Mosquito Bite: ಸೊಳ್ಳೆ ನಿಮ್ಮನ್ನೇ ಹೆಚ್ಚು ಕಚ್ಚೋದೇಕೆ? ಇದರ ಹಿಂದಿದೆ ವೈಜ್ಞಾನಿಕ ಕಾರಣ

ಈ ಸೊಳ್ಳೆಗಳು ಕೆಲವರಿಗೆ ಮಾತ್ರ ಕಚ್ಚುತ್ತವೆ ಎಂದು ವೈಜ್ಞಾನಿಕ ಸಂಶೋಧನೆಗಳಿಂದ ತಿಳಿದು ಬಂದಿದೆ. ಕೆಲವರು ಮನೆಯಲ್ಲಿ ನಿನ್ನೆ ರಾತ್ರಿ ಎಷ್ಟು ಸೊಳ್ಳೆ ಇದ್ದವು ಎಂದ್ರೆ ಇನ್ನೊಬ್ಬರು ಸೊಳ್ಳೆನಾ ಎಲ್ಲಿ ನನಗೆ ಒಂದು ಸೊಳ್ಳೆನೂ ಕಚ್ಚಲಿಲ್ಲʼ ಎಂದು ಪ್ರತಿಕ್ರಯಿಸಿಯೇ ಬಿಡುತ್ತಾರೆ. ಇದು ಏಕೆ ಹೀಗೆ? ಸೊಳ್ಳೆಗಳು ಕೆಲವರಿಗೆ ಮಾತ್ರ ಏಕೆ ಕಚ್ಚುತ್ತವೆ? ನೀವು ಸೊಳ್ಳೆಗಳಿಂದ ಹೆಚ್ಚು ಕಚ್ಚಿಸಿಕೊಳ್ಳುವಿರಿ ಎಂದರೆ ಅದು ಏಕೆ? ಎಂಬುದಕ್ಕೆ ಇಲ್ಲಿ ಇಂದು ಉತ್ತರ ಪಡೆಯೋಣ.

ಸೊಳ್ಳೆ

ಸೊಳ್ಳೆ

  • Share this:
ಮಳೆಗಾಲ (Rainy Season) ಬಂತೆಂದರೆ ಸಾಮಾನ್ಯ ಶೀತ, ಜ್ವರ, ಕೆಮ್ಮು ಜೊತೆಗೆ ಡೆಂಗ್ಯೂ, ಮಲೇರಿಯಾ ಮುಂತಾದ ಮಾರಾಣಾಂತಿಕ ರೋಗಗಳು ಕಾಡಲಾರಂಭಿಸುತ್ತವೆ. ಆದರೆ ಈ ವರ್ಷದ ಪರಿಸ್ಥಿತಿ ಸಂಪೂರ್ಣ ಭಿನ್ನ, ಎಲ್ಲಾ ರೋಗಕ್ಕಿಂತ ತುಂಬಾ ಭಯಾನಕವಾಗಿ ಕೊರೋನಾ ವೈರಸ್‌ (Corona Virus) ಮನುಕುಲವನ್ನು ಕಾಡುತ್ತಿದೆ.ಆ ವಿಷಯ ಹಾಗಿರಲಿ, ಸಾಮಾನ್ಯವಾಗಿ ನಮಗೆ ಸೊಳ್ಳೆಗಳ (Mosquitoes) ಕಚ್ಚುವಿಕೆಯಿಂದಲೂ ಗಂಭೀರ ಕಾಯಿಲೆಗಳು (serious illness) ಬರುತ್ತವೆ. ಹಾಗಾಗಿ ಜನರು ತಮ್ಮನ್ನು ತಾವು ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಏನೆಲ್ಲಾ ಸರ್ಕಸ್ ಮಾಡುತ್ತಾರೆ ಎಂಬುದು ಗೊತ್ತೇ ಇದೆ. ಅಷ್ಟಕ್ಕೂ, ಈ ಸೊಳ್ಳೆಗಳು ಕೆಲವರಿಗೆ ಮಾತ್ರ ಕಚ್ಚುತ್ತವೆ ಎಂದು ವೈಜ್ಞಾನಿಕ ಸಂಶೋಧನೆಗಳಿಂದ ತಿಳಿದು ಬಂದಿದೆ.

ಕೆಲವರು ಮನೆಯಲ್ಲಿ ನಿನ್ನೆ ರಾತ್ರಿ ಎಷ್ಟು ಸೊಳ್ಳೆ ಇದ್ದವು ಎಂದ್ರೆ ಇನ್ನೊಬ್ಬರು ಸೊಳ್ಳೆನಾ ಎಲ್ಲಿ ನನಗೆ ಒಂದು ಸೊಳ್ಳೆನೂ ಕಚ್ಚಲಿಲ್ಲʼ ಎಂದು ಪ್ರತಿಕ್ರಯಿಸಿಯೇ ಬಿಡುತ್ತಾರೆ. ಇದು ಏಕೆ ಹೀಗೆ? ಸೊಳ್ಳೆಗಳು ಕೆಲವರಿಗೆ ಮಾತ್ರ ಏಕೆ ಕಚ್ಚುತ್ತವೆ? ನೀವು ಸೊಳ್ಳೆಗಳಿಂದ ಹೆಚ್ಚು ಕಚ್ಚಿಸಿಕೊಳ್ಳುವಿರಿ ಎಂದರೆ ಅದು ಏಕೆ? ಎಂಬುದಕ್ಕೆ ಇಲ್ಲಿ ಇಂದು ಉತ್ತರ ಪಡೆಯೋಣ.

ಸೊಳ್ಳೆಗಳು ಕೆಲವರಿಗೆ ಮಾತ್ರ ಏಕೆ ಕಚ್ಚುತ್ತವೆ?
ಸೊಳ್ಳೆಗಳು ನಮಗೆ ಮಾತ್ರ ಕಚ್ಚುತ್ತವೆ ಎಂದು ಕೆಲವರು ಆಗಾಗ ಬೈದುಕೊಳ್ಳುತ್ತಿರುತ್ತಾರೆ. ಅದು ಏಕೆ? ಎಂದು ವೈಜ್ಞಾನಿಕ ಸಂಶೋಧನೆಗಳು ಸೂಕ್ತ ಕಾರಣಗಳನ್ನು ನೀಡುತ್ತವೆ. ನೀವು ಸೊಳ್ಳೆಗಳು ತಮ್ಮ ಆಹಾರಕ್ಕಾಗಿ ಮನುಷ್ಯರನ್ನು ಕಚ್ಚುತ್ತವೆ ಎಂದು ಎಲ್ಲರೂ ತಿಳಿದಿರುವ ವಿಚಾರ ಆಗಿದೆ. ಆದರೆ ಇದು ತಪ್ಪು ಕಲ್ಪನೆ. ಸಾಮಾನ್ಯವಾಗಿ ಪ್ರತಿ ಹೆಣ್ಣು ಸೊಳ್ಳೆಗಳಷ್ಟೇ ಮನುಷ್ಯರ ಮೇಲೆ ಮೊಟ್ಟೆಗಳನ್ನು ಇಡುತ್ತವಂತೆ. ಸೊಳ್ಳೆಗಳಿಗೆ ಮೊಟ್ಟೆ ಇಡಲು ನೆರವಾಗುವ ಅಂಶ ಮನುಷ್ಯರ ರಕ್ತದಲ್ಲಿರುತ್ತದೆ. ಹೀಗಾಗಿ ಹೆಣ್ಣು ಸೊಳ್ಳೆಗಳಷ್ಟೇ ಮನುಷ್ಯರ ಮೇಲೆ ದಾಳಿಗೈದು ರಕ್ತ ಹೀರುತ್ತವೆ.

ಕೆಲವು ಜನರು ಸೊಳ್ಳೆ ಕಚ್ಚುವಿಕೆಗೆ ಹೆಚ್ಚು ಒಳಗಾಗುತ್ತಾರೆ. ಏಕೆ?
ಕೆಲವು ಜನರಿಗೆ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ. ಇದಕ್ಕೆ ಕಾರಣಗಳೇನು? ಎಂಬುದಕ್ಕೆ ಇಲ್ಲಿ ಉತ್ತರ ಹುಡುಕೋಣ ಬನ್ನಿ. ಸೊಳ್ಳೆಗಳು ನಿಮಗೆ ಹೆಚ್ಚು ಕಚ್ಚುತ್ತಿವೆಯೇ?

