Health Tips: ನೀವು PCOSನಿಂದ ಬಳಲುತ್ತಿದ್ದರೆ, ತೂಕ ಕಡಿಮೆ ಮಾಡಿಕೊಳ್ಳುವುದು ತುಂಬಾ ಮುಖ್ಯ

Weight Loss Tips for those who have PCOS: ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು ಮತ್ತು ನಿಮ್ಮ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    Weight Loss Tips in Kannada: ಇತ್ತೀಚಿನ ದಿನಗಳಲ್ಲಿ ತಮ್ಮ ದೇಹದಲ್ಲಿರುವ ಅತಿಯಾದ ಬೊಜ್ಜಿನಿಂದ, ತೂಕದಿಂದಾಗಿ ಅನೇಕ ಮಹಿಳೆಯರಲ್ಲಿ ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ (PCOS) ಕಾಣಿಸಿಕೊಳ್ಳುತ್ತಿದೆ. ಪಿಸಿಒಎಸ್‌ನಿಂದ ಬಳಲುತ್ತಿರುವ ಮಹಿಳೆಯರಲ್ಲಿ 80 ಪ್ರತಿಶತ ಮಹಿಳೆಯರು ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವುದೇ ಪ್ರಮುಖ ಕಾರಣವಾಗಿದೆ ಎಂದು ವೈದ್ಯರು ಹೇಳುತ್ತಾರೆ.

    ಪಿಸಿಒಎಸ್ ಹೊಂದಿರುವ ಸ್ಥೂಲಕಾಯದ ಮಹಿಳೆಯರು ಹೆಚ್ಚು ತೀವ್ರವಾದ ರೋಗಲಕ್ಷಣಗಳನ್ನು ಹೊಂದಿರುತ್ತಾರೆ. ಅವರು ಯಾವಾಗ ತಮ್ಮ ದೇಹದಲ್ಲಿರುವ ಅತಿಯಾದ ತೂಕ ಕಳೆದುಕೊಳ್ಳುತ್ತಾರೆಯೋ ಆವಾಗ ಅವರು ನಿಯಮಿತ ಋತುಚಕ್ರ, ಸುಧಾರಿತ ಇನ್ಸುಲಿನ್ ಮತ್ತು ಕೊಲೆಸ್ಟ್ರಾಲ್ ಮಟ್ಟಗಳು ಹಾಗೂ ಹೆಚ್ಚುವರಿ ಕೂದಲಿನ ಬೆಳವಣಿಗೆ ಆಗುವುದು ಮತ್ತು ಮೊಡವೆ ಸೇರಿದಂತೆ ರೋಗ ಲಕ್ಷಣಗಳಲ್ಲಿಯೂ ಇಳಿಕೆ ಕಾಣಬಹುದಾಗಿದೆ.

    ಪಿಸಿಒಎಸ್‌ನಿಂದ ಬಳಲುತ್ತಿರುವ ಮಹಿಳೆಯರು ಹೇಗೆ ತಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಇಲ್ಲಿ ತಜ್ಞರಾದ ನತಾಶಾ ಆರ್. ಚಿನ್ ಕೆಲವು ಸಲಹೆಗಳನ್ನು ನೀಡಿದ್ದಾರೆ.

    ಪಿಸಿಒಎಸ್‌ನಿಂದ ಬಳಲುತ್ತಿದ್ದರೆ ತೂಕ ಕಡಿಮೆ ಮಾಡಿಕೊಳ್ಳಲು ಈ ಆಹಾರ ಸೇವಿಸಿ:

    ಪಿಸಿಒಎಸ್‌ನಿಂದ ಬಳಲುತ್ತಿರುವ ಮಹಿಳೆಯರಿಗೆ ತಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಯಾವುದೇ ರೀತಿಯ ನಿರ್ದಿಷ್ಟವಾದಂತಹ ಆಹಾರ ಕ್ರಮವಾಗಲಿ ಅಥವಾ ಆಹಾರ ಪದಾರ್ಥಗಳನ್ನು ಸೇವಿಸುವುದಕ್ಕೆ ಹೇಳಲಾಗುವುದಿಲ್ಲ. ಆದರೆ ಹೆಚ್ಚಿನ ಪ್ರೋಟೀನ್, ಕಡಿಮೆ ಕಾರ್ಬ್ ಹೊಂದಿರುವಂತಹ ಆಹಾರ ನಿಮ್ಮ ತೂಕವನ್ನು ಕಡಿಮೆ ಮಾಡಬಲ್ಲದು ಎಂದು ಅನೇಕ ಸಂಶೋಧನೆಗಳು ಸೂಚಿಸುತ್ತದೆ.

    ‘ನ್ಯೂಟ್ರಿಷನ್ ಮತ್ತು ಮೆಟಬಾಲಿಸಂ’ ನಲ್ಲಿ ಪ್ರಕಟವಾದ 2005ರಲ್ಲಿ ನಡೆದ ಒಂದು ಸಣ್ಣ ಅಧ್ಯಯನದಲ್ಲಿ, ಐದು ಮಹಿಳೆಯರು ಕೀಟೋಜೆನಿಕ್ ಆಹಾರ ಪದ್ದತಿ ಸುಮಾರು 6 ತಿಂಗಳುಗಳವರೆಗೆ ಅನುಸರಿಸಿದ್ದಾರೆ ಮತ್ತು ತಮ್ಮ ದೇಹದ ತೂಕದಲ್ಲಿ 12 ಪ್ರತಿಶತ ತೂಕ ಕಳೆದುಕೊಂಡಿದ್ದಾರೆ.

    2012 ರಲ್ಲಿ ‘ಜರ್ನಲ್ ಆಫ್ ದಿ ಅಮೆರಿಕನ್ ಕಾಲೇಜ್ ಆಫ್ ನ್ಯೂಟ್ರಿಷನ್’ ನಲ್ಲಿ ಪ್ರಕಟವಾದ ಒಂದು ಅಧ್ಯಯನವು ಪಿಸಿಒಎಸ್ ಮತ್ತು ಅಧಿಕ ತೂಕ ಮತ್ತು ಬೊಜ್ಜು ಹೊಂದಿರುವಂತಹ ಕೆಲ ಮಹಿಳೆಯರು 3 ತಿಂಗಳು ಪ್ರತಿದಿನ ಕಡಿಮೆ ಕ್ಯಾಲೋರಿ ಆಹಾರ ಸೇವಿಸಿರುವುದರಿಂದ ತಮ್ಮ ಅತಿಯಾದ ತೂಕವನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಪ್ರೋಟೀನ್ ಹೆಚ್ಚಿರುವ ಮತ್ತು ಗ್ಲೈಸೆಮಿಕ್ ಸೂಚ್ಯಂಕದಲ್ಲಿ ಕಡಿಮೆ ಇರುವ ಆಹಾರ ಸೇವಿಸಿದ ಕೆಲ ಮಹಿಳೆಯರು ಸಹ ಉತ್ತಮ ಸುಧಾರಣೆ ಕಂಡಿದ್ದಾರೆ.

    ಇದನ್ನೂ ಓದಿ: ಗರ್ಭಿಣಿಗೆ ಮಧುಮೇಹ ಇದ್ದಲ್ಲಿ ಗರ್ಭದಲ್ಲಿರುವ ಭ್ರೂಣಕ್ಕೆ ಅಪಾಯ ಕಟ್ಟಿಟ್ಟಬುತ್ತಿ

    ಈ ಮೇಲಿನ ಅಂಶಗಳು ಒಂದು ನಿರ್ದಿಷ್ಟ ಆಹಾರ ಸೂಚಿಸಲು ಸಾಧ್ಯವಿಲ್ಲವಾದರೂ, ವೈದ್ಯಕೀಯವಾಗಿ ನನ್ನ ಬಳಿ ಬಂದಿರುವ ಮಹಿಳೆಯರು ಗ್ಲುಟೆನ್, ಸಕ್ಕರೆ ಮತ್ತು ಡೈರಿ ಪದಾರ್ಥಗಳನ್ನು ಕಡಿಮೆ ಮಾಡಿರುವುದರಿಂದ ತಮ್ಮ ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ತುಂಬಾ ಸುಧಾರಣೆ ಕಂಡಿದ್ದಾರೆ ಎಂದು ಚಿನ್ ಹೇಳುತ್ತಾರೆ.

    ಇದನ್ನೂ ಓದಿ: ಈ ಮೀನು ತಿಂದರೆ ಸಾಕು ಕ್ಯಾಲ್ಸಿಯಂ ಪ್ರಮಾಣ ಡಬಲ್ ಆಗುತ್ತೆ!

    "ಪ್ರತಿದಿನ ನಿಮ್ಮ ಊಟದಲ್ಲಿ ಹಸಿರು ಎಲೆಗಳ ತರಕಾರಿಗಳನ್ನು ಸೇವಿಸುವುದು, ಆರೋಗ್ಯಕರ ಕೊಬ್ಬುಗಳನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ಸಕ್ಕರೆ ಅಂಶದಿಂದ ಕೂಡಿರುವ ಹಣ್ಣುಗಳನ್ನು ಕಡಿಮೆ ತಿನ್ನುವುದು ಮತ್ತು ದಿನವಿಡೀ ಆಗಾಗ ನೀರು ಕುಡಿಯುತ್ತಲೇ ಇರುವುದು ದೇಹದ ತೂಕ ಕಡಿಮೆ ಮಾಡುವಲ್ಲಿ ತುಂಬಾ ಸಹಾಯಕವಾಗಿವೆ” ಎಂದು ಚಿನ್ ಹೇಳಿದ್ದಾರೆ.

    “ಒಟ್ಟಿನಲ್ಲಿ ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು ಮತ್ತು ನಿಮ್ಮ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು” ಎಂದು ಚಿನ್ ಹೇಳಿದ್ದಾರೆ.
    Published by:Sharath Sharma Kalagaru
    First published: