನು ಮಾಡಿಸಬಹುದು.


ತರಬೇತಿ ಸೆಶನ್‌ಗಳು ಯಾವಾಗಲೂ ಧನಾತ್ಮಕ ಹೊಂದಾಣಿಕೆಯದ್ದಾಗಿರಬೇಕು. ಐದು ನಿಮಿಷದ ತರಬೇತಿ ಸೆಶನ್‌ಗಳನ್ನು ನಾಯಿ ಮರಿಗಳಿಗೆ ಆಯೋಜಿಸಿ.


ಸಾಮಾಜಿಕವಾಗಿ ತೊಡಗಿಸಿಕೊಳ್ಳುವುದು


ನಿಮ್ಮ ನಾಯಿ ಮರಿಗಾಗಿ ನೀವು ಮಾಡಬಹುದಾದ ಪ್ರಮುಖ ವಿಷಯಗಳಲ್ಲಿ ಒಂದೆಂದರೆ ಸಾಕಷ್ಟು ಸಾಮಾಜೀಕರಣವಾಗಿದೆ. ನಾಯಿ ಮರಿಯನ್ನು ಸಾಮಾಜೀಕರಣಗೊಳಿಸುವುದು ಎಂದರೆ ಇತರರೊಂದಿಗೆ ಅವುಗಳನ್ನು ಬೆರೆಯುವಂತೆ ಮಾಡುವುದಾಗಿದೆ. 3 - 4 ತಿಂಗಳ ವಯಸ್ಸಿನಲ್ಲಿ ಸಾಮಾಜಿಕವಾಗಿ ತೊಡಗಿಸಿಕೊಳ್ಳಲು ಅವುಗಳಿಗೆ ತರಬೇತಿ ನೀಡಿ.


ಮನೆಗೆ ಬಂದವರೊಡನೆ ಬೆರೆಯುವುದು ಕಲಿಸಿರಿ


ಮನೆಗೆ ಯಾರಾದರೂ ಅತಿಥಿಗಳು ಬಂದಿರುವಾಗ ಅವರೊಂದಿಗೆ ಹೇಗೆ ಬೆರೆಯಬೇಕು..? ಅದೇ ರೀತಿ ಅಪರಿಚಿತರು ಬಂದಾಗ ಯಾವ ರೀತಿಯಲ್ಲಿ ಅವರನ್ನು ಗಮನಿಸಬೇಕು ಮೊದಲಾದ ಸೂಕ್ಷ್ಮ ಅಂಶಗಳನ್ನು ನಿಮ್ಮ ನಾಯಿ ಮರಿಗೆ ತಿಳಿಸಿ. ಹೊರಗಡೆ ಅಡ್ಡಾಡಲು ಕಳುಹಿಸುವಾಗ ಕೂಡ ನೀವು ದೂರದಲ್ಲಿ ನಿಂತು ಅವುಗಳ ಚಲನವಲನಗಳನ್ನು ಗಮನಿಸುತ್ತಿರಿ. ನಾಯಿ ಮರಿಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ಕೊಡಿಸಿಲ್ಲ ಎಂದಾದಲ್ಲಿ ಆದಷ್ಟು ನೀವೇ ಅವುಗಳನ್ನು ಹೊರಗಡೆ ಸುತ್ತಾಡಿಸಿ.


ಇದನ್ನೂ ಓದಿ: Zodiac Sign: ಶ್ವಾನಗಳ ರಾಶಿಗಳ ಬಗ್ಗೆ ನಿಮಗಿದ್ಯಾ ಮಾಹಿತಿ; ಮುದ್ದು ನಾಯಿಮರಿಗಳ ಕುರಿತ ಕುತೂಹಲ ಸಂಗತಿ ಇಲ್ಲಿದೆ

ನಿತ್ಯ ಚಟುವಟಿಕೆಗಳನ್ನು ಆದಷ್ಟು ಹೊರಗಡೆಯೇ ಮಾಡಿಸುವುದು


ನಿಮ್ಮ ನಾಯಿಮರಿಗೆ ನೈರ್ಮಲ್ಯದ ಪಾಠವನ್ನು ತಿಳಿಹೇಳುವುದು ತರಬೇತಿಯಲ್ಲಿ ಅತಿಮುಖ್ಯವಾದುದು. ಮಲ ಮೂತ್ರ ವಿಸರ್ಜನೆಗಳನ್ನು ಹೊರಗಡೆ ದೂರದಲ್ಲಿ ಹೋಗಿ ಮಾಡಿಬರುವಂತೆ ತಿಳಿಸಿ. ಇದರಿಂದ ಅವುಗಳಿಗೆ ಸುತ್ತಮುತ್ತಲಿನ ನೈರ್ಮಲ್ಯದ ಪಾಠದ ಅರಿವಾಗುತ್ತದೆ. ಸರಿಸುಮಾರು 4 - 6 ತಿಂಗಳ ಕಾಲ ಈ ವಿಷಯದಲ್ಲಿ ನಾಯಿ ಮರಿಗೆ ಸೂಕ್ತ ತರಬೇತಿ ಅವಶ್ಯಕ.


ನಾಯಿಮರಿಗಳಿಗೆ ಗೂಡಿನ ಮಹತ್ವ ತಿಳಿಸಿಕೊಡುವುದು


ಗೂಡಿನಲ್ಲಿ ಆರಾಮವಾಗಿರುವುದರ ಕುರಿತು ನಾಯಿಮರಿಗೆ ಸೂಕ್ತ ತರಬೇತಿ ನೀಡುವುದು ಅತ್ಯವಶ್ಯಕವಾಗಿದೆ. ವಿಶ್ರಾಂತಿಯನ್ನು ಪಡೆಯಲು ಗೂಡನ್ನು ಹೇಗೆ ಬಳಸುವುದು ಎಂಬ ಪಾಠವನ್ನು ನಾಯಿಮರಿಗೆ ತಿಳಿಸಿಕೊಡಿ. ಅದರಲ್ಲೂ ನೀವು ಮನೆಯಿಂದ ಹೊರಗಡೆ ಹೋಗಿದ್ದಾಗ ಗೂಡಿನಲ್ಲಿ ಹೇಗೆ ಇರಬೇಕು ಎಂಬ ಅಂಶವನ್ನು ನಾಯಿಮರಿಗೆ ಮನದಟ್ಟು ಮಾಡಬೇಕು.


ಹೆಚ್ಚಿನ ತರಬೇತಿಯ ನೆರವನ್ನು ಪಡೆದುಕೊಳ್ಳಿ


ನೀವು ನೀಡುವ ತರಬೇತಿ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದೆ ಎಂದಾದಲ್ಲಿ ಪರಿಣಿತರ ಸಹಾಯವನ್ನು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ನಿಮ್ಮ ವಲಯದಲ್ಲಿ ಯಾವುದಾದರೂ ನಾಯಿ ತರಬೇತಿ ತರಗತಿಗಳು ನಡೆಯುತ್ತಿದ್ದಲ್ಲಿ ಆ ಕುರಿತು ವಿಚಾರಿಸಿ. ಇಂತಹ ತರಬೇತಿಗಳು ನಾಯಿ ಮರಿಗೆ ಮನರಂಜನೆಯನ್ನು ನೀಡುತ್ತದೆ ಹಾಗೂ ಇತರರೊಂದಿಗೆ ಬೆರೆಯುವ ಬಗ್ಗೆ ಪಾಠವನ್ನು ತಿಳಿಸಿಕೊಡುತ್ತದೆ.

Published by:Annappa Achari
First published: