Cooking Oil Reusing: ಕರಿದ ಎಣ್ಣೆಯನ್ನು ಅಡುಗೆಗೆ ಮತ್ತೆ ಬಳಸುತ್ತಿದ್ದೀರಾ? ಹಾಗಾದರೆ ಇದನ್ನು ಓದಲೇಬೇಕು

ತಿಂಡಿಗಳನ್ನು ಕರಿದ ಬಳಿಕ ಆ ಎಣ್ಣೆ ವ್ಯರ್ಥವಾಗುವುದನ್ನು ತಡೆಯಲು ಮರು ಬಳಕೆ ಮಾಡುವುದು ಉತ್ತಮ ವಿಧಾನ ಎಂದು ನಾವೆಲ್ಲ ಅಂದುಕೊಂಡರೂ, ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಅದು ಯಾವ ರೀತಿ ದುಷ್ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ತಿಳಿಯಿರಿ. 

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಪೂರಿ, ಸಮೋಸ, ಕಚೋರಿ, ಪಕೋಡ, ಬಜ್ಜಿ, ಬೋಂಡ ಮತ್ತಿತರ ಎಣ್ಣೆಯಲ್ಲಿ ಕರಿದ ತಿಂಡಿಗಳ ಹೆಸರು ಕೇಳುತ್ತಲೇ, ನಾಲಗೆ ಚಪ್ಪರಿಸಿಕೊಳ್ಳದ ಭಾರತೀಯರು ತೀರ ವಿರಳ. ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಕನಿಷ್ಟ ಪಕ್ಷ ಮನಸ್ಸಿನಲ್ಲೇ ಕರಿದ ತಿಂಡಿಗಳನ್ನು ಮೆಲ್ಲುವ ಕನಸು ಕಾಣುವವರು ಇಲ್ಲದ್ದಿಲ್ಲ. ನಿತ್ಯ ವ್ಯಾಯಾಮ ಮಾಡುವ, ಜಿಮ್‍ಗಳಿಗೆ ಹೋಗುವ ಮಂದಿ ಕೂಡ ಕರಿದ ತಿಂಡಿಗಳ ಬಗ್ಗೆ ಮನದೊಳಗೆ ಕನವರಿಸುವುದುಂಟು. ಇನ್ನು ಮಳೆಗಾಲ ಬಂದರಂತೂ ಮುಗಿಯಿತು, ಕರಿದ ತಿಂಡಿಗಳದ್ದೇ ದರ್ಬಾರ್, ಕರಿದ ತಿಂಡಿಯ ಸುವಾಸನೆ ತೇಲಿ ಬರುತ್ತಲೇ , ಎಂತಹ ಫಿಟ್‍ನೆಸ್ ಪ್ರಿಯರಾದರೂ, ಕನಿಷ್ಟ ಸಣ್ಣ ತುತ್ತಿಗಾದರೂ ಆಸೆ ಪಡದೇ ಇರಲಾರರು. ಕರಿದ ತಿಂಡಿಗಳ ಬಗೆಗಿನ ಭಾರತೀಯರ ಬಯಕೆ ಅಂತದ್ದು.

  ಕರಿದ ಖಾದ್ಯಗಳ ಮೇಲೆ ಮಿತಿ ಇರಲಿ

  ಸೆಲೆಬ್ರಿಟಿ ಪೌಷ್ಟಿಕಾಂಶ ತಜ್ಞೆ ರುಜುತಾ ದಿವೇಕರ್, ಮಳೆಗಾಲದಲ್ಲಿ, ಸ್ಥಳೀಯ ಎಣ್ಣೆಗಳಾದ ಸಾಸಿವೆ ಎಣ್ಣೆ, ಫಿಲ್ಟರ್ ಮಾಡಿದ ಶೇಂಗಾ ಅಥವಾ ತೆಂಗಿನ ಎಣ್ಣೆಯಲ್ಲಿ ಕರಿದ ಪಕೋಡಗಳನ್ನು , ಒಂದು ಕಪ್ ಚಹಾದೊಂದಿಗೆ ಸವಿಯಲು ಇಷ್ಟಪಡುತ್ತಾರೆ. ಆದರೆ, ತಿನ್ನುವ ಪ್ರಮಾಣವನ್ನು ನಿಯಂತ್ರಿಸುವುದು ಅತ್ಯಂತ ಅಗತ್ಯ ಎನ್ನುತ್ತಾರೆ ಅವರು. ಫುಡ್ ಕೋಚ್ ರ‍್ಯಾನ್ ಫೆರ್ನಾಂಡೋ ಅವರು ಅಭಿಪ್ರಾಯವು ಕೂಡ ಅದೇ ಆಗಿದೆ.

