ಎಷ್ಟೋ ಬಾರಿ ರಾತ್ರಿ ಉಳಿದಿರುವ ರೊಟ್ಟಿ (Rotti), ಚಪಾತಿ (Chapathi) ಮತ್ತು ಅನ್ನವನ್ನು ಅನೇಕರು ಬೆಳಿಗ್ಗೆ ತಿನ್ನೋದಕ್ಕೆ ತಂಗ್ಳು ಅಡುಗೆ ಬೇಡ ಅಂತ ತಿನ್ನುವುದಿಲ್ಲ. ಅದೇ ನಮ್ಮ ಹಳ್ಳಿಗಳ ಕಡೆಗೆ ಹೋದರೆ ಅವರು ರಾತ್ರಿಯಲ್ಲಿ ಉಳಿದಂತಹ ಎಂದರೆ ರೊಟ್ಟಿ, ಅನ್ನವನ್ನು ಸಾರಿನಲ್ಲಿ ಕಲಿಸಿಕೊಂಡು ತಿನ್ನುವುದನ್ನು ನಾವು ನೋಡಿರುತ್ತೇವೆ.
ಎಷ್ಟೋ ಬಾರಿ ರಾತ್ರಿ ಉಳಿದಿರುವ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೆ ಎಲ್ಲಾ ತಂಗ್ಳು ಆಹಾರ (Food) ಸೇವಿಸುವುದು ಅನಾರೋಗ್ಯಕರವಲ್ಲ, ರಾತ್ರಿಯಿಡೀ ಅವುಗಳನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿದರೆ ಅವುಗಳು ಹೆಚ್ಚು ಪೌಷ್ಟಿಕವಾಗಿರಬಹುದು.
ಅನೇಕ ಜನರು ತಮ್ಮ ಉಪಾಹಾರದಲ್ಲಿ ತಂಗ್ಳು ಅಥವಾ ಬಾಸಿ ಚಪಾತಿ ಮತ್ತು ರೊಟ್ಟಿಯನ್ನು ಬೇಳೆ ಸಾರಿನಲ್ಲಿ ಕಲಿಸಿಕೊಂಡು ಸೇವಿಸಿದರೆ, ಇನ್ನಿತರರು ಆರೋಗ್ಯ ಹಾಳಾಗುವ ಭಯದಿಂದ ಅವುಗಳನ್ನು ಬಿಸಾಡಿ ಬಿಡುತ್ತಾರೆ. ಆದರೆ ತಜ್ಞರ ಪ್ರಕಾರ, ಅಳಿದುಳಿದ ರೊಟ್ಟಿಗಳು ಮಧುಮೇಹ ಮತ್ತು ಜೀರ್ಣಕ್ರಿಯೆಗೆ ತಮ್ಮದೇ ಆದ ಪ್ರಯೋಜನಗಳನ್ನು ಹೊಂದಿವೆ ಮತ್ತು ರಾತ್ರಿಯಿಡೀ ಅವುಗಳನ್ನು ಇಟ್ಟಿರುವುದರಿಂದ ನಿರೋಧಕ ಪಿಷ್ಟವನ್ನು ಹೆಚ್ಚಿಸುತ್ತದೆ, ಇದು ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿ ಪ್ರಯೋಜನಕಾರಿಯಾಗುತ್ತದೆಯಂತೆ.
ಬಾಸಿ ಅಥವಾ ತಂಗ್ಳು ರೊಟ್ಟಿ ಮತ್ತು ಚಪಾತಿಗಳನ್ನು ಹಾಲು ಅಥವಾ ತರಕಾರಿಗಳೊಂದಿಗೆ ಉಪಾಹಾರದಲ್ಲಿ ಸೇವಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಆದಾಗ್ಯೂ, ಅವುಗಳನ್ನು ಸಿದ್ಧಪಡಿಸಿದ 12-15 ಗಂಟೆಗಳ ಒಳಗೆ ಅವುಗಳನ್ನು ಸೇವಿಸುವುದು ಮತ್ತು ಇನ್ನೂ ಉತ್ತಮ ಫಲಿತಾಂಶಗಳಿಗಾಗಿ ಅವುಗಳನ್ನು ರೆಫ್ರಿಜರೆಟರ್ ನಲ್ಲಿ ಇರಿಸುವುದು ಒಳ್ಳೆಯದು ಅಂತಾರೆ ತಜ್ಞರು.
"ಗೋಧಿ ಫೈಬರ್, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ. ಇದು ಕಾರ್ಬೋಹೈಡ್ರೇಟ್ ಗಳ ಉತ್ತಮ ಮೂಲವಾಗಿದೆ ಮತ್ತು ಶಕ್ತಿಯ ಆಹಾರವಾಗಿದೆ. ಇಡೀ ಗೋಧಿ ಹಿಟ್ಟು ಗ್ಲೈಸೆಮಿಕ್ ಸೂಚ್ಯಂಕದಲ್ಲಿ ಮಧ್ಯಮ ಸ್ಥಾನದಲ್ಲಿದೆ ಮತ್ತು ಗ್ಲೈಸೆಮಿಕ್ ಲೋಡ್ ನಲ್ಲಿ ಹೆಚ್ಚಿನ ಸ್ಥಾನದಲ್ಲಿದೆ, ಆದರೆ ಇದು ಕರಗದ ನಾರಿನ ಉತ್ತಮ ಮೂಲವಾಗಿದೆ, ಇದು ಪೋಸ್ಟ್ಪ್ರಾಂಡಿಯಲ್ ರಕ್ತದ ಪ್ರತಿಕ್ರಿಯೆಯನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ.
ಅಡುಗೆ ಮತ್ತು ಘನೀಕರಣದ ಪುನರಾವರ್ತಿತ ಚಕ್ರವು ನಿರೋಧಕ ಪಿಷ್ಟವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಇದು ಆರೋಗ್ಯಕರ ಕರುಳಿನ ಮೈಕ್ರೋ ಬಯೋಟಾವನ್ನು ಹೆಚ್ಚಿಸಬಹುದು. ನಿರೋಧಕ ಪಿಷ್ಟವು ಅಧಿಕವಾಗಿರುವ ಧಾನ್ಯಗಳು ದೇಹದ ಆರೋಗ್ಯವನ್ನು ಸುಧಾರಿಸುತ್ತವೆ ಮತ್ತು ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು. ಮಧುಮೇಹಿಗಳಿಗೆ ಬಾಸಿ ರೊಟ್ಟಿಗಳ ಆರೋಗ್ಯ ಪ್ರಯೋಜನಗಳನ್ನು ಬೆಂಬಲಿಸಲು ಹೆಚ್ಚಿನ ಅಧ್ಯಯನಗಳನ್ನು ಇನ್ನೂ ನಡೆಸಬೇಕಾಗಿದೆ " ಎಂದು ಪೌಷ್ಟಿಕತಜ್ಞೆ ಪ್ರಿಯಾ ಪಾಲನ್ ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
"ರಾತ್ರಿ ಹೊತ್ತಿನಲ್ಲಿ ಉಳಿದ ರೊಟ್ಟಿಗಳು, ಚಪಾತಿಗಳು ಭಾರತೀಯ ಊಟದ ಅವಿಭಾಜ್ಯ ಅಂಗವಾಗಿದೆ. ಜನರು ಸಾಮಾನ್ಯವಾಗಿ ಇದನ್ನು ಉಪಾಹಾರಕ್ಕಾಗಿ ಬಳಸುತ್ತಾರೆ. ಇದನ್ನು ಸರಿಯಾದ ಪದಾರ್ಥದೊಂದಿಗೆ ಸೇರಿಸಿಕೊಳ್ಳುವುದರಿಂದ ಆಹಾರದ ಪೌಷ್ಠಿಕಾಂಶದ ಮೌಲ್ಯವನ್ನು ಹೆಚ್ಚಿಸಬಹುದು. ರೊಟ್ಟಿಗಳು ಹೆಚ್ಚಿನ ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುತ್ತವೆ, ಆದ್ದರಿಂದ ಅವುಗಳನ್ನು ತರಕಾರಿಗಳು ಮತ್ತು ಪ್ರೋಟೀನ್ ಆಹಾರಗಳೊಂದಿಗೆ ಸಂಯೋಜಿಸುವುದು ಸೂಕ್ತ. ಗೋಧಿಯಲ್ಲಿರುವ ಹೆಚ್ಚಿನ ಪ್ರಮಾಣದ ಗ್ಲುಟೆನ್ ಕರುಳಿನ ಕಾಯಿಲೆಯನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತು ಜೀರ್ಣಾಂಗವ್ಯೂಹದಲ್ಲಿ ಉರಿಯೂತಕ್ಕೆ ಕಾರಣವಾಗಬಹುದು" ಎಂದು ಪ್ರಿಯಾ ಪಾಲನ್ ಹೇಳುತ್ತಾರೆ.
top videos
"ಬಾಸಿ ರೊಟ್ಟಿ ಅಥವಾ ಚಪಾತಿಯ ಪ್ರಯೋಜನಗಳ ಬಗ್ಗೆ ಅನೇಕ ಜನರಿಗೆ ಅನೇಕ ಗೊಂದಲಗಳಿವೆ. 12 ಗಂಟೆಗಳ ಕಾಲ ರೊಟ್ಟಿಯನ್ನು ಹಾಗೆಯೇ ಇಟ್ಟಾಗ ಅದರ ರುಚಿ, ವಿನ್ಯಾಸ ಮತ್ತು ಪಿಷ್ಟ ಸಂಯೋಜನೆಯಲ್ಲಿ ಬದಲಾವಣೆಯಾಗುತ್ತವೆ. ಇದು ನಿರೋಧಕ ಪಿಷ್ಟದ ರಚನೆಗೆ ಕಾರಣವಾಗುತ್ತದೆ, ಇದು ಫೈಬರ್ ನಂತೆ ಕಾರ್ಯ ನಿರ್ವಹಿಸುತ್ತದೆ. ತಾಜಾ ಹಿಟ್ಟಿನಿಂದ ತಯಾರಿಸಿದ ರೊಟ್ಟಿ ಮತ್ತು ಹುದುಗಿಸಿದ ಹಿಟ್ಟಿನ ನಡುವೆ ವ್ಯತ್ಯಾಸವಿದೆ ಎಂಬುದನ್ನು ಗಮನಿಸಿ, ಏಕೆಂದರೆ ಹುದುಗುವಿಕೆಯು ಜೀರ್ಣಕ್ರಿಯೆ, ಪೋಷಕಾಂಶಗಳ ಜೈವಿಕ ಲಭ್ಯತೆ, ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ವಿಶಿಷ್ಟ ಪರಿಮಳವನ್ನು ಸೇರಿಸುತ್ತದೆ " ಎಂದು ಗುರಗಾಂವ್ ನ ಮ್ಯಾಕ್ಸ್ ಆಸ್ಪತ್ರೆಯ ಎಂಡೋಕ್ರೈನಾಲಜಿ ಮತ್ತು ಮಧುಮೇಹದ ಪ್ರಧಾನ ಸಲಹೆಗಾರರಾದ ಡಾ. ಖಾಲಿದ್ ಜೆ ಫಾರೂಕಿ ಹೇಳುತ್ತಾರೆ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