ಏಷ್ಯನ್ ಗೇಮ್ಸ್: ಕ್ರೀಡೆಯೊಂದಿಗೆ ಇಂಡೋನೇಷ್ಯಾ ರುಚಿಗಳಿಗೆ ಮನಸೋತ ಕ್ರೀಡಾ ಪ್ರೇಮಿಗಳು

news18
Updated:August 30, 2018, 1:50 PM IST
ಏಷ್ಯನ್ ಗೇಮ್ಸ್: ಕ್ರೀಡೆಯೊಂದಿಗೆ ಇಂಡೋನೇಷ್ಯಾ ರುಚಿಗಳಿಗೆ ಮನಸೋತ ಕ್ರೀಡಾ ಪ್ರೇಮಿಗಳು
moo satay, pork satay, thai cuisine
news18
Updated: August 30, 2018, 1:50 PM IST
-ನ್ಯೂಸ್ 18 ಕನ್ನಡ

ಏಷ್ಯನ್ ಗೇಮ್ಸ್​ ಮುಕ್ತಾಯದ ಹಂತಕ್ಕೆ ತಲುಪಿದೆ. ಒಲಿಂಪಿಕ್ಸ್​ ಕ್ರೀಡಾಕೂಟದ ನಂತರ ನಡೆಯುವ ಪ್ರಪಂಚದ ಎರಡನೇ ಅತೀ ದೊಡ್ಡ ಕ್ರೀಡಾಕೂಟ ಸಮಾರೋಪ ಸಮಾರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಸಲಾಗುವ ಈ ಕ್ರೀಡಾಕೂಟದ ಆತಿಥ್ಯವನ್ನು ಈ ಬಾರಿ ಇಂಡೋನೇಷ್ಯಾ ವಹಿಸಿರುವುದು ವಿಶೇಷ. ಹೇಳಿ ಕೇಳಿ ಪ್ರವಾಸಿಗರ ಸ್ವರ್ಗದಂತಿರುವ ಇಂಡೋನೇಷ್ಯಾದಲ್ಲಿ ಈ ಹಿಂದಿನ ಕ್ರೀಡಾಕೂಟಕ್ಕಿಂತ ಹೆಚ್ಚಿನ ಕ್ರೀಡಾ ಪ್ರೇಮಿಗಳು ಸೇರಲು ಇದು ಕೂಡ ಕಾರಣ. ಜಕಾರ್ತಾ ಮತ್ತು ಪಾಲೆಂಬಂಗ್ ನಗರದಲ್ಲಿ ನಡೆಸಲಾದ 18ನೇ ಏಷ್ಯನ್ ಗೇಮ್ಸ್​ನಲ್ಲಿ 45 ದೇಶಗಳಿಂದ 11,300 ಕ್ರೀಡಾಪಟುಗಳು ಭಾಗವಹಿಸಿದ್ದರು. ಮೈದಾನಗಳಲ್ಲಿನ ರೋಚಕತೆಯ ನಡುವೆ ಕ್ರೀಡಾ ಪ್ರೇಮಿಗಳ ಮನ ಗೆದ್ದಿದ್ದು ಅಲ್ಲಿನ ಸಂಸ್ಕೃತಿ ಮತ್ತು ಆಹಾರ ಪದ್ದತಿ. ಹಲವು ದೇಸಿಗರ ನಾಲಿಗೆ ರುಚಿ ಹೆಚ್ಚಿಸಿದ್ದ ಇಂಡೋನೇಷ್ಯಾದ ಕೆಲ ಆಹಾರಗಳು ಇಲ್ಲಿವೆ.

ಸಂಬಲ್ ಒಲೆಕ್ ಸಾಸ್ಕೆಂಪು ಮೆಣಸನ್ನು ಹರೆದು ಪೇಸ್ಟ್​ನ್ನಾಗಿಸಿ ಅದಕ್ಕೆ ಸ್ವಲ್ಪ ವಿನೆಗರ್ ಮತ್ತು ಉಪ್ಪನ್ನು ಮಿಶ್ರಣ ಮಾಡಿ ಸಂಬಲ್ ಒಲೆಕ್ ಸಾಸ್ ತಯಾರಿಸುತ್ತಾರೆ. ಸಾಮಾನ್ಯವಾಗಿ ಇಂಡೋನೇಷ್ಯಾದ ಆಹಾರಗಳೊಂದಿಗೆ ಇದನ್ನು ಮಿಶ್ರ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರಪಂಚದ ಎಲ್ಲ ಭಾಗಗಳಲ್ಲೂ ಶ್ರೀರಾಚಾ ಹೆಸರಿನಲ್ಲಿ ಇಂತಹದೊಂದು ಸಾಸ್ ಲಭ್ಯವಿದೆ. ಆದರೆ ಈ ಸಾಸ್​ನ ಮೂಲವೇ ಇಂಡೋನೇಷ್ಯಾ ಎಂದರೆ ತಪ್ಪಾಗಲಾರದು. ಸಂಬಲ್ ಒಲೆಕ್ ಸಾಸ್​ನ್ನು ಫ್ರೈಡ್​ ರೈಸ್ ಸೇರಿದಂತೆ ಫಾಸ್ಟ್​ಫುಡ್​ಗಳಲ್ಲಿ ಬಳಸಲಾಗುತ್ತದೆ. ಇದರಿಂದ ಆಹಾರದ ರುಚಿ ಮತ್ತು ಪರಿಮಳ ಹೆಚ್ಚುತ್ತದೆ.

ಸಾತೆ


Loading...

ಇದು ಇಂಡೋನೇಷ್ಯಾದ ಪ್ರಸಿದ್ಧ ತಿನಿಸುಗಳಲ್ಲಿ ಒಂದು. ಮಾಂಸದ ತುಂಡುಗಳನ್ನು ಸಿಹಿ ಸೋಯಾ ಸಾಸ್​ನಲ್ಲಿ ಮಿಶ್ರಣ ಮಾಡಿ ಬಾರ್ಬೆಕ್ಯೂ ಮೂಲಕ ಇದನ್ನು ತಯಾರಿಸಲಾಗುತ್ತದೆ. ಆದರೆ ಈ ಆಹಾರವು ಭಾರತೀಯ ಆಹಾರ ಪದ್ದತಿಯ ನಕಲಾಗಿದೆ. ಭಾರತೀಯ ಮುಸ್ಲಿಂ ವ್ಯಾಪಾರಿಗಳು ಇಂಡೋನೇಷಿಯನ್ನರಿಗೆ ಈ ಕಬಾಬ್ ಪರಿಕಲ್ಪನೆಯನ್ನು ಪರಿಚಯಿಸಿದ್ದರು. ಇದಕ್ಕೆ ಅಲ್ಲಿನ ಮಸಾಲೆಗಳನ್ನು ಬೆರೆಸಿದ ಇಂಡೋನೇಷಿಯನ್ನರು ನಾಲಿಗೆಗೆ ಹೊಸ ರುಚಿಯನ್ನು ನೀಡಿದರು. ಸಾಮಾನ್ಯವಾಗಿ ಕೋಳಿ ಮಾಂಸದಿಂದ ಸಾತೆಯನ್ನು ತಯಾರಿಸಲಾಗುತ್ತದೆ. ಅಲ್ಲದೆ ಈ ಜನಪ್ರಿಯ ಆಹಾರ ಕುರಿ, ಗೋಮಾಂಸ, ಹಂದಿಮಾಂಸ ಸೇರಿದಂತೆ ವಿವಿಧ ಪ್ರದೇಶಗಳ ಜನರ ಅಭಿರುಚಿಗೆ ತಕ್ಕಂತೆ ಹಲವು ರುಚಿಗಳಲ್ಲಿ ಸಿಗುತ್ತದೆ.

ಬಕ್ಸೊಸಾತೆ ಹೇಗೆ ಇಂಡೋನೇಷ್ಯಾದಲ್ಲಿ ಪ್ರಸಿದ್ದಿಯೊ, ಅದೇ ರೀತಿ ಬಾಕ್ಸೊ ಅಥವಾ ಮೀಟ್​ಬಾಲ್(ಮಾಂಸದ ಉಂಡೆ) ಸೂಪ್ ಕೂಡ ಅಲ್ಲಿನ ಜನಪ್ರಿಯ ಸ್ಟ್ರೀಟ್​ ಫುಡ್​ ಆಗಿದೆ. 2010 ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಇಂಡೋನೇಷ್ಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಾಕ್ಸೊ ತಿನ್ನುವ ಮೂಲಕ ಬಾಯಿಯ ರುಚಿ ಹೆಚ್ಚಿಸಿದ್ದರು. ಇದರಿಂದ ಈ ಆಹಾರ ಬಗ್ಗೆ ವಿಶ್ವ ತಿರುಗಿ ನೋಡುವಂತಾಗಿತ್ತು. ಈ ಮೀಟ್​ ಬಾಲ್ ಸೂಪ್​ನಲ್ಲಿ ಸಂಬಲ್ ಒಲೆಕ್ ಸಾಸ್​ನ್ನು ಸೇರಿಸಲಾಗುತ್ತದೆ. ಚಿಕನ್, ಗೋಮಾಂಸ, ಹಂದಿಮಾಂಸ ಮತ್ತು ಸಿಗಡಿಗಳ ಮಾಂಸದ ಉಂಡೆಗಳಿಂದ ಈ ಸೂಪ್ ತಯಾರಿಸುತ್ತಾರೆ. ಇದರೊಂದಿಗೆ ನೂಡಲ್ಸ್​ನ್ನು ಸೇರಿಸಿ ತಿನ್ನುವ ಪರಿಪಾಠವು ಇಂಡೋನೇಷ್ಯಾದಲ್ಲಿದೆ.

ನಾಸಿ ಗೋರೆಂಗ್ಇಂಡೋನೇಷ್ಯಾದಲ್ಲಿ ನಾಸಿ ಎಂದರೆ ಅಕ್ಕಿ ಎಂದರ್ಥ. ನಾಸಿ ಗೋರೆಂಗ್ ಎಂದರೆ ಇಲ್ಲಿನ ಫ್ರೈಡ್​ ರೈಸ್, ಅಲ್ಲಿನ ಮಸಾಲೆ ಅಷ್ಟೇ ವ್ಯತ್ಯಾಸ. ನಾಸಿ ಗೋರೆಂಗ್​ನ್ನು ಇಂಡೋನೇಷ್ಯಾದ ರಾಷ್ಟ್ರೀಯ ಆಹಾರ ಎಂದು ಪರಿಗಣಿಸಲಾಗುತ್ತದೆ. ಚಿಕನ್, ಸಾಸೇಜ್, ಮೀನು ಮುಂತಾದ ಆಹಾರಗಳನ್ನು ಊಟದೊಂದಿಗೆ ಮಿಶ್ರ ಮಾಡಿ ಫ್ರೈಡ್​ ಮಾಡಲಾಗುತ್ತದೆ. ಸಾಮಾನ್ಯವಾಗಿ ಸೋಯಾ ಸಾಸ್ ಮತ್ತು ಕೆಚಪ್​ಗಳನ್ನು ಇದನ್ನು ತಯಾರಿಸುವಾಗ ಸೇರಿಸಲಾಗುತ್ತದೆ. ದೇಸಿಯ ಫ್ರೈಡ್ ರೈಸ್ ತಿಂದು ನಾಲಿಗೆ ರುಚಿ ಕಳೆದುಕೊಂಡವರಿಗೆ ನಾಸಿ ಗೋರೆಂಗ್ ಹೊಸ ರುಚಿ ನೀಡುವುದರಲ್ಲಿ ಸಂಶಯವಿಲ್ಲ.

ರೆಂಡಾಂಗ್ಇಂಡೋನೇಷ್ಯಾದಲ್ಲಿ ರೆಂಡಾಂಗ್ ಆಹಾರವಿಲ್ಲದೆ ಹಬ್ಬ, ಸಮಾರಂಭಗಳು ಪರಿಪೂರ್ಣವಾಗುವುದಿಲ್ಲ. ಮಾಂಸದಿಂದ ತಯಾರಿಸಲಾಗುವ ಈ ಖಾದ್ಯಗಳು ಹೆಚ್ಚು ಖಾರಯುಕ್ತವಾಗಿರುತ್ತದೆ. ವಿಶೇಷ ಕಾರ್ಯಕ್ರಮ ಮತ್ತು ಮದುವೆಗಳಲ್ಲಿ ಬಡಿಸುವ ಈ ಆಹಾರ ಕೂಡ ಇಂಡೋನೇಷ್ಯಾದ ರೆಸ್ಟೋರೆಂಟ್​ಗಳಲ್ಲೂ ಲಭಿಸುತ್ತದೆ. ಮೆಣಸಿಕಾಯಿ, ತೆಂಗಿನಕಾಯಿ ಹಾಲು, ಬೆಳ್ಳುಳ್ಳಿ, ಲೆಮನ್​ಗ್ರಾಸ್, ಗಲಂಗಲ್​ಗಳನ್ನು ಈ ಖಾದ್ಯ ತಯಾರಿಸಲು ಬಳಸಲಾಗುತ್ತದೆ. ರೆಂಡಾಂಗ್​ನ್ನು ಸಾಮಾನ್ಯವಾಗಿ ಗೋಮಾಂಸ ಮತ್ತು ಕುರಿಮಾಂಸದಿಂದ ತಯಾರಿಸಲಾಗುತ್ತದೆ. ಒಮ್ಮೆ ಸವಿದರೆ ಮತ್ತೊಮ್ಮೆ ಸವಿಯಬೇಕೆನಿಸುವ ಈ ಆಹಾರ ಪದ್ದತಿ ಸುಮಾತ್ರ ಬುಡಕಟ್ಟು ಜನಾಂಗದಿಂದ ಹುಟ್ಟಿಕೊಂಡಿದೆ ಎನ್ನಲಾಗಿದೆ.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...