  ಕರಿದ ಎಣ್ಣೆ ಮರುಬಳಕೆ ಬಗ್ಗೆ ಎಚ್ಚರ..! 

  ಕರಿದ ಪದಾರ್ಥಗಳ ಸೇವನೆ ನಮ್ಮ ನಾಲಗೆಗೆ ಅಥವಾ ಮನಸ್ಸಿಗೆ ಮುದ ನೀಡುತ್ತದೆ ನಿಜ, ಕರಿದ ತಿಂಡಿಗಳಿಗೆ ಸಂಬಂಧಪಟ್ಟ ಅಂಶವೊಂದು ಆರೋಗ್ಯಕ್ಕೆ ದೊಡ್ಡ ಪ್ರಮಾಣದ ಅಪಾಯವನ್ನು ಒಡ್ಡುತ್ತಿದೆ , ಅದುವೇ –ಎಣ್ಣೆಯ ಮರುಬಳಕೆ. ತಿಂಡಿಗಳನ್ನು ಕರಿದ ಬಳಿಕ ಆ ಎಣ್ಣೆ ವ್ಯರ್ಥ ಆಗುವುದನ್ನು ತಡೆಯಲು ಮರು ಬಳಕೆ ಮಾಡುವುದು ಉತ್ತಮ ವಿಧಾನ ಎಂದು ನಾವೆಲ್ಲ ಅಂದುಕೊಂಡರೂ, ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಅದು ಯಾವ ರೀತಿ ದುಷ್ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಪೌಷ್ಟಿಕ ತಜ್ಞ ರ‍್ಯಾನ್ ಫೆರ್ನಾಂಡೀಸ್ ತೈಲ ಮರುಬಕೆಯ ಪರಿಮಾಣಗಳ ಬಗ್ಗೆ ಇನ್ನಷ್ಟು ವಿವರಿಸಿದ್ದಾರೆ.

  ಇದನ್ನೂ ಓದಿ: Vitamin C ಕೊರತೆಯಾದರೆ ಯಾವೆಲ್ಲ ರೋಗಗಳು ನಿಮ್ಮನ್ನು ಕಾಡುತ್ತವೆ ಗೊತ್ತಾ..?

  ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ..! 

  “ಒಬ್ಬ ಪೌಷ್ಟಿಕಾಂಶ ತಜ್ಞನಾಗಿ, ಎಣ್ಣೆಯ ಮರು ಬಳಕೆ ನನಗೆ ಕೋಪ ತರಿಸುತ್ತದೆ.ಎಣ್ಣೆಯು ಹೊಗೆಯನ್ನು ಬಿಡಲು ಆರಂಭಿಸುವಾಗ, ಅದು ಟ್ರಾನ್ಸ್ ಕೊಬ್ಬುಗಳಿಗೆ ಮತ್ತು ಒಟ್ಟು ಧ್ರುವೀಯ ಸಂಯುಕ್ತಗಳಾದ ಪ್ಯಾರಾ ಆರೋಮ್ಯಾಟಿಕ್ ಹೈಡ್ರೋಕಾರ್ಬನ್‍ಗೆ ಆಕ್ಸಿಡೀಕರಣಗೊಳ್ಳುತ್ತದೆ. ಇವೆಲ್ಲವೂ ಮನಷ್ಯನ ಜೀವಕ್ಕೆ ವಿಷಕಾರಿಯಾಗಿರುವ ಅಣುಗಳು. ಇಲಿಗಳ ಮೇಲೆ ಈ ಕುರಿತು ಹಲವಾರು ಪ್ರಯೋಗಗಳಾಗಿದ್ದು, ಅವುಗಳ ಕೊಲೆಸ್ಟ್ರಾಲ್, ಬಿಪಿ, ರಕ್ತದಲ್ಲಿ ಆ್ಯಂಟಿಆಕ್ಸಿಡೆಂಟ್ ಕುಸಿತ ಇತ್ಯಾದಿಗಳು ಕಂಡು ಬಂದಿವೆ” ಎಂದು ಅವರು ವಿವರಿಸಿದ್ದಾರೆ.