ಅದಕ್ಕೆ ಇಲ್ಲಿವೆ 5 ಪ್ರಮುಖ ವೈಜ್ಞಾನಿಕ ಕಾರಣಗಳು

1) ರಕ್ತದ ಗುಂಪು: ಸೊಳ್ಳೆಗಳು ರಕ್ತಕ್ಕಾಗಿ ಮನುಷ್ಯರನ್ನು ಕಚ್ಚುತ್ತವೆ ಎಂಬುದನ್ನು ಆಧಾರವಾಗಿಟ್ಟುಕೊಂಡು ಸೊಳ್ಳೆಗಳು ಕೆಲವು ರಕ್ತದ ಗುಂಪುಗಳಿಗೆ ವಿಶೇಷವಾಗಿ ಆಕರ್ಷಿತವಾಗುತ್ತವೆ ಎಂಬುದು ವೈಜ್ಞಾನಿಕ ಕಾರಣಗಳಿಂದ ತಿಳಿದು ಬಂದಿದೆ. ಇನ್ನು ಈ ರಕ್ತದ ಗುಂಪನ್ನು ಜೆನೆಟಿಕ್‌ ಶಾಸ್ತ್ರದಿಂದ ನಿರ್ಧರಿಸಲಾಗುತ್ತದೆ. ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಪ್ರತಿಜನಕಗಳೆಂದು ಕರೆಯಲ್ಪಡುವ ನಿರ್ದಿಷ್ಟ ಪ್ರೋಟೀನ್‌ಗಳ ವಿಭಿನ್ನ ಗುಂಪುಗಳ ಆಧಾರದ ಮೇಲೆ ಪ್ರತಿ ರಕ್ತದ ಗುಂಪನ್ನು ವಿಂಗಡಿಸಲಾಗುತ್ತದೆ. ರಕ್ತದ ಗುಂಪುಗಳಲ್ಲಿ ಪ್ರಮುಖವಾಗಿ 4 ರಕ್ತದ ಗುಂಪುಗಳಿವೆ. ಅವುಗಳೆಂದರೆ A, B, AB ಮತ್ತು O.

ಇದನ್ನೂ ಓದಿ: Red Meat: ಕೆಂಪು ಮಾಂಸ ಸೇವನೆ ಮಾಡುವವರೇ ಕೇಳಿ, ವೈದ್ಯರೇ ಹೇಳುತ್ತಿದ್ದಾರೆ ಇದರಿಂದ ಸಮಸ್ಯೆ ಇದೆಯಂತೆ!

ಯಾವ ರಕ್ತದ ಗುಂಪು ಸೊಳ್ಳೆಗಳಿಗೆ ಹೆಚ್ಚು ಆಕರ್ಷಕವಾಗಿದೆ ಎಂಬುದಕ್ಕೆ ಯಾವುದೇ ದೃಢ ಆಧಾರಗಳು ಇನ್ನು ವರದಿ ಆಗಿಲ್ಲ. ಆದರೆ ಹಲವಾರು ಅಧ್ಯಯನಗಳು O ರಕ್ತದ ಗುಂಪಿನ ಜನರ ರಕ್ತವನ್ನು ಸೊಳ್ಳೆಗಳು ಹೆಚ್ಚು ಹೀರುತ್ತವೆ ಎಂದು ಸೂಚಿಸಿವೆ. 2019 ರ ಅಧ್ಯಯನವು ವಿಭಿನ್ನ ರಕ್ತದ ಮಾದರಿಗಳೊಂದಿಗೆ ತಮ್ಮ ಸಂಶೋಧನೆಯನ್ನು ಪ್ರಸ್ತುತಪಡಿಸಿ, ಸೊಳ್ಳೆಗಳ ಆಹಾರದ ನಡವಳಿಕೆಯನ್ನು ಗಮನಿಸಿದಾಗ ಅಲ್ಲಿ ಸಿಕ್ಕ ಮಾಹಿತಿ ಸೊಳ್ಳೆಗಳು ಇತರ ರಕ್ತದ ಗುಂಪುಗಳಿಗಿಂತ O ರಕ್ತದ ಗುಂಪಿನ ರಕ್ತವನ್ನು ಹೆಚ್ಚು ಹೀರುತ್ತವೆ ಎಂದು ಕಂಡುಹಿಡಿದಿದೆ.

2) ಬಟ್ಟೆಯ ಬಣ್ಣ: ಸೊಳ್ಳೆಗಳು ಗಾಢ ಬಣ್ಣಕ್ಕೆ ಬೇಗ ಆಕರ್ಷಿತವಾಗುತ್ತವೆ. ಸೊಳ್ಳೆಗಳು ಗಾಢ ಬಣ್ಣದ ಬಟ್ಟೆ ಧರಿಸಿದವರನ್ನು ಹೆಚ್ಚು ಕಚ್ಚುತ್ತವೆ. ಏಕೆಂದರೆ ಇವುಗಳ ದೃಷ್ಟಿಗೆ ಮೊದಲು ಬೀಳುವುದೇ ಗಾಢ ಬಣ್ಣ. ಇದರರ್ಥ ಕಪ್ಪು ಬಣ್ಣದ ಬಟ್ಟೆ ಧರಿಸುವುದರಿಂದ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಎಂದು ಸಂಶೋಧನೆಗಳು ತಿಳಿಸಿವೆ. ಆದರೆ ಇದು ಏಕೆ ಎಂದು ನಿರ್ದಿಷ್ಟವಾಗಿ ತಿಳಿಯಲು ಇನ್ನು ಅನೇಕ ಸಂಶೋಧನೆಗಳು ನಡೆಯುತ್ತಿವೆ.

3) ಕಾರ್ಬನ್‌ ಡೈಆಕ್ಸೈಡ್: ನಾವು ಉಸಿರಾಡುವಾಗ ಕಾರ್ಬನ್ ಡೈಆಕ್ಸೈಡನ್ನು ಹೊರಚೆಲ್ಲುತ್ತೇವೆ. ನಮ್ಮ ಚರ್ಮದಿಂದಲೂ ಸಣ್ಣ ಪ್ರಮಾಣದ ಉಸಿರಾಟ ನಡೆಯುತ್ತದೆ. ಅಲ್ಲಿಂದಲೂ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ. ಇದು ಸೊಳ್ಳೆಗಳಿಗೆ ನಮ್ಮ ಇರುವಿನ ಸುಳಿವು ನೀಡುತ್ತದಂತೆ. ಈ ಮೂಲಕವೇ ಅವು ಆ ವ್ಯಕ್ತಿಯ ರಕ್ತ ಪ್ರಿಯವೋ ಅಲ್ಲವೋ ಎಂಬುದನ್ನು ಗ್ರಹಿಸುತ್ತವಂತೆ.

ಜರ್ನಲ್ ಕೆಮಿಕಲ್ ಸೆನ್ಸ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಸೊಳ್ಳೆಗಳು ಕಾರ್ಬನ್ ಡೈಆಕ್ಸೈಡ್ ಪತ್ತೆಗಾಗಿ ಮ್ಯಾಕ್ಸಿಲ್ಲರಿ ಪಾಲ್ಪ್ ಎಂಬ ಅಂಗವನ್ನು ಬಳಸುತ್ತವೆ ಮತ್ತು ಅದು ಇಂಗಾಲದ ಡೈಆಕ್ಸೈಡ್ ಇರುವಿಕೆಯನ್ನು 164 ಅಡಿಗಳಷ್ಟು ದೂರದಿಂದಲೂ ಸಹ ಗ್ರಹಿಸಬಹುದು ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.

4) ದೇಹದ ವಾಸನೆ ಮತ್ತು ಬೆವರು: ಸೊಳ್ಳೆಗಳು ಕೇವಲ ಕಾರ್ಬನ್‌ ಡೈಆಕ್ಸೈಡ್‌ಗಿಂತ ಇತರ ಪದಾರ್ಥಗಳು ಮತ್ತು ಸಂಯುಕ್ತಗಳಿಗೆ ಹೆಚ್ಚು ಆಕರ್ಷಿತವಾಗುತ್ತವೆ. ಲ್ಯಾಕ್ಟಿಕ್ ಆಸಿಡ್‌, ಯೂರಿಕ್ ಆಸಿಡ್ ಮತ್ತು ಅಮೋನಿಯಾ ಸೇರಿದಂತೆ ಮಾನವನ ಚರ್ಮದ ಮೇಲೆ ಮತ್ತು ಬೆವರಿನಲ್ಲಿರುವ ಇತರ ಪದಾರ್ಥಗಳ ವಾಸನೆಯ ಮೂಲಕ ಸೊಳ್ಳೆಗಳು ಆಕರ್ಷಿತವಾಗಿ ಜನರನ್ನು ಕಚ್ಚುತ್ತವೆ. ಕೆಲವರ ದೇಹದ ವಾಸನೆಯು ಸೊಳ್ಳೆಗಳಿಗೆ ಏಕೆ ಹೆಚ್ಚು ಆಕರ್ಷಕವಾಗಿವೆ ಎಂದು ಸಂಶೋಧಕರು ಇನ್ನೂ ತಿಳಿಯುವ ಪ್ರಯತ್ನದಲ್ಲಿದ್ದಾರೆ.

ಇದನ್ನೂ ಓದಿ:  Heart Disease: ಮಹಿಳೆಯರಲ್ಲಿ ಹೃದಯಾಘಾತ ಸಂಖ್ಯೆ ಹೆಚ್ಚಳ; ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷಿಸಬೇಡಿ

ಕಾರ್ಬನ್ ಡೈ ಆಕ್ಸೈಡ್ ಹೊರತಾಗಿ ಸೊಳ್ಳೆಗಳು ಮನುಷ್ಯರ ವಾಸನೆಯನ್ನೂ ಗ್ರಹಿಸಬಲ್ಲವು. ಇದು ಕೇವಲ ಬೆವರಿನ ವಾಸನೆಯಲ್ಲ, ನಮ್ಮ ಚರ್ಮದಲ್ಲಿ ಅವಿತ ಸ್ಕಿನ್ ಮೈಕ್ರೋಬೈಯೋಮ್ ಎಂಬ ಬ್ಯಾಕ್ಟೀರಿಯಾಗಳ ವಾಸನೆ ಕೂಡಾ ಬೆರೆತು ಒಬ್ಬೊಬ್ಬರಿಗೆ ಒಂದೊಂದು ವಾಸನೆ ಇರುತ್ತದೆ. ಈ ವಾಸನೆಯಲ್ಲಿ ನಮ್ಮ ಜೀನ್ಸ್ ಕೂಡಾ ಪಾತ್ರ ವಹಿಸುತ್ತದೆ. ಕೆಲವರು ಹೆಚ್ಚು ಗಾಢವಾದ ವಾಸನೆ ಹೊಂದಿರಬಹುದು. ಸೊಳ್ಳೆಗಳ ಸೂಕ್ಷ್ಮ ಗ್ರಹಿಕೆಗೆ ಈ ವಾಸನೆ ಸಿಗುತ್ತದೆ. ಹಾಗಾಗಿಯೇ ಅವು ಕೆಲವರನ್ನು ಹೆಚ್ಚು ಕಚ್ಚುತ್ತವೆ.

5) ಮದ್ಯಪಾನ ಮಾಡಿದರೆ ಹೆಚ್ಚು ಕಚ್ಚುತ್ತವೆ: ಹೌದು ಕೆಲವು ಅಧ್ಯಯನಗಳ ಪ್ರಕಾರ ಮದ್ಯಪಾನ ಮಾಡಿದರೆ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ. ಏಕೆಂದರೆ ಮದ್ಯಪಾನ ಮಾಡಿದಾಗ ಮನುಷ್ಯನ ದೇಹ ತುಂಬಾ ಬಿಸಿಯಾಗಿರುವುದರಿಂದ ಸೊಳ್ಳೆಗಳಿಗೂ ಇವರನ್ನು ಕಂಡುಹಿಡಿಯುವುದು ತುಂಬಾ ಸುಲಭದ ಕೆಲಸವಾಗಿರುತ್ತದೆ ಎಂದು ಸಂಶೋಧನೆಗಳು ತಿಳಿಸುತ್ತವೆ.

ಸೊಳ್ಳೆ ನಿಯಂತ್ರಣಕ್ಕೆ ಇಲ್ಲಿವೆ ಸೂಪರ್‌ ಟಿಪ್ಸ್:
ಇನ್ನು ಈ ಸೊಳ್ಳೆ ನಿಯಂತ್ರಣಕ್ಕೆ ಅನೇಕರು ಅನೇಕ ಸಲಹೆಗಳನ್ನು ಅನುಸರಿಸುತ್ತಾರೆ. ನಾವು ಕೂಡ ಕೆಲವು ಸಲಹೆಗಳನ್ನು ನಿಮಗಾಗಿ ಇಲ್ಲಿ ನೀಡಿದ್ದೇವೆ.

  • ಕಿಟಕಿಗಳಿಗೆ ಸೊಳ್ಳೆ ಬಾರದಂತೆ ಸೊಳ್ಳೆ ನೆಟ್ ಹಾಕಿಸಿ

  • ಏರ್‌ ಕಂಡೀಷನರ್‌ ಕೋಣೆಯಲ್ಲಿ ಸೊಳ್ಳೆ ಕಾಟ ಇರುವುದಿಲ್ಲ, ಏರ್‌ ಕಂಡೀಷನರ್ ಇಲ್ಲದ ಕೋಣೆಯಲ್ಲಿ ಸೊಳ್ಳೆ ಪರದೆ ಬಳಸಿ.

  • ವಾರಕ್ಕೊಮ್ಮೆ ಕೋಣೆಯಲ್ಲಿರುವ ವಸ್ತುಗಳನ್ನೆಲ್ಲಾ ಎಳೆದು ಹೊರಹಾಕಿ ಸ್ವಚ್ಛ ಮಾಡಿ ನಂತರ ಜೋಡಿಸಿ.

  • ಮನೆ ಸುತ್ತ ನೀರು ನಿಲ್ಲಲು ಬಿಡಬೇಡಿ, ಹಳೆಯ ಟೈರ್, ಬಕೆಟ್, ಆಟಿಕೆಗಳು ಇವುಗಳೆನ್ನೆಲ್ಲಾ ಮನೆ ಸುತ್ತು ಗುಡ್ಡೆ ಹಾಕಬೇಡಿ.

  • ಇನ್ನು ಬಕೆಟ್, ಡ್ರಮ್‌ಗಳಲ್ಲಿ ನೀರು ತುಂಬಿ ಬಳಸದೆ ತುಂಬಾ ದಿನ ಹಾಗೇ ಇಡಬೇಡಿ, ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆ ಹಾಕುತ್ತವೆ.

  • ಕಪ್ಪು ಬಣ್ಣದ ಬಟ್ಟೆಗಿಂತ ಲೈಟ್‌ ಕಲರ್‌ ಬಟ್ಟೆ ಧರಿಸಿ, ಕಪ್ಪು ಬಣ್ಣ ಸೊಳ್ಳೆಗಳನ್ನು ಬೇಗನೆ ಆಕರ್ಷಿಸುತ್ತವೆ.

  • ಸೊಳ್ಳೆಗಳು ಕಚ್ಚುವುದನ್ನು ತಡೆಗಟ್ಟಲು ಡೆಪ್ಲೆಂಟ್ಸ್ (ಸೊಳ್ಳೆ ಬತ್ತಿಗಳು, ಸ್ಪ್ರೇ ) ಬಳಸಬಹುದು.

  • EPA ನೋಂದಾಯಿತ ರಿಪೆಲ್ಲೆಂಟ್ಸ್ ಗಳು ಮಕ್ಕಳು ಹಾಗೂ ಗರ್ಭಿಣಿಯರು ಬಳಸಲು ಸೂಕ್ತವಾಗಿದೆ.

  • ರಿಪೆಲ್ಲೆಂಟ್ಸ್ ಕೊಳ್ಳುವಾಗ ಅದರಲ್ಲಿ ಬರೆದಿರುವ ಸೂಚನೆಗಳನ್ನು ಗಮನವಿಟ್ಟು ಓದಿ.

  • ಸೊಳ್ಳೆ ಕಚ್ಚುವಿಕೆ ತಡೆಗಟ್ಟುವ ಸ್ಪ್ರೇ ಅನ್ನು ಬಟ್ಟೆಗೆ ಹಾಕಬೇಕು, ತ್ವಚೆಗೆ ಹಾಕಬೇಡಿ.

  • ನಿಮ್ಮ ತ್ವಚೆಗೆ ಸನ್‌ ಸ್ಕ್ರೀನ್ ಲೋಷನ್ ಬಳಸುವುದಾದರೆ ಮೊದಲು ಸನ್‌ಸ್ಕ್ರೀನ್ ಲೋಷನ್ ಹಚ್ಚಿ, ನಂತರ ಸೊಳ್ಳೆ ಕಚ್ಚದಿರಲು ಸೊಳ್ಳೆ ಕ್ರೀಮ್ ಬಳಸಬಹುದು.


ಇದನ್ನೂ ಓದಿ: West Nile Virus: ಮಂಕಿಪಾಕ್ಸ್‌ ಭೀತಿ ನಡುವೆಯೇ ಮತ್ತೊಂದು ಸೋಂಕಿನ ಆತಂಕ!

ಕೊನೆಯ ಮಾತು: ಈಗ ಮಳೆಗಾಲ ಶುರುವಾಗಿದೆ. ಅಲ್ಲಲ್ಲಿ ಡೆಂಗ್ಯೂ, ಮಲೇರಿಯಾ ಎಂಬ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಆದ್ದರಿಂದ ನೀವು ಈ ಸೊಳ್ಳೆಗಳಿಂದ ದೂರವಿರಿ. ನಿಮ್ಮ ಆರೋಗ್ಯವನ್ನು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಿ. ಏಕೆಂದರೆ ಆರೋಗ್ಯವೇ ಭಾಗ್ಯ ಅಲ್ಲವೇ.
Published by:Ashwini Prabhu
First published: