ಮಾನ್ಸೂನ್​ನಲ್ಲಿ ಫ್ರೆಂಡ್ಸ್​ ಜೊತೆ ಮುದುಮಲೈಗೊಂದು ಪಯಣ

news18
Updated:September 2, 2018, 3:22 PM IST
ಮಾನ್ಸೂನ್​ನಲ್ಲಿ ಫ್ರೆಂಡ್ಸ್​ ಜೊತೆ ಮುದುಮಲೈಗೊಂದು ಪಯಣ
news18
Updated: September 2, 2018, 3:22 PM IST
-ನ್ಯೂಸ್ 18 ಕನ್ನಡ

-ಡಾ. ಶ್ರೀಲತಾ ಪದ್ಯಾಣ (ಪ್ರಕೃತಿ ಚಿಕಿತ್ಸಾ ತಜ್ಞರು)

ಪ್ರತಿವರ್ಷ ಮಳೆಗಾಲದ ಸಮಯದಲ್ಲಿ 'ಗೆಟ್ ಟುಗೆದರ್' ಅಂತ ನಾವು ಫ್ರೆಂಡ್ಸ್ ಎಲ್ಲ ಸೇರಿ ಇದೀಗ ಮೂರನೇ ವರ್ಷದ ಪ್ರವಾಸಕ್ಕೆ ಸಿದ್ಧರಾಗಿದ್ದೇವೆ. ವರ್ಷದಿಂದ ವರ್ಷಕ್ಕೆ ನಮ್ಮ ಗುಂಪು ದೊಡ್ಡದಾಗುತ್ತಾ ಬಂದ ಹಾಗೆ ನೋಡಬೇಕಾಗಿರುವ ಜಾಗಗಳ ಪಟ್ಟಿಯೂ ದೂರದೂರುಗಳತ್ತ ಸಾಗುತ್ತಿದೆ. ಈ ಸಲ ನಾವು ನಿರ್ಧರಿಸಿದ್ದು ಕರ್ನಾಟಕ-ತಮಿಳುನಾಡಿನ ಅಂಚಿನ ಆಕರ್ಷಣೀಯ ಸ್ಥಳಗಳು. ಎಡೆಬಿಡದೆ ಸುರಿಯುತ್ತಿದ್ದ ಮಳೆಯು ನಿಂತು, ಸ್ವಲ್ಪ ಚಳಿಯೊಂದಿಗೆ ಹದವಾದ ವಾತಾವರಣವಿದ್ದ ಸಮಯದಲ್ಲಿ ನಮ್ಮ ಪಯಣ ಶುರುವಾಯಿತು. ಎಂಟು ಜನರಿದ್ದ ನಮ್ಮ ತಂಡದಲ್ಲೇ ವಾಹನ ಚಲಾಯಿಸುವವರು ಇದ್ದ ಕಾರಣ ಸುಲಭವಾಗಿ ಕೈಗೆಟುಕಿದ ವಾಹನವೆಂದರೆ 'ಝೂಮ್ ಕಾರ್'. ಕೆಂಪು ಬಣ್ಣದಿಂದ ರಾರಾಜಿಸುತ್ತಿದ್ದ ಈ ಕಾರು ಪ್ರಯಾಣಕ್ಕೆ ಮತ್ತಷ್ಟು ಹುಮ್ಮಸ್ಸು ನೀಡಿತು. ಮೈಸೂರಿನಿಂದ ಹೊರಟ ನಾವು ನೋಡಬೇಕಿದ್ದ ಮೊದಲ ಸ್ಥಳ 'ಹಿಮವದ್ ಗೋಪಾಲಸ್ವಾಮಿ ಬೆಟ್ಟ' ಆಗಿತ್ತು. ಒಂದೂವರೆ ಗಂಟೆಗಳ ಜೀಪಿನ ಪ್ರಯಾಣದಲ್ಲಿ ಜೋಶ್ ನಿಂದ ಹಾಡುಗಳನ್ನು ಕೇಳಿಕೊಂಡು, ಚಟಪಟ ಬಾಯಿ ಪಟಾಕಿ ಹಾರಿಸುತ್ತ, ನೈಜ ಪ್ರಕೃತಿಯ ಸೌಂದರ್ಯದತ್ತ ಕಣ್ಣಿನ ನೋಟ ನಾಟಿತ್ತು. ಉತ್ತಮ ರೀತಿಯಲ್ಲಿದ್ದ ರಸ್ತೆಗಳ ಎರಡೂ ಬದಿಗಳಲ್ಲಿ ತಲೆ ಎತ್ತಿ ನಗುತ್ತಿರುವಂತೆ ಭಾಸವಾಗುವ ಸೂರ್ಯಕಾಂತಿ ಹೂಗಳು ಅತ್ಯಂತ ಆಕರ್ಷಣೀಯವಾಗಿದ್ದು ಅದರ ಜೊತೆ ಸೆಲ್ಫಿ ಕ್ಲಿಕ್ಕಿಸಿದಾಗ ಸಿಕ್ಕ ಸಂತಸ ಇನ್ನೂ ಅಪಾರವಾಗಿತ್ತು.ರಸ್ತೆಯು, ಸಾಗರದ ಅಂಚು ಕಾಣದಂತೆ ಅಷ್ಟು ನೇರವಾಗಿದ್ದು ದೂರದಲ್ಲಿ ಪರ್ವತಗಳ ಸಾಲು ಮಾಲೆ ಹಾಕಲು ನಿಂತಿರುವ ಹಾಗೆ ತನ್ನತ್ತ ಬರಮಾಡಿಕೊಳ್ಳುತ್ತಿತ್ತು. ಹೀಗೆ ಸಾಗುತ್ತಾ ಹಿಮವದ್ ಬೆಟ್ಟದ ಪ್ರವೇಶ ದ್ವಾರಕ್ಕೆ ತಲುಪಿದ್ದೆವು. ಈಗ ನಮ್ಮ ಜೀಪಿಗೆ ರೆಸ್ಟ್ ಕೊಟ್ಟು ಬೆಟ್ಟಕ್ಕೆ ಅವರದ್ದೇ ಆದ ಬಸ್ಸಿನಲ್ಲಿ ಐದು ಕಿಲೋಮೀಟರ್ ಹೋಗಬೇಕಾಗಿರುವುದರಿಂದ ಬಸ್ಸಿಗೆ ಕಾಯಲು ಒಂದಷ್ಟು ಜನರ ಸಾಲಿನ ಹಿಂದೆ ನಿಂತೆವು. ಬಸ್ ಬಂದಂತೆ ಅದು ಫುಲ್ ಆಗಿ ನಾವು ಅಲ್ಲೇ ಉಳಿಯಬೇಕಾಯಿತು. ಆದರೂ ಮುಂದಿನ ಬಸ್ಸಿಗೆ ನಾವೇ ಮೊದಲು. ಬಸ್ ಬಂತು, ಓಡಿ ಹೋಗಿ ಕಿಟಕಿಯ ಪಕ್ಕ ಎಲ್ಲರೂ ಸೀಟ್ ಹಿಡಿದೆವು. ಬಸ್ ಬೆಟ್ಟ ಹತ್ತಲು ಶುರು ಮಾಡಿತ್ತು. ಹತ್ತುತ್ತಾ ಹತ್ತುತ್ತಾ ತಿರುವುಗಳು.. ಜೊತೆಗೆ ಕಡಿದಾದ ಆಳ ಕಿಟಕಿಯ ಪಕ್ಕ! ಜಿಟಿ ಜಿಟಿ ಮಳೆ ಬರುತ್ತಿದೆ ಅಂದುಕೊಂಡರೆ ಅದು ಮಂಜಿನ ಹನಿಯಂತೆ! ಕೆಳಗೆ ನೋಡಿದರೆ ಅಲ್ಲಲ್ಲಿ ಬಿಸಿಲು ಹರಡಿದ್ದರೆ, ಮೇಲೆ ಹತ್ತಿದಂತೆ ಮಂಜಿನ ಮಳೆ ಬಸ್ಸಿನ ಗ್ಲಾಸನ್ನು ಮುಸುಕಿತ್ತು. ಅದರ ಜೊತೆ ಬಿರುಗಾಳಿಯಂತೆ ಭಾರಿ ಗಾಳಿ ಹಿಮಾಲಯದ ಪಕ್ಕವೇ ಬಂದೇವೆಂಬ ಅನುಭವ. ಬೆಟ್ಟದ ತುದಿಯಲ್ಲಿದ್ದೇವೆ. ಇಳಿದು ನೋಡಿದರೆ ಏನೂ ಕಾಣದು! ಹಾರಿ ಹೋಗುತ್ತೇವೆ ಎಂಬಷ್ಟು ಮಂಜಿನ ಬಿರುಗಾಳಿ. ಕಟಕಟ ಹಲ್ಲು ಕಡಿಯುವುದರ ಜತೆಗೆ ಇನ್ನೊಂದೆಡೆ ಫೋಟೋ ಕ್ಲಿಕ್ಕಿಸಲು ತವಕ. ಚಳಿಯಲ್ಲಿ ನಿಲ್ಲಲ್ಲು ಅಸಾಧ್ಯವಾದ ಕಾರಣವೋ ಎಲ್ಲರೂ ಗುಡಿಯೊಳಗೆ ಪ್ರವೇಶಿಸುತ್ತಿದ್ದರು. ನಾವು ದರ್ಶನ ಪಡೆದು ಕೈ ನಡುಗುತ್ತಾ ಊಟ ಮುಗಿಸಿದೆವು. ಅತ್ಯಂತ ಮನಮೋಹಕ ರಮಣೀಯ ತಾಣವಾದ ಹಿಮವದ್ ಬೆಟ್ಟವೇ ನಮ್ಮ ಪ್ರಯಾಣಕ್ಕೆ ಉತ್ತಮ ಮೆರುಗನ್ನು ನೀಡಿ ಮುಂದಿನ ದಾರಿಗೆ ಮುನ್ಸೂಚನೆ ನೀಡಿತ್ತು.

ನಂತರ ಹೋಗಬೇಕಾಗಿರುವುದು ಬಂಡೀಪುರ ಹುಲಿ ಸಂರಕ್ಷಣಾ ವಲಯದ ಸಫಾರಿ. ಟಿಕೆಟ್ ತೆಗೆದುಕೊಂಡು ಸಫಾರಿ ಬಸ್ಸಿಗೆ ಹತ್ತಿದ್ದಾಯಿತು . ಬಸ್ಸಿನಲ್ಲಿ ಎಲ್ಲರೂ ಫುಲ್ ಸೈಲೆಂಟ್ ಇರಬೇಕು. ಯಾರೂ ಮಾತನಾಡಬಾರದು ಎಂದು ವಾರ್ನಿಂಗ್ ಕೊಟ್ರು. ಬಸ್ ಕಾಡಿನ ಮಧ್ಯೆ ಸಾಗುತ್ತಿತ್ತು . ನವಿಲು, ಜಿಂಕೆಗಳು, ಮಂಗ,ಆನೆಗಳು ಅಲ್ಲಲ್ಲಿ ಕಾಣಸಿಕ್ಕವು.ಒಂದು ಗಂಟೆಯ ಸಫಾರಿಯಲ್ಲಿ ತುಂಬಾ ಎಕ್ಸೈಟ್ಮೆಂಟ್ ಇದ್ದುದರಿಂದ ಕುತ್ತಿಗೆ ಉದ್ದ ಮಾಡಿ ಕಣ್ಣರಳಿಸಿ ನೋಡಿದರೂ ನಮ್ಮ ಪಾಲಿಗೆ ಬೇರೆ ಪ್ರಾಣಿಗಳು ಕಾಣ ಸಿಗಲಿಲ್ಲ. ಅವುಗಳಿಗೂ ನಮ್ಮಂಥ ಜನರನ್ನು ನೋಡಿ ನೋಡಿ ಸುಸ್ತಾಗಿರುತ್ತೆ ! ಆದರೂ ಹಲವು ಜೀವಿಗಳು ಆರಾಮವಾಗಿ ಸುರಕ್ಷಿತವಾಗಿ ಬಂಡೀಪುರದಲ್ಲಿರುವುದು ನಮಗೆ ಹೆಮ್ಮೆಯ ವಿಚಾರ. ಇನ್ನು ಮರುದಿನ ಮತ್ತೆ ಸ್ಥಳಗಳ ಭೇಟಿ ನೀಡುವುದೆಂದು ಆ ದಿನದ ಪ್ರಯಾಣಕ್ಕೆ ರೆಸ್ಟ್ ಕೊಟ್ಟೆವು.

ಬಂಡೀಪುರದಿಂದ ಮುಂದೆ ಸಾಗಿದರೆ ತಮಿಳುನಾಡಿನ ಚೆಕ್ ಪೋಸ್ಟ್ ದಾಟಿ ಮುದುಮಲೈ ಕಾನನದ ನಡುವೆ ಸುಗಮ ಪ್ರಯಾಣದ ಆರಂಭ. ಹಚ್ಚ ಹಸಿರು ಮರಗಿಡಗಳ ನಡುವೆ ಕಾಡು ಕೋಣ, ಜಿಂಕೆ,ನವಿಲು ಮುಂತಾದ ವನ್ಯ ಜೀವಿಗಳು ಕಾಣ ಸಿಗುವುದರ ಜೊತೆ ಜಿಟಿ ಜಿಟಿ ಮಳೆಯೂ ಮನಸ್ಸಿಗೆ ಮುದ ನೀಡುತ್ತಿತ್ತು. ಪ್ರಶಾಂತ ಪ್ರದೇಶ, ಹಸಿರಿನ ವನಸಿರಿಯಲ್ಲಿ ,ಸ್ವಚ್ಛ ಪರಿಸರದಲ್ಲಿ ಹೋಗುತ್ತಿದ್ದಂತೆ ಪ್ರಕೃತಿ ಎಷ್ಟು ಸುಂದರವಾಗಿದೆ ಎಂದು ಗೋಚರವಾಗುತ್ತಿತ್ತು. ಪ್ರಕೃತಿ ಪ್ರಿಯರಿಗೆ ಹಾಗೂ ಪ್ರವಾಸಿಗರಿಗೆ  ಇದು ಸೂಕ್ತವಾದ ಸ್ಥಳ. ಹಾಗೆ ಮುಂದುವರೆಯುತ್ತ ದೂರದಲ್ಲಿ ಕಾಣುವ ಜಲಪಾತ ಬಹಳ ಎತ್ತರದಿಂದ ಧುಮ್ಮಿಕ್ಕುತ್ತಿದ್ದು ಹಸಿರಿನ ನಡುವೆ ಹಾಲೆರೆದಂತೆ ಕಾಣುತ್ತಿತ್ತು. ಅದುವೇ ಮುಂದೆ ಕಬಿನಿ ನದಿಯಾಗಿ ಹರಿಯುತ್ತಾ ಜೀವ ಸಂಕುಲಗಳಿಗೆ ಆಸರೆಯಾಗಿತ್ತು.

ಊಟಿ ಅಥವಾ ಉದಕಮಂಡಲ ಎಂದರೆ ಏನೋ ಒಂಥರಾ ಮನಸ್ಸಿಗೆ ಚಳಿ, ಪುಳಕ. ಅಲ್ಲಿಗೆ ಹೋಗುವ ಅವಸರ ನಮಗಿಲ್ಲದಿದ್ದರೂ ಅದೇ ಮಾರ್ಗದಲ್ಲಿ ಹೋಗಿ ಅಲ್ಲಿ ಸಿಗುವ ತಾಣಗಳನ್ನು ನೋಡಬೇಕಿತ್ತು. ನೋಡಲು ಬೃಹತ್ ಪರ್ವತ ...ಓಹ್! ಜೀಪಿನಲ್ಲಿ ಏರಲು ಅದೇ ಮಾರ್ಗ..ಮತ್ತೆ ತಿರುವುಗಳ ಸರಮಾಲೆ..ಸ್ವಾಗತ ಮಾಡಲು ಹೂ ಹಾಕಿದಂತೆ ದಾರಿಯುದ್ದಕ್ಕೂ ಸುವಾಸನೆಯುಕ್ತ ನೀಲಗಿರಿ ಮರಗಳ ಸಾಲು ಶೋಭಿಸುತಿತ್ತು. ಅಲ್ಲೇ ಒಂದು ನೋಡಬೇಕಾದ ತಾಣ 'Needle Rock Hill'. ಜೀಪನ್ನು ರಸ್ತೆ ಪಕ್ಕ ನಿಲ್ಲಿಸಿ ಸ್ವಲ್ಪ ದೂರ ನಡೆಯಬೇಕು. ಅರ್ಧದಾರಿಯಲ್ಲೇ ಏನೋ ಒಂದು ಅನುಭವ. ಮತ್ತೆ ಗಾಳಿ ಬೀಸುತ್ತಿದೆ..ಮಂಜು ಮುಸುಕುತ್ತದೆ..ಹಿಂತಿರುಗಿ ನೋಡಿದರೆ ಅದೇ ಪರ್ವತ ಮಂಜು ಮುಸುಕಿ ಮರೆಯಾಗುತ್ತಿದೆ. ಮುಂದೆ ಕಿರಿದಾದ ದಾರಿ.. ಒಂದು ಕಡೆ ಪ್ರಪಾತ..ಇನ್ನೊಂದು ಕಡೆ ದೈತ್ಯ ಬಂಡೆಗಳು..ನಿಲ್ಲಲು ಆಗದಷ್ಟು ತಳ್ಳುವಂತಹ ಗಾಳಿ ರೋಮಾಂಚನ ನೀಡಿತ್ತು. ಕೊನೆಯಲ್ಲಿ 'ವ್ಯೂ ಪಾಯಿಂಟ್'. ಪ್ರವಾಸದ ಪ್ರಯಾಸ ನಮಗಿಂತ ಹೆಚ್ಚು ಪ್ರಕೃತಿಗೆ ಆಗಿರಬಹುದಲ್ಲ ಎನಿಸಿತ್ತು! ಬಹು ಎತ್ತರಕ್ಕೆ ಎದ್ದು ನಿಂತಿರುವ ಪರ್ವತಗಳ ಸಾಲುಗಳು..ಹರಿಯುವ ಝರಿ ತೊರೆಗಳು..ರಾರಾಜಿಸುವ ಗಿಡ ಮರ ಹೂವುಗಳು..ತನ್ನಷ್ಟಕ್ಕೆ ತಾನಿರುವ ಜಗದಗಲ ರಸ್ತೆಗಳು..ಯಾರ ಗೊಡವೆಗೂ ಇರದ ವನ್ಯ ಜೀವಿಗಳು..ಎಲ್ಲವೂ ನಿಜಕ್ಕೂ ಅದ್ಭುತವೆನಿಸಿತ್ತು.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...