  ಶಾಕಿಂಗ್​.. ವಾರಕ್ಕೆ 1-6 ಬಾರಿ ಕರಿದ ತಿಂಡಿಗಳನ್ನು ತಿನ್ನುತ್ತಾರೆ

  ಯುವಜನತೆಯಲ್ಲಿ ಹೆಚ್ಚುತ್ತಿರುವ ಹೃದಯದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ ಅವರು, ರೆಸ್ಟೋರೆಂಟ್‍ಗಳಲ್ಲಿ ಅನಾರೋಗ್ಯಕರ ಆಹಾರವನ್ನು ನೀಡಲಾಗುತ್ತಿದ್ದು, ಅವುಗಳನ್ನು ಹೆಚ್ಚಾಗಿ ಮರುಬಳಕೆಯ ಎಣ್ಣೆಯಲ್ಲಿ ಬೇಯಿಸಲಾಗುತ್ತದೆ ಎಂದು ಆರೋಪಿಸಿದರು. “ಭಾರತದಲ್ಲಿ, ರಸ್ತೆ ಬದಿಯ ಆಹಾರ ಅಂಗಡಿ, ಮಾರಕಟ್ಟೆ ಮತ್ತು ರೆಸ್ಟೋರೆಂಟ್‍ಗಳಲ್ಲಿ ತಯಾರಿಸಿದ ಕರಿದ ತಿಂಡಿಗಳನ್ನು ತಿನ್ನುವುದು ಅತ್ಯಂತ ಸಾಮಾನ್ಯ. ಸಮೀಕ್ಷೆಯೊಂದರ ವರದಿಯ ಪ್ರಕಾರ, ಶೇಕಡಾ 48 ರಷ್ಟು ಮಂದಿ, ವಾರಕ್ಕೆ 1-6 ಬಾರಿ ಕರಿದ ತಿಂಡಿಗಳನ್ನು ತಿನ್ನುತ್ತಾರೆ. ಈ ಆಹಾರವನ್ನು ಹೆಚ್ಚಾಗಿ, 20-30 ವಯಸ್ಸಿನ ಯುವಕರು ಸೇವಿಸುತ್ತಾರೆ, ಅವರುಗಳು ತಮ್ಮ ಆಹಾರದ ಆಯ್ಕೆಯ ಕಾರಣದಿಂದಾಗಿ , ಚಿಕ್ಕ ವಯಸ್ಸಿನಲ್ಲಿಯೇ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಾರೆ” ಎಂದು ಅವರು ಹೇಳಿದರು.

  ಸಂಕ್ಷಿಪ್ತವಾಗಿ ಹೇಳುವುದಾದರೆ, ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ಈ ಕೆಳಗಿನ ದುಷ್ಪರಿಣಾಮಗಳು ಆಗುತ್ತವೆ.

  • ಕೊಲೆಸ್ಟ್ರಾಲ್ ಮಟ್ಟದಲ್ಲಿ ಹೆಚ್ಚಳ
  • ಅಧಿಕ ರಕ್ತದೊತ್ತಡ
  • ದೀರ್ಘಾವಧಿಯ ಹೃದ್ರೋಗಗಳ ಅಪಾಯದ ಹೆಚ್ಚಳ

  ಆದ್ದರಿಂದ ಅಡುಗೆಗೆ ಮತ್ತು ಕರಿಯಲು ಸೀಮಿತ ಪ್ರಮಾಣದ ಎಣ್ಣೆಯನ್ನು ಬಳಸುವುದು ಉತ್ತಮ, ಇದರಿಂದ ಎಣ್ಣೆಯ ಮರು ಬಳಕೆಯನ್ನು ತಪ್ಪಿಸಬಹುದು.
  Published by:Kavya V
  First published